ಈ ಚುನಾವಣೆಗೆ ಕರ್ನಾಟಕದ ಬಾರ್, ಪಬ್‌ಗಳಿಂದ 900 ಕೋಟಿ ರೂ ಸಂಗ್ರಹ- ಆರ್.ಅಶೋಕ್
ಚಿತ್ರದುರ್ಗ, ನವೆಂಬರ್ 12: ರಾಜ್ಯದಲ್ಲಿ ಮೂರು ಕ್ಷೇತ್ರಗಳ ಉಪಚುನಾವಣೆಯ ಕಣ ರಂಗೇರಿದ್ದು, ರಾಜಕೀಯ ಪಕ್ಷಗಳ ಆರೋಪ ಪ್ರತ್ಯಾರೋಪಗಳು ಜಾಸ್ತಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸುತ್ತಿದ್ದರೆ, ಅತ್ತ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ಧ ಆರೋಪಗಳನ್ನು ಮಾಡುವುದು ಮುಂದುವರಿದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನ ತೆರೆದ ಪುಸ್ತಕ. ವೈಟ್ ಪೇಪರ್‌ನಂತೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮೂರು ಕಡೆ ಉಪಚುನಾವಣೆ ಹಾಗೂ ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದ ಬಾರ್, ವೈನ್ ಸ್ಟೋರ್ ಪಬ್‌ಗಳಿಗೆ ದರ ಫಿಕ್ಸ್ ಮಾಡಿದ್ದು , 900 ಕೋಟಿ ರೂಪಾಯಿ ಹಣವನ್ನು ಈ ಚುನಾವಣೆಗೆ ಸಂಗ್ರಹ ಮಾಡಲಾಗಿದೆ. ಅದರಲ್ಲೂ ಒಂದೇ ವಾರದಲ್ಲಿ ದಾಖಲೆ ರೀತಿ 18 ಕೋಟಿ ರೂಪಾಯಿ ರೀತಿ ಹಣ ಸಂಗ್ರಹಿಸಿದ್ದಾರೆ ಎಂದು ಆರೋಪಿಸಿದರು.

ಇಲಾಖೆಯ ಅಧಿಕಾರಿ, ಹಾಗೂ ಕಮಿಷನರ್‌ಗೆ ನಾವು ಶಹಭಾಷ್ ಗಿರಿ ಕೊಡಬೇಕಾಗಿದೆ. ಇಂತಹ ಪ್ರಳಯಾಂತಕರು ಕರ್ನಾಟಕವನ್ನು ಲೂಟಿ ಮಾಡಿಕೊಂಡು, ಕರ್ನಾಟಕವನ್ನು ಎಟಿಎಂ ಮಾಡಿಕೊಂಡು ಬೇರೆ ರಾಜ್ಯದ ಚುನಾವಣೆಗೆ ಹಣ ಬಳಕೆ ಮಾಡಿಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕೇರಳದಲ್ಲಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಫೋಟೋ ಇರುವ ಅಕ್ಕಿ ಹಂಚುತ್ತಿದ್ದಾರೆ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡುತ್ತಿದ್ದಾರೆ. ಕೇರಳದ ವಯನಾಡಲ್ಲಿ ಪ್ರಳಯವಾದಾಗ ಕರ್ನಾಟಕದ ದುಡ್ಡು ಕೊಟ್ಟರು. ಕೇರಳದಲ್ಲೂ ಕೂಡ ಕರ್ನಾಟಕದ ಹಣ ಲಂಚಾವತಾರ ತಾಂಡವಾಡುತ್ತಿದೆ.

ಉಪಚುನಾವಣೆ ವೇದಿಕೆ ಮೇಲೆ ಜಮೀರ್ ರಾಜಾರೋಶವಾಗಿ ಹಣ ಹಂಚಿದ್ದಾನೆ. ಕಾಂಗ್ರೆಸ್ ಸರ್ಕಾರಕ್ಕೆ ಮಾನ ಮರ್ಯಾದೆ ಏನೂ ಇಲ್ಲ ಅಂತಾ ಕಾಣುತ್ತದೆ. ಆದರೂ ಸಿಎಂ ಜೀವನ ತೆರೆದ ಪುಸ್ತಕ, ವೈಟ್ ಪೇಪರ್ ಅಂತೆ. ಜಮೀರ್ ದುಡ್ಡು ಹಂಚಿದ್ದು ಕೂಡ ತೆರೆದ ಪುಸ್ತಕವಾ? ಎಂದರು.
ಈ ಬೆಳವಣಿಗೆ ಗಮನಿಸಿದಾಗ ಪ್ರಧಾನಿಗಳಿಗೆ ಮಾಹಿತಿ ಹೋಗಿರಲ್ವಾ ಎಂದು ಪ್ರಶ್ನಿಸಿದರು. 700 ಕೋಟಿ ಹಣ ಹೋಗಿದೆ. ಕಳೆದ 25 ವರ್ಷಗಳಿಂದ ಡಿ.ಕೆ ಶಿವಕುಮಾರ್ ಬರೀ ಸಾಕ್ಷಿ ಗುಡ್ಡೆ ಕೇಳುತ್ತಿದ್ದಾರೆ. ಈಗ ದಾಖಲೆ ಸಹಿತ ದೂರು ಕೊಟ್ಟಿದಾರಲ್ಲ, 18 ಕೋಟಿ ಹಣ ಸಂಗ್ರಹಿಸಿದ ಬಗ್ಗೆ ದೂರು ಕೊಟ್ಟು ಎಷ್ಟು ಹಣ ಅಂತಾ ದೂರಲ್ಲಿ ಹೇಳಿದ್ದಾರೆ. ಅವರನ್ನು ಯಾಕೆ ಹಿಡಿದು ಜೈಲಿಗೆ ಹಾಕಿಲ್ಲ ? ಎಂದು ಪ್ರಶ್ನಿಸಿದರು.
ತೆರೆದ ಪುಸ್ತಕದಲ್ಲಿ ಅವನು ಸರ್ಕಾರದ ಅಕೌಂಟ್ ತೋರಿಸಿದ್ದಾನೆ. ಅವನ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳಿಗೆ ದುಡ್ಡಿನ ದಾಹ ಅತಿಯಾಗಿದೆ ಅಂತಾ ಮಾಲೀಕರೇ ಹೇಳಿದ್ದಾರೆ. ಲಿಕ್ಕರ್ ಅಸೋಸಿಯೇಶನ್ 20ನೇ ತಾರೀಕು ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ಇದನ್ನೆಲ್ಲಾ ನರೇಂದ್ರ ಮೋದಿ ಹೇಳಿ ಮಾಡಿಸಿದ್ದರಾ ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದರು.












Click it and Unblock the Notifications