ಸೆಪ್ಟಂಬರ್ ಮಾಸಾಂತ್ಯದಲ್ಲಿ ಬರೋಬ್ಬರಿ 4 ದಿನ ಬ್ಯಾಂಕ್ ರಜೆ
ನವದೆಹಲಿ, ಸೆ 16: ಇದೇ ತಿಂಗಳ (ಸೆಪ್ಟಂಬರ್ - 2019) ಮಾಸಾಂತ್ಯದಲ್ಲಿ ಒಟ್ಟು ನಾಲ್ಕು ದಿನ ಬ್ಯಾಂಕ್ ರಜೆಯಿರಲಿದೆ.
ದೇಶದ 10 ಪ್ರಮುಖ ಬ್ಯಾಂಕ್ ಗಳನ್ನು ವಿಲೀನ ಪ್ರಕ್ರಿಯೆಗೆ ಒಳಪಡಿಸಿದ್ದನ್ನು ವಿರೋಧಿಸಿ ಬ್ಯಾಂಕ್ ಸಿಬ್ಬಂದಿಗಳ ಒಕ್ಕೂಟ, ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿವೆ.
ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಎರಡು ದಿನ ಬ್ಯಾಂಕ್ ಮುಷ್ಕರಕ್ಕೆ ಮುಂದಾಗಿವೆ. ಸೆಪ್ಟೆಂಬರ್ 25ರ ಮಧ್ಯರಾತ್ರಿಯಿಂದ ಅಥವಾ ಸೆ. 26, 27 ರಂದು ಮುಷ್ಕರ ನಡೆಯಲಿದೆ.

ಎರಡು ದಿನಗಳ ಬ್ಯಾಂಕ್ ಮುಷ್ಕರ ಮತ್ತು ಶನಿವಾರ, ಭಾನುವಾರ ರಜೆಯಿರುವುದರಿಂದ, ತಿಂಗಳಾಂತ್ಯದಲ್ಲಿ ಬರೋಬ್ಬರಿ ನಾಲ್ಕು ದಿನ ಬ್ಯಾಂಕ್ ಕಾರ್ಯನಿರ್ವಹಿಸುವುದಿಲ್ಲ.
ಸೆ. 26, 27: ಬ್ಯಾಂಕ್ ಮುಷ್ಕರ
ಸೆ 28: ನಾಲ್ಕನೇ ಶನಿವಾರ (ಮಹಾಲಯ ಅಮವಾಸ್ಯೆ)
ಸೆ. 29: ಭಾನುವಾರ
ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘಟನೆ(AIBOC), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ(AIIBOA), ಭಾರತೀಯ ರಾಷ್ಟ್ರೀಯ ಬ್ಯಾಂಕ್ ಅಧಿಕಾರಿಗಳ ಕಾಂಗ್ರೆಸ್(INBOC), ಬ್ಯಾಂಕ್ ಅಧಿಕಾರಿಗಳ ರಾಷ್ಟ್ರೀಯ ಸಂಘಟನೆ(NOBO)ಯ ವತಿಯಿಂದ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಕೇಂದ್ರ ಸರ್ಕಾರವು ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ನವೆಂಬರ್ ಎರಡನೇ ವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘಟನೆ ಎಚ್ಚರಿಕೆ ನೀಡಿದೆ.












Click it and Unblock the Notifications