ಡಿಕೆಶಿ ‘ಸಾಫ್ಟ್‌ ಹಿಂದುತ್ವ’ ರಾಜಕೀಯ; 2028ಕ್ಕೆ ಬಿಜೆಪಿಯ ಸಾಂಪ್ರದಾಯಿಕ ರಾಜಕಾರಣಕ್ಕೆ ಸವಾಲೇ?

ಕರ್ನಾಟಕದ ರಾಜಕೀಯದಲ್ಲಿ ಡಿ.ಕೆ. ಶಿವಕುಮಾರ್‌ ಅವರ ರಾಜಕೀಯ ಶೈಲಿ ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ದೇವಸ್ಥಾನ, ಮಠ, ಧಾರ್ಮಿಕ ಆಚರಣೆ, ಹಿಂದೂ ಸಂಸ್ಕೃತಿ ಹಾಗೂ ಸಾಂಪ್ರದಾಯಿಕ ನಂಬಿಕೆಗಳ ವಿಚಾರದಲ್ಲಿ ಅವರು ಇತ್ತೀಚೆಗೆ ತಾಳುತ್ತಿರುವ ನಿಲುವುಗಳು ರಾಜಕೀಯವಾಗಿ ಸೆಳೆಯುತ್ತಿವೆ. ಇದೇ ಕಾರಣಕ್ಕೆ ಡಿಕೆ ಶಿವಕುಮಾರ್ ಸಾಫ್ಟ್‌ ಹಿಂದುತ್ವದ ರಾಜಕೀಯವನ್ನು ಅನುಸರಿಸುತ್ತಿದ್ದಾರೆಯೇ? ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಆದರೆ ಶಿವಕುಮಾರ್‌ ಅವರ ಹೇಳಿಕೆಗಳನ್ನು ನೋಡಿದರೆ, ಅವರು ತಮ್ಮ ನಿಲುವನ್ನು ಬಿಜೆಪಿ ಮಾದರಿಯ ಹಿಂದುತ್ವ ರಾಜಕಾರಣವಾಗಿ ಬಿಂಬಿಸಿಕೊಳ್ಳುತ್ತಿಲ್ಲ. ಬದಲಾಗಿ, ಹಿಂದೂ ಧರ್ಮ, ದೇವಸ್ಥಾನ ಮತ್ತು ಧಾರ್ಮಿಕ ನಂಬಿಕೆಗಳ ಮೇಲೆ ಯಾವುದೇ ರಾಜಕೀಯ ಪಕ್ಷ ಏಕಸ್ವಾಮ್ಯ ಹೊಂದಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ನೀಡುತ್ತಿದ್ದಾರೆ.

DK Shivakumar Karnataka CM Soft Hindutva Approach A New Challenge to Karnataka BJP Traditional Politics

ಈ ಚರ್ಚೆಗೆ ಇತ್ತೀಚಿನ ಪ್ರಮುಖ ಉದಾಹರಣೆ ಮೈಸೂರು ದಸರಾ ಉದ್ಘಾಟನೆಗೆ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಯವರ ಆಯ್ಕೆ. ಸೆಪ್ಟೆಂಬರ್‌ 24ರಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಈ ಘೋಷಣೆ ಮಾಡಿದರು. ಅಕ್ಟೋಬರ್‌ 11ರಂದು ಚಾಮುಂಡಿ ಬೆಟ್ಟದಲ್ಲಿ ನಡೆಯಲಿರುವ ನಾಡಹಬ್ಬದ ಉದ್ಘಾಟನೆಗೆ ಗವಿಸಿದ್ದೇಶ್ವರ ಸ್ವಾಮೀಜಿಯವರನ್ನು ಆಹ್ವಾನಿಸಲಾಗಿದ್ದು, ಅವರು ಆಹ್ವಾನವನ್ನು ಸ್ವೀಕರಿಸಿದ್ದಾರೆ.

ಗವಿಸಿದ್ದೇಶ್ವರ ಸ್ವಾಮೀಜಿ ಆಯ್ಕೆ ಏಕೆ ಮಹತ್ವದ್ದು?

ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಕೇವಲ ಧಾರ್ಮಿಕ ನಾಯಕನಾಗಿ ಗುರುತಿಸಿಕೊಂಡವರಲ್ಲ. ಉತ್ತರ ಕರ್ನಾಟಕದಲ್ಲಿ ಜಲ ಸಂರಕ್ಷಣೆ, ಶಿಕ್ಷಣ, ಅನ್ನದಾಸೋಹ ಹಾಗೂ ಸಾಮಾಜಿಕ ಸೇವೆ ಮೂಲಕವೂ ಗಮನ ಸೆಳೆದಿದ್ದಾರೆ. ಗವಿಮಠದ 'ಜಲದೀಕ್ಷೆ' ಅಭಿಯಾನ ಸೇರಿದಂತೆ ನೀರಿನ ಸಂರಕ್ಷಣೆಯ ಕೆಲಸಗಳು ಅವರ ಸಾರ್ವಜನಿಕ ಬದುಕಿನ ಪ್ರಮುಖ ಭಾಗವಾಗಿವೆ. ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ವಸತಿ ನೆರವು ನೀಡುವ ಕಾರ್ಯಗಳಲ್ಲೂ ಮಠ ತೊಡಗಿಸಿಕೊಂಡಿದೆ.

ಹೀಗಾಗಿ ಗವಿಸಿದ್ದೇಶ್ವರ ಸ್ವಾಮೀಜಿಯವರ ಆಯ್ಕೆಯನ್ನು ಕೇವಲ ಧಾರ್ಮಿಕ ಆಯ್ಕೆ ಎಂದು ನೋಡುವುದಕ್ಕಿಂತ, ಧಾರ್ಮಿಕತೆ, ಸಾಮಾಜಿಕ ಸೇವೆ ಮತ್ತು ಉತ್ತರ ಕರ್ನಾಟಕದ ಪ್ರತಿನಿಧಿತ್ವವನ್ನು ಒಟ್ಟಿಗೆ ತರುವ ನಿರ್ಧಾರವಾಗಿಯೂ ನೋಡಬಹುದಾಗಿದೆ. ಇದೇ ಕಾರಣಕ್ಕೆ ದಸರಾ ಉದ್ಘಾಟಕರ ಆಯ್ಕೆ ರಾಜಕೀಯ ಚರ್ಚೆಯಲ್ಲೂ ಮಹತ್ವ ಪಡೆದಿದೆ.

DK Shivakumar:‌ ಹಿಂದೂ ಧರ್ಮ ಬಿಜೆಪಿಯ ಸ್ವತ್ತಲ್ಲ ಎಂದ ಡಿಕೆಶಿ

ಇದಕ್ಕೂ ಮುನ್ನ ಆಗಸ್ಟ್‌ನಲ್ಲಿ ಮುಜರಾಯಿ ದೇವಸ್ಥಾನಗಳ ಅರ್ಚಕರು ಮತ್ತು ನೌಕರರ ಸಮಾವೇಶದಲ್ಲಿ ಮಾತನಾಡಿದ್ದ ಶಿವಕುಮಾರ್‌ ಅವರು, ಯಾವುದೇ ರಾಜಕೀಯ ಪಕ್ಷ ಹಿಂದೂ ಧರ್ಮ, ದೇವಸ್ಥಾನ ಅಥವಾ ದೇವರುಗಳ ಮೇಲೆ ಏಕಸ್ವಾಮ್ಯ ಹೊಂದಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಕೆಲವು ರಾಜಕೀಯ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಹಿಂದೂ ಧರ್ಮವನ್ನು ತಮ್ಮದೇ ಆದ ಕ್ಷೇತ್ರವನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿವೆ ಎಂದು ಅವರು ಟೀಕಿಸಿದ್ದರು. ಧರ್ಮ ಎನ್ನುವುದು ವ್ಯಕ್ತಿಯ ವೈಯಕ್ತಿಕ ವಿಚಾರವಾಗಿದ್ದು, ದೇವಸ್ಥಾನಗಳ ಸಂಪ್ರದಾಯ ಮತ್ತು ಧಾರ್ಮಿಕ ಮೌಲ್ಯಗಳನ್ನು ಕಾಂಗ್ರೆಸ್‌ ಸರ್ಕಾರವೂ ರಕ್ಷಿಸುತ್ತಿದೆ ಎಂದು ಅವರು ಹೇಳಿದ್ದರು.‌

ದೇವಸ್ಥಾನ-ಮಠಗಳ ಜೊತೆ ಹೆಚ್ಚುತ್ತಿರುವ ಸಂಪರ್ಕ

ಶಿವಕುಮಾರ್‌ ಅವರ ಧಾರ್ಮಿಕ ಸಂಪರ್ಕ ಇತ್ತೀಚಿನ ಬೆಳವಣಿಗೆಯಲ್ಲ. ಮಠಗಳು, ದೇವಸ್ಥಾನಗಳು ಮತ್ತು ಧಾರ್ಮಿಕ ಮುಖಂಡರೊಂದಿಗೆ ಅವರು ನಿರಂತರ ಸಂಪರ್ಕದಲ್ಲಿರುವುದು ಹಲವು ಸಂದರ್ಭಗಳಲ್ಲಿ ಕಂಡುಬಂದಿದೆ. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರದ ಸಂದರ್ಭದಲ್ಲಿ ವಿವಿಧ ಧರ್ಮಗಳ ಧಾರ್ಮಿಕ ಮುಖಂಡರನ್ನು ಆಹ್ವಾನಿಸುವ ಮೂಲಕವೂ ಅವರು ಧಾರ್ಮಿಕ ಸಮನ್ವಯದ ಸಂದೇಶ ನೀಡಿದ್ದರು.

ಇತ್ತೀಚೆಗೆ ಚರ್ಚ್‌ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಶಿವಕುಮಾರ್‌, ತಾವು ಕ್ರೈಸ್ತ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾಗಿ ಹೇಳಿ, ಸಮಾನತೆ ಮತ್ತು ಭ್ರಾತೃತ್ವವನ್ನು ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಯಾವುದೇ ಧರ್ಮ ಇತರ ಧರ್ಮದವರಿಗೆ ತೊಂದರೆ ನೀಡುವುದನ್ನು ಬೋಧಿಸುವುದಿಲ್ಲ ಎಂಬ ಸಂದೇಶವನ್ನೂ ಅವರು ನೀಡಿದ್ದರು.

ಹೀಗಾಗಿ ಅವರ ರಾಜಕೀಯ ಶೈಲಿಯನ್ನು ಕೇವಲ ಹಿಂದೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮಾತ್ರ ಜೋಡಿಸುವುದು ಸರಿಯಾಗುವುದಿಲ್ಲ. ಒಂದೆಡೆ ಹಿಂದೂ ಧಾರ್ಮಿಕ ಆಚರಣೆ ಮತ್ತು ಮಠಗಳಿಗೆ ಗೌರವ, ಮತ್ತೊಂದೆಡೆ ಎಲ್ಲ ಧರ್ಮಗಳಿಗೂ ಸಮಾನ ಗೌರವ ಎನ್ನುವ ನಿಲುವನ್ನು ಅವರು ಮುಂದಿಡುತ್ತಿರುವುದು ಗಮನಾರ್ಹವಾಗಿದೆ.

ಬಿಜೆಪಿಗೆ ನಿಜವಾದ ಸವಾಲು ಎಲ್ಲಿದೆ?

ಕರ್ನಾಟಕದಲ್ಲಿ ದೇವಸ್ಥಾನ, ಮಠ, ಹಿಂದೂ ಸಂಸ್ಕೃತಿ ಮತ್ತು ಧಾರ್ಮಿಕ ಆಚರಣೆಗಳು ಬಿಜೆಪಿ ರಾಜಕೀಯ ಸಂವಹನದ ಪ್ರಮುಖ ವಿಷಯಗಳಾಗಿವೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕತ್ವವೇ ಇದೇ ಸಾಂಸ್ಕೃತಿಕ ವಲಯದಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳಲು ಆರಂಭಿಸಿದರೆ, ರಾಜಕೀಯ ಸಂದೇಶಗಳ ನಡುವಿನ ಅಂತರ ಕೆಲವು ವಿಚಾರಗಳಲ್ಲಿ ಕಡಿಮೆಯಾಗಬಹುದು.

ಡಿ ಕೆ ಶಿವಕುಮಾರ್‌ ಅನುಸರಿಸುತ್ತಿರುವ ರಾಜಕೀಯ ನಿಲುವಿನಿಂದಾಗಿ ಡಿಕೆ ವರ್ಚಸ್ಸು ಹೆಚ್ಚಾಗುತ್ತಿದ್ದು, ಇದರಿಂದ 2028 ರ ವಿಧಾನಸಭಾ ಚುನಾವಣೆಗೆ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಅಲ್ಲದೇ ಸ್ಥಳೀಯ ರಾಜಕೀಯ ಸಮೀಕರಣ, ಸರ್ಕಾರದ ಆಡಳಿತ, ಅಭ್ಯರ್ಥಿಗಳ ಆಯ್ಕೆ ಮತ್ತು ಮುಂದಿನ ರಾಜಕೀಯ ಬೆಳವಣಿಗೆಗಳಂತಹ ಹಲವು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ.

ಸಿಎಂ ಕುರ್ಚಿಗಾಗಿ ದೇವಸ್ಥಾನ ಸುತ್ತಿದರು: ಪ್ರತಾಪ್‌ ಸಿಂಹ

ಸಿದ್ದರಾಮಯ್ಯ ಅವರು ಮೊದಲು ಮುಖ್ಯಮಂತ್ರಿಯಾಗಿದ್ದಾಗ ಅವರ ಹೆಂಡತಿ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಸೀರೆ ಕೊಟ್ಟಿದ್ದರು. ಅಲ್ಲದೇ ಸಿದ್ದರಾಮಯ್ಯ ಅವರು ತಮ್ಮ ಮನೆಯ ಗೃಹ ಪ್ರವೇಶದ ಸಂದರ್ಭದಲ್ಲಿ ಗೋ ಪೂಜೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ವೈಯಕ್ತಿವಾಗಿ ನಂಬದೆ ಇದ್ದರು ಕೂಡ, ಅವರ ಹೆಂಡತಿ ಚಾಮುಂಡೇಶ್ವರಿ ಬೆಟ್ಟಕ್ಕೆ ಬರ್ತಾರೆ.

ಡಿ ಕೆ ಶಿವಕುಮಾರ್‌ ದೇವಸ್ಥಾನಕ್ಕೆ ಹೋಗ್ತಾರೆ. ಅದು ಅವರ ವೈಯಕ್ತಿಕ ಆಸೆ, ಆಕಾಂಕ್ಷೆಗಳನ್ನ ಈಡೇರಿಸಿಕೊಳ್ಳಲು ಹೋಗ್ತಾರೆ. ಒಂದು ವೇಳೆ ಡಿ ಕೆ ಶಿವಕುಮಾರ್‌ ಅವರಿಗೆ ಸಾಫ್ಟ್‌ ಹಿಂದುತ್ವ ಅಥವಾ ಹಿಂದುತ್ವ ಇತ್ತು ಅಂದಿದ್ರೆ, ಮುಸ್ಲಿಂರನ್ನ ಬ್ರದರ್ಸ್‌, ಬ್ರದರ್ಸ್‌ ಅಂತ ಕೂಗುತ್ತಿರಲಿಲ್ಲ. ಅಲ್ಲದೇ ಗಣೇಶೋತ್ಸವಕ್ಕೆ ಪೊಲೀಸರು ತಕರಾರು ಎತ್ತಿದರು, ಆದ್ರೆ ಡಿ ಕೆ ಶಿವಕುಮಾರ್‌ ಡಿಜೆ ಹಾಕಿಕೊಳ್ಳಲಿ, ಅಡ್ಡಿ ಪಡಿಸಬೇಡಿ ಎಂದು ಹೇಳಲಿಲ್ಲ, ಬದಲಿದೆ ಸಾಕಷ್ಟು ನಿರ್ಬಂದ ಹಾಕಿದರು. ಸಿಎಂ ಕುರ್ಚಿ ಪಡೆದುಕೊಳ್ಳಲು ದೇವಸ್ಥಾನ ಸುತ್ತಿದರು ಎಂದು ಪ್ರತಾಪ್‌ ಸಿಂಹ ಹೇಳಿದರು.

2028 ಕ್ಕೆ ಕುರ್ಚಿ ಉಳಿಸಕೊಳ್ಳಲು ದೇವಸ್ಥಾನಕ್ಕೆ

ಡಿ ಕೆ ಶಿವಕುಮಾರ್‌ ಗೆ ಸಾಫ್ಟ್‌ ಹಿಂದುತ್ವವೂ ಇಲ್ಲ, ಹಿಂದುತ್ವವೂ ಇಲ್ಲ.. 2028 ಕ್ಕೆ ಕುರ್ಚಿ ಉಳಿಸಕೊಳ್ಳಲು ದೇವಸ್ಥಾನ ತಿರುಗುತ್ತಿದ್ದರೇ.. ಡಿ ಕೆ ಶಿವಕುಮಾರ್‌ ವೈಯಕ್ತಿಕ ಆಸೆ, ಆಕಾಂಕ್ಷೆ ಈಡೇರಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಮೈತ್ರಿ 2019 ಕ್ಕೂ ಮೊದಲೇ ಆಗಿದೆ. ಬಿಜೆಪಿಯಲ್ಲೂ ಸಿಎಂ ಸ್ಥಾನಕ್ಕೆ ಹಿರಿಯ ನಾಯಕರಿದ್ದಾರೆ. ನಮ್ಮ ಪಕ್ಷದಿಂದಲೂ ಸಹ ಬಿಜೆಪಿಯ ಹಿರಿಯ ನಾಯಕರು ಸಾಕಷ್ಟು ಜನ ಇದ್ದಾರೆ, ಜೆಡಿಎಸ್‌ ನಿಂದ ಕುಮಾರಣ್ಣ ಇದ್ದಾರೆ. ನಮ್ಮ ಮೈತ್ರಿ ಚನ್ನಾಗ್‌ ಇದೆ. ಮೈತ್ರಿಯಾಗಿದ್ದಕ್ಕೆ ನಾವು 19 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದೇವೆ. ನಮ್ಮದ್ದು ಪ್ರಬಲ ಮೈತ್ರಿಕೂಟ. ಬಿಜೆಪಿಯಲ್ಲಿ ಸಿಎಂ ಅಭ್ಯರ್ಥಿ ಬಗ್ಗೆ ನರೇಂದ್ರ ಮೋದಿ ಅವರನ್ನೇ ಕೇಳಬೇಕು ಎಂದು ಹೇಳಿದರು.

ಒಟ್ನಾಲಿ, ಮುಂದಿನ ದಿನಗಳಲ್ಲಿ ಈ ಧಾರ್ಮಿಕ-ಸಾಂಸ್ಕೃತಿಕ ರಾಜಕೀಯ ಭಾಷೆ ಇನ್ನಷ್ಟು ವಿಸ್ತರಿಸುತ್ತದೆಯೇ, ಕಾಂಗ್ರೆಸ್‌ ಇದನ್ನು ತನ್ನ ಸಂಘಟನಾ ಮತ್ತು ಚುನಾವಣಾ ಸಂದೇಶದ ಭಾಗವನ್ನಾಗಿ ಮಾಡಿಕೊಳ್ಳುತ್ತದೆಯೇ, ಅಥವಾ ಇದು ಶಿವಕುಮಾರ್‌ ಅವರ ವೈಯಕ್ತಿಕ ರಾಜಕೀಯ ಶೈಲಿಯಲ್ಲೇ ಉಳಿಯುತ್ತದೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+