KPSC: KAS ಮರುಪರೀಕ್ಷೆಯಲ್ಲಿ ಯಡವಟ್ಟು: ಅನ್ಯಾಯದ ವಿರುದ್ಧ ಬಿ.ವೈ ವಿಜಯೇಂದ್ರ ಎಚ್ಚರಿಕೆ
ಬೆಂಗಳೂರು, ಡಿಸೆಂಬರ್ 30: ಕರ್ನಾಟಕ ಲೋಕಸೇವಾ ಆಯೋಗವು (KPSC) ಭಾನುವಾರ (ಡಿ.29) ಮರು ಪರೀಕ್ಷೆ ನಡೆಸಿದ 384 ಗೆಜೆಟೆಡ್ ಪ್ರೊಬೇಷನರಿ ವಿವಿಧ ಹುದ್ದೆಗಳ ನೇಮಕಾತಿ ಮರು ಪರೀಕ್ಷೆಯಲ್ಲಿ ಮತ್ತೆ ಯಡವಟ್ಟು ಆಗಿದೆ. ಇದರಿಂದ ನೂರಾರು ಆಸೆ ಹೊತ್ತು, ಹಗಲು ರಾತ್ರಿ ಓದಿದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಅನ್ಯಾಯವಾಗಿದೆ ಎಂದು ವಿಪಕ್ಷಗಳು ಆರೋಪಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇದಕ್ಕೆ ಪ್ರತಿಕ್ರಿಯಿಸಿದ್ದು, KPSC ಲೋಪ ಮತ್ತೆ ಬಯಲಾಗಿದೆ ಎಂದಿದ್ದಾರೆ.
ಕೆಪಿಎಸ್‌ಸಿ ಮರು ಪರೀಕ್ಷೆಯಲ್ಲಿ ಆದ ಯಡವಟ್ಟಿನ ಕುರಿತು ಅಭ್ಯರ್ಥಿಗಳ ಪರ ಧ್ವನಿ ಎತ್ತಿರುವ ಬಿ.ವೈ.ವಿಜಯೇಂದ್ರ ಅವರು, ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸುತ್ತಿರುವ ಪ್ರತಿಯೊಂದು ಪರೀಕ್ಷೆಗಳಲ್ಲೂ ಗೊಂದಲಗಳು, ಲೋಪಗಳು, ಭಾಷಾಂತರ ದೋಷಗಳ ಮೂಲಕ ಕೆಪಿಎಸ್‌ಸಿ ನ್ಯೂನತೆಗಳು ಬಯಲಾಗುತ್ತಲೇ ಇವೆ.

ಡಿಸೆಂಬರ್ 29 ರಂದು ನಡೆದ ಕೆಎಎಸ್ ಪೂರ್ವಭಾವಿ ಮರುಪರೀಕ್ಷೆಯ ಪ್ರವೇಶಪತ್ರ ಬಿಡುಗಡೆ ಮಾಡಿದ್ದ ಕೆಪಿಎಸ್‌ಸಿ ಕನ್ನಡ ಭಾಷೆಯಲ್ಲಿರುವ ಯಾವುದೇ ಪ್ರಶ್ನೆಗಳ ಭಾಷಾಂತರದಲ್ಲಿ ಏನಾದರೂ ಗೊಂದಲವಾದಲ್ಲಿ ಆಂಗ್ಲ ಭಾಷೆಯ ಪ್ರಶ್ನೆಗಳನ್ನು ನೋಡಿ ಅರ್ಥ ಮಾಡಿಕೊಳ್ಳಿ ಎಂದಿತ್ತು. ಹೀಗೆ ಅಭ್ಯರ್ಥಿಗಳಿಗೆ ಸೂಚಿಸುವ ಮೂಲಕ ತಮ್ಮ ಯಡವಟ್ಟುಗಳನ್ನು ಮಾಡಿಯೇ ಸಿದ್ಧ ಎಂಬ ಮುನ್ಸೂಚನೆ ಆಯೋಗ ನೀಡಿತ್ತು.
ಅದರಂತೆ ಪರೀಕ್ಷೆ ವೇಳೆ ಪ್ರಶ್ನೆ ಪತ್ರಿಕೆಯಲ್ಲಿ ಮತ್ತೆ ಭಾಷಾಂತರ ಲೋಪ ಹಾಗೂ ಕೆಲ ಜಿಲ್ಲೆಗಳಲ್ಲಿ ಒಎಂಆರ್ ಶೀಟ್ ಸಂಖ್ಯೆಗಳೇ ಅದಲು-ಬದಲಾಗಿರುವುದು ಪರೀಕ್ಷಾರ್ಥಿಗಳನ್ನು ಮತ್ತಷ್ಟು ಆತಂಕಕ್ಕೆ ತಳ್ಳಲ್ಪಟ್ಟಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಈ ಹಿಂದಿನ ಪರೀಕ್ಷೆಯಲ್ಲೂ ಕನ್ನಡ ಭಾಷಾ ಪರೀಕ್ಷಾರ್ಥಿಗಳಿಗೆ ಸಮರ್ಪಕವಾಗಿ ಭಾಷಾಂತರಿಸದೇ ಯಡವಟ್ಟು ಮಾಡಿ ಲಕ್ಷಾಂತರ ಪರೀಕ್ಷಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಕರ್ನಾಟಕದ ಮಾತೃಭಾಷೆಯಲ್ಲಿಯೇ ಸೂಕ್ತ ಪ್ರಶ್ನೆಗಳನ್ನು ನೀಡುವಲ್ಲಿ ಸಂಪೂರ್ಣ ವಿಫಲವಾಗಿ ಪದೇ ಪದೇ ಕೆಎಎಸ್ ಪರೀಕ್ಷಾರ್ಥಿಗಳನ್ನು ಗೊಂದಲಕ್ಕೆ ದೂಡುತ್ತಿರುವ ಬೇಜವಾಬ್ದಾರಿತನ ಪದೇ ಪದೇ ಮರುಕಳಿಸುತ್ತಿರುವುದು ಕೆಪಿಎಸ್‌ಸಿ ವೈಫಲ್ಯ ಹಾಗೂ ರಾಜ್ಯ ಸರ್ಕಾರದ ಅಸಮರ್ಥ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅವರು ತರಾಟೆಗೆ ತೆಗೆದುಕೊಂಡರು.
ಕಠಿಣ ಪರಿಶ್ರಮದಿಂದ ಉದ್ಯೋಗವನ್ನು ಅರಸಿ ಪರೀಕ್ಷೆಗಳನ್ನು ಬರೆಯುವ ಸಾವಿರಾರು ಉದ್ಯೋಗಾಕಾಂಕ್ಷಿಗಳ ಗೊಂದಲ ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಅಲ್ಲದೇ ಕೆಪಿಎಸ್‌ಸಿ ಎಡವಟ್ಟುಗಳಿಗೆ ಸಂಪೂರ್ಣ ಕಡಿವಾಣ ಹಾಕಿ ನೇಮಕಾತಿ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಲು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪರೀಕ್ಷಾರ್ಥಿಗಳ ಪರ ಬಿಜೆಪಿ ಹೋರಾಟಕ್ಕಿಳಿಯಲಿದೆ ಎಚ್ಚರಿಕೆ ನೀಡಿದರು.












Click it and Unblock the Notifications