ಸಚಿವ ಸ್ಥಾನ ಕೋಟಿ ಕೋಟಿಗೆ ಹರಾಜು: ಬಿಜೆಪಿ ಆಡಿಯೋ ಬಾಂಬ್, ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗುವಂತೆ, ಸಚಿವ ಸ್ಥಾನ ನೀಡಲು ಕೋಟಿ ಕೋಟಿ ರೂಪಾಯಿ ವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಆಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿದೆ. ಈ ಆಡಿಯೋ ಬಹಿರಂಗವಾಗುತ್ತಿದ್ದಂತೆಯೇ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಉಂಟಾಗಿದ್ದು, ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.
ಬಿಜೆಪಿ ನಾಯಕರು ಬಿಡುಗಡೆ ಮಾಡಿದ ಆಡಿಯೋದಲ್ಲಿ ಸಚಿವ ಸ್ಥಾನ ಹಂಚಿಕೆ ಕುರಿತು ಹಣದ ವ್ಯವಹಾರ ನಡೆದಿರುವಂತೆ ಹೇಳಲಾಗಿದೆ ಎಂದು ಆರೋಪಿಸಿದ್ದು, ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಜನರ ವಿಶ್ವಾಸಕ್ಕೆ ಧಕ್ಕೆ ತರುವಂತಹ ಗಂಭೀರ ಆರೋಪ ಇದಾಗಿದ್ದು, ಸರ್ಕಾರ ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಸಂಪುಟ ವಿಸ್ತರಣೆ ಹಾಗೂ ಪೇಮೆಂಟ್ ಸೀಟ್ ಹಂಚಿಕೆ ಕುರಿತು ಶಾಸಕ ಆರ್. ಬಿ. ತಿಮ್ಮಾಪುರ ಮತ್ತು ಜಿಲ್ಲಾಧ್ಯಕ್ಷ ಎಸ್. ಜಿ. ನಂಜಯ್ಯನಮಠ ಅವರದ್ದು ಎನ್ನಲಾದ ಆಡಿಯೋ ಸಂಭಾಷಣೆ ಇದೀಗ ವೈರಲ್ ಆಗಿದೆ. ಈ ಬಗ್ಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಡಿಯೋ ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ಕೋಟಿ ಕೋಟಿಗೆ ಹರಾಜು ಆಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮಾಜಿ ಸಚಿವ ತಿಮ್ಮಾಪುರ ಮತ್ತು ಮಾಜಿ ಶಾಸಕ ನಂಜಯ್ಯನಮಠ ಕಾರಿನಲ್ಲಿ ಮಾತನಾಡಿದ ವಿಡಿಯೋ ಇದಾಗಿದೆ. ಇವರ ಬಳಿ ಹಣ ಇಲ್ಲ; ಪ್ರಾಮಾಣಿಕರಿದ್ದಾರೆ ಎಂದು ವೇಣುಗೋಪಾಲರಿಗೆ ತಿಳಿಸಿದಾಗ, ಹಣ ಮಾಡದೇ ಪ್ರಾಮಾಣಿಕರಾಗಿ ಇರಿ ಎಂದು ನಿಮಗೆ ಯಾರು ಹೇಳಿದ್ದಾರೆ ಎಂದು ಪ್ರಶ್ನಿಸಿದ ಕುರಿತು ಮಾತನಾಡಿದ್ದಾರೆ. ಕಾಂಗ್ರೆಸ್ ನಾಯಕರೇ ಭ್ರಷ್ಟಾಚಾರಿಗಳನ್ನು ಉತ್ಪತ್ತಿ ಮಾಡುವವರು ಎಂಬುದು ಇದರಿಂದ ಸಾಬೀತಾಗಿದೆ ಎಂದು ದೂರಿದರು. ಇವರು ದೇಶ ಉದ್ಧಾರ ಮಾಡಲು ಬಂದವರಲ್ಲ, ಇವರು ದೇಶ ಲೂಟಿ ಮಾಡುವವರು ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷವು ಮಂತ್ರಿಮಂಡಲದ ಸದಸ್ಯತ್ವವನ್ನು ಹರಾಜಿಗೆ ಇಟ್ಟಿತ್ತು ಎಂದು ಮತ್ತೊಮ್ಮೆ ಆರೋಪಿಸಿದರು. ಹರಾಜಿನಲ್ಲಿ ಸಚಿವಸ್ಥಾನವನ್ನು ಶಕ್ತ್ಯಾನುಸಾರ ಪಡೆದಿದ್ದಾರೆ ಎಂದ ಅವರು, ಇದಕ್ಕೆ ಪುರಾವೆ ಎಂಬಂತೆ ವಿಡಿಯೋಗಳು ಓಡಾಡುತ್ತಿವೆ ಎಂದು ವಿವರಿಸಿದರು. ಭ್ರಷ್ಟಾಚಾರ ಆರೋಪದಲ್ಲಿ ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಹಣ ದುರುಪಯೋಗ ಪಡಿಸಿಕೊಂಡ ನಾಗೇಂದ್ರ ಅವರು ಬಿಜೆಪಿ ಮುಖಂಡರು, ಶಾಸಕರ ಬಹುದೊಡ್ಡ ಹೋರಾಟದ ಫಲವಾಗಿ ರಾಜೀನಾಮೆ ನೀಡಿದ್ದರು. ಜೈಲಿಗೆ ಹೋಗಿದ್ದರು. ಇವತ್ತಿಗೂ ಜಾಮೀನಿನಲ್ಲಿ ಇದ್ದಾರೆ. ಜಾಮೀನಿನಲ್ಲಿ ಇದ್ದರೂ, ಭ್ರಷ್ಟಾಚಾರದಲ್ಲಿದ್ದರೂ ಕಾಂಗ್ರೆಸ್ ಅವರಿಗೆ ಉಡುಗೊರೆಯಾಗಿ ಮಂತ್ರಿಸ್ಥಾನವನ್ನು ನೀಡಿದೆ ಎಂದು ಆಕ್ಷೇಪಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದನ್ನು ಪ್ರದರ್ಶಿಸಿದರು.
ನಾಗೇಂದ್ರ ಅವರು ಮತ್ತೆ ಎಲ್ಲರ ಹೆಸರು ಹೇಳುವುದಾಗಿ ತಿಳಿಸಿದ್ದು, ಅವರಿಗೆ ಹೆದರಿ ಸಚಿವ ಸ್ಥಾನ ನೀಡಿರಬೇಕು ಎಂದು ತಿಳಿಸಿದರು. ಹೆಚ್ಚು ಹಣ ಕೊಟ್ಟದ್ದಕ್ಕಾಗಿ ಕೊಡಲಾಗಿದೆ ಎಂದು ಮತ್ತೊಬ್ಬರು ಹೇಳುತ್ತಾರೆ. ಒಟ್ಟಾರೆಯಾಗಿ ಸಚಿವ ಸ್ಥಾನಗಳನ್ನು ಹರಾಜಿಗೆ ಇಟ್ಟಿದ್ದು ಸಾಬೀತಾಗಿದೆ ಎಂದು ತಿಳಿಸಿದರು. ಇತ್ತ ಬಿಜೆಪಿ ಬಿಡುಗಡೆ ಮಾಡಿರುವ ಈ ಆಡಿಯೋ ಸಂಭಾಷಣೆ ರಾಜ್ಯ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತವನ್ನು ಮತ್ತೆ ಬೀದಿಗೆ ತಂದಿದ್ದು, ಪ್ರತಿಪಕ್ಷಗಳಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಕಳಂಕಿತರಿಗೆ ಹೆಚ್ಚು ಹಣ ನೀಡಿದವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.


Click it and Unblock the Notifications
