ಪ್ರತಿ ಹೆಕ್ಟೇರ ಗೆ 8500 ರೂ ಪರಿಹಾರ: ರೈತರಿಗೆ ತುಸು ನೆಮ್ಮದಿ ಎಂದ ಸಿದ್ದರಾಮಯ್ಯ
ಬೆಂಗಳೂರು: ಉತ್ತಮ ಮಳೆಬೆಳೆಯಿಂದ ಹೆಚ್ಚಿನ ಸಮಸ್ಯೆ ಪರಿಹಾರವಾಗುತ್ತದೆ. 2025 ರಲ್ಲಿ ಉತ್ತಮ ಮಳೆಯಾದ ಜೊತೆಗೆ ಬೆಳೆಹಾನಿಯೂ ಸಂಭವಿಸಿತು. 12 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿ, ಹಾನಿಗೊಳಗಾದ ರೈತರಿಗೆ ಪರಿಹಾರ ಒದಗಿಸುವುದು ಸರ್ಕಾರದ ಕರ್ತವ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಇಂದು ಹೊಸ ವರ್ಷದ ಪ್ರಯುಕ್ತ ಸರ್ಕಾರದ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಶುಭಕೋರಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿ, ಕೇಂದ್ರ ಸರ್ಕಾರ ಎನ್ ಡಿಆರ್ ಎಫ್ ನಿಂದ ಹಾಗೂ ರಾಜ್ಯ ಸರ್ಕಾರ ಎಸ್ ಡಿ ಆರ್ ಎಫ್ ನಿಂದ ಪರಿಹಾರವನ್ನು ನೀಡುತ್ತದೆ. ರೈತರಿಗೆ ಹೆಚ್ಚಿನ ಪರಿಹಾರಗಳನ್ನು ಒದಗಿಸುವ ಮೂಲಕ ಅವರ ಕಷ್ಟಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ರೈತರ ಹಾಗೂ ಜನರ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿರುತ್ತದೆ. 2025 ರಲ್ಲಿ ಖುಷ್ಕಿ, ನೀರಾವರಿ ಸೇರಿದಂತೆ ಬೆಳೆಗೆ ಪ್ರತಿ ಹೆಕ್ಟೇರ ಗೆ 8500 ರೂ ಪರಿಹಾರ ನೀಡಲಾಗಿದ್ದು, ರೈತರಿಗೆ ತುಸು ನೆಮ್ಮದಿ ಕಾಣುವಂತಾಗಿದೆ ಎಂದರು.

ವಿರೋಧ ಪಕ್ಷಗಳು ಟೀಕೆ ಮಾಡುವ ಸಲುವಾಗಿಯೇ ಟೀಕೆ ಮಾಡುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಕಷ್ಟಸುಖಗಳಿಗೆ ಸ್ಪಂದಿಸಲು ಹೆಚ್ಚಿನ ಆದ್ಯತೆ ನೀಡಬೇಕಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಕೇವಲ ರಾಜಕೀಯ ಸ್ವಾತಂತ್ರ್ಯದಿಂದ ಲಾಭವಿಲ್ಲ. ಸಾಮಾಜಿಕ ಆರ್ಥಿಕ ಸ್ವಾತಂತ್ರ್ಯದಿಂದಲೇ ರಾಜಕೀಯ ಪ್ರಭುತ್ವಕ್ಕೆ ನಿಜ ಅರ್ಥ ದೊರೆಯುತ್ತದೆ ಎಂದು ಪ್ರತಿಪಾದಿಸಿದ್ದರು. ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ, ಆಧಿಕಾರ ವಿಕೇಂದ್ರೀಕರಣಗಳನ್ನು ಸಾಧಿಸುವುದು ನಮ್ಮ ಹೊಣೆಗಾರಿಕೆ. ಸಮಸಮಾಜ ನಿರ್ಮಿಸುವ ಗುರಿಯನ್ನು ಸರ್ಕಾರ ಹೊಂದಿದ್ದು, ರಾಜ್ಯದ ಎಲ್ಲ ಜನತೆಗೆ ನ್ಯಾಯ ಒದಗಿಸುವುದು ಅವಶ್ಯ. ಜನರಿಗೆ ಅವಶ್ಯವಿರುವ ಸರ್ಕಾರದ ಸೇವೆಗಳನ್ನು ವಿಳಂಬ ಮಾಡದೇ ಪೂರೈಸಬೇಕು. ವಿಳಂಬ ನೀತಿ ಅನುಸರಿಸುವುದೂ ಒಂದು ರೀತಿಯ ಅಪರಾಧವೇ ಎಂದರು.
ಹೊಸ ವರ್ಷ ಜನರ ಕೆಲಸ ನಿರ್ವಹಿಸಲು ಹೊಸ ಉತ್ಸಾಹದಿಂದ ಶ್ರಮಿಸಬೇಕು. ಅಧಿಕಾರಿಗಳು 30-40 ವರ್ಷಗಳು ಅಧಿಕಾರದಲ್ಲಿದ್ದರೆ, ನಾವು ಅಧಿಕಾರದಲ್ಲಿ ಐದು ವರ್ಷಗಳು ಇರುತ್ತೇವೆ. ರಾಜ್ಯದ ಜನರು ನಿನ್ನೆ ಮತ್ತು ಇಂದು ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದ್ದಾರೆ. ನೂತನ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಅತ್ಯಂತ ಶ್ರಮವಹಿಸಿ ಕಾರ್ಯನಿರ್ವಹಿಸಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಸಂಭ್ರಮಾಚರಣೆ ನಡೆದಿದೆ.ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವ ಇಲಾಖೆಗೆ ಅಭಿನಂದನೆಗಳನ್ನು ಸಲ್ಲಿಸಿದರು.
ರಾಜ್ಯದ ಜನತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಾಗ ಅಧಿಕಾರಿಗಳು ಜಾತ್ಯತೀತವಾಗಿ, ಮಾನವೀಯ ನೆಲೆಯಲ್ಲಿ ಸಾರ್ವಜನಿಕರಿಗೆ ಸ್ಪಂದಿಸಬೇಕು ಎಂದರು. ಸಾಮಾಜಿಕ ನ್ಯಾಯದಿಂದ ವಂಚಿತರಾದವರಿಗೆ ನ್ಯಾಯ ಒದಗಿಸಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದರು. ರಾಜ್ಯದ ಜನತೆಗೆ ಸರ್ಕಾರದ ಸೇವೆಗಳನ್ನು ವಿಳಂಬ ಮಾಡದೇ ಪೂರೈಸುವ ಜೊತೆಗೆ, ಅಧಿಕಾರಿಗಳು ಜಾತ್ಯತೀತವಾಗಿ, ಮಾನವೀಯ ನೆಲೆಯಲ್ಲಿ ಸಾರ್ವಜನಿಕರಿಗೆ ಸ್ಪಂದಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ತಿಳಿಸಿದರು.
ಹೊಸ ವರ್ಷದ ಮೊದಲ ದಿನವಾದ ಇಂದು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವುದು ನಮ್ಮ ಪದ್ಧತಿ. ಹಿಂದೂ ಪದ್ಧತಿಯಲ್ಲಿ ಯುಗಾದಿ ಹೊಸ ವರ್ಷವಾಗಿದ್ದರೂ, ಇಂಗ್ಲೀಷ್ ಕ್ಯಾಲೆಂಡರ್ ನಂತೆ ಇಂದು ಪ್ರಾರಂಭವಾಗುವ ಹೊಸ ವರ್ಷವನ್ನು ವಿಶ್ವದಾದ್ಯಂತ ಸಂಭ್ರಮಾಚರಣೆಯಿಂದ ಸ್ವಾಗತಿಸಲಾಗುತ್ತದೆ. 2026 ರ ವರ್ಷ ರಾಜ್ಯಕ್ಕೆ ಸಮೃದ್ಧಿಯನ್ನು ತರಲಿ ಹಾಗೂ ರಾಜ್ಯ ಜನತೆ ಸುಖ ಸಮೃದ್ಧಿ ಶಾಂತಿಯಿರಲಿ, ಬಡವರ ಹಾಗೂ ರೈತರ ಮೊಗದಲ್ಲಿ ಸಂತೋಷ ಕಾಣಲೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭ ಹಾರೈಸಿದರು.












Click it and Unblock the Notifications