Good News Farmers: ರೈತರ ಸಾಲ ವಸೂಲಿ ವಿಚಾರದಲ್ಲಿ ಕರ್ನಾಟಕ ಸರ್ಕಾರದಿಂದ ಗುಡ್‌ನ್ಯೂಸ್!, ಡಿಸಿಎಂ ಜಿ. ಪರಮೇಶ್ವರ್ ಹೇಳಿದ್ದೇನು

ಕರ್ನಾಟಕದಲ್ಲಿ 75 ವರ್ಷಗಳ ನಂತರ ಭೀಕರ ಬರ ಬಂದಿದೆ. ರೈತರಿಗೆ ಅಗತ್ಯ ನೆರವು ಕಲ್ಪಿಸುವುದೇ ಸರ್ಕಾರದ ಮೊದಲ ಆದ್ಯತೆ ಎಂದು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಜಿ. ಪರಮೇಶ್ವರ್ ಅವರು ಹೇಳಿದ್ದಾರೆ. ಲಭ್ಯವಿರುವ ಅಂಕಿ - ಅಂಶಗಳ ಪ್ರಕಾರ ಸುಮಾರು 75 ವರ್ಷಗಳ ಬಳಿಕ ಕರ್ನಾಟಕ ಇಂತಹ ಭೀಕರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಕರ್ನಾಟಕದ ಶೇ.90ರಷ್ಟು ಬೆಳೆ ಹಾನಿಯಾಗಿದೆ. ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತರನ್ನು ಉಳಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಅವರ ನೆರವಿಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಡಾ. ಜಿ. ಪರಮೇಶ್ವರ ಅವರು ಹೇಳಿದ್ದಾರೆ.

ಬಳ್ಳಾರಿ ತಾಲ್ಲೂಕಿನ ಬರಪೀಡಿತ ಹಲಕುಂದಿ ಗ್ರಾಮದಲ್ಲಿ ತೊಗರಿ ಬಿತ್ತನೆ ಮಾಡಿರುವ ಜಮೀನಿಗೆ ಭೇಟಿ ನೀಡಿ ಬೆಳೆ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಅವರು ಮಾತನಾಡಿದರು, ಕರ್ನಾಟಕದ ಸುಮಾರು 240 ತಾಲೂಕುಗಳ ಪೈಕಿ ಕರಾವಳಿ ಭಾಗದ ಕೆಲವೇ ತಾಲೂಕುಗಳನ್ನು ಹೊರತುಪಡಿಸಿ ಬಹುತೇಕ ಎಲ್ಲ ತಾಲೂಕುಗಳಲ್ಲಿಯೂ ಬರದ ಪರಿಣಾಮ ಗೋಚರಿಸುತ್ತಿದೆ. ಈಗಾಗಲೇ 217 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಇನ್ನೂ 23 ತಾಲೂಕುಗಳಲ್ಲಿ ಗ್ರೌಂಡ್ ಟ್ರೂತಿಂಗ್ ನಡೆಯುತ್ತಿದೆ. ಅವುಗಳಲ್ಲಿ ಸುಮಾರು 10ರಿಂದ 15 ತಾಲೂಕುಗಳು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

Good News Farmers Karnataka Govt Gives Relief on Loan Recovery What Did DCM G Parameshwara Say

ಕರ್ನಾಟಕದ ರೈತರು ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಹಲವೆಡೆ ರೈತರು ಮೊದಲು ತೊಗರಿ ಬಿತ್ತಿದ್ದು, ಅದು ಮಳೆಯ ಕೊರತೆಯಿಂದ ಹಾನಿಗೊಳಗಾದ ಬಳಿಕ ಸ್ವಲ್ಪ ಮಳೆ ಬಂದಾಗ ಮತ್ತೆ ಜೋಳ ಸೇರಿದಂತೆ ಪರ್ಯಾಯ ಬೆಳೆ ಬಿತ್ತಿದ್ದಾರೆ. ಆದರೆ ಆ ಬೆಳೆಯೂ ಉಳಿದಿಲ್ಲ. ಪರಿಣಾಮ ರೈತನ ಕೈಗೆ ಯಾವುದೇ ಬೆಳೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಡಿಸಿಎಂ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

ಕರ್ನಾಟಕದಲ್ಲಿ ಸುಮಾರು ಶೇ.90ರಷ್ಟು ಬೆಳೆ ಹಾನಿಯಾಗಿದೆ. ಮಳೆಯಾಶ್ರಿತ ಪ್ರದೇಶಗಳಷ್ಟೇ ಅಲ್ಲದೆ ನೀರಾವರಿ ಪ್ರದೇಶಗಳಲ್ಲಿಯೂ ಸಂಕಷ್ಟವಿದೆ. ಮಹಾರಾಷ್ಟ್ರ ಭಾಗದಲ್ಲಿ ಮಳೆಯಾದ ಪರಿಣಾಮ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಿಗೆ ಸ್ವಲ್ಪ ನೀರು ಬಂದಿದೆ. ಅದೇ ರೀತಿ ಕೆಆರ್‌ಎಸ್, ಹಾರಂಗಿ ಹಾಗೂ ಕಬಿನಿ ಭಾಗಗಳಲ್ಲಿಯೂ ಒಂದಿಷ್ಟು ಮಳೆಯಾಗಿದೆ. ಲಭ್ಯವಿದ್ದ ನೀರಿನ ಒಂದು ಭಾಗವನ್ನು ತಮಿಳುನಾಡಿಗೆ ಬಿಡಬೇಕಾದ ಪರಿಸ್ಥಿತಿಯೂ ಎದುರಾಗಿದೆ. ಬಳ್ಳಾರಿ, ವಿಜಯನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬರದ ಪರಿಣಾಮ ಹೆಚ್ಚು ತೀವ್ರವಾಗಿದೆ. ಕೇಂದ್ರ ಸರ್ಕಾರದ ತಂಡ ಕರ್ನಾಟಕಕ್ಕೆ ಭೇಟಿ ನೀಡಿದಾಗಲೂ ಈ ಭಾಗದ ಗಂಭೀರ ಪರಿಸ್ಥಿತಿಯನ್ನು ಪರಿಶೀಲಿಸಿದೆ ಎಂದು ತಿಳಿಸಿದರು.

ಕುಡಿಯುವ ನೀರಿನ ಸಮಸ್ಯೆ ಗಂಭೀರ

ಬರದಿಂದ ಬೆಳೆ ಮಾತ್ರವಲ್ಲದೆ ಕುಡಿಯುವ ನೀರಿನ ಸಮಸ್ಯೆಯೂ ತೀವ್ರವಾಗುತ್ತಿದೆ. ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಿದ್ದು, ಪರಿಸ್ಥಿತಿ ಮತ್ತಷ್ಟು ಹದಗೆಡದಂತೆ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಕುಡಿಯುವ ನೀರು ಸೇರಿದಂತೆ ತುರ್ತು ಬರ ಪರಿಹಾರ ಕಾಮಗಾರಿಗಳಿಗಾಗಿ ಹಣ ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಬಳಿ ಲಭ್ಯವಿರುವ ಅನುದಾನವನ್ನು ಅಗತ್ಯಕ್ಕೆ ಅನುಗುಣವಾಗಿ ಬಳಸಿಕೊಂಡು ರೈತರು ಮತ್ತು ಸಾರ್ವಜನಿಕರ ನೆರವಿಗೆ ಬರಬೇಕೆಂದು ಸೂಚಿಸಲಾಗಿದೆ ಎಂದರು.

ಸರ್ಕಾರ ರೈತರ ಹಾಗೂ ಜನರ ನೆರವಿಗೆ ಬರಬೇಕು. ನಮಗೆ ಎಷ್ಟು ಸಾಧ್ಯವೋ ಅಷ್ಟು ನೆರವು ನೀಡಲು ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ ಎಂದಿದ್ದಾರೆ.

ಕೇಂದ್ರದ ಪಾಲು ಇನ್ನೂ ಬಂದಿಲ್ಲ; ಮೊದಲ ಕಂತಿನ ಪರಿಹಾರ ಬಿಡುಗಡೆಗೆ ಕ್ರಮ

ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ಒಂದು ಹೆಕ್ಟೇರ್‌ಗೆ ₹8,500 ಪರಿಹಾರ ನೀಡುವ ವ್ಯವಸ್ಥೆ ಇದೆ. ಆದರೆ ಕೇಂದ್ರದಿಂದ ಇದುವರೆಗೆ ಯಾವುದೇ ಹಣ ಬಿಡುಗಡೆ ಯಾಗಿಲ್ಲ. ಆದರೂ ಕೇಂದ್ರದ ಹಣಕ್ಕಾಗಿ ಕಾಯದೆ ರಾಜ್ಯ ಸರ್ಕಾರ ತನ್ನ ಪಾಲಿನಿಂದ ರೈತರಿಗೆ ಮೊದಲ ಕಂತಾಗಿ ₹2,500 ನೀಡಲು ಕ್ರಮ ಕೈಗೊಂಡಿದೆ. ಈ ಕುರಿತು ಸರ್ಕಾರದ ಆದೇಶ ಈಗಾಗಲೇ ಹೊರಬಂದಿದ್ದು, ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ತಕ್ಷಣ ಹಣ ಬಿಡುಗಡೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ರೈತರಿಗೆ ಇನ್ನಷ್ಟು ನೆರವು ನೀಡಲಾಗುವುದು ಎಂದರು.

ಕೇಂದ್ರದಿಂದ ಒಂದು ಪೈಸೆಯೂ ಬಂದಿಲ್ಲ ಎಂದು ಅವರನ್ನು ದೂಷಿಸುತ್ತಾ ಕುಳಿತುಕೊಳ್ಳುವುದಿಲ್ಲ. ನಮ್ಮಿಂದ ಸಾಧ್ಯವಾದ ನೆರವನ್ನು ನಾವು ನೀಡುತ್ತೇವೆ. ರೈತನನ್ನು ಸಂಕಷ್ಟದಲ್ಲಿ ಕೈಬಿಡುವುದಿಲ್ಲ. ವಿದ್ಯುತ್ ಸಬ್ಸಿಡಿ ಮತ್ತು ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನವೂ ರೈತ ಕುಟುಂಬಗಳಿಗೆ ದೊರೆಯುತ್ತಿದೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳಿಂದ ಒಂದು ಕುಟುಂಬಕ್ಕೆ ಕನಿಷ್ಠ ₹60,000ರಿಂದ ₹70,000ವರೆಗೆ ಪ್ರಯೋಜನ ದೊರೆಯುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ರೈತನ ಬದುಕು ಉಳಿಯಬೇಕು; ಅದಕ್ಕೆ ಅಗತ್ಯವಿರುವ ನೆರವು ನೀಡಲಾಗುವುದು ಎಂದು ಹೇಳಿದರು.

₹46,000 ಕೋಟಿ ನಷ್ಟ; ಕೇಂದ್ರಕ್ಕೆ ₹11,000-₹11,500 ಕೋಟಿ ನೆರವಿಗೆ ಮನವಿ

ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಎರಡು ಮೆಮೊರಾಂಡಮ್‌ಗಳನ್ನು ಸಲ್ಲಿಸಿದೆ. ಅವುಗಳಲ್ಲಿ 177 ತಾಲೂಕುಗಳಿಗೆ ಸಂಬಂಧಿಸಿದಂತೆ ಒಟ್ಟು ಸುಮಾರು ₹46,000 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಆದರೆ, ನಷ್ಟದ ಸಂಪೂರ್ಣ ಮೊತ್ತವನ್ನು ಕೇಂದ್ರ ಸರ್ಕಾರದಿಂದ ಪರಿಹಾರವಾಗಿ ಪಡೆಯಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎನ್‌ಡಿಆರ್‌ಎಫ್ (NDRF) ಮಾರ್ಗಸೂಚಿಗಳ ಪ್ರಕಾರ ಲೆಕ್ಕಾಚಾರ ಮಾಡಿ ಸುಮಾರು ₹11,000ರಿಂದ ₹11,500 ಕೋಟಿ ನೆರವು ಕೋರಲಾಗಿದೆ ಎಂದರು.

ನಾವು ₹46,000 ಕೋಟಿ ನಷ್ಟವಾಗಿದೆ ಎಂದು ಹೇಳಿದ್ದೇವೆ. ಆದರೆ ಕೇಂದ್ರದ ಮಾರ್ಗಸೂಚಿಗಳ ಪ್ರಕಾರ ಎಷ್ಟು ಕೇಳಲು ಅವಕಾಶವಿದೆಯೋ ಅಷ್ಟನ್ನೇ ಕೇಳಬೇಕು. ಅದಕ್ಕಾಗಿ ಸುಮಾರು ₹11,000 ಕೋಟಿ ಪರಿಹಾರಕ್ಕೆ ಮನವಿ ಮಾಡಿದ್ದೇವೆ. ಕೇಂದ್ರ ಸರ್ಕಾರ ಈಗಾಗಲೇ ತಂಡಗಳನ್ನು ರಾಜ್ಯಕ್ಕೆ ಕಳುಹಿಸಿದ್ದು, ಅವು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ. ತಂಡಗಳು ಕೇಂದ್ರಕ್ಕೆ ವರದಿ ಸಲ್ಲಿಸಿದ ಬಳಿಕ ಎಷ್ಟು ಅನುದಾನ ನೀಡಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಹೇಳಿದರು.

2023ರ ಬರವನ್ನು ನೆನಪಿಸಿದ ಅವರು, ಆ ಸಂದರ್ಭದಲ್ಲಿ ಸುಮಾರು ₹49,000 ಕೋಟಿ ನಷ್ಟವಾಗಿತ್ತು. ರಾಜ್ಯ ಸರ್ಕಾರ ಸುಮಾರು ₹18,000 ಕೋಟಿ ನೆರವು ಕೋರಿದ್ದರೂ ಆರಂಭದಲ್ಲಿ ಕೇಂದ್ರದಿಂದ ಯಾವುದೇ ಹಣ ಬಿಡುಗಡೆಯಾಗಿರಲಿಲ್ಲ. ಬಳಿಕ ರಾಜ್ಯ ಸರ್ಕಾರ ನ್ಯಾಯಾಲಯದ ಮೊರೆ ಹೋದ ನಂತರ ನ್ಯಾಯಾಲಯದ ನಿರ್ದೇಶನದ ಮೇರೆಗೆ ಸುಮಾರು ₹3,500 ಕೋಟಿ ಬಿಡುಗಡೆಯಾಯಿತು ಎಂದು ಹೇಳಿದ್ದಾರೆ.

ರೈತರ ಸಾಲ ವಸೂಲಿ ಮುಂದೂಡಿಕೆ; ನೋಟಿಸ್‌ಗೆ ಆತಂಕಪಡಬೇಕಿಲ್ಲ

ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರೈತರ ಸಾಲ ವಸೂಲಿ ವಿಚಾರದಲ್ಲಿಯೂ ಸರ್ಕಾರ ಕ್ರಮ ಕೈಗೊಂಡಿದೆ. ಸಾಲ ವಸೂಲಿಯನ್ನು ಮುಂದೂಡುವಂತೆ ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿದ್ದು, ಸಾಲಗಳನ್ನು ಮರುಹೊಂದಿಕೆ ಮತ್ತು ಮರುಹಣಕಾಸು ಮಾಡುವ ಕ್ರಮಕ್ಕೆ ಸೂಚಿಸಲಾಗಿದೆ. ಬ್ಯಾಂಕ್‌ಗಳು ನೋಟಿಸ್ ನೀಡುತ್ತಿರುವ ಬಗ್ಗೆ ಕೇಳಿದಾಗ, ರೈತರು ಆತಂಕಪಡಬೇಕಿಲ್ಲ. ಸಾಲ ವಸೂಲಿಯನ್ನು ಮುಂದೂಡಲು ಸರ್ಕಾರ ಈಗಾಗಲೇ ಸೂಚನೆ ನೀಡಿದೆ. ಖಾಸಗಿ ಹಣಕಾಸು ಸಂಸ್ಥೆಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೂ ಈ ಸಂಬಂಧ ಸೂಚನೆ ನೀಡಲಾಗುತ್ತಿದೆ ಎಂದರು.

ರೈತರ ಸಾಲ ಮನ್ನಾ ಮತ್ತು ಬಡ್ಡಿ ಮನ್ನಾ ಬೇಡಿಕೆಯ ಕುರಿತು ಕೇಳಿದ ಪ್ರಶ್ನೆಗೆ, ಪ್ರಸ್ತುತ ರೈತರಿಗೆ ತಕ್ಷಣದ ಆರ್ಥಿಕ ನೆರವು ನೀಡುವುದು ಹಾಗೂ ಸಾಲ ವಸೂಲಿಯನ್ನು ಮುಂದೂಡುವುದು ಸೇರಿದಂತೆ ಹಲವು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸಿ ಇನ್ನಷ್ಟು ನೆರವು ನೀಡಲಾಗುವುದು ಎಂದರು.

ಬರ ಪರಿಹಾರದಿಂದ ಸರ್ಕಾರದ ಹಣಕಾಸಿನ ಮೇಲೆ ಒತ್ತಡ ಉಂಟಾಗುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿಯವರು, ಯಾವುದೇ ದೊಡ್ಡ ಯೋಜನೆ ಅಥವಾ ಕಾರ್ಯಕ್ರಮ ಜಾರಿಗೆ ತಂದಾಗ ಹಣಕಾಸಿನ ಹೊರೆ ಸಹಜ. ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಪ್ರತಿವರ್ಷ ಸುಮಾರು ₹52,000 ಕೋಟಿ ವೆಚ್ಚ ಮಾಡುತ್ತಿದ್ದರೂ ಅವುಗಳನ್ನು ನಿಲ್ಲಿಸಿಲ್ಲ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+