ಸೇನೆಯಲ್ಲಿರುವ ಸೇವಾ ಮತದಾರರ ಹಕ್ಕು ಚಲಾವಣೆಗೆ ಮಾರ್ಗಸೂಚಿ!
ಬೆಂಗಳೂರು, ಮೇ 11: ಚುನಾವಣಾ ಆಯೋಗವು ಜನ ಪ್ರತಿನಿಧಿ ಕಾಯ್ದೆ 1950 ರ ಅನ್ವಯ ಸೇವಾ ಮತದಾನಕ್ಕೆ ಅನುವು ಮಾಡಿಕೊಟ್ಟಿದೆ. ಮೇ 12ರಂದು ರಾಜ್ಯವಿಧಾನಸಭಾ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಕೆಲವು ಸೇವಾ ಮತದಾರರ ಹಕ್ಕುಗಳ ಮಾರ್ಗಸೂಚಿಯನ್ನು ತಿಳಿಸಿದೆ.
ಸೇವಾ ಮತದಾರ ಯಾರು : ಭಾರತ ಸೇನೆ, ನೌಕಾ ಪಡೆ, ವಾಯು ಸೇನೆ, ಸಾಮಾನ್ಯ ಮೀಸಲು ಅಭಿಯಂತರರ ಪಡೆ (ಗಡಿ ರಸ್ತೆ ಸಂಸ್ಥೆ), ಗಡಿ ಭದ್ರತಾ ಪಡೆ, ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್, ಅಸ್ಸಾಂ ರೈಫಲ್ಸ್, ರಾಷ್ಟ್ರೀಯ ಸುರಕ್ಷಾ ಗಾರ್ಡ್, ಕೇಂದ್ರ ಮೀಸಲು ಪೊಲೀಸ್ ಪಡೆ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ, ಸಶಸ್ತ್ರ ಸೀಮಾ ಬಲ್ನಾ ಸದಸ್ಯರು ಅಥವಾ ಸಿಬ್ಬಂದಿಯಾಗಿದ್ದರೆ, ಕೇಂದ್ರ ಸರ್ಕಾರದ ಅಧಿಕಾರಿಯಾಗಿದ್ದು, ವಿದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಸೇವಾ ಮತದಾರರಾಗಲು ಅರ್ಹರಿರುತ್ತಾರೆ.
ಸಾಮಾನ್ಯ ಮತದಾರರು ಹಾಗೂ ಸೇವಾ ಮತದಾರರಿಗೆ ಇರುವ ವ್ಯತ್ಯಾಸ : ಸಾಮಾನ್ಯ ಮತದಾರರು ತಾವು ವಾಸಿಸುವ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿರುತ್ತಾರೆ. ಸೇವಾ ಅರ್ಹತೆಯುಳ್ಳ ವ್ಯಕ್ತಿ ಕೆಲಸದ ನಿಮಿತ್ತ ಬೇರೆ ಸ್ಥಳದಲ್ಲಿ ವಾಸಿಸುತ್ತಿದ್ದು (ನೇಮಕದ ಸ್ಥಳ), ತನ್ನ ಮೂಲ ಸ್ಥಳದಲ್ಲಿ ಸೇವಾ ಮತದಾರ ಎಂದು ನೋಂದಣಿ ಮಾಡಿಕೊಳ್ಳಬಹುದು.

ಆದರೆ ಆತನಿಗೆ ತನ್ನ ನೇಮಕವಾದ ಸ್ಥಳದಲ್ಲಿ ಸಾಮಾನ್ಯ ಮತದಾರನಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶವಿರುತ್ತದೆ. ಅಲ್ಲಿ ಆತ ತನ್ನ ಕುಟುಂಬದೊಂದಿಗೆ ಸಾಕಷ್ಟು ಕಾಲ ನೆಲೆಸಿರಬೇಕು.
ವರ್ಗೀಕೃತ ಸೇವಾ ಮತದಾರ : ಸೇನಾಪಡೆ ಅಥವಾ ಸೇನಾ ಕಾಯ್ದೆ ಅನ್ವಯವಾಗುವ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಅವರಿಗೆ ಅಂಚೆ ಮತದಾನ ಅಥವಾ ಅವರಿಂದ ನೇಮಕವಾದ ಬದಲಿ ಪ್ರತಿನಿಧಿ(ಪ್ರಾಕ್ಸಿ) ಮೂಲಕ ಮತದಾನ ಮಾಡುವ ಆಯ್ಕೆಯಿದ್ದು, ಇವರನ್ನು ವರ್ಗೀಕೃತ ಸೇವಾ ಮತದಾರ ಎನ್ನುತ್ತಾರೆ.
ಒಬ್ಬ ವ್ಯಕ್ತಿ ಏಕಕಾಲಕ್ಕೆ ತನ್ನ ಮೂಲಸ್ಥಳದಲ್ಲಿ ಸೇವಾ ಮತದಾರನಾಗಿ ಮತ್ತು ಉದ್ಯೋಗದ ಸ್ಥಳದಲ್ಲಿ ಸಾಮಾನ್ಯ ಮತದಾರನಾಗಿ ನೋಂದಣಿ ಮಾಡಿಕೊಳ್ಳಬಹುದೇ : ಇಲ್ಲ. ಒಬ್ಬ ವ್ಯಕ್ತಿ ಜನ ಪ್ರತಿನಿಧಿಗಳ ಕಾಯ್ದೆ, 1950ರ ಅನುಚ್ಛೇದ 17 ಮತ್ತು 18ರ ನಿಬಂಧನೆಗಳ ಅನ್ವಯ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶವಿಲ್ಲ.
ಅದೇ ರೀತಿ ಯಾವುದೇ ವ್ಯಕ್ತಿ ಯಾವುದೇ ಮತದಾರರ ಪಟ್ಟಿಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಮತದಾರನಾಗಿ ನೋಂದಣಿ ಮಾಡಿಕೊಳ್ಳಬಾರದು. ಮೇಲೆ ಹೇಳಿದಂತೆ ಸೇವಾ ಮತದಾರರಿಗೆ ತಮ್ಮ ಮೂಲಸ್ಥಳದಲ್ಲಿ ಸೇವಾ ಮತದಾರನಾಗಿ ಅಥವಾ ಉದ್ಯೋಗದ ಸ್ಥಳದಲ್ಲಿ ಸಾಮಾನ್ಯ ಮತದಾರನಾಗಿ ನೋಂದಣಿ ಮಾಡಿಕೊಳ್ಳುವ ಅವಕಾಶ ಇರುತ್ತದೆ.
ಸೇವಾ ಮತದಾರ ಫಾರಂ 2/2ಎ ಯಲ್ಲಿ ನೋಂದಣಿಗೆ ಅರ್ಜಿ ಸಲ್ಲಿಸಿದಾಗ ಆತ ನಿಗದಿತ ಮಾದರಿಯಲ್ಲಿ ಯಾವುದೇ ಕ್ಷೇತ್ರದಲ್ಲಿ ಸಾಮಾನ್ಯ ಮತದಾರ ಎಂದು ನೋಂದಣಿಯಾಗಿಲ್ಲ ಎಂದು ದೃಢೀಕರಣ ಸಲ್ಲಿಸಬೇಕು.
ಪ್ರಾಕ್ಸಿ' ಯಾರು: ಸೇವಾ ಮತದಾರ ಯಾವುದೇ ವ್ಯಕ್ತಿಯನ್ನು ಆತ, ಆಕೆಯ ಪ್ರಾಕ್ಸಿಯಾಗಿ ಆತ, ಆಕೆಯ ಪರವಾಗಿ ಆತ/ಆಕೆಯ ಹೆಸರಿನಲ್ಲಿ ಮತಗಟ್ಟೆಯಲ್ಲಿ ಮತ ಚಲಾಯಿಸಲು ನೇಮಕ ಮಾಡಬಹುದು. ಪ್ರಾಕ್ಸಿ ಕ್ಷೇತ್ರದ ಸಾಮಾನ್ಯ ಮತದಾರರಾಗಿರಬೇಕು. ಆತ ನೋಂದಾಯಿತ ಮತದಾರನೇ ಆಗಬೇಕೆಂದಿಲ್ಲ ಆದರೆ ಆತ,ಆಕೆ ಮತದಾರನಾಗಿ ಅನರ್ಹತೆ ಹೊಂದಿರಬಾರದು.
ಪ್ರಾಕ್ಸಿ ನೇಮಕ ಮಾಡಿಕೊಳ್ಳಲು ಅನುಸರಿಸಬೇಕಾದ ಪ್ರಕ್ರಿಯೆ: 1) ಸೇವಾ ಮತದಾರ ತನ್ನ ಉದ್ಯೋಗದ ಸ್ಥಳದಲ್ಲಿದ್ದರೆ, ಆತ ತನ್ನ ಸಹಿಯನ್ನು ತನ್ನ ಘಟಕದ ಕಮ್ಯಾಂಡಿಂಗ್ ಆಫೀಸರ್ ಮುಂದೆ ಫಾರಂ-13ಎಫ್ ರಲ್ಲಿ ಹಾಕಬೇಕು ಮತ್ತು ನಂತರ ಅರ್ಜಿಯನ್ನು ಪ್ರಾಕ್ಸಿಗೆ ಆತ, ಆಕೆ ನೋಟರಿ, ಪ್ರಥಮ ದರ್ಜೆಯ ಮ್ಯಾಜಿಸ್ಟ್ರೇಟ್ ಎದುರು ಸಹಿ ಮಾಡಲು ಕಳುಹಿಸಬೇಕು. ನಂತರ ಪ್ರಾಕ್ಸಿ ಸಂಬಂಧಿಸಿದ ಅರ್ಜಿಯನ್ನು ಸಂಬಂಧಪಟ್ಟ ರಿಟರ್ನಿಂಗ್ ಆಫೀಸರ್ ಅವರಿಗೆ ಸಲ್ಲಿಸಬಹುದು.
2) ಸೇವಾ ಮತದಾರ ತನ್ನ ಮೂಲಸ್ಥಳದಲ್ಲಿದ್ದರೆ, ಆತ ಮತ್ತು ಆತನ ಪ್ರಾಕ್ಸಿ ಫಾರಂ-13ಎಫ್ ಅನ್ನು ನೋಟರಿ, ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಎದುರು ಸಹಿ ಮಾಡಬೇಕು ಮತ್ತು ಸಂಬಂಧಪಟ್ಟ ರಿಟರ್ನಿಂಗ್ ಆಫೀಸರ್ ಅವರಿಗೆ ಕಳುಹಿಸಬಹುದು.
ಪ್ರಾಕ್ಸಿ ಎಷ್ಟು ಸಮಯ ಮಾನ್ಯತೆ ಹೊಂದಿರುತ್ತದೆ: ಪ್ರಾಕ್ಸಿಯ ಮೂಲಕ ಮತದಾನ ಸೇವಾ ಮತದಾರರು ನೇಮಕ ಮಾಡಿದ ದಿನದಿಂದಲೂ ಮಾನ್ಯತೆ ಹೊಂದಿರುತ್ತದೆ. ಒಮ್ಮೆ ನೇಮಕ ಮಾಡಿದ ನಂತರ ಪ್ರಾಕ್ಸಿ ಸೇವಾ ಮತದಾರರು ರದ್ದುಪಡಿಸುವವರೆಗೂ ಮಾನ್ಯತೆ ಹೊಂದಿರುತ್ತದೆ.
ಪ್ರಾಕ್ಸಿ ಮತದಾರರ ಸೌಲಭ್ಯವನ್ನು ರದ್ದುಪಡಿಸಬಹುದು ಮತ್ತು ಪ್ರಾಕ್ಸಿಯನ್ನು ಯಾವುದೇ ಸಮಯದಲ್ಲಿ ಎಷ್ಟು ಸಲ ಬೇಕಾದರೂ ವರ್ಗೀಕೃತ ಸೇವಾ ಮತದಾರರು ಬದಲಾಯಿಸಬಹುದು. ಆದ್ದರಿಂದ ವರ್ಗೀಕೃತ ಸೇವಾ ಮತದಾರ ಪ್ರಾಕ್ಸಿ ರದ್ದುಪಡಿಸಬಹುದು ಮತ್ತು ಅಂಚೆ ಮತದಾನದ ಮಾರ್ಗ ಆಯ್ಕೆ ಮಾಡಿಕೊಳ್ಳಬಹುದು.
ಅಥವಾ ರಿಟರ್ನಿಂಗ್ ಆಫೀಸರ್ ಗೆ ಚುನಾವಣಾ ನಡವಳಿಕೆಗಳ ನಿಯಮಗಳು 1961ರ ಅನ್ವಯ ಫಾರಂ-13ಜಿ ಯನ್ನು ರಿಟರ್ನಿಂಗ್ ಆಫೀಸರ್ ನೀಡುವ ಮೂಲಕ ಪ್ರಾಕ್ಸಿಯನ್ನು ಬಳಸಬಹುದು (ಅರ್ಜಿ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ದೊರೆಯುತ್ತದೆ). ರಿಟರ್ನಿಂಗ್ ಆಫೀಸರ್ ಅವರು ಸ್ವೀಕರಿಸಿದ ದಿನದಿಂದ ರದ್ದುಪಡಿಸುವಿಕೆ ಪರಿಣಾಮಕಾರಿಯಾಗುತ್ತದೆ.
ಪ್ರಾಕ್ಸಿ ನೇಮಕಕ್ಕೆ ಅರ್ಜಿಯನ್ನು ಯಾವಾಗ ಸಲ್ಲಿಸಬೇಕು : ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕಕ್ಕೆ ಮೊದಲು ಚುನಾವಣಾಧಿಕಾರಿಗಳಿಗೆ ಪ್ರಾಕ್ಸಿ ನೇಮಕದ ಅರ್ಜಿಯನ್ನು ಸಲ್ಲಿಸಬೇಕು. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕದ ನಂತರ ಸ್ವೀಕರಿಸುವ ಪ್ರಾಕ್ಸಿ ನೇಮಕದ ಅರ್ಜಿಗಳನ್ನು ಪ್ರಗತಿಯಲ್ಲಿರುವ ಚುನಾವಣೆಗೆ ಪರಿಗಣಿಸಲಾಗುವುದಿಲ್ಲ.












Click it and Unblock the Notifications