ಗೃಹಜ್ಯೋತಿ; ಫಲಾನುಭವಿಗಳಾಗಲು ಇಂದಿನಿಂದ ಅರ್ಜಿ ಸಲ್ಲಿಸಿ

ಬೆಂಗಳೂರು, ಜೂನ್ 18; ಕರ್ನಾಟಕ ಕಾಂಗ್ರೆಸ್ ವಿಧಾನಸಭೆ ಚುನಾವಣೆ ಸಮಯದಲ್ಲಿ ನೀಡಿದ್ದ 5 ಗ್ಯಾರಂಟಿಗಳಲ್ಲಿ 'ಗೃಹಜ್ಯೋತಿ' ಯೋಜನೆಯೂ ಒಂದು. ಸರ್ಕಾರ ಈಗಾಗಲೇ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಆಗಸ್ಟ್‌ನಲ್ಲಿ ಯೋಜನೆ ಜಾರಿಗೆ ಬರಲಿದ್ದು, ಯೋಜನೆ ಫಲಾನುಭವಿಯಾಗಲು ಜೂನ್ 18ರ ಭಾನುವಾರದಿಂದ ಅರ್ಜಿ ಸಲ್ಲಿಸಬಹುದು.

ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್‌ಗಳವರೆಗೆ ಉಚಿತವಾಗಿ ವಿದ್ಯುತ್ ನೀಡುವ ಯೋಜನೆ 'ಗೃಹಜ್ಯೋತಿ'. ಯೋಜನೆ ಬಗ್ಗೆ ಇದ್ದ ಎಲ್ಲಾ ಗೊಂದಲ ಬಗೆಹರಿಸಿರುವ ಇಂಧನ ಇಲಾಖೆ ಸೇವಾ ಸಿಂಧು ಪೋರ್ಟಲ್ ಮೂಲಕ ಭಾನುವಾರದಿಂದ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ನೀಡಿದೆ.

seva-sindhu-portal

'ಗೃಹಜ್ಯೋತಿ' ಯೋಜನೆಯಡಿ ಫಲಾನುಭವಿಯಾಗಲು ಗ್ರಾಹಕರು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಸೇವಾ ಸಿಂಧು ರ್ಪೋಟಲ್‌ (https://sevasindhugs.karnataka.gov.in) ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಈ ವೆಬ್‌ಸೈಟ್‌ ಮೊಬೈಲ್ ಫೋನ್/ ಡೆಸ್ಕ್‌ಟಾಪ್/ ಲ್ಯಾಪ್ ಟ್ಯಾಪ್‌ಗಳಲ್ಲಿಯೂ ಕಾರ್ಯ ನಿರ್ವಹಣೆ ಮಾಡಲಿದೆ.

ಎಲ್ಲೆಲ್ಲಿ ಅರ್ಜಿ ಸಲ್ಲಿಕೆ?; ಯೋಜನೆಗಾಗಿ ಗ್ರಾಹಕರು ಅರ್ಜಿಗಳನ್ನು ಬೆಂಗಳೂರು ಒನ್, ಗ್ರಾಮ್ ಒನ್ ಮತ್ತು ಕರ್ನಾಟಕ ಒನ್ ಕೇಂದ್ರ ಅಥವಾ ಯಾವುದೇ ವಿದ್ಯುತ್ ಕಛೇರಿಗಳಲ್ಲಿಯೂ ಸಹ ಸಲ್ಲಿಕೆ ಮಾಡಬಹುದು. ನಿಮ್ಮ ಹತ್ತಿರದ ವಿದ್ಯುತ್ ಕಚೇರಿಯಲ್ಲಿ ಇದಕ್ಕಾಗಿಯೇ ವಿಶೇಷ ಡೆಸ್ಕ್ ಸ್ಥಾಪನೆ ಮಾಡಲಾಗಿದೆ. ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ ವಿದ್ಯುಚ್ಛಕ್ತಿ ಕಛೇರಿ ಅಥವಾ 24x7 ಸಹಾಯವಾಣಿ 1912ಗೆ ಕರೆ ಮಾಡಬಹುದು.

gruha-jyoti

'ಗೃಹ ಜ್ಯೋತಿ' ಯೋಜನೆಯಡಿ ಉಚಿತ ವಿದ್ಯುತ್‌ ಪಡೆಯಲು ಫಲಾನುಭವಿಗಳು ಆಧಾರ್ ಕಾರ್ಡ್, ಗ್ರಾಹಕರ ID ಗಳ ಮಾಹಿತಿಗಳನ್ನು (ವಿದ್ಯುಚ್ಛಕ್ತಿ ಬಿಲ್‌ನಲ್ಲಿ ಇರುವಂತೆ) ನೋಂದಣಿ ಸಮಯದಲ್ಲಿ ನೀಡಬೇಕಾಗುತ್ತದೆ. ನಗರ, ಪಟ್ಟಣ ಪ್ರದೇಶಗಳಲ್ಲಿ ಬಾಡಿಗೆ ಮನೆಗಳಲ್ಲಿ ಇರುವ ಜನರು ಬಾಡಿಗೆ ಕರಾರು ಪತ್ರವನ್ನು ಅಪ್‌ಲೋಡ್ ಮಾಡಬೇಕಿದೆ.

ಯೋಜನೆಯಡಿ ರಾಜ್ಯದಲ್ಲಿನ ಪತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್‌ಗಳವರೆಗಿನ ಬಳಕೆಯ ಮಿತಿಯಲ್ಲಿ ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ (ಆರ್ಥಿಕ ವರ್ಷ 2022-23ರ ಬಳಕೆಯ ಆಧಾರದನ್ವಯ) ಯೂನಿಟ್‌ಗಳ ಮೇಲೆ ಶೇ.10 ರಷ್ಟು ಹೆಚ್ಚಿನ ಬಳಕೆಯ ಮಿತಿಗೆ ಅರ್ಹರು. ಯೋಜನೆ 2023ರ ಆಗಸ್ಟ್ 1 (ಜುಲೈ ತಿಂಗಳ ವಿದ್ಯುಚ್ಛಕ್ತಿ ಬಳಕೆ) ರಿಂದ ಜಾರಿಗೆ ಬರಲಿದ್ದು ಅರ್ಹತೆಯ ಮಿತಿಯಲ್ಲಿದ್ದ ಫಲಾನುಭವಿಗಳು ಆಗಸ್ಟ್ 1 ರಿಂದ ಶೂನ್ಯ ಬಿಲ್ ಪಡೆಯಲಿದ್ದಾರೆ.

'ಗೃಹಜ್ಯೋತಿ' ಯೋಜನೆ ಷರತ್ತುಗಳು

* ಈ ಯೋಜನೆಯು ಗೃಹ ಬಳಕೆಯ ವಿದ್ಯುತ್‌ ಸಂಪರ್ಕಗಳಿಗೆ ಮಾತ್ರ ಅನ್ವಯ. ವಾಣಿಜ್ಯ ಉದ್ದೇಶಗಳಿಗೆ ವಿದ್ಯುತ್‌ ಉಪಯೋಗಿಸಿದಲ್ಲಿ ಅನ್ವಯವಿಲ್ಲ.

* ಪ್ರತಿ ತಿಂಗಳು ಮೀಟರ್ ರೀಡಿಂಗ್ ಮಾಡಿದಾಗ ಒಟ್ಟು ವಿದ್ಯುತ್ ಬಳಕೆಯ ಪ್ರಮಾಣಕ್ಕೆ ಬಿಲ್ ಅನ್ನು ನಮೂದಿಸುವುದು.

* ಗೃಹ ವಿದ್ಯುತ್ ಬಳಕೆದಾರನ ಅರ್ಹ ಮೊತ್ತವನ್ನು ಬಿಲ್‌ನಲ್ಲಿ ಕಡಿತಗೊಳಿಸಿ, ಉಳಿದ ಮೊತ್ತವನ್ನು ಗ್ರಾಹಕರಿಗೆ net bill ನೀಡುವುದು ಹಾಗೂ ಗ್ರಾಹಕರು net bill ಪಾವತಿಸುವುದು.

* ಅರ್ಹ ಯೂನಿಟ್/ ಮೊತ್ತಕ್ಕಿಂತ ಒಳಗೆ ಬಿಲ್ ಆಗಿದ್ದಲ್ಲಿ ಅಂತಹ ಗ್ರಾಹಕರಿಗೆ ಶೂನ್ಯ ಬಿಲ್ ಅನ್ನು ನೀಡಲಾಗುತ್ತದೆ

* ಈ ಯೋಜನೆಯಡಿ ಸೌಲಭ್ಯ ಪಡೆಯಲು ಇಚ್ಛಿಸುವ ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವುದು.

* ಪ್ರತಿ ಫಲಾನುಭವಿಯು ತನ್ನ Customer ID/ Account ID ಅನ್ನು ಆಧಾರ್‌ಗೆ ಕಡ್ಡಾಯವಾಗಿ ಜೋಡಣೆ ಮಾಡುವುದು.

* ದಿನಾಂಕ 30/06/2023ರ ಅಂತ್ಯಕ್ಕೆ (ಜೂನ್ 2023ರ ಮಾಹೆಯಲ್ಲಿ ಬಳಸಿದ ವಿದ್ಯುತ್ ಪ್ರಮಾಣಕ್ಕೆ ಜುಲೈ 2023ರಲ್ಲಿ ವಿತರಿಸಿದ ಬಿಲ್ಲಿನ ಮೊತ್ತ ಒಳಗೊಂಡಂತೆ) ಬಾಕಿ ಇರುವ ವಿದ್ಯುತ್‌ ಶುಲ್ಕದ ಬಾಕಿ ಮೊತ್ತವನ್ನು 3 ತಿಂಗಳೊಳಗೆ ಪಾವತಿಸತಕ್ಕದ್ದು, ಬಾಕಿ ಮೊತ್ತವನ್ನು ನಿಗದಿತ ಅವಧಿಯೊಳಗೆ ಪಾವತಿಸದಿದ್ದಲ್ಲಿ ಅಂತಹ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು.

* ಗೃಹ ವಿದ್ಯುತ್‌ ಗ್ರಾಹಕರ ಮನೆಗಳಿಗೆ ಮೀಟರ್ ಮಾಪಕವನ್ನು ಅಳವಡಿಸುವುದು ಹಾಗೂ ಓದುವುದು ಕಡ್ಡಾಯವಾಗಿರುತ್ತದೆ.

* ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾವರಗಳಿದ್ದಲ್ಲಿ, ಒಂದು ಮೀಟರ್‌ಗೆ ಮಾತ್ರ ಈ ಯೋಜನೆಯಡಿ ಸೌಲಭ್ಯಕ್ಕೆ ಅರ್ಹರಾಗುವರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+