Highway: ರಾಜ್ಯದ ಪ್ರಮುಖ ಹೆದ್ದಾರಿ, ರಸ್ತೆಗಳ ನಿರ್ಮಾಣದ ಕುರಿತು ಸಿಎಂ ಡಿಕೆ ಶಿವಕುಮಾರ್ ಮಹತ್ವದ ಮಾಹಿತಿ
ಬೆಂಗಳೂರು, ಆಗಸ್ಟ್ 15: ಮಾಣಿಕ್ ಷಾ ಮೈದಾನದಲ್ಲಿ ಶನಿವಾರ (ಆಗಸ್ಟ್ 15) ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿಎಂ ರಾಜ್ಯದಲ್ಲಿನ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕಳೆದ ಒಂದು ವರ್ಷದಲ್ಲಿ 1,663 ಕಿ.ಮೀ. ರಾಜ್ಯ ಹೆದ್ದಾರಿ, 3,000 ಕಿ.ಮೀ. ಪ್ರಮುಖ ಜಿಲ್ಲಾ ರಸ್ತೆಗಳು ಹಾಗೂ 125 ಹೊಸ ಸೇತುವೆಗಳನ್ನು ನಿರ್ಮಿಸಲಾಗಿದೆ. ಪ್ರಗತಿಪಥ ಯೋಜನೆಯಡಿ 5,200 ಕೋಟಿ ರೂಪಾಯಿ ಹೂಡಿಕೆಯೊಂದಿಗೆ 7,100 ಕಿ.ಮೀ. ಗ್ರಾಮೀಣ ರಸ್ತೆಗಳ ಅಭಿವೃದ್ಧಿ ನಡೆಯುತ್ತಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಅವರು ಹೇಳಿದರು.

ಪ್ರಮುಖ ಯೋಜನೆಗಳ ವಿವರ
ಬೆಂಗಳೂರು ಅಭಿವೃದ್ಧಿಗೆ 1.50 ಲಕ್ಷ ಕೋಟಿ ರೂಪಾಯಿ ಮೊತ್ತದ ವಿವಿಧ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಮೂರನೇ ಹಂತದ ಮೆಟ್ರೋ ಪೂರ್ಣಗೊಂಡ ಬಳಿಕ ಮೆಟ್ರೋ ಮಾರ್ಗ 220 ಕಿ.ಮೀ.ಗೆ ವಿಸ್ತರಣೆಯಾಗಲಿದೆ. ಬೆಂಗಳೂರು ಬಿಸಿನೆಸ್ ಕಾರಿಡಾರ್ ಅಡಿಯಲ್ಲಿ 117 ಕಿ.ಮೀ. ರಿಂಗ್ ರಸ್ತೆಯನ್ನು 26,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ರಾಜ್ಯದ ಪ್ರತಿಯೊಂದು ಪಟ್ಟಣ ಹಾಗೂ ನಗರದ ಪ್ರಗತಿಗೆ ರಿಂಗ್ ರಸ್ತೆ ಹಾಗೂ ಮೊಬಿಲಿಟಿ ಗ್ರಿಡ್‌ಗಳನ್ನು ನಗರ ಯೋಜನೆಯ ಮೂಲಕ ಜಾರಿಗೆ ತರಲಾಗುವುದು ಎಂದು ಹೇಳಿದರು.
ಉತ್ತಮ ಆಡಳಿತ ಮತ್ತು ಸುರಕ್ಷತೆಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಐದು ಮಹಾನಗರ ಪಾಲಿಕೆಗಳನ್ನು ರಚಿಸಲಾಗಿದೆ. ಬೆಂಗಳೂರು ಪೊಲೀಸ್ ಕಮಿಷನರೇಟ್ ಅನ್ನು ಐದು ಕಮಿಷನರೇಟ್‌ಗಳಾಗಿ ವಿಂಗಡಿಸುವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದರು.
ರೌಡಿ ನಿಗ್ರಹ ಪಡೆ ರಚನೆ ಮಾಡಲಾಗುವುದು. ಸಂಚಾರ ದಟ್ಟಣೆ ಮತ್ತು ಪರಿಸರ ಮಾಲಿನ್ಯ ಕಡಿಮೆ ಮಾಡಲು ಐದು ಬೃಹತ್ ಟ್ರೀ ಪಾರ್ಕ್‌ಗಳನ್ನು ನಿರ್ಮಿಸಲಾಗುವುದು. ಬೆಂಗಳೂರಿನ ಅಂತರ್ಜಲ ಮರುಪೂರಣ ಹಾಗೂ ಕುಡಿಯುವ ನೀರಿನ ಭದ್ರತೆಗಾಗಿ ಏಳು ಪ್ರಮುಖ ಕೆರೆಗಳಾದ ಹೆಸರುಘಟ್ಟ ಕೆರೆ, ಬೆಟ್ಟದ ಕೋಟೆ ಕೆರೆ, ಹೊಸಕೋಟೆ ಕೆರೆ, ಎಲೆ ಮಲ್ಲಪ್ಪ ಶೆಟ್ಟಿ ಕೆರೆ, ಬನ್ನೇರುಘಟ್ಟ ಕೆರೆ, ಬಾಗಲೂರು, ಬೈರಮಂಗಲ ಕೆರೆಗಳಿಗೆ ಹೊಸ ರೂಪ ನೀಡಿ ಅಭಿವೃದ್ಧಿಪಡಿಸಲಾಗುವುದು ಎಂದು ನೀರಾವರಿ ಯೋಜನೆಯ ಬಗ್ಗೆ ವಿವರಿಸಿದರು.
ವಿದೇಶಿ ಹೂಡಿಕೆ ಕುರಿತು ಮಹತ್ವದ ಅಪ್ಡೇಟ್
ಕಳೆದ ಮೂರು ವರ್ಷಗಳಲ್ಲಿ ₹134 ಲಕ್ಷ ಕೋಟಿಗೂ ಅಧಿಕ ಮೊತ್ತದ 945 ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ. ಕಳೆದ ಒಂದು ವರ್ಷದಲ್ಲಿ 112 ಲಕ್ಷ ಕೋಟಿ ರೂಪಾಯಿ ವಿದೇಶಿ ನೇರ ಹೂಡಿಕೆಯನ್ನು ಆಕರ್ಷಿಸಲಾಗಿದೆ ಎಂದರು. ದೊಡ್ಡಬಳ್ಳಾಪುರದಲ್ಲಿ 'ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್' ಸ್ಥಾಪಿಸಲಾಗುತ್ತಿದ್ದು, 20,000 ಕೋಟಿ ರೂಪಾಯಿ ಹೂಡಿಕೆಗೆ ಬದ್ಧತೆ ವ್ಯಕ್ತವಾಗಿದೆ. ಇದರಿಂದ ಸುಮಾರು ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ. 'ಬಿಯಾಂಡ್ ಬೆಂಗಳೂರು' ಅಡಿಯಲ್ಲಿ ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮತ್ತು ಮೈಸೂರಿನಲ್ಲಿ ಐದು ಜಾಗತಿಕ ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದರು.


Click it and Unblock the Notifications
