ಉದ್ಯೋಗಿಗಳಾಗದೇ ಉದ್ಯಮಿಗಳಾಗಿ, ನಿಮ್ಮ ಊರಿನಲ್ಲಿಯೇ ಉದ್ಯಮ ಆರಂಭಿಸಿ: ಕರಾವಳಿ ಮಲೆನಾಡು ಯುವಕರಿಗೆ ಸಿಎಂ ಡಿಕೆಶಿ ಕರೆ
ಉದ್ಯೋಗ ಅರಸಿ ಪಟ್ಟಣಗಳತ್ತ ವಲಸೆ ಹೋಗುವುದನ್ನು ಬಿಟ್ಟು, ತಮ್ಮ ಹುಟ್ಟೂರಿನಲ್ಲಿಯೇ ಇರುವ ನೈಸರ್ಗಿಕ ಸಂಪನ್ಮೂಲಗಳನ್ನ ಬಳಸಿಕೊಂಡು ಉದ್ಯಮಗಳನ್ನ ಸ್ಥಾಪಿಸಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಲೆನಾಡು ಹಾಗೂ ಕರಾವಳಿ ಭಾಗದ ಜನತೆಗೆ ಕರೆ ನೀಡಿದ್ದಾರೆ.
ಬೆಂಗಳೂರಿನ ಉಳ್ಳಾಲದ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 'ಕೈಲ್ ಮುಹೂರ್ತ ಜಂಬರ 2026' ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾಫಿನಾಡು ಕೊಡಗಿನ ಶ್ರೀಮಂತ ಸಂಸ್ಕೃತಿ ಮತ್ತು ಇತಿಹಾಸವನ್ನ ಶ್ಲಾಘಿಸಿದ ಅವರು, ಕರಾವಳಿ ಹಾಗೂ ಮಲೆನಾಡಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರ ಕೈಗೊಂಡಿರುವ ವಿಶೇಷ ಪ್ರವಾಸೋದ್ಯಮ ನೀತಿಯ ಕುರಿತು ವಿವರಿಸಿದರು.

ಮಲೆನಾಡು ಮತ್ತು ಕರಾವಳಿ ಪ್ರವಾಸೋದ್ಯಮ ನೀತಿ
ಕೊಡಗು ಕೇವಲ ಪ್ರಕೃತಿ ಸೌಂದರ್ಯಕ್ಕೆ ಮಾತ್ರವಲ್ಲದೆ ಶೌರ್ಯ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರಗಳಿಗೂ ಹೆಸರುವಾಸಿಯಾಗಿದೆ. ನಾಡಿನ ಜೀವನಾಡಿ ಕಾವೇರಿ ಉಗಮಸ್ಥಾನವಾದ ಕೊಡಗು, ಇಡೀ ವಿಶ್ವದ ಪ್ರವಾಸಿಗರನ್ನ ಸೆಳೆಯುತ್ತಿದೆ. ಈ ಭಾಗದ ಜನರ ಪ್ರತಿಭೆ ಕ್ರೀಡೆ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿ ಅನಾವರಣಗೊಂಡಿದೆ. ಇಂತಹ ಶ್ರೀಮಂತ ಪರಂಪರೆಯನ್ನ ಹೊಂದಿರುವ ಮಲೆನಾಡು ಹಾಗೂ ಕರಾವಳಿ ಭಾಗದ ಯುವಜನತೆ ಉದ್ಯೋಗಕ್ಕಾಗಿ ಬೇರೆಡೆ ವಲಸೆ ಹೋಗಬಾರದು.
ಇದೇ ಕಾರಣಕ್ಕಾಗಿ ಗೋವಾ ಮತ್ತು ಕೇರಳದ ಮಾದರಿಯಲ್ಲಿ ನಮ್ಮ 327 ಕಿ.ಮೀ ಉದ್ದದ ಕರಾವಳಿ ತೀರವನ್ನ ಪ್ರವಾಸೋದ್ಯಮಕ್ಕಾಗಿ ಅಭಿವೃದ್ಧಿಪಡಿಸಲು ಸರ್ಕಾರ ವಿಶೇಷ ನೀತಿಯನ್ನ ಜಾರಿಗೆ ತಂದಿದೆ. ಕರಾವಳಿ ಪ್ರವಾಸೋದ್ಯಮ ಬೆಳೆದರೆ ಸ್ಥಳೀಯ ಆರ್ಥಿಕತೆಗೂ ಬಲ ಬರುತ್ತದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಬಂಡವಾಳ ಹೂಡಿಕೆ ಮತ್ತು ಉದ್ಯಮ ಸ್ಥಾಪನೆಗೆ ಸರ್ಕಾರದ ಆರ್ಥಿಕ ಬೆಂಬಲ
ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಹಲವು ಮಹತ್ವದ ನಿರ್ಧಾರಗಳನ್ನ ಕೈಗೊಳ್ಳಲಾಗಿದೆ. ಸ್ಥಳೀಯರು ತಮ್ಮೂರಿನಲ್ಲಿಯೇ ಉದ್ಯಮ ಸ್ಥಾಪನೆ ಮಾಡಲು ಅನುಕೂಲವಾಗುವಂತೆ ಬ್ಯಾಂಕ್ ಸಾಲ ಮರುಪಾವತಿ ಅವಧಿಯನ್ನ 5-6 ವರ್ಷಗಳಿಂದ 20 ವರ್ಷಗಳಿಗೆ ವಿಸ್ತರಿಸಲಾಗಿದೆ.
ಹೊರಗಿನವರು ಬಂದು ಇಲ್ಲಿ ಲಾಭ ಮಾಡಿಕೊಳ್ಳುವ ಬದಲು, ಸ್ಥಳೀಯರೇ ಮಾಲೀಕರಾಗಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಇದಕ್ಕಾಗಿ ಶೀಘ್ರದಲ್ಲೇ ಮಂಗಳೂರಿನಲ್ಲಿ ಉದ್ಯಮಿಗಳೊಂದಿಗೆ ವಿಶೇಷ ಸಭೆಯನ್ನ ನಡೆಸಲಾಗುವುದು ಎಂದು ಅವರು ಭರವಸೆ ನೀಡಿದರು.
ಅಲ್ಲದೆ, ಮಂಗಳೂರಿನಲ್ಲಿ ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ನಿರ್ಮಾಣಕ್ಕಾಗಿ 10 ಎಕರೆ ಜಮೀನು ಮಂಜೂರು ಮಾಡಿರುವ ವಿಷಯವನ್ನೂ ಪ್ರಸ್ತಾಪಿಸಿದರು. ತುಳು ಭಾಷೆಯ ಮಾನ್ಯತೆಯ ಕುರಿತು ಕೈಗೊಂಡ ನಿರ್ಧಾರವೂ ಈ ಭಾಗದ ಅಸ್ಮಿತೆಯ ಸಂಕೇತವಾಗಿದೆ ಎಂದರು.
ಕೊಡಗಿನ ಶಾಸಕರಾದ ಪೊನ್ನಣ್ಣ ಮತ್ತು ಮಂಥರ್ ಗೌಡ ಬೆಂಬಲಕ್ಕೆ ನಿಲ್ಲಿ
ಕೊಡಗಿನ ಶಾಸಕರಾದ ಎ.ಎಸ್. ಪೊನ್ನಣ್ಣ ಮತ್ತು ಮಂಥರ್ ಗೌಡ ಅವರು ಜಿಲ್ಲೆಯ ಎರಡು ಕಣ್ಣುಗಳಿದ್ದಂತೆ. ಯುವಕರಾಗಿರುವ ಈ ಇಬ್ಬರೂ ಅತ್ಯಂತ ಕ್ರಿಯಾಶೀಲರಾಗಿ ಹಾಗೂ ಪ್ರಾಮಾಣಿಕವಾಗಿ ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಚೆನ್ನಾಗಿ ಕೆಲಸ ಮಾಡುವವರನ್ನ ಟೀಕಿಸುವವರ ಸಂಖ್ಯೆಯೂ ಹೆಚ್ಚಿರುತ್ತದೆ. ಆದರೆ ಅಸೂಯೆಗೆ ಯಾವುದೇ ಮದ್ದಿಲ್ಲ. ಈ ನಿಟ್ಟಿನಲ್ಲಿ ನೀವೆಲ್ಲರೂ ನಿಮ್ಮ ಕೊಡಗು ಶಾಸಕರ ಬೆಂಬಲಕ್ಕೆ ನಿಲ್ಲಬೇಕು ಹಾಗೂ ಮುಂಬರುವ ದಿನಗಳಲ್ಲಿ ನಿಮ್ಮ ಮತದಾನದ ಹಕ್ಕನ್ನ ಕಡ್ಡಾಯವಾಗಿ ಚಲಾಯಿಸಿ ಅವರನ್ನು ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಭಿನ್ನ ಮೈಸೂರು ದಸರಾ 2026 ಆಚರಣೆ
ಮತದಾನ ಎನ್ನುವುದು ಪ್ರತಿಯೊಬ್ಬರ ಬದುಕಿನ ಹಕ್ಕು, ಅದು ಸಂವಿಧಾನ ನಮಗೆ ನೀಡಿರುವ ಶಕ್ತಿ. ಹೀಗಾಗಿ ಮತಪಟ್ಟಿಯಿಂದ ಅನಗತ್ಯವಾಗಿ ಹೆಸರು ತೆಗೆಯದಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಲಾಗಿದೆ ಎಂದರು.
ಇದೇ ವೇಳೆ ಕಾವೇರಿ ಮಾತೆಗೆ ಪ್ರತಿ ವರ್ಷ ಕಾವೇರಿ ಆರತಿ ನಡೆಸಲು ಸರ್ಕಾರ ತೀರ್ಮಾನಿಸಿದ್ದು, ಮುಂಬರುವ ದಸರಾ ಹಬ್ಬದ ಸಂದರ್ಭದಲ್ಲಿ ಇದನ್ನು ಆಚರಿಸಲು ಸೂಚಿಸಲಾಗಿದೆ. ಈ ಬಾರಿಯ ಮೈಸೂರು ದಸರಾ 2026 ಆಚರಣೆಯನ್ನ ಸಂಪೂರ್ಣ ವಿಭಿನ್ನವಾಗಿ ಆಯೋಜಿಸಲು ಸಿದ್ಧತೆಗಳು ನಡೆದಿವೆ.
ದಸರಾ ಮೆರವಣಿಗೆಯಲ್ಲಿ ಭಾರತೀಯ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯ ತುಕಡಿಗಳು ಭಾಗವಹಿಸಲಿವೆ. ನಾಡಿನ ವಿವಿಧ ಮೂಲೆಗಳ ಕಲಾತಂಡಗಳು, ಸಿನಿಮಾ ರಂಗದ ಗಣ್ಯರು ಹಾಗೂ ಎಲ್ಲಾ ಸಮುದಾಯಗಳನ್ನೊಳಗೊಂಡ ಶಿಸ್ತುಬದ್ಧ ಕಾರ್ಯಕ್ರಮ ಇದಾಗಲಿದೆ ಎಂದು ವಿವರಿಸಿದರು. ತಮ್ಮನ್ನು ಸದಾ ಬೆಂಬಲಿಸುತ್ತಿರುವ ಕೊಡಗಿನ ಜನತೆಗೆ ಕೃತಜ್ಞತೆ ಸಲ್ಲಿಸಿದ ಅವರು, "ನಾನು ನಿಮ್ಮ ಜೊತೆಗಿದ್ದೇನೆ, ನೀವು ನನ್ನ ಜೊತೆಗಿರಿ" ಎಂದು ಹೇಳುವ ಮೂಲಕ ಭಾಷಣ ಮುಕ್ತಾಯಗೊಳಿಸಿದರು.


Click it and Unblock the Notifications
