ಎತ್ತಿನಹೊಳೆ ಯೋಜನೆ 2027 ಕ್ಕೆ ಪೂರ್ಣ: ಮಹತ್ವದ ಮಾಹಿತಿ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು, ಸೆಪ್ಟೆಂಬರ್ 02: ಎತ್ತಿನಹೊಳೆ ಯೋಜನೆ 2027 ಕ್ಕೆ ಪೂರ್ಣಗೊಳ್ಳಲಿದೆ. ಪ್ರಸ್ತುತ ಪಂಪ್ ಮಾಡಿದ ನೀರನ್ನು 132 ಕಿ.ಮೀ ದೂರದ ವಾಣಿವಿಲಾಸ ಸಾಗರಕ್ಕೆ ಹರಿಸಲಾಗುತ್ತದೆ. ಅರಣ್ಯ ಭೂಮಿ ತಕರಾರು ಬಗೆಹರಿಸಿ ಮುಂದಿನ 140 ಕಿ.ಮೀ ಕಾಮಗಾರಿ ಪೂರ್ಣಗೊಳಿಸಿ, ತುಮಕೂರಿಗೆ ನೀರು ಹರಿಸಲಾಗುವುದು. ಮೊದಲ ಹಂತದ ಕಾಮಗಾರಿಗಳನ್ನು ಸೆ.6ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ವಿಧಾನಸೌಧದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಬ್ಬನಹಳ್ಳಿ ವಿತರಣಾ ತೊಟ್ಟಿ 4 ರಿಂದ 32 ಕಿ. ಮೀ. ದೂರದಲ್ಲಿ ಎಸ್ಕೇಪ್ ಚಾನೆಲ್ ಮಾಡಿದ್ದು, ಅಲ್ಲಿಂದ ನಾಲೆ ಮೂಲಕ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಲಾಗುವುದು. ನವೆಂಬರ್ 1 ರ ವೇಳೆಗೆ ಸುಮಾರು 5 ಟಿಎಂಸಿ ನೀರನ್ನು ಮೇಲಕ್ಕೆ ಎತ್ತಲಾಗುವುದು. ಅರಣ್ಯ ಇಲಾಖೆಯಿಂದ 502 ಎಕರೆ ಜಮೀನು ಪಡೆಯಬೇಕಾಗಿದ್ದು, ಇದಕ್ಕೆ ಬದಲಿಯಾಗಿ ನಾವು 452 ಎಕರೆ ಜಮೀನು ನೀಡಿದ್ದೇವೆ. ಮುಂದಿನ 4 ತಿಂಗಳಲ್ಲಿ ಈ ಕೆಲಸ ಮುಗಿಯಲಿದ್ದು, ಆನಂತರ ತುಮಕೂರು ಭಾಗದ ಕೆಲಸವನ್ನು ತ್ವರಿತವಾಗಿ ಮುಗಿಸಲಾಗುವುದು ಎಂದು ಹೇಳಿದರು.

Ettinhola Project Will Be Completed By 2027 Said DK Shivakumar

ಯೋಜನೆಯ ಒಟ್ಟು 24 ಟಿಎಂಸಿ ನೀರನ್ನು ಕುಡಿಯುವ ನೀರು ಹಾಗೂ ಕೆರೆಗಳನ್ನು ತುಂಬಿಸಲು ಬಳಸಿಕೊಳ್ಳಲಾಗುವುದು. ರೈತರು ತಮ್ಮ ಜಮೀನುಗಳನ್ನು ನೀಡಿ ಸಹಕಾರ ನೀಡಿದ್ದಾರೆ. ನೀರನ್ನು ಎತ್ತಲು ಸಾಧ್ಯವಿಲ್ಲ ಎಂದು ಒಂದಷ್ಟು ಜನ ಅಪಸ್ವರ ಎತ್ತಿದ್ದರು. ನಾನು ಇಲಾಖೆಯ ಜವಾಬ್ದಾರಿವಹಿಸಿಕೊಂಡ ಮೇಲೆ ಕಾರ್ಯಪ್ರವೃತ್ತವಾಗಿ ಈ ಯೋಜನೆ ಪೂರ್ಣಗೊಳಿಸಲು ಮುಂದಾದೆ. ಯೋಜನೆಯ ವಿರುದ್ಧವಾಗಿ ಒಂದಷ್ಟು ಜನ ಬ್ಲಾಕ್ ಮೇಲ್ ಮಾಡುತ್ತಿದ್ದರು ಅದನ್ನು ನಿವಾರಿಸಲಾಯಿತು. ಹಿಂದಿನ ಸರ್ಕಾರವು ಸಾಕಷ್ಟು ಪ್ರಯತ್ನ ಪಟ್ಟಿತ್ತು, ಆದರೆ ಸಹಕಾರ ಸಿಕ್ಕಿರಲಿಲ್ಲ ಎಂದು ತಿಳಿಸಿದರು.

ಸೆ. 6 ಶುಕ್ರವಾರದಂದು 12.05 ನಿಮಿಷಕ್ಕೆ ಯೋಜನೆಯ ಪ್ರಮುಖ ಜಾಗದಲ್ಲಿ ನೀರನ್ನು ಮೇಲಕ್ಕೆ ಎತ್ತುವ ಪಂಪ್ ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡುತ್ತಾರೆ. ಒಂದಷ್ಟು ಪ್ರಮುಖ ಭಾಗಗಳಲ್ಲಿ 10.30 ಒಳಗೆ ಸಚಿವರುಗಳು ಚಾಲನೆ ನೀಡುತ್ತಾರೆ. ಗೌರಿ ಹಬ್ಬದ ಶುಭದಿನದಂದು ಗಂಗಾ ಮಾತೆಗೆ ಪೂಜೆ ಸಲ್ಲಿಸಲಾಗುವುದು ಎಂದರು.

ಪ್ರಾಯೋಗಿಕ ಪರೀಕ್ಷೆ ನಡೆಸುವುದಕ್ಕೆ ಮುಂಚೆ ಒಂದಷ್ಟು ಕಡೆ ನೀರು ಸೋರಿಕೆಯಾಗಿತ್ತು. ಇದನ್ನೂ ಸಹ ಸರಿಪಡಿಸಲಾಗಿದೆ. ಸಣ್ಣ, ನದಿ, ತೊರೆಗಳಿಂದ ಎತ್ತುವ ನೀರನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅಧ್ಯಯನ ಮಾಡಲು ಪ್ರತ್ಯೇಕ ತಂಡ ರಚಿಸಲಾಗಿದೆ. ಅವರು ಅಧ್ಯಯನ ನಡೆಸಿ ವರದಿ ನೀಡುತ್ತಾರೆ ಎಂದರು.

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರದ ಸ್ವಲ್ಪ ಭಾಗ, ತುಮಕೂರು, ಹಾಸನ, ಹಾಗೂ ಚಿಕ್ಕಮಗಳೂರು ಸೇರಿದಂತೆ ಒಟ್ಟು 7 ಜಿಲ್ಲೆಗಳ ಜನರಿಗೆ ಅನುಕೂಲವಾಗುವುದು. ಎಲ್ಲಾ ಪಕ್ಷಗಳ ಮುಖಂಡರು ಹಾಗೂ ರೈತ ಸಂಘಟನೆಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಆಹ್ವಾನ ಪತ್ರಿಕೆ ಇಲ್ಲ ಎಂದು ಬೇಸರಿಸಬೇಡಿ ಮಾಧ್ಯಮಗಳ ಮೂಲಕ ಹಾಗೂ ಪತ್ರಿಕಾ ಜಾಹೀರಾತಿನ ಮೂಲಕ ವೈಯಕ್ತಿಕವಾಗಿ ಆಹ್ವಾನ ಮಾಡುತ್ತೇನೆ. ತೊರೆ ಕಾಡನಹಳ್ಳಿಯಿಂದ ಬೆಂಗಳೂರಿಗೆ ನೀರು ಸರಬರಾಜು ಆಗುತ್ತಿರುವುದಕ್ಕಿಂತ ಬೃಹತ್ ಪಂಪ್ ಗಳನ್ನು ಎತ್ತಿನಹೊಳೆ ಯೋಜನೆಯಲ್ಲಿ ಅಳವಡಿಸಲಾಗಿದೆ ಎಂದರು.

ತುಂಗಭದ್ರಾ ಅಣೆಕಟ್ಟು ಮತ್ತೆ ತುಂಬುತ್ತಿರುವುದು ಸಂತಸದ ವಿಚಾರ. 105.79 ಸಾಮರ್ಥ್ಯದ ಅಣೆಕಟ್ಟಿನಲ್ಲಿ ಪ್ರಸ್ತುತ ಸುಮಾರು 98 ಟಿಎಂಸಿ ನೀರು ಸಂಗ್ರಹಗೊಂಡಿದೆ. ನಿವೃತ್ತ ಎಂಜಿನಿಯರ್ ಕನ್ನಯ್ಯ ನಾಯ್ಡು ಅವರ ಮಾರ್ಗದರ್ಶನದಲ್ಲಿ ಸುಮಾರು 108 ಜನ ಹಗಲು ರಾತ್ರಿ ಅಧಿಕಾರಿಕಾರಿಗಳು, ಕಾರ್ಮಿಕ ವರ್ಗ ಕೆಲಸ ಮಾಡಿದ್ದಾರೆ. ಇವರಿಗೆ ಗೌರವ ಸಲ್ಲಿಸಿ ಪ್ರಶಸ್ತಿ ಪತ್ರ ನೀಡಬೇಕು ಎಂದು ಸರ್ಕಾರ ನಿರ್ಧರಿಸಿದೆ ಎಂದರು.

ತುಂಗಭದ್ರಾ ಕ್ರಸ್ಟ್ ಗೇಟ್ ಅವಘಡ ಸಂಭವಿಸಿದಾಗ ಸಾಕಷ್ಟು ಜನ ನೀರನ್ನು ಹೊರಗೆ ಬಿಡಬೇಡಿ ಎಂದರು. ನಾನು ತಂತ್ರಜ್ಞರ ಬಳಿ ಚರ್ಚೆ ನಡೆಸಿ ಅಣೆಕಟ್ಟಿನ ಉಳಿವಿಗಾಗಿ ಕಠಿಣ ನಿರ್ಧಾರ ತೆಗೆದುಕೊಂಡೆ. ರೈತರು ಬೆಳೆ ಹಾಳಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರೂ ನೀರನ್ನು ಹೊರಗೆ ಬಿಡಬೇಕಾಯಿತು. ಅವಘಡ ನಡೆದ 3 ಗಂಟೆಗಳಲ್ಲಿ ಗೇಟಿನ ವಿನ್ಯಾಸವನ್ನು ಮೂರು ಎಂಜಿನಿಯರಿಂಗ್ ಸಂಸ್ಥೆಗಳಿಗೆ ನೀಡಿ ತಯಾರಿಸಲು ಸೂಚನೆ ನೀಡಿದೆವು. ಈ ಕಾರ್ಯವನ್ನು ಇಡೀ ದೇಶವೇ ಗಮನಿಸುತ್ತಿತ್ತು. ಕೇವಲ 4 ದಿನಗಳಲ್ಲಿ ನೂತನ ಗೇಟ್ ಅನ್ನು ಅಳವಡಿಸಲಾಯಿತು. ಶೇ.50 ರಷ್ಟು ನೀರು ಪೋಲಾಯಿತು ಎಂದು ಹೇಳಿದರು.

ಎತ್ತಿನಹೊಳೆ ಕಾರ್ಯಕ್ರಮ ಮುಗಿದ ತಕ್ಷಣ ತುಂಗಭದ್ರಕ್ಕೂ ಬಾಗಿನ ಅರ್ಪಿಸಲಾಗುವುದು. ಆ ಭಾಗದ ರೈತರ ಪ್ರಾರ್ಥನೆಗೆ ಫಲ ಸಿಕ್ಕಿದೆ. ವಿರೋಧ ಪಕ್ಷಗಳ ನಾಯಕರು ಮಾಡಿದ ಟೀಕೆಗಳನ್ನು ಮಾಧ್ಯಮಗಳು ಜನರಿಗೆ ತಿಳಿಸಬೇಕು, ಜೊತೆಗೆ ನಮ್ಮ ಕೆಲಸವನ್ನೂ ಪ್ರಚಾರ ಮಾಡಬೇಕು ಎಂದರು.

ಗೇಟ್ ತುಂಡಾದ ಅವಘಡ ಸಂಭವಿಸಿದ ಮೇಲೆ ಸೆಕ್ಷನ್ 38, 39 ಅಣೆಕಟ್ಟು ಸಂರಕ್ಷಣಾ ಕಾಯ್ದೆ ಪ್ರಕಾರ, ನೂತನವಾಗಿ ಸಂರಕ್ಷಣಾ ಪರಿಶೀಲನಾ ಸಮಿತಿಯನ್ನು ಸಿಡ್ಬ್ಲೂಸಿ ಮಾಜಿ ಅಧ್ಯಕ್ಷರಾಗಿದ್ದ ಎ.ಕೆ.ಬಜಾಜ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ. ಈಗಾಗಲೇ ಸಮಿತಿ ಕೆಲಸ ಮಾಡುತ್ತಿದೆ. ತುಂಗಭದ್ರಾ ಗೇಟುಗಳ ವಿಚಾರವಾಗಿ ಸಭೆ ನಡೆಸಲಾಗಿದೆ ಎಂದರು.

ಕಬಿನಿ ಅಣೆಕಟ್ಟು ಕೂಡ ಅಪಾಯದಲ್ಲಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿದ್ದವು. ಆ ನಂತರ ಈ ಸಮಿತಿ ಅಲ್ಲಿಗೂ ತೆರಳಿ ನೀರಿನ ಆಳಕ್ಕೆ ಇಳಿದು ಪರಿಶೀಲನೆ ನಡೆಸಿದೆ. ನನ್ನ ಸೂಚನೆಗಳನ್ನು ಕಾಯಬೇಡಿ, ಯಾವುದಾದರೂ ತೊಂದರೆ ಇದ್ದರೆ ಕೂಡಲೇ ಕಾರ್ಯಪ್ರವೃತ್ತರಾಗಿ ಎಂದು ಸೂಚಿಸಿದ್ದೇನೆ. ಈ ಸಮಿತಿ ವರದಿ ನೀಡುವ ತನಕ ಇದರ ಬಗ್ಗೆ ನಾನು ಮಾಹಿತಿ ನೀಡಲು ಆಗುವುದಿಲ್ಲ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+