ರಾಜ್ಯದಲ್ಲಿ ತಜ್ಞ ವೈದ್ಯರ ನಿವೃತ್ತಿ ವಯಸ್ಸು ಹೆಚ್ಚಳ
ಬೆಂಗಳೂರು, ಮೇ, 19: ರಾಜ್ಯದ ತುಂಬಾ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿದೆ ಎನ್ನುವ ಆರೋಪಗಳು ಮೊದನಿಂದಲೂ ಕೇಳಿಬರುತ್ತಿವೆ. ಈ ಸಮಸ್ಯೆಯನ್ನೇ ಬಗೆಹರಿಸಲು ವೈದ್ಯಕೀಯ ಶಿಕ್ಷಣ ಇಲಾಖೆ ಮುಂದಾಗಿದ್ದು, ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ತಜ್ಞ ವೈದ್ಯರ ಕೊರತೆ ನೀಗಿಸಲು ಮುಂದಾಗಿರುವ ವೈದ್ಯಕೀಯ ಶಿಕ್ಷಣ ಇಲಾಖೆ ಸೂಪರ್ ಸ್ಪಷಾಲಿಟಿ ವೈದ್ಯರ ನಿವೃತ್ತಿ ವಯಸ್ಸನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಇಲಾಖೆಯ ಅಡಿಯಲ್ಲಿ 22 ಸ್ವಾಯತ್ತ ವೈದ್ಯಕೀಯ ಕಾಲೇಜುಗಳು ಮತ್ತು 10 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಕಾರ್ಯ ನಿರ್ವಹಿಸುತ್ತಿವೆ.

ಇವುಗಳಲ್ಲಿ ಒಟ್ಟು 508 ಸೂಪರ್ ಸ್ಪೆಷಾಲಿಟಿ ಹುದ್ದೆಗಳು ಮಂಜೂರಾಗಿವೆ. ಆದರೆ, 232 ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನುಳಿದಂತೆ 276 ಹುದ್ದೆಗಳು ಖಾಲಿ ಇವೆ. ರಾಜ್ಯದಲ್ಲಿ ಸೂಪರ್ ಸ್ಪೆಷಾಲಿಟಿ ವೈದ್ಯರ ಕೊರತೆಯಿಂದಾಗಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಬೋಧನೆ ಹಾಗೂ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಸಮಸ್ಯೆ ಆಗುತ್ತಿದೆ. ಆದ್ದರಿಂದ ತಜ್ಞ ವೈದ್ಯರ ನಿವೃತ್ತಿ ವಯಸ್ಸನ್ನು 60ರಿಂದ 65 ವರ್ಷಕ್ಕೆ ಏರಿಕೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇಲಾಖೆಯು ರಾಜ್ಯದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸುವ ಸಂಬಂಧ ಡಾ.ಸಿ.ಎನ್.ಮಂಜುನಾಥ್ ಅವರ ಅಧ್ಯಕ್ಷೆಯಲ್ಲಿ ಸಮಿತಿಯನ್ನು ರಚನೆ ಮಾಡಿತ್ತು. ಈ ಸಮಿತಿ ಸೂಪರ್ ಸ್ಪೆಷಾಲಿಟಿ ವೈದ್ಯರ ವಯೋ ನಿವೃತ್ತಿ ವಯಸ್ಸನ್ನು ಹೆಚ್ಚಳ ಮಾಡಲು ಶಿಫಾರಸು ಮಾಡಿತ್ತು. ಸೂಪರ್ ಸ್ಪೆಷಾಲಿಟಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 232 ತಜ್ಞ ವೈದ್ಯರಲ್ಲಿ, 34 ಮಂದಿ ಪ್ರಸಕ್ತ ಸಾಲಿನಲ್ಲಿ 60 ವರ್ಷ ಪೂರ್ಣಗೊಳಿಸುತ್ತಿದ್ದಾರೆ. ಈ ವೈದ್ಯತನ್ನು ಹಾಲಿ ವೇತನ ಶ್ರೇಣಿಯಲ್ಲಿಯೇ ಮುಂದುವರೆಸಬೇಕೆಂದು ತಿಳಿಸಲಾಗಿದೆ.
ಕಾರ್ಯನಿರತ ವೈದ್ಯರು ಸೂಪರ್ ಸ್ಪೆಷಾಲಿಟಿ ಕೋರ್ಸ್ ಅನ್ನು ಪೂರ್ಣಗೊಳಿಸುವ ವೇಳೆಗೆ 40ರಿಂದ 45 ವರ್ಷಗಳನ್ನು ದಾಟಿರುತ್ತಾರೆ. ಇದರಿಂದಾಗಿ ಅವರು 60 ವರ್ಷಕ್ಕೆ ನಿವೃತ್ತಿ ಹೊಂದುವ ಸಮಯದಲ್ಲಿ ಕೇವಲ 15ರಿಂದ 20 ವರ್ಷಗಳು ಸೇವೆ ಸಲ್ಲಿಸಲು ಮಾತ್ರ ಸಾಧ್ಯವಾಗುತ್ತದೆ. ಅವರ ವೃತ್ತು ಅನುಭವವನ್ನು ಸಂಪೂರ್ಣವಾಗಿ ಉಪಯೋಗಿಸಲು ಸಾದ್ಯವಾಗುವುದಿಲ್ಲ. ವಯೋ ನಿವೃತ್ತಿ ವಿಸ್ತರಣೆಯಿಂದ ಸೇವಾ ಅನುಭವ ಲಾಭ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.












Click it and Unblock the Notifications