Siddaramaiah Government: ಸರಕಾರದ ಬೆದರಿಕೆ, ಧಮ್ಕಿಗೆ ಬಿಜೆಪಿ ಸೊಪ್ಪು ಹಾಕುವುದಿಲ್ಲ: ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು,ಮೇ26: ರಾಜ್ಯದ ಹೊಸ ಕಾಂಗ್ರೆಸ್ ಸರಕಾರವು ಬಿಜೆಪಿಯ ಮಾಜಿ ಸಚಿವ ಡಾ. ಅಶ್ವತ್ಥನಾರಾಯಣ್ ಮತ್ತು ಶಾಸಕ ಹರೀಶ್ ಪೂಂಜ ಅವರ ಮೇಲೆ ಎಫ್‍ಐಆರ್ ದಾಖಲಿಸಿದ್ದು ಖಂಡನೀಯ ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪೂಂಜ ಅವರು ಹೇಳಿದ ಕಾಂಗ್ರೆಸ್ ಸರಕಾರದಲ್ಲಿ ಅನೇಕ ಹಿಂದೂ ಕಾರ್ಯಕರ್ತರ ಕೊಲೆ ಆಗಿದೆ ಎಂದಿದ್ದಾರೆ ಎಂಬ ವಿಚಾರ ಸಾವಿರಾರು ಬಾರಿ ಪ್ರಸ್ತಾಪ ಆಗಿದೆ. ಆದರೆ, ಅವರ ಮೇಲೆ ಮಾತ್ರ ಎಫ್‍ಐಆರ್ ಆಗಿದೆ. ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ಧಮ್ಕಿ ಹಾಕಿ ಬಾಯಿ ಮುಚ್ಚಿಸುವುದಾಗಿ ತಿಳಿದಿದ್ದೀರಾ ಹಾಗೂ ಅವರು ಹೆದರುತ್ತಾರೆಂದು ಭಾವಿಸಿದ್ದೀರಾ? ಎಂದು ಪ್ರಶ್ನಿಸಿದರು.

ಪೊಲೀಸ್ ಅಧಿಕಾರಿಗಳಿಗೆ, ಉತ್ತಮ ಹೆಸರು ಪಡೆದ ಇಲಾಖೆಗೆ ಸರಕಾರ ಧಮ್ಕಿ ಹಾಕುವುದನ್ನು ನಾನು ಪ್ರಥಮ ಬಾರಿಗೆ ನೋಡಿದ್ದೇನೆ. ಪೊಲೀಸರಿಗೆ ಧಮ್ಕಿ ಹಾಕಿ ಬಾಯಿ ಮುಚ್ಚಿಸುವ ಕೆಲಸ ಮಾಡಲಾಗುತ್ತಿದೆ ಎಂದು ಟೀಕಿಸಿದರು.
ಪೊಲೀಸರು ಕೇಸರಿ ಬಟ್ಟೆ ಧರಿಸಿ ಕಚೇರಿಗೆ ಬಂದದ್ದನ್ನು ನೋಡಿದ್ದೀರಾ? ನೀವು ಯಾರ ಮೇಲೆ ಹಗೆತನ ತೀರಿಸಲು ಯಾರಿಗೆ ಧಮ್ಕಿ ಹಾಕಿದ್ದೀರೆಂದು ಜನರಿಗೆ ಗೊತ್ತಾಗಿದೆ. ಗ್ಯಾರಂಟಿ- ಆಶ್ವಾಸನೆ ನೀಡಿ ಜನರನ್ನು ಹಾಗೂ ಬಡವರನ್ನು ವಂಚಿಸುವ ಸಣ್ಣತನಕ್ಕೆ ನೀವು ಇಳಿದಿದ್ದೀರಿ. ನೀರಾವರಿ ಇಲಾಖೆಯಲ್ಲಿನ ಅವ್ಯವಹಾರವನ್ನು ತನಿಖೆ ಮಾಡಿ ಜೈಲಿಗೆ ಕಳಿಸುವ ಮಾತನಾಡಿದ ಎಂ.ಬಿ.ಪಾಟೀಲರು ತಮಗೆ ಅದೇ ಇಲಾಖೆಯ ಸಚಿವ ಹುದ್ದೆ ಬೇಕೆಂದು ಪರೋಕ್ಷವಾಗಿ ಹೇಳಿದ್ದಾರೆ ಎಂದು ತಿಳಿಸಿದರು.

ಆರೆಸ್ಸೆಸ್, ಬಜರಂಗದಳ ಬ್ಯಾನ್ ಮಾಡುವ ಮಾತನಾಡಿದ ಪ್ರಿಯಾಂಕ್ ಖರ್ಗೆ ಪರೋಕ್ಷವಾಗಿ ತಮಗೆ ಗೃಹ ಸಚಿವ ಸ್ಥಾನ ಬೇಕೆಂದು ತಿಳಿಸಿದ್ದಾರೆ. ನಿಮ್ಮ ಬೆದರಿಕೆ, ಧಮ್ಕಿಗೆ ಬಿಜೆಪಿ ಸೊಪ್ಪು ಹಾಕುವುದಿಲ್ಲ. ನೀವೇನು ಎಂದು ನಮಗೆ ಗೊತ್ತಿದೆ ಎಂದು ಸವಾಲು ಹಾಕಿದರು. ನೀವು ಮಾಡಿದ ತಪ್ಪಿಗೆ ವಿದ್ಯುತ್ ಇಲಾಖೆಯ ಲೈನ್‍ಮ್ಯಾನ್, ಬಿಲ್ ಕಲೆಕ್ಟರ್‍ಗೆ ಜನರು ತೊಂದರೆ ಕೊಡಬೇಕೇ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಾಯಕರು ಜನರಿಗೆ ವಂಚಿಸಿದ್ದಾರೆ. ಆದ್ದರಿಂದ ಇಲಾಖೆಯ ಸಿಬ್ಬಂದಿಗಳಿಗೆ ತೊಂದರೆ ಕೊಡಬೇಡಿ ಎಂದು ಅವರು ಜನರಲ್ಲಿ ಮನವಿ ಮಾಡಿದರು. ನೀವು ಆಶ್ವಾಸನೆ ಬಗ್ಗೆ ಪ್ರಶ್ನಿಸಬೇಕಿದ್ದರೆ ಕಾಂಗ್ರೆಸ್ ಸರಕಾರದ ಸಚಿವರನ್ನು ಪ್ರಶ್ನಿಸಿ ಎಂದು ತಿಳಿಸಿದರು.
ಉಚಿತ ವಿದ್ಯುತ್, ಹೆಣ್ಮಕ್ಕಳಿಗೆ ಉಚಿತ ಪ್ರಯಾಣ ಕುರಿತು ಮೊದಲ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ ಮಾಡುವುದಾಗಿ ಹೇಳಿದ ಸರಕಾರ ಬಾಯಿ ಮುಚ್ಚಿ ಕುಳಿತಿದೆ. ಮಹಿಳೆಯರು ಬಸ್‍ಗಳಲ್ಲಿ ಟಿಕೆಟ್ ಪಡೆಯದೆ ಪ್ರಯಾಣ ಮಾಡಬೇಕೆಂದು ಕರೆ ನೀಡಿದರು. ಜನರು ವಿದ್ಯುತ್ ಬಿಲ್ ಪಾವತಿಸಬಾರದು. ಸರಕಾರಕ್ಕೆ ಪಾವತಿಸಲು ಸಾಧ್ಯ ಆಗದಿದ್ದರೆ ಕಾಂಗ್ರೆಸ್ ಪಕ್ಷ ಕಟ್ಟಿಕೊಳ್ಳಲಿ ಎಂದು ವ್ಯಂಗ್ಯವಾಗಿ ನುಡಿದರು.












Click it and Unblock the Notifications