ಕೊರೊನಾ ಎರಡನೇ ಅಲೆ, ರೋಗದ ಹೊಸ ಲಕ್ಷಣಗಳಾವುವು?
ಬೆಂಗಳೂರು, ಏಪ್ರಿಲ್ 9: ದೇಶಾದ್ಯಂತ ಕೊರೊನಾ ಎರಡನೇ ಶುರುವಾಗಿದ್ದು ಮೊದಲ ಅಲೆಗಿಂತ ಹೆಚ್ಚು ಆತಂಕವನ್ನು ಸೃಷ್ಟಿಸುತ್ತಿದೆ.
ಅಷ್ಟೇ ಅಲ್ಲದೆ ಮೊದಲ ಅಲೆಗಿಂತ, ಎರಡನೇ ಅಲೆ ಹೆಚ್ಚು ವೇಗವನ್ನು ಪಡೆದುಕೊಳ್ಳುತ್ತಿದೆ. ನಿತ್ಯ ಲಕ್ಷಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ.
ಕೋವಿಡ್-19 ಎರಡನೇ ಅಲೆ ಸೃಷ್ಟಿಯಾದ ಮೇಲೆ ರೋಗಿಗಳು ವಿವಿಧ ರೀತಿಯ ಸೋಂಕಿನ ಲಕ್ಷಣಗಳನ್ನು ಹೊಂದಿರುತ್ತಾರೆ ಈ ಕುರಿತು ಶ್ವಾಸಕೋಶ ತಜ್ಞರು ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಕಳೆದ ವರ್ಷ ಕೊರೊನಾ ಸೋಂಕು ಆರಂಭದ ಸಂದರ್ಭದಲ್ಲಿ ಹಲವು ರೋಗಿಗಳಿಗೆ ಇಂಥದ್ದೇ ಲಕ್ಷಣಗಳಿದ್ದವು, ಈ ಬಾರಿ ಹೆಚ್ಚು ಪರೀಕ್ಷೆ, ಅರಿವು ಮೂಡಿಸುತ್ತಿರುವುದರಿಂದ ಕೊರೊನಾ ಸೋಂಕು ಇರುವುದು ಬಹುಬೇಗ ತಿಳಿಯುತ್ತಿದೆ.
ಅಲ್ಲದೆ, ವೈದ್ಯರಿಗೂ ಕೂಡ ಕೊರೊನಾ ಸೋಂಕಿನ ಲಕ್ಷಣಗಳ ಬಗ್ಗೆ ಹೆಚ್ಚು ಸ್ಪಷ್ಟತೆ ಮೂಡಿರುವುದರಿಂದ ಅಂತಹ ಪ್ರಕರಣಗಳು ಹೆಚ್ಚು ಪತ್ತೆಯಾಗುತ್ತಿರಬಹುದು ಎಂದು ವೈದ್ಯರು ಹೇಳಿದ್ದಾರೆ. ಕೊರೊನಾ ಸೋಂಕಿತರಲ್ಲಿ ಕಾಣಿಸಿಕೊಳ್ಳುತ್ತಿರುವ ಲಕ್ಷಣಗಳು ಯಾವುವು? ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಕೊರೊನಾ ಸೋಂಕಿತರಲ್ಲಿ ಕಾಣಿಸಿಕೊಳ್ಳುತ್ತಿರುವ ಲಕ್ಷಣಗಳು
ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ, ಅದರಲ್ಲೂ ಬೆಂಗಳೂರಿನಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಇತ್ತೀಚೆಗೆ ರೋಗಿಗಳು ಹೊಟ್ಟೆ ನೋವು, ತೀವ್ರವಾದ ಗ್ಯಾಸ್ಟ್ರಿಕ್ ಸಮಸ್ಯೆಗಳು, ಶ್ರವಣ ದೋಷ, ಕಣ್ಣಿನ ಸಮಸ್ಯೆ ಎಂದು ಹೇಳಿಕೊಂಡು ಆಸ್ಪತ್ರೆಗೆ ಬರುತ್ತಾರೆ ಅವರನ್ನು ಪರೀಕ್ಷೆ ಮಾಡಿದ ಬಳಿಕ ಸೋಂಕು ತಗುಲಿರುವುದು ಸ್ಪಷ್ಟವಾಗಿದೆ.

ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳು ಹೆಚ್ಚು
ಕೊರೊನಾ ಎರಡನೇ ಅಲೆಯಲ್ಲಿ ರೋಗಿಗಳಿಗೆ ಉಸಿರಾಟದ ಸಮಸ್ಯೆ ಜೊತೆಗೆ ಉದರಕ್ಕೆ ಸಂಬಂಧಿಸಿದ ಅನೇಕ ತೊಂದರೆಗಳು ಕಾಣಿಸುತ್ತಿವೆ. ಕೆಲವರಲ್ಲಿ ತೀವ್ರ ಹೊಟ್ಟೆ ನೋವು , ಹಲವರು ಅತಿಸಾರ ಮತ್ತು ಹೊಟ್ಟೆಯಲ್ಲಿ ಹಠಾತ್ ಹಿಡಿದಂತಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಇವು ಹೊಸ ರೋಗಲಕ್ಷಣಗಳಲ್ಲದಿರಬಹುದು, ಆದರೆ ಈ ಹಿಂದೆ ಸುಮಾರು 2 ಪ್ರತಿಶತದಷ್ಟು ರೋಗಿಗಳು ಇದ್ದರು, ಅದು ಈಗ ಶೇಕಡಾ 50ಕ್ಕೆ ಏರಿಕೆಯಾಗಿದೆ ಎನ್ನುತ್ತಾರೆ ಹಿರಿಯ ತಜ್ಞರು.

ಜ್ವರವಿಲ್ಲದ ರೋಗಿಗಳ ಪ್ರಕರಣ ಬಹಳ ಕಡಿಮೆ
ಕೆಲವು ಬಾರಿ ಯಾವುದೇ ರೋಗ ಲಕ್ಷಣಗಳಿಲ್ಲದಿದ್ದರೂ ಪರೀಕ್ಷೆ ಮಾಡಿಸಿದಾಗ ಕೊರೊನಾ ಸೋಂಕು ಕಾಣಿಸುತ್ತದೆ. ಆದರೆ ಒಳಜ್ವರ ಅಥವಾ ನ್ಯುಮೋನಿಯಾ ಸಣ್ಣ ಪ್ರಮಾಣದಲ್ಲಿ ಇದ್ದೇ ಇರುತ್ತದೆ ಎನ್ನುತ್ತಾರೆ ವೈದ್ಯರು.
Recommended Video

ಕೊರೊನಾ ನಂತರದ ಸಮಸ್ಯೆ
ಕಣ್ಣು ಕೆಂಪಾಗಿ ಕಾಣಿಸಿಕೊಂಡು ಕಿವಿಯಲ್ಲಿ ಕೂಡ ಸಮಸ್ಯೆಯಾಗುತ್ತಿದೆ, ಸರಿಯಾಗಿ ಕೇಳಿಸುತ್ತಿಲ್ಲ ಎಂದು ಹೇಳಿಕೊಂಡು ಜನರು ಆಸ್ಪತ್ರೆಗೆ ಬರುತ್ತಾರೆ. ಇದನ್ನು ಕೋವಿಡ್-19 ಸೋಂಕಿನ ನಂತರದ ಸಮಸ್ಯೆಗಳಿಗೆ ಸಂಬಂಧ ಕಲ್ಪಿಸಬಹುದು ಎಂದು ಸಾಗರ್ ಆಸ್ಪತ್ರೆಯ ಸಲಹಾ ತಜ್ಞ ಡಾ ಮೋಹನ್ ಜಿ ' ಇಂಡಿಯನ್ ಎಕ್ಸ್‌ಪ್ರೆಸ್'ಗೆ ಮಾಹಿತಿ ನೀಡಿದ್ದಾರೆ.












Click it and Unblock the Notifications