ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ: ರಾಜ್ಯಪಾಲರ ವಿರುದ್ಧ ಸಚಿವ ಸಂತೋಷ್ ಲಾಡ್ ವಾಗ್ದಾಳಿ
ಧಾರವಾಡ, ಆಗಸ್ಟ್ 20: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ ಹಗರಣ ಆರೋಪ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ತೀವ್ರ ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಸಚಿವ ಸಂತೋಷ್ ಲಾಡ್ ಮಾತನಾಡಿದ್ದು, ರಾಜ್ಯಪಾಲರ ವಿರುದ್ಧವೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರವಾಡ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ರಾಜಕೀಯ ಟೂಲ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ನಡೆ ಸರಿಯಲ್ಲ. ಈಗಿನ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಕಾನೂನು ಅವಕಾಶ ಇರಲಿಲ್ಲ. ಆದರೂ ರಾಜಕೀಯ ಪ್ರೇರಿತವಾಗಿ ಪ್ರಾಸಿಕ್ಯೂಷನ್‌ಗೆ ಕೊಟ್ಟಿದ್ದಾರೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ ಆರೋಪಿಸಿದರು.

ಭಾರತೀಯ ಜನತಾ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ 17 ರಾಜ್ಯದಲ್ಲಿ ಉಗ್ರರ ದಾಳಿ ಆಗಿದೆ. ಈ ವಿಚಾರಗಳನ್ನೆಲ್ಲ ಬಿಜೆಪಿ ಮುಚ್ಚಿಟ್ಟಿದ್ದು, ಅವರಿಗೆ ಇರುವ ಒಂದೇ ಉದ್ದೇಶ ಕಾಂಗ್ರೆಸ್ ಉರುಳಿಸುವುದು. ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ 40 ವರ್ಷದ ಹಾದಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ. ಹೀಗಾಗಿ ಯಾವ ಆಧಾರದ ಮೇಲೆ ಸಿಎಂ ರಾಜೀನಾಮೆ ಕೊಡಬೇಕು ಎಂದು ಪ್ರಶ್ನಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ ಹಗರಣದಲ್ಲಿ ಏನೂ ಇಲ್ಲ. ಬಿಜೆಪಿ ಅವಧಿಯಲ್ಲಿಯೇ ಕೊಟ್ಟ ಸೈಟ್‌ಗಳಿವು. 125 ಸೈಟ್ ಕೊಟ್ಟಿದ್ದಾರೆ. ಈಗ ಇವರೇ ಕೊಟ್ಟ ಸೈಟ್‌ಗೆ ಅಕ್ರಮ ಎನ್ನುತ್ತಿದ್ದಾರೆ. ನಮ್ಮ ಸಮಯದಲ್ಲಿ ಅಕ್ರಮ ಆಗಿದೆ ಅಂತಾ ಅವರು ಹೇಳುವುದಿಲ್ಲ. ಈಗಿನ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಸೈಟ್ ಹಂಚಿಕೆ ಆಗಿದೆ ಎಂದರು.

ಈ ಹಗರಣದಲ್ಲಿ ಸಿದ್ದರಾಮಯ್ಯ ಭಾಗಿಯಾದ ಬಗ್ಗೆ ಒಂದಾದರೂ ದಾಖಲೆ ಇದೆಯಾ..? ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳ ಬಳಿ ರಾಜೀನಾಮೆ ಕೇಳಲು ಬುನಾದಿ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸುತ್ತಿರುವ ಬಿಜೆಪಿ ಮುಖಂಡರು ಹಾಗೂ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.












Click it and Unblock the Notifications