ಪ್ರಚಾರಕ್ಕೆ ಹೊಸ ವಿಧಾನ: ವಿಡಿಯೋಗಳನ್ನು ನೋಡಿ ಸುಸ್ತಾಗುತ್ತಿದ್ದಾರೆ ಆಯೋಗದ ಅಧಿಕಾರಿಗಳು
ಬೆಂಗಳೂರು, ಏಪ್ರಿಲ್. 24: ಚುನಾವಣಾ ಪ್ರಚಾರವೆಂದರೆ ನೇರ ಪ್ರಚಾರ, ವೈಯಕ್ತಿಕವಾಗಿ ಹೋಗಿ ತಮ್ಮ ಕೆಲಸಗಳ ಬಗ್ಗೆ ಜನರಿಗೆ ತಿಳಿಸಿ ಮತ ಪಡೆಯುವುದು ಎಂಬುದಿತ್ತು. ಆದರೆ, ಈಗ ಮತದಾರ ಮತ್ತು ರಾಜಕೀಯ ಚಟುವಟಿಕೆಗಳು ಬದಲಾಗಿವೆ. ಜನರು ತಮ್ಮ ಮನೆಗಳಲ್ಲಿ ದೊರೆಯುವುದಕ್ಕಿಂತ ಹೆಚ್ಚಾಗಿ ಮೊಬೈಲ್ ಫೋನ್‌ಗಳ ಮೂಲಕ ಸಿಗುತ್ತಾರೆ. ಸಾಮಾಜಿಕ ಮಾಧ್ಯಮಗಳ ಬಳಕೆ ಹೆಚ್ಚಾಗಿದ್ದು, ಇದಕ್ಕಾಗಿ ಹೊಸ ಪ್ರಚಾರ ವಿಧಾನಗಳನ್ನು ಪಕ್ಷಗಳು ಅನುಸರಿಸುತ್ತಿವೆ.
ಟಿವಿಗಳಿಂದ ಮೊಬೈಲ್‌ಗೆ ಜಾರಿರುವ ಮತದಾರರನ್ನು ಈಗ ನೋಡಬಹುದು. ಇದೆ ಕಾರಣಕ್ಕೆ ರಾಜಕಾರಣಿಗಳು, ಪಕ್ಷಗಳು ಕೂಡ ತಮ್ಮ ಚುನಾವಣಾ ಪ್ರಚಾರವನ್ನು ಪೋನ್‌ಗಳ ಮೂಲಕವು ಜನರಿಗೆ ತಲುಪಿಸಲು ಪ್ರಯತ್ನಿಸುತ್ತಿವೆ. ಪೋಸ್ಟರ್‌ಗಳು, ಕಿರಿ ವಿಡಿಯೋಗಳು, ಕಿರುಚಿತ್ರಗಳ ಮೂಲಕ ತಾವು ಮಾಡಿದ, ಮುಂದೆ ಮಾಡಲಿರುವ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತಲುಪಿಸಲು ಪ್ರಯತ್ನಿಸುತ್ತವೆ.

ಆದರೆ, ಈ ವಿಡಿಯೋಗಳನ್ನು ಹಾಗೇಯೇ ರಚಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುವಂತಿಲ್ಲ. ಚುನಾವಣಾ ಸಮಯವಾದ್ದರಿಂದ ರಾಜಕೀಯ ಪಕ್ಷಗಳ ಕಾರ್ಯಗಳಿಗೆ ಚುನಾವಣಾ ಆಯೋಗದ ಒಪ್ಪಿಗೆ ಕಡ್ಡಾಯ. ಇವರು ತಯಾರಿಸುವ ವಿಡಿಯೋಗಳನ್ನು ಆಯೋಗದ ಅಧಿಕಾರಿಗಳು ನೋಡಿ ಒಪ್ಪಿಗೆ ನೀಡಿದ ಬಳಿಕ ಅದನ್ನು ಮಾಧ್ಯಮಗಳಲ್ಲಿ ಬಿಡಬಹುದು.
ಹಗರಣ, ಕಮಿಷನ್ ದಂಧೆ, ಕೋಮುವಾದ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರುವ 40% ಬಿಜೆಪಿ ಸರ್ಕಾರದ ಬದಲಾವಣೆಯ ಸಮಯ ಬಂದಿದೆ. ಈ ಕಮಿಷನ್ ಸರ್ಕಾರವನ್ನು ಕಿತ್ತೊಗೆಯಿರಿ. ಜನಪರ ಸರ್ಕಾರಕ್ಕೆ ಅಧಿಕಾರ ನೀಡಿ.
— Karnataka Congress (@INCKarnataka) April 17, 2023
ಕಾಂಗ್ರೆಸ್ ಬರಲಿದೆ. ಪ್ರಗತಿ ತರಲಿದೆ. #Defeat40PercentBJPSarkara pic.twitter.com/eqL5rupK7v
ಈಗಗಲೇ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಅನೇಕ ಪಕ್ಷಗಳು ತಮ್ಮ ಕೆಲಸಗಳನ್ನು ಹೇಳುವ ವಿಡಿಯೋಗಳನ್ನು ಬಿಡುಗಡೆ ಮಾಡಿವೆ. ಗ್ರಾಫಿಕ್ಸ್ ಮತ್ತು ಅನಿಮೇಡ್ ಬಳಸಿದ 2 ರಿಂದ 10 ನಿಮಿಷಗಳ ವಿಡಿಯೋ ತುಣಕುಗಳನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿವೆ. ಬಿಜೆಪಿಯು ಇತ್ತೀಚೆಗೆ ನಾಟು ನಾಟು ಹಾಡಿನ ರಿಮಿಕ್ಸ್ ಮೋದಿ ಮೋದಿ ಹಾಡು ಬಿಡುಗಡೆ ಮಾಡಿತ್ತು. ಕಾಂಗ್ರೆಸ್ ಕೂಡ ಬಿಜೆಪಿಯ ಭ್ರಷ್ಟಾಚಾರವನ್ನು ಬಿಚ್ಚಿಡುವ 40 ಪರ್ಸೆಂಟ್ ಸರ್ಕಾರ ಎಂಬ ವಿಡಿಯೋ ಬಿಡುಗಡೆ ಮಾಡಿದೆ.

ಇವುಗಳಲ್ಲದೇ ಪ್ರಚಾರದ ಹಾಡುಗಳು ಎಂದು ಹಲವು ವಿಡಿಯೋಗಳನ್ನು ತಿಂಗಳಲ್ಲಿ ಎರಡು ಮೂರು ಬಿಡುಗಡೆ ಮಾಡುತ್ತವೆ. ಇವೆಲ್ಲವಕ್ಕೂ ಚುನಾವಣಾ ಆಯೋಗದ ಮುದ್ರೆ ಅವಶ್ಯಕ. ಹೀಗಾಗಿಯೇ ಚುನಾವಣಾ ಆಯೋಗದ ಅಧಿಕಾರಿಗಳು ಪ್ರತಿದಿನ ರಾಜಕೀಯ ಪಕ್ಷಗಳು ತಯಾರಿಸಿದ 100 ವಿಡಿಯೋಗಳನ್ನು ಪರಿಶೀಲಿಸುತ್ತಿದ್ದು, ಆಕ್ಷೇಪಣಾ ವಿಚಾರಗಳು ಕಂಡುಬಂದರೇ ಕ್ರಮ ತೆಗೆದುಕೊಳ್ಳುತ್ತಿದೆ.
"ಈ ವಿಧಾನಸಭೆ ಚುನಾವಣೆಯನ್ನು ಕಿರು ವಿಡಿಯೋಗಳ ಸಂಖ್ಯೆ ಏರಿಕೆಯಾಗಿವೆ. ಕಳೆದ ಚುನಾವಣೆಗಳಲ್ಲಿ ನಾವು ಪ್ರತಿದಿನ ನಾವು 20 ರಿಂದು 30 ವಿಡಿಯೋಗಳನ್ನು ಪರಿಶೀಲಿಸುತ್ತಿದ್ದೇವು. ಆದರೆ ಈ ಚುನಾವಣೆಯಲ್ಲಿ ಪ್ರತಿದಿನ 80 ರಿಂದ 100 ವಿಡಿಯೋಗಳನ್ನು ಪರಿಶೀಲಿಸುತ್ತಿದ್ದೇವೆ" ಎಂದು ರಾಜ್ಯ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ವೆಂಕಟೇಶ್ ಕುಮಾರ್ ಅವರು ಹೇಳಿದ್ದಾರೆ ಎಂದು ಕನ್ನಡ ಸುದ್ದಿವಾಹಿನಿ ಟಿವಿ9 ಉಲ್ಲೇಖಿಸಿದೆ.

"ಮತದಾರರು ಇತ್ತೀಚಿಗೆ ಯೂಟ್ಯೂಬ್, ಫೇಸ್ಬುಕ್, ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ಗಳಲ್ಲಿ ಹೆಚ್ಚು ರಾಜಕೀಯ ಬೆಳವಣಿಗೆಗಳನ್ನು ಗಮನಿಸುತ್ತಿದ್ದು, ಟಿವಿ ನೋಡುಗರ ಸಂಖ್ಯೆ ಕಡಿಮೆಯಾಗಿದೆ. ಜನರು ರಾಜಕೀಯ ವಿಚಾರಗಳನ್ನು ಸಾಮಾಜಿಕ ಮಾಧ್ಯಮಗಳಿಂದಲೇ ಹೆಚ್ಚು ತಿಳಿದುಕೊಳ್ಳುತ್ತಿದ್ದಾರೆ. ಹೀಗಾಗಿಯೆ ಮುಂದಾದ ವಿವಿಧ ಪಕ್ಷಗಳನ್ನು ಹೆಚ್ಚಿನ ಪ್ರಚಾರಕ್ಕಾಗಿ ಈ ಮಾರ್ಗವನ್ನು ಅನುಸರಿಸುತ್ತಿವೆ" ಎಂದು ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.
ಈ ವಿಡಿಯೋಗಳಲ್ಲಿ ಬಳಸಲಾಗುವ ದ್ವೇಷದ ಮಾತು, ಸತ್ಯವನ್ನು ತಿರುಚುವುದು, ಹಿಂಸೆಯನ್ನು ಪ್ರಚೋದಿಸುವ, ಜಾತಿ, ವರ್ಣ ಮತ್ತು ಧರ್ಮದ ಕುರಿತು ಟೀಕೆ ಮತ್ತು ವಿವಾದಾತ್ಮ ಸಂದೇಶವನ್ನು ರವಾನಿಸುವ ಆಕ್ಷೇಪಾರ್ಹ ಸಂದೇಶಗಳಿದ್ದರೇ ಅದನ್ನು ತೆಗೆದುಹಾಕಲು ಆಯಾ ಪಕ್ಷಗಳಿಗೆ ತಿಳಿಸಲಾಗುತ್ತದೆ.












Click it and Unblock the Notifications