ನೈಋತ್ಯ ರೈಲ್ವೆಯಿಂದ 'ಎಕಾನಮಿ ಮೀಲ್' ಪೂರೈಕೆ; ದರ, ಮೆನು
ಬೆಂಗಳೂರು, ಜುಲೈ 21; ರೈಲು ಪ್ರಯಾಣಿಕರು ಪ್ರಯಾಣದ ಸಂದರ್ಭದಲ್ಲಿ ಆಹಾರ, ಊಟದ ಬಗ್ಗೆ ಹೆಚ್ಚು ಆಲೋಚಿಸುತ್ತಾರೆ. ಐಷಾರಾಮಿ ರೈಲು ಬೋಗಿಗಳಲ್ಲಿ ಆಹಾರ ಪೂರೈಕೆ ವ್ಯವಸ್ಥೆ ಇದೆ. ಆದರೆ ಸಾಮಾನ್ಯ ಬೋಗಿಯಲ್ಲಿ ಸಂಚಾರ ನಡೆಸುವ ಜನರಿಗೆ ಊಟದ ವ್ಯವಸ್ಥೆ ರೈಲಿನಲ್ಲಿ ಇಲ್ಲ.
ಸಾಮಾನ್ಯ ಬೋಗಿಗಳು ನಿಲ್ಲುವ ಪ್ಲಾಟ್‌ಫಾರ್ಮ್ ಬಳಿಯಲ್ಲಿ ಉಪಹಾರ, ಊಟ ನೀಡುವ ಯೋಜನೆಯನ್ನು ಆರಂಭಿಸುವಂತೆ ರೈಲ್ವೆ ಮಂಡಳಿಯು ಸೂಚನೆ ನೀಡಿತ್ತು. ಸದ್ಯ ನೈಋತ್ಯ ರೈಲ್ವೆ ಐಆರ್‌ಸಿಟಿಸಿಯ ಅಡುಗೆ ಘಟಕಗಳಿಂದ ತಯಾರಿಸಿದ ಆಹಾರವನ್ನು ಕೌಂಟರ್‌ಗಳಲ್ಲಿ ಪ್ರಯಾಣಿಕರಿಗೆ ವಿತರಿಸುವ ವ್ಯವಸ್ಥೆ ಮಾಡಿದೆ.

ನೈಋತ್ಯ ರೈಲ್ವೆ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಹುಬ್ಬಳ್ಳಿಯ ಸಿದ್ದರೂಢ ಸ್ವಾಮೀಜಿ ರೈಲು ನಿಲ್ದಾಣ ಮತ್ತು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಆರಂಭಿಸಿದೆ. 6 ತಿಂಗಳ ಕಾಲ ಪೊಟ್ಟಣಗಳಲ್ಲಿ ತಯಾರು ಮಾಡಿದ ಆಹಾರವನ್ನು ಸಾಮಾನ್ಯ ದರ್ಜೆಯ ಬೋಗಿಗಳ ರೈಲು ಪ್ರಯಾಣಿಕರಿಗೆ ಒದಗಿಸಲಿದೆ.
ಉಪಹಾರ, ಊಟ, ಕುಡಿಯುವ ನೀರು; ರೈಲುಗಳ ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಉಪಹಾರ, ಊಟ, ಕುಡಿಯುವ ನೀರು ಸರಬರಾಜು ಮಾಡುವ ಈ ಸೇವೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಇದಕ್ಕಾಗಿ ಎರಡು ಮಾದರಿ ಕೌಂಟರ್ ಸಿದ್ಧಪಡಿಸಲಾಗಿದೆ. ಉಪಹಾರ, ಊಟದ ಮೆನು, ದರಪಟ್ಟಿಯನ್ನು ಪ್ರಕಟಿಸಲಾಗಿದೆ.
ಈ ಎರಡೂ ರೈಲು ನಿಲ್ದಾಣದ ಸೇವಾ ಕೌಂಟರ್‌ಗಳಲ್ಲಿ ಎರಡು ಬಗೆಯ ಊಟದ ಪ್ಯಾಕೇಜ್‌ಗಳಿರುತ್ತದೆ. ಇದರ ದರ ಕಡಿಮೆ ಇದ್ದು, ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುವ ಜನರಿಗೆ ಅನುಕೂಲವಾಗುವಂತೆ ಇದನ್ನು ರೂಪಿಸಲಾಗಿದೆ.
* 1ನೇ ಪ್ಯಾಕೇಟ್ ಎಕಾನಮಿ ಮೀಲ್; 7 ಪೂರಿ (175 ಗ್ರಾಂ), ಒಣ ಆಲೂ ವೆಜ್ (150 ಗ್ರಾಂ) ಮತ್ತು ಉಪ್ಪಿನಕಾಯಿ (12 ಗ್ರಾಂ) ಒಳಗೊಂಡಿರುತ್ತದೆ ಇದಕ್ಕೆ ರೂ. 20 (GST ಸೇರಿ) ದರವನ್ನು ನಿಗದಿ ಮಾಡಲಾಗಿದೆ.
* 2ನೇ ಪ್ಯಾಕೇಜ್‌ನಲ್ಲಿ ಊಟ/ ತಿಂಡಿ (350 ಗ್ರಾಂ), ಅನ್ನ, ರಾಜ್ಞಾ/ ಚೋಲೆ ಅನ್ನ/ ಖಿಚಡಿ/ ಕುಲ್ಚಾ/ ಭತುರಾ/ಪಾವ್-ಬಾಜಿ/ ಮಸಾಲಾ ದೋಸೆ ಸೇರಿದಂತೆ ಕೆಲ ದಕ್ಷಿಣ ಭಾರತದ ಆಹಾರದ ಪೊಟ್ಟಣ ಇದು. ಇದಕ್ಕೆ ರೂ. 50 (GST ಸೇರಿ) ದರ ನಿಗದಿ ಮಾಡಲಾಗಿದೆ.
ಇದಲ್ಲದೇ ಪ್ರಯಾಣಿಕರ ಅನುಕೂಲಕ್ಕಾಗಿ 200 ಎಂಎಲ್ ಗ್ಲಾಸ್ ಮತ್ತು 1 ಲೀಟರ್ ಕುಡಿಯುವ ನೀರಿನ ಬಾಟಲಿಗಳು ಲಭ್ಯವಿರುತ್ತವೆ.
ಪ್ರಾಯೋಗಿಕವಾಗಿ 6 ತಿಂಗಳ ಮಟ್ಟಿಗೆ 2 ನಿಲ್ದಾಣಗಳಲ್ಲಿ ಈ ಸೇವೆ ಆರಂಭಿಸಲಾಗಿದೆ. ಜನರ ಪ್ರತಿಕ್ರಿಯೆ ನೋಡಿಕೊಂಡು ಮುಂಬರುವ ದಿನಗಳಲ್ಲಿ ಈ ಸೇವೆಯನ್ನು ಹೆಚ್ಚಿನ ನಿಲ್ದಾಣಗಳು ಗುರುತಿಸಿ, ವಿಸ್ತರಿಸಲು ಇಲಾಖೆ ಚಿಂತನೆ ನಡೆಸಿದೆ.
ಈ ಯೋಜನೆಯಡಿ ಐಆರ್‌ಸಿಟಿಸಿಯ ಅಡುಗೆ ಘಟಕಗಳಲ್ಲಿ ತಯಾರಿಸಿದ ಆಹಾರವನ್ನು ಕೌಂಟರ್‌ಗಳಲ್ಲಿ ಪ್ರಯಾಣಿಕರಿಗೆ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಎಲ್ಲಿ, ಎಲ್ಲಿ ಕೌಂಟರ್ ತೆರೆಯಬೇಕು ಎಂದು ವಲಯ ರೈಲ್ವೆ ಅಧಿಕಾರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ರೈಲ್ವೆ ಇಲಾಖೆ ಕೆಲವು ದಿನಗಳ ಹಿಂದೆ ಹೇಳಿತ್ತು.
ಪ್ರಾಯೋಗಿಕ ಮಾದರಿಯಲ್ಲಿ ಮೊದಲು ರೈಲ್ವೆ ಇಲಾಖೆ 51ನಿಲ್ದಾಣಗಳಲ್ಲಿ 'ಎಕಾನಮಿ ಮೀಲ್' ಸೇವೆಯನ್ನು ಆರಂಭಿಸಿತ್ತು. ಈಗ ಇನ್ನೂ 13 ನಿಲ್ದಾಣಗಳಿಗೆ ಈ ಸೇವೆಯನ್ನು ವಿಸ್ತರಣೆ ಮಾಡಲಾಗಿದೆ.
ಸಾಮಾನ್ಯ ದರ್ಜೆಯ ಬೋಗಿಗಳಲ್ಲಿ ಸಂಚಾರ ನಡೆಸುವ ಪ್ರಯಾಣಿಕರಿಗೆ ಗುಣಮಟ್ಟದ ಆಹಾರ ನೀಡಲು ಈ ಸೇವೆ ಪ್ರಾರಂಭಿಸಲಾಗಿದೆ. ತುಂಬಿ ತುಳುಕುವ ಬೋಗಿಯಲ್ಲಿ ಜನರು ಮನೆಯಿಂದ ಆಹಾರವನ್ನು ತಂದಿದ್ದರೂ ಅದನ್ನು ತಿನ್ನಲು ಆಗುವುದಿಲ್ಲ. ಆದ್ದರಿಂದ ಪ್ರಯಾಣದ ಅವಧಿಯಲ್ಲಿ ಹಸಿದುಕೊಂಡು ಇರಬೇಕಿತ್ತು.












Click it and Unblock the Notifications