ಪಂಚಮಸಾಲಿ ಸಮುದಾಯದ ಕ್ಷಮೆ ಕೇಳಬೇಕಿರೋದು ಅವರು: ಸಿಎಂ ಹೇಳಿದ್ದು ಯಾರಿಗೆ?
ಬೆಳಗಾವಿಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಪೊಲೀಸರ ಲಾಠಿಚಾರ್ಜ್ ವಿಚಾರವು ಈಗ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನು ಬಿಜೆಪಿ ನಾಯಕರು ಬಲವಾಗಿ ಖಂಡಿಸಿದ್ದು, ಕೂಡಲೇ ಪಂಚಮಸಾಲಿ ಸಮುದಾಯದ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದಿವೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಖಡಕ್ ಉತ್ತರ ನೀಡಿದ್ದಾರೆ.
ಇಂದು ಬೆಳಗಾವಿಯಲ್ಲಿ ಮಾತನಾಡಿರುವ ಅವರು ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ನೀಡುವ ಸಂಬಂಧ ಯಾರು ಸಮಸ್ಯೆಯನ್ನು ಇತ್ಯರ್ಥ ಮಾಡಿಲ್ಲವೋ ಅವರೇ ಕ್ಷಮೆ ಕೇಳಬೇಕು ಎಂದು ಖಡಕ್ ಆಗಿ ಹೇಳಿದ್ದಾರೆ. ಈ ಹಿಂದೆ ಇದ್ದದ್ದು ಪ್ರಲ್ಹಾದ್ ಜೋಶಿಯವರ ಬಿಜೆಪಿ ಸರ್ಕಾರ. ನಿಜವಾಗಿ ಅವರೇ ಸಮುದಾಯದ ಕ್ಷಮೆ ಕೇಳಬೇಕು ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಲಾಠಿಚಾರ್ಜ್ ಬಳಿಕ ಮಾತನಾಡಿದ್ದ ಅವರು, ಪಂಚಮಸಾಲಿ ಸಮುದಾಯದವರು ಪ್ರವರ್ಗ 2ಎ ಅಡಿಯಲ್ಲಿ ಮೀಸಲಾತಿ ಕಲ್ಪಿಸುವಂತೆ ಕೇಳುವುದಕ್ಕೆ, ಚಳವಳಿ ಮಾಡುವುದಕ್ಕೆ ನಮ್ಮ ತಕರಾರಿಲ್ಲ. ಆದರೆ ಶಾಂತಿಯುತವಾಗಿ ಪ್ರತಿಭಟನೆಯಾಗಬೇಕು. ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳಬಾರದು. ಕಾನೂನು ಕೈಗೆ ತೆಗೆದುಕೊಂಡು ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿಕೊಂಡು ಕೂರಲು ಸಾಧ್ಯವಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.
ಸ್ವಾಮೀಜಿಯಾಗಲಿ, ಯಾರಾದರೂ ಎಲ್ಲರಿಗೂ ಕಾನೂನು ಒಂದೇ. ನನಗೂ ಹಾಗೂ ಸ್ವಾಮೀಜಿಗೂ ಎಲ್ಲರಿಗೂ ಕಾನೂನು ಒಂದೇ. ಸಂವಿಧಾನದ 14ನೇ ವಿಧಿಯ ಪ್ರಕಾರ ಕಾನೂನಿನ ಮುಂದೆ ಎಲ್ಲರೂ ಸಮಾನರು, ಕಾನೂನು ಸಮಾನ ರಕ್ಷಣೆಯನ್ನು ಖಾತ್ರಿಪಡಿಸುತ್ತದೆ. ಸ್ವಾಮೀಜಿಗಳಿಗೂ ಅವರ ಅಭಿಪ್ರಾಯ ತಿಳಿಸಲು ಸ್ವಾತಂತ್ರ್ಯವಿದೆ. ಅಂತಿಮವಾಗಿ ಸಂವಿಧಾನ ಪ್ರಕಾರ ನಡೆದುಕೊಳ್ಳುತ್ತೇವೆ ಎಂದು ಹೇಳಿದ್ದರು.

ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ವೇಳೆ ಪಂಚಮಸಾಲಿ ಹೋರಾಟಗಾರರ ಮೇಲೆ ಪೊಲೀಸರು ಕಲ್ಲು ಹೊಡೆದಿದ್ದಾರೆ ಎಂದು ಬಿಜೆಪಿಯವರು ಆರೋಪ ಮಾಡಿದ್ದಾರೆ. ಆದರೆ, ವಾಸ್ತವವಾಗಿ ಬಿಜೆಪಿಯವರೇ ಕಲ್ಲು ಹೊಡೆದಿರುವುದು, ಬ್ಯಾರಿಕೇಡ್ ತಳ್ಳಿ ಒಳ ನುಗ್ಗುವ ಫೋಟೋಗಳನ್ನು ಬೇಕಾದರೆ ತೋರಿಸುತ್ತೇವೆ. ಪ್ರತಿಭಟನೆ ಮಾಡುತ್ತಿದ್ದವರು ಕಲ್ಲು ತೂರದೆ ಇದ್ದ ಮೇಲೆ ಪೊಲೀಸರಿಗೆ ಹೇಗೆ ಗಾಯಗಳಾದವು? ಪೊಲೀಸರೇ ಕಲ್ಲು ಎಸೆದುಕೊಂಡಿದ್ದಾರಾ? ನಾನು ಹೇಳಿರುವುದಕ್ಕೆ ಸಾಕ್ಷಿಯಿದೆ ಎಂದು ಸಿಎಂ ಪ್ರತಿಕ್ರಿಯಿಸಿದ್ದರು.
ಪಂಚಮಸಾಲಿ ಸಮಾಜದವರು ಮೀಸಲಾತಿಗಾಗಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮುಂದೆ ಹೋಗಬೇಕು. ಬಿಜೆಪಿ ಅವಧಿಯಲ್ಲಿ ಈ ಬೆಳವಣಿಗೆ ನಡೆದಿದ್ದಕ್ಕೆ ಅಂದು ಪ್ರತಿಭಟನೆ ಏಕೆ ಮಾಡಲಿಲ್ಲ? ಈಗ ಅದೇ ಬಿಜೆಪಿಯವರು ಹೋರಾಟಕ್ಕೆ ಬೆಂಬಲ ಕೊಡುತ್ತಿದ್ದಾರೆ. ಈ ವೇಳೆ ಹಿಂದಿನ ಬಿಜೆಪಿ ಸರ್ಕಾರವೇ ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಮಾಡಲ್ಲ ಎಂದು ಒಪ್ಪಿಕೊಂಡಿತ್ತು ಎಂದು ತಿರುಗೇಟು ನೀಡಿದ್ದರು.
ಇನ್ನು ಪಂಚಮಸಾಲಿ ಹೋರಾಟವನ್ನು ಟ್ರ್ಯಾಕ್ಟರ್ ತರುವ ಮೂಲಕ ಮಾಡುತ್ತೇವೆ ಎಂದು ಮೊದಲು ಹೇಳಿದ್ದರು. ಹೋರಾಟವನ್ನು ಶಾಂತಿಯುತವಾಗಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ನಡೆಸಲು ಕೋರ್ಟ್ ಕೂಡ ಸೂಚನೆ ನೀಡಲಾಗಿತ್ತು. ಆದರೆ ಹೋರಾಟಗಾರರು ಕಾನೂನನ್ನು ಕೈಗೆತ್ತಿಕೊಳ್ಳಲು ಪ್ರಯತ್ನಿಸಿದರು. ಇನ್ನು ಹೋರಾಟದ ಸ್ಥಳಕ್ಕೆ ಮಹದೇವಪ್ಪ ಸೇರಿದಂತೆ ಮೂರವರು ಸಚಿವರನ್ನು ಕಳಿಸಿಕೊಟ್ಟಿದ್ದೆ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದರು.












Click it and Unblock the Notifications