DK Shivakumar: ಕಾಂಗ್ರೆಸ್ ಸರ್ಕಾರ ಇರುವವರೆಗೂ ಗ್ಯಾರಂಟಿ ಯೋಜನೆಗಳು ಇರುತ್ತೆ
ಗೃಹಲಕ್ಷ್ಮಿ ಹಣವನ್ನು ನಾವೇನು ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ ಎಂದು ಶಾಕಿಂಗ್ ಹೇಳಿಕೆ ನೀಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರು ಮತ್ತೆ ಗ್ಯಾರಂಟಿ ಯೋಜನೆಗಳ ಬಗ್ಗೆ ಯೂಟರ್ನ್ ಹೊಡೆದಿದ್ದಾರೆ. ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆ ವಿಜಯನಗರದ ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್ ಸಮರ್ಪಣಾ ಸಂಕಲ್ಪ ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ಎಲ್ಲಿಯವರೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುತ್ತದೋ, ಅಲ್ಲಿಯವರೆಗೂ ನಮ್ಮ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿರುತ್ತವೆ. ಇದು ನಮ್ಮ ವಚನ ಎಂದು ಭರವಸೆ ನೀಡಿದ್ದಾರೆ.
ಈ ಎರಡು ವರ್ಷಗಳ ʼಸಮರ್ಪಣಾ ಸಂಕಲ್ಪʼ ಕೇವಲ ಸಂಭ್ರಮದ ಆಚರಣೆಯಲ್ಲ. ನಮಗೆ ಆಶೀರ್ವದಿಸಿದ ಕನ್ನಡಿಗರ ಋಣ ತೀರಿಸುವ ಪ್ರತಿಜ್ಞೆ ಮಾಡಲು ಸೇರಿರುವ ವೇದಿಕೆ. ಐದು ಗ್ಯಾರಂಟಿಗಳನ್ನು ನೀಡಿ ಜನರ ಬದುಕನ್ನು ಹಸನು ಮಾಡಿ, ಈಗ ಕಂದಾಯ ಇಲಾಖೆಯ ಮೂಲಕ 6ನೇ 'ಭೂ ಗ್ಯಾರಂಟಿʼ ನೀಡಿದ್ದೇವೆ. ಈ ಕಾರ್ಯಕ್ರಮ ರಾಜ್ಯದ ಇತಿಹಾಸದಲ್ಲಿ ಐತಿಹಾಸಿಕ ಪುಟಕ್ಕೆ ಸೇರಿದೆ ಎಂದು ಹೇಳಿದ್ದಾರೆ.

ಈವರೆಗೂ ನಾವು ನುಡಿದಂತೆ ನಡೆದಿದ್ದೇವೆ, ಮುಂದೆಯೂ ಕೊಟ್ಟ ಮಾತುಗಳನ್ನು ಉಳಿಸಿಕೊಳ್ಳುತ್ತೇವೆ. ಕಳೆದ ಎರಡು ವರ್ಷಗಳಲ್ಲಿ ಕೇವಲ ಗ್ಯಾರಂಟಿಗಳಷ್ಟೇ ಅಲ್ಲ, ಭ್ರಷ್ಟಾಚಾರಕ್ಕೆ ನಾವು ಕಡಿವಾಣ ಹಾಕಿದ್ದೇವೆ. ಪ್ರತಿ ಇಲಾಖೆಯ ಮೂಲಕವೂ ಹೊಸ ಕಾರ್ಯಕ್ರಮ ಹಾಕಿಕೊಂಡು, ಜನರಿಗೆ ನೆಮ್ಮದಿಯ ಬದುಕು ಕಟ್ಟಿಕೊಡುತ್ತಿದ್ದೇವೆ. ಗ್ರಾಮೀಣ ರಸ್ತೆಗಳ ಸುಧಾರಣೆ, ಉದ್ಯೋಗ ಸೃಷ್ಟಿಗೆ, ರೈತರಿಗೆ ಅನುಕೂಲ ಮಾಡಿಕೊಡಲು ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇವೆ. ರಾಜ್ಯದ ಕೆರೆಗಳನ್ನು ತುಂಬಿಸಲು ಕಾರ್ಯಕ್ರಮ ರೂಪಿಸಿದ್ದೇವೆ ಎಂದು ವಿವರಿಸಿದ್ದಾರೆ.
ರಾಹುಲ್ ಗಾಂಧಿ ಅವರು ನಮ್ಮ ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆ ನಡೆಸಿದ ಎಲ್ಲ ಕ್ಷೇತ್ರಗಳನ್ನೂ ನಾವು ಗೆದ್ದಿದ್ದೇವೆ ಎಂದು ಹೇಳಲು ಹೆಮ್ಮೆಯಾಗುತ್ತೆ. ಅದರಲ್ಲೂ ಕಲ್ಯಾಣ ಕರ್ನಾಟಕ ನಮ್ಮ ಸರ್ಕಾರ ಸ್ಥಾಪನೆಗೆ ಅತಿ ಹೆಚ್ಚು ಶಾಸಕರುಗಳನ್ನು ಕೊಟ್ಟಿದೆ. ಅದಕ್ಕಾಗಿ ಈ ಭಾಗದ ಅಭಿವೃದ್ಧಿಗೆ ವಾರ್ಷಿಕವಾಗಿ 5 ಸಾವಿರ ಕೋಟಿ ಅನುದಾನವನ್ನು ನೀಡುತ್ತಿದ್ದೇವೆ. ವಿರೋಧ ಪಕ್ಷದವರು ಟೀಕೆ ಮಾಡುತ್ತಿದ್ದಾರೆ. ಅವರಿಗೆ ರಾಜ್ಯದ ಏಳಿಗೆ ಕಣ್ಣಲ್ಲಿ ನೋಡಲು ಆಗುತ್ತಿಲ್ಲ. ಅವರು ಟೀಕೆಗಳನ್ನ ಮಾಡುತ್ತಿರಲಿ. ನಾವು ಜನರ ಬದುಕನ್ನು ಉಳಿಸುವ ಕೆಲಸವನ್ನು ಮುಂದುವರಿಸುತ್ತೇವೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎನ್ನುವುದಕ್ಕೆ ನಮ್ಮ ಗ್ಯಾರಂಟಿಗಳು ಸಾಕ್ಷಿ ಎಂದು ಸಮರ್ಥಿಸಿಕೊಂಡಿದ್ದಾರೆ.

ಈ ʼಭೂ ಗ್ಯಾರಂಟಿʼ ಕಾರ್ಯಕ್ರಮವನ್ನು ಐತಿಹಾಸಿಕವಾಗಿ ಆಯೋಜಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡರು ಮತ್ತವರ ತಂಡ, ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಪಕ್ಷದ ಅಧ್ಯಕ್ಷನಾಗಿ, ರಾಜ್ಯದ ಉಪಮುಖ್ಯಮಂತ್ರಿಯಾಗಿ ಮನದುಂಬಿ ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಸಂತಸ
ಏಳುಕೋಟಿ ಕನ್ನಡಿಗರು ನಮ್ಮ ಮೇಲೆ ಭರವಸೆಯನ್ನಿಟ್ಟು ಮತ ನೀಡಿ, ಆಶೀರ್ವದಿಸಿ ಭರ್ಜರಿ ಬಹುಮತದ ಮೂಲಕ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟು ಇಂದಿಗೆ ಎರಡು ವರ್ಷ. ಈ ಎರಡು ವರ್ಷಗಳ ಅವಧಿಯಲ್ಲಿ ಅಭಿವೃದ್ಧಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜೊತೆ ಸಾಮಾಜಿಕ ನ್ಯಾಯದ ಬಂಡಿಯನ್ನು ಸಮಾನವಾಗಿ ಮುನ್ನಡೆಸಿ ನಾಡನ್ನು "ಸರ್ವಜನಾಂಗದ ಶಾಂತಿಯ ತೋಟವಾಗಿಸುವತ್ತ ಪ್ರಾಮಾಣಿಕವಾಗಿ ಶ್ರಮಿಸಿದ ಸಂತೃಪ್ತಿ ನಮ್ಮದು. ಸಾಧಿಸಿದ್ದು ಒಂದಷ್ಟಾದರೆ, ಸಾಧಿಸಬೇಕಿರುವುದು ಬಹಳಷ್ಟಿದೆ ಎಂಬುದರ ಅರಿವು ನಮಗಿದೆ ಎಂದು ಸಿಎಂ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಅಭಿವೃದ್ಧಿ ಮಾದರಿಯ ಈ ಪಯಣದಲ್ಲಿ ನಿಮ್ಮ ಸಹಕಾರ ಎಂದಿನಂತೆ ನಮ್ಮೊಂದಿಗಿರಲಿ. ಚುನಾವಣೆ ವೇಳೆ ನಾವು ಕೊಟ್ಟಿದ್ದ ಭರವಸೆಗಳಲ್ಲಿ ಐದು ಗ್ಯಾರಂಟಿಗಳ ಜೊತೆಗೆ 142 ಭರವಸೆಗಳನ್ನು ಎರಡು ವರ್ಷಗಳಲ್ಲಿ ಪೂರೈಸಿದ್ದೇವೆ. ಮುಂದಿನ ಮೂರು ವರ್ಷಗಳಲ್ಲಿ ಉಳಿದ ಅಷ್ಟೂ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಹೇಳಿದ್ದಾರೆ.

ಮೊದಲ ಬಾರಿ ಮುಖ್ಯಮಂತ್ರಿಯಾಗಿ ನಾವು ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿ, ಪ್ರಣಾಳಿಕೆಯಲ್ಲಿ ಘೋಷಿಸದ ಹೊಸದಾದ 30 ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಿದ್ದೇವೆ. ಬಿಜೆಪಿ ಏಕೆ ತಾನು ಕೊಟ್ಟಿದ್ದ ಭರವಸೆಗಳನ್ನು ಈಡೇರಿಸದೆ, ಜನರ ಎದುರು ಸುಳ್ಳು ಹೇಳಿಕೊಂಡು ತಿರುಗುತ್ತಿದೆ? ಎಂದು ವಾಗ್ದಾಳಿ ನಡೆಸಿದ್ದಾರೆ. ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ. ಸರ್ವರನ್ನೂ ಸಮಾನವಾಗಿ ಗೌರವಿಸುವ ರಾಜ್ಯ. ಸಂವಿಧಾನದ ಅಡಿಯಲ್ಲಿ ಸರ್ವ ಧರ್ಮಗಳನ್ನೂ ಸಮಾನವಾಗಿ ಕಾಣಬೇಕು. ನಾವು ಇದೇ ಮೌಲ್ಯವನ್ನು ಪಾಲಿಸುತ್ತಿದ್ದೇವೆ ಎಂದಿದ್ದಾರೆ.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನಿರಂತರ ನಷ್ಟ
ಕೇಂದ್ರ ಸರ್ಕಾರದಿಂದ ಪ್ರತೀ ವರ್ಷ ನಮಗೆ ನಷ್ಟ ಆಗುತ್ತಿದೆ. ನಾವು ಪ್ರತೀ ವರ್ಷ 4.5 ಲಕ್ಷ ಕೋಟಿ ತೆರಿಗೆ ರೂಪದಲ್ಲಿ ಕೊಟ್ಟರೆ ನಮಗೆ ವಾಪಾಸ್ ಬರುವುದು ಒಂದು ರೂಪಾಯಿಗೆ 14 ಪೈಸೆ ಮಾತ್ರ. ಇದರಿಂದ ಒಕ್ಕೂಟ ವ್ಯವಸ್ಥೆಯ ಘನತೆ ಹಾಳು ಮಾಡುತ್ತಿದ್ದಾರೆ. ಕೇಂದ್ರ ಪ್ರಾಯೋಜಿತ ಯೋಜನೆಗಳಿಗೂ ಕೇಂದ್ರದಿಂದ ಪೂರ್ತಿ ಅನುದಾನ ಬಂದೇ ಇಲ್ಲ. ಕೇಂದ್ರದ ಯೋಜನೆಗಳಿಗೆ ರಾಜ್ಯ ಸರ್ಕಾರ ತನ್ನ ಪಾಲನ್ನು ಪೂರ್ತಿ ಕೊಟ್ಟಿದೆ. ಆದರೆ ಕೇಂದ್ರ ಬಿಜೆಪಿ ಸರ್ಕಾರ ತಮ್ನ ಪಾಲನ್ನು ಕೊಡದೆ ಉಳಿಸಿಕೊಂಡು ಅನ್ಯಾಯ ಮಾಡುತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
15ನೇ ಹಣಕಾಸು ಆಯೋಗದ ಕಾಲದಲ್ಲಿ ರಾಜ್ಯಕ್ಕೆ ಕೇಂದ್ರ ಮಾಡಿರುವ ಅನ್ಯಾಯ ನಿಮಗೆಲ್ಲ ಗೊತ್ತೇ ಇದೆ. ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ 5,300 ಕೋಟಿ ಹಣದಲ್ಲಿ ಬಿಡಿಗಾಸನ್ನೂ ಬಿಡುಗಡೆ ಮಾಡಲಿಲ್ಲ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವುದಾಗಿ ಭರವಸೆ ನೀಡಿದರು. ಇದನ್ನೂ ಈಡೇರಿಸಲಿಲ್ಲ ಎಂದು ದೂರಿದ್ದಾರೆ.

1.22 ಕೋಟಿ ಗೃಹಲಕ್ಷ್ಮಿಯರಿಗೆ 2000 ರೂ.
1.22 ಕೋಟಿ ಕುಟುಂಬಗಳ ಯಜಮಾನಿಯರಿಗೆ ಗೃಹಲಕ್ಷ್ಮಿ ಯೋಜನೆಯಡಿ 2000 ರೂಪಾಯಿ ಕೊಡುತ್ತಿದ್ದೇವೆ. 1.30 ಕೋಟಿ ಕುಟುಂಬಗಳಿಗೆ ಗೃಹಜ್ಯೋತಿ ಯೋಜನೆಯಡಿ ಅನುಕೂಲ ಒದಗಿಸಿದ್ದೇವೆ. ಜೊತೆಗೆ ಇಡೀ ರಾಜ್ಯದ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದ ವ್ಯವಸ್ಥೆ ಮಾಡಿದ್ದೇವೆ ಎಂದಿದ್ದಾರೆ.
2014ರಲ್ಲಿ 28,000 ರೂಪಾಯಿ ಇದ್ದ ಚಿನ್ನದ ಬೆಲೆ ಈಗ ಒಂದು ಲಕ್ಷ ರೂಪಾಯಿ ಆಗಿದೆ. ಗ್ಯಾಸ್ ಬೆಲೆ ₹414 ಇದ್ದದ್ದು ಈಗ ₹850 ಆಗಿದೆ. ಡೀಸೆಲ್, ಪೆಟ್ರೋಲ್, ಎಣ್ಣೆ, ಕಾಳು, ಬೇಳೆ, ರಸಗೊಬ್ಬರ ಎಲ್ಲದರ ಬೆಲೆಯನ್ನೂ ಆಕಾಶಕ್ಕೆ ಏರಿಸಿರುವ ಕೇಂದ್ರದ ನರೇಂದ್ರ ಮೋದಿ ಅವರ ಸರ್ಕಾರದ ವಿರುದ್ಧ ಜನಾಕ್ರೋಶ ಇದೆಯೇ ಹೊರತು ನಮ್ಮ ಸರ್ಕಾರದ ವಿರುದ್ಧ ಅಲ್ಲ. ಜನ ನಮ್ಮ ಪರವಾಗಿಯೇ ಇದ್ದಾರೆ. ಹೀಗಾಗಿ ಬಿಜೆಪಿ ಹಮ್ಮಿಕೊಂಡಿರುವ ಜನಾಕ್ರೋಶ ಕಾರ್ಯಕ್ರಮವೇ ನಕಲಿ. ರಾಜ್ಯದ ಜನತೆ ನಮ್ಮ ಮಾಲೀಕರು. ನಮ್ಮ ಮಾಲೀಕರಿಗೆ ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ನಿಮ್ಮ ಆಶೀರ್ವಾದ ಇರುವವರೆಗೂ ಬಿಜೆಪಿಯ ಸುಳ್ಳಿನ ರಾಶಿಗೆ ನಾವು ಹೆದರುವ, ಅಂಜುವ ಪ್ರಶ್ನೆಯೇ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
-
IPL Free VIP Tickets: ಶಾಸಕರಿಗೆ ಐಪಿಎಲ್ ವಿಐಪಿ ಟಿಕೆಟ್ ಪಡೆಯುವ ಹಕ್ಕು ಇದೆ: ಡಿ.ಕೆ.ಶಿವಕುಮಾರ್ ಸಮರ್ಥನೆ -
Price Hike: ಕೇಂದ್ರದಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಹೇಳಿಕೆ, ದರ ಹೆಚ್ಚಿಸಿದ್ದೇ ಕಾಂಗ್ರೆಸ್; ಡಿಕೆಶಿಗೆ ತಿರುಗೇಟು -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications