ಬಿಜೆಪಿ ಶಾಸಕ ಮುನಿರತ್ನ ಮತ್ತೆ ಕಸ್ಟಡಿಗೆ, ಎಷ್ಟು ದಿನ?
ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಈಗಾಗಲೇ ಜೈಲು ಸೇರಿರುವ ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಮತ್ತೆ ಕೋರ್ಟ್‌ನಲ್ಲಿ ಮುಖಭಂಗವಾಗಿದೆ. ಇಂದು ಮುನಿರತ್ನ ಅವರ ಎಸ್‌ಐಟಿ ಕಸ್ಟಡಿ ಅವಧಿ ಮುಗಿದಿದ್ದರಿಂದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮುಂದೆ ಹಾಜರುಪಡಿಸಲಾಯಿತು. ಅಲ್ಲಿ ಮುನಿರತ್ನ ಅವರಿಗೆ ಕೋರ್ಟ್ ಮತ್ತೆ ನ್ಯಾಯಾಂಗ ಬಂಧನ ವಿಧಿಸಿದೆ.
ಅಕ್ಟೋಬರ್ 19ರವರೆಗೆ ಮುನಿರತ್ನ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ. ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆ 14 ದಿನ ವಿಸ್ತರಿಸಿದೆ. ಇದೇ ಮುನಿರತ್ನ ಅವರಿಗೆ ಮನೆಯ ಊಟ ನೀಡಲು ವಕೀಲರು ಮನವಿ ಮಾಡಿದರು. ಈ ಬಗ್ಗೆ ಜೈಲಾಧಿಕಾರಿಗಳು ಮನವಿ ಮಾಡಬೇಕು. ಒಂದು ವೇಳೆ ಅನುಮತಿ ನೀಡದಿದ್ದರೆ ಕೋರ್ಟ್‌ನಲ್ಲಿ ಅರ್ಜಿ ಹಾಕಿ ಎಂದು ವಕೀಲರಿಗೆ ಹೇಳಿದೆ.

ನಿನ್ನೆ ಕೂಡ ಎಸ್‌ಐಟಿ ಅಧಿಕಾರಿಗಳು ಮುನಿರತ್ನ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಿದರು. ಈ ವೇಳೆ ಮುನಿರತ್ನ ಅವರ ಡಿಎನ್‌ಎ ಟೆಸ್ಟ್ ನಡೆಸಲು ಕೋರ್ಟ್‌ನಿಂದ ಅನುಮತಿಯೂ ಕೋರಿದರು. ಇದಕ್ಕೆ ಕೋರ್ಟ್ ಕೂಡ ಸಮ್ಮತಿಸಿದೆ. ಮುನಿರತ್ನ ಅವರನ್ನು ತಮ್ಮ ಪರ ವಕೀಲರ ಸಮ್ಮುಖದಲ್ಲಿ ರಕ್ತದ ಮಾದರಿ ತೆಗೆದುಕೊಳ್ಳಿ ಎಂದು ಮನವಿ ಮಾಡಿದರು. ಇದಕ್ಕೆ ಕೋರ್ಟ್ ಕೂಡ ಅನುಮತಿ ನೀಡಿದ್ದು, ವಕೀಲರ ಎದುರೇ ಮಾದರಿ ಸಂಗ್ರಹಿಸುವಂತೆ ಹೇಳಿದೆ.
ಮುನಿರತ್ನ ಮೇಲಿನ ಆರೋಪಗಳ ಸಂಬಂಧ ಸಂತ್ರಸ್ತೆಯನ್ನು ಕರೆದೊಯ್ದು ಸ್ಥಳ ಮಹಜರು ನಡೆಸಿರುವ ಎಸ್‌ಐಟಿ ಅಧಿಕಾರಿಗಳು ಮುನಿರತ್ನ ಅವರ ಡಿಎನ್‌ಎ ಟೆಸ್ಟ್ ಮಾಡಲು ಮುಂದಾಗಿದ್ದಾರೆ.
ಏನಿದು ಪ್ರಕರಣ?: ಬಿಜೆಪಿ ಶಾಸಕ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಕಗ್ಗಲೀಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪೊಲೀಸರು ಮುನಿರತ್ನ ಅವರನ್ನು ಬಂಧಿಸಿದ್ದರು. ಮುನಿರತ್ನ ಅವರ ಬಗ್ಗೆ ಹಲವು ಗಂಭೀರ ಆರೋಪಗಳನ್ನು ಮಾಡಿದ್ದ ಸಂತ್ರಸ್ತೆ, 'ಈ ಹಿಂದೆ ತೋಟಗಾರಿಕೆ ಇಲಾಖೆ ಸಚಿವರಾಗಿದ್ದ ಮುನಿರತ್ನ ಅವರಿಗೆ ನೀಡಲಾಗಿದ್ದ ಸರ್ಕಾರಿ ಕಾರಿನಲ್ಲಿ, ತನ್ನ ವಿಕಾಸೌಧದ ತಮ್ಮ ಕಚೇರಿಯಲ್ಲಿ ಹಾಗೂ ಗೋಡೌನ್‌ನಲ್ಲಿಯೂ ಮುನಿರತ್ನ ನನ್ನನ್ನು ಅತ್ಯಾಚಾರ ಮಾಡಿದ್ದರು' ಎಂದು ಆರೋಪಿಸಿದ್ದಾರೆ.

ಮಾಗಡಿ ಕ್ಷೇತ್ರದ ಮಾಜಿ ಶಾಸಕ ಹಾಗೂ ಪೊಲೀಸ್ ಅಧಿಕಾರಿಗಳ ಅಶ್ಲೀಲ ವಿಡಿಯೋಗಳನ್ನು, ಫೋಟೋಗಳನ್ನು ನನ್ನಿಂದ ಮುನಿರತ್ನ ಪಡೆದಿದ್ದರು. ಅದನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಕೂಡ ಮಾಡಿದ್ದರು ಎಂದು ಆರೋಪಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಜನರಿಗೆ ಮಾಸ್ಕ್ ಹಂಚುವ ವಿಚಾರವಾಗಿ ಮುನಿರತ್ನ ನನ್ನನ್ನು ಪರಿಚಯ ಮಾಡಿಕೊಂಡಿದ್ದರು. ಬಳಿಕ ಪ್ರತಿದಿನ ನನಗೆ ಫೋನ್ ಕಾಲ್, ವಿಡಿಯೋ ಕಾಲ್ ಮಾಡುತ್ತಿದ್ದರು. ನಾನು ಸ್ನಾನ ಮಾಡುವಾಗ ಒಮ್ಮೆ ವಿಡಿಯೋ ಕಾಲ್ ಮಾಡಿದ್ದರು. ನಾನು ಪಿಕ್ ಮಾಡಲಿಲ್ಲ. ಬಳಿಕ ಗೋಡೌನ್‌ಗೆ ಬರೋಕೆ ಹೇಳಿದ್ದರು' ಎಂದಿದ್ದಾರೆ.
ನಾನು ಗೋಡೌನ್‌ಗೆ ಹೋದಾಗ ನನ್ನನ್ನು ಬೆದರಿಸಿ, ಅತ್ಯಾಚಾರ ಮಾಡಿದರು. ಬಳಿಕ ಅದರ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು. ಕಾರ್ಪೊರೇಟರ್ ಪತಿ ವಾಸುದೇವ್ ಬೇರೆ ಹೆಣ್ಣಿನ ಜೊತೆ ಮಲಗಿರುವ ವಿಡಿಯೋ ಮಾಡಿಕೊಡುವಂತೆ ಡಿಮ್ಯಾಂಡ್ ಮಾಡಿದ್ದರು. ಬಳಿಕ ನಾನು ಮತ್ತು ಮತ್ತೊಬ್ಬ ಮಹಿಳೆಯಿಂದ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿಸಿಕೊಂಡಿದ್ದರು ಎಂದು ಹೇಳಿದ್ದಾರೆ.
ಆ ವಿಡಿಯೋ ಮಾಡಲು ನನ್ನೊಂದಿಗೆ ಎಚ್‌ಐವಿ ಸೋಂಕಿತೆಯನ್ನು ವಾಸುದೇವ್ ಜೊತೆ ಖಾಸಗಿ ಕ್ಷಣ ಕಳೆಯಲು ಕಳುಹಿಸಿದ್ದರು. ಈ ಕೃತ್ಯದ ಚಿತ್ರೀಕರಣಕ್ಕೆ ಮೊಬೈಲ್ ಕ್ಯಾಮೆರಾಗಳನ್ನು ನನ್ನಿಂದ ಫಿಕ್ಸ್ ಮಾಡಿಸಿದ್ದರು. ಅದನ್ನು ಶಾಸಕರ ಆಪ್ತರಿಗೆ ಕಳಿಸಲಾಗಿತ್ತು. ಬಳಿಕ ನನ್ನ ಮೇಲೂ ಅವರು ಅತ್ಯಾಚಾರ ಎಸಗಿದ್ದರು. ನನ್ನ ಮಗನನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.












Click it and Unblock the Notifications