Namma Metro: ಹೊಸಕೋಟೆ, ಬಿಡದಿ, ನೆಲಮಂಗಲಕ್ಕೆ ಮೆಟ್ರೋ ವಿಸ್ತರಣೆ: ಮಹತ್ವದ ಮಾಹಿತಿ, ವಿವರ ತಿಳಿಯಿರಿ
ಬೆಳಗಾವಿ, ಡಿಸೆಂಬರ್ 20: ಮುಂದಿನ ದಿನಗಳಲ್ಲಿ ಸಂಚಾರ ದಟ್ಟಣೆ ಗಮನದಲ್ಲಿಟ್ಟುಕೊಂಡು, ನಮ್ಮ ಮೆಟ್ರೋ ಮಾರ್ಗವನ್ನು ಹೊಸಕೋಟೆ, ನೆಲಮಂಗಲ ಹಾಗೂ ಬಿಡದಿವರೆಗೆ ವಿಸ್ತರಣೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನಸಭೆಯ ಕಲಾಪದಲ್ಲಿ ಕಾಂಗ್ರೆಸ್ ಶಾಸಕ ಶರತ್ ಬಚ್ಛೆಗೌಡ ಅವರು ಹೊಸಕೋಟೆಗೆ ಮೆಟ್ರೋ ಮಾರ್ಗ ವಿಸ್ತರಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಶಿವಕುಮಾರ್ ಅವರು ಗುರುವಾರ ಉತ್ತರಿಸಿದ್ದು, ಈ ವಿಚಾರವಾಗಿ ಶರತ್ ಅವರು ಬಹಳ ಹೋರಾಟ ಮಾಡುತ್ತಿದ್ದಾರೆ. ಬೆಂಗಳೂರು ಕೂಡ ವಿಪರೀತವಾಗಿ ಬೆಳೆಯುತ್ತಿದೆ. ಸಾಮಾನ್ಯ ರೈಲಿನಲ್ಲಿ ಕೋಲಾರದಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಜನ ದಿನ ನಿತ್ಯ ಸಂಚರಿಸುತ್ತಾರೆ. ಐಟಿ ಕಾರಿಡಾರ್ ಬಹುತೇಕ ಹೊಸಕೋಟೆ ಮುಟ್ಟಿದೆ. ಹೀಗಾಗಿ ಮೆಟ್ರೋ ಅವಶ್ಯಕತೆ ಇದೆ ಎಂದು ತಿಳಿಸಿದರು.

ಮಾರ್ಗ ವಿಸ್ತರಣೆ ವಿಚಾರವನ್ನು ನಾನು ಈಗಾಗಲೇ ಯೋಜನೆಯಲ್ಲಿ ಸೇರಿಸಿ ವಿಸ್ತೃತ ಸಮೀಕ್ಷೆ ಮಾಡಿಸುತ್ತಿದ್ದೇನೆ. ನಮ್ಮ ಸರ್ಕಾರ ಹಾಗೂ ಮೆಟ್ರೋ ಸಂಸ್ಥೆ ಅವರ ಮನವಿಯನ್ನು ಸಹಾನುಭೂತಿಯಿಂದ ಪರಿಗಣಿಸಿದೆ. ಹೊಸಕೋಟೆ ಜತೆಗೆ ಬಿಡದಿ, ನೆಲಮಂಗಲದವರೆಗೂ ಮೆಟ್ರೋ ಮಾರ್ಗ ವಿಸ್ತರಣೆ ಯೋಜನೆ ಸಿದ್ಧಡಿಸಲು ವರದಿ ರೂಪಿಸಲಾಗುತ್ತಿದೆ. ನಾವು ನಿಮ್ಮ ಮನವಿಯನ್ನು ಪರಿಗಣಿಸಿದ್ದೇವೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ವಿವೇಚನೆ ಮೇರೆಗೆ ಗಣ್ಯರಿಗೆ ನಿವೇಶನ ಹಂಚಿಕೆ ಮಾಡುವ ಯೋಜನೆ ಸ್ಥಗಿತಗೊಳಿಸಲಾಗಿದೆಯೇ ಎಂದು ಸದಸ್ಯರಾದ ಅನಿಲ್ ಕುಮಾರ್ ಅವರು ಕೇಳಿದ ಚುಕ್ಕೆ ಗುರುತಿನ 130ನೇ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, "ಈ ವಿಚಾರವಾಗಿ ವಿಧಾನಸಭೆಯಲ್ಲಿ ಸುದೀರ್ಘ ಚರ್ಚೆಯಾಗಿದೆ. ಈ ಹಿಂದೆ ಗಣ್ಯರಿಗೆ ನಿವೇಶನ ನೀಡಲಾಗುತ್ತಿತ್ತು. ಈ ಮಧ್ಯೆ ಧರಂ ಸಿಂಗ್ ಅವರ ಸರ್ಕಾರದಲ್ಲಿ ಈ ವಿಚಾರವಾಗಿ ಹೈಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತರಲಾಗಿತ್ತು.
ಈ ವಿಚಾರವಾಗಿ ಹೊಸ ನೀತಿ ರೂಪಿಸಬೇಕು ಎಂದು ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ಕೂಡ ರಚಿಸಲಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಮಾಜ ಸೇವಕರಿಗೆ ನಿವೇಶನ ನೀಡಲು ಅವಕಾಶ ಮಾಡಿಕೊಡಲಾಗಿದ್ದು, ರಾಜಕೀಯ ನಾಯಕರಿಗೆ ನಿವೇಶನ ನೀಡಲು ಅವಕಾಶವಿಲ್ಲ. ಈ ವಿಚಾರವಾಗಿ ನ್ಯಾಯಾಲಯದ ಸಮಿತಿ ವರದಿ ನೀಡಿದ ನಂತರ ನಾವು ತೀರ್ಮಾನ ಮಾಡುತ್ತೇವೆ. ಈ ವಿಚಾರವಾಗಿ ನ್ಯಾಯಾಲಯದಿಂದಲೇ ಮಾರ್ಗಸೂಚಿ ಪಡೆಯಬಹುದೇ ಎಂದು ಪರಿಶೀಲಿಸುತ್ತೇನೆ. ಈ ಹಿಂದೆ ನೀಡಿದ್ದ ನಿವೇಶನಗಳು ರದ್ದಾಗಿವೆ. ಕೆಲವರು ನ್ಯಾಯಾಲಯಕ್ಕೆ ಹೋಗಿದ್ದಾರೆ" ಎಂದು ತಿಳಿಸಿದರು.
ಸರ್ಕಾರದಿಂದ ಸಮಿತಿ ಮಾಡಿ ಸರ್ಕಾರವೇ ಮಾನದಂಡ ರೂಪಿಸಿ ನ್ಯಾಯಾಲಯಕ್ಕೆ ಸಲ್ಲಿಸಿದರೆ ನ್ಯಾಯಾಲಯ ಅವಕಾಶ ನೀಡಬೇಹುದಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ನಾಲ್ಕು ಸಮಿತಿಗಳನ್ನು ರಚಿಸಲಾಗಿದ್ದು, ಸದಸ್ಯರು ಹೇಳಿರುವ ವಿಚಾರವನ್ನು ಪರಿಶೀಲಿಸಲಾಗುವುದು ಎಂದರು.












Click it and Unblock the Notifications