'ಸೈಲೆಂಟ್ ಆಗಿ ಇರಿ': ಕಾಂಗ್ರೆಸ್ ಸಚಿವರು, ಶಾಸಕರಿಗೆ ಮಲ್ಲಿಕಾರ್ಜುನ ಖರ್ಗೆ ವಾರ್ನಿಂಗ್
ಬೆಂಗಳೂರು, ಜುಲೈ 22: ರಾಜ್ಯ ರಾಜಕೀಯದಲ್ಲಿ ನಾಯಕತ್ವದ ಬದಲಾವಣೆ ಕುರಿತು ಎರಡು ಬಣಗಳ ನಡುವೆ ಭಾರೀ ಚರ್ಚೆ ನಡೆಯುತ್ತಿರುತ್ತದೆ. ಈ ನಡುವೆ ನಾಯಕತ್ವದ ಬಗ್ಗೆ ಗೊಂದಲ ಸೃಷ್ಟಿಸುವುದನ್ನು ನಿಲ್ಲಿಸುವಂತೆ ಶಾಸಕರಿಗೂ ಹಾಗೂ ಸಚಿವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
2023 ರ ವಿಧಾನಸಭಾ ಚುನಾವಣೆಯಲ್ಲಿ ಪಂಚ ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ನಲ್ಲಿ ಆರಂಭದಿಂದಲೂ ಮುಖ್ಯಮಂತ್ರಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟಿತ್ತು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಬರೋಬ್ಬರಿ ಎರಡು ವರ್ಷ ಪೂರೈಸಿದ್ದು, ಈ ನಡುವೆ ಕೆಲ ಕಾಂಗ್ರೆಸ್ ಸಚಿವರು ಹಾಗೂ ಶಾಸಕರು ಮುಖ್ಯಮಂತ್ರಿ ಬದಲಾವಣೆ ಕುರಿತು ಬಹಿರಂಗವಾಗಿ ಹೇಳಿಕೆ ನೀಡುತ್ತಿರುವ ಕುರಿತು ಹೈಕಮಾಂಡ್ ಖಡಕ್ ಎಚ್ಚರಿಕೆ ನೀಡಿದೆ.

ಚುನಾವಣೆ ಪೂರ್ವ ಭರವಸೆಗಳನ್ನು ಈಡೇರಿಸುವುದು ಮತ್ತು ಉತ್ತಮ ಆಡಳಿತ ನೀಡುವುದು ಸರ್ಕಾರದ ಆದ್ಯತೆಯಾಗಬೇಕು. ಕುರ್ಚಿ ಕಲಹ ಮುಂದುವರೆದರೆ ಸರ್ಕಾರದ ಸ್ಥಿರತೆಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಸಚಿವರು ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕು, ಇಲ್ಲದಿದ್ದರೆ ಸಂಪುಟದಿಂದ ಕಿತ್ತು ಹಾಕಲಾಗುವುದು ಎಂದು ಮಲ್ಲಿಕಾರ್ಜುನ್ ಖರ್ಗೆ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ನಾಯಕತ್ವ ಬದಲಾವಣೆಯನ್ನ ಹೈಕಮಾಂಡ್ ನೋಡಿಕೊಳ್ಳುತ್ತದೆ. ಶಾಸಕರು ಹಾಗೂ ಸಚಿವರು ತಮ್ಮ ತಮ್ಮ ಕೆಲಸವನ್ನ ಸರಿಯಾಗಿ ನಿಭಾಯಿಸಬೇಕು ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ಇನ್ನೂ ಕಳೆದ ಶನಿವಾರ ಮೈಸೂರಿನಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರಿಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರು ಕಿವಿಮಾತು ಹೇಳಿದ್ದಾರೆ. ಚುನಾವಣಾ ಪೂರ್ವ ಭರವಸೆ ಈಡೇರಿಸುವುದು ಮತ್ತು ಉತ್ತಮ ಆಡಳಿತ ನೀಡುವುದು ಸರಕಾರದ ಆದ್ಯತೆಯಾಗಬೇಕು. ಪಕ್ಷದಲ್ಲಿ ಗುಂಪುಗಾರಿಕೆ, ಸ್ಥಾನಮಾನಕ್ಕಾಗಿ ಪೈಪೋಟಿ ನಡೆಯುತ್ತಿದ್ದರೆ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆಗುವುದಿಲ್ಲ. ಐದು ವರ್ಷದ ಆಡಳಿತದಲ್ಲಿ ಉತ್ತಮ ಕೆಲಸಗಳು ಹಾಗೂ ರಾಜ್ಯದ ಅಭಿವೃದ್ದಿಯಾಗಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ.
ಪದೇ ಪದೇ ಸಚಿವ ಸಂಪುಟದ ವಿಚಾರ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡಬೇಡಿ, ಬಾಯಿ ಮುಚ್ಚಿಕೊಂಡು ತಮ್ಮ ಇಲಾಖೆಯ ಕೆಲಸ ಮಾಡುವ ಮೂಲಕ ಸರಕಾರ, ಪಕ್ಷದ ವರ್ಚಸ್ಸು ಹೆಚ್ಚಿಸಬೇಕು. ಇಂಥವರನ್ನು ಮುಲಾಜಿಲ್ಲದೇ ಸಂಪುಟದಿಂದ ಹೊರ ಹಾಕಲು ಸೂಚಿಸಲಾಗುತ್ತದೆ ಎಂದು ಸಚಿವ ಸಂಪುಟದ ಮಂತ್ರಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ. ಈ ಹಿಂದೆ ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಹೇಳಿದ್ದಾರೆ ಎಲ್ಲಾ ವಿಚಾರವನ್ನ ಹೈಕಮಾಂಡ್ ಗಮನಿಸುತ್ತಿರುತ್ತದೆ. ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರವನ್ನ ಹೈಕಮಾಂಡ್ ತೆಗೆದುಕೊಳ್ಳಲಿದೆ ಎಂದು ಹೇಳಲಾಗಿದೆ.












Click it and Unblock the Notifications