ಪೆಗಾಸಸ್ ಕುರಿತು ಬಹಿರಂಗ ಚರ್ಚೆಗೆ ಕೇಂದ್ರ ಸರ್ಕಾರ ಸಿದ್ಧವಿದೆ: ಡಿಸಿಎಂ ಡಾ. ಅಶ್ವಥ್ ನಾರಾಯಣ!
ಬೆಂಗಳೂರು, ಜು. 21: "ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿರುದ್ಧ ಪ್ರಮುಖ ವ್ಯಕ್ತಿಗಳ ಮೊಬೈಲ್ ಫೋನ್ ಕದ್ದಾಲಿಕೆ ಮಾಡಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿರುವುದು ಸತ್ಯಕ್ಕೆ ದೂರವಾದ ಸಂಗತಿ" ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಪೆಗಾಸಸ್ ಸಾಫ್ಟವೇರ್ ಬಳಸಿಕೊಂಡು ಬೇಹುಗಾರಿಕೆ ಮಾಡಿರುವ ಆರೋಪ ಕುರಿತು ಪ್ರತಿಕ್ರಿಯೆ ಕೊಟ್ಟಿದ್ದಾರೆ.
" ಪೆಗಾಸಸ್ ಬಳಸಿಕೊಂಡು ಸ್ಮಾರ್ಟ್‌ಫೋನ್ ಹ್ಯಾಕ್ ಮಾಡಿರುವ ಆರೋಪ ಮಾಡಿರುವ ಕಾಂಗ್ರೆಸ್ ಪಕ್ಷ ಯಾವುದೇ ಸಾಕ್ಷ್ಯಗಳನ್ನು ಕೊಟ್ಟಿಲ್ಲ. ಸಾಕ್ಷಿಗಳಿಲ್ಲದೆ ಬರಿ ಈ ರೀತಿ ಆರೋಪ ಮಾಡಲಾಗುತ್ತಿದೆ. ದಾಖಲೆಗಳಿಲ್ಲದೆ ಆರೋಪ ಮಾಡುವುದು ಸರಿಯಲ್ಲ. ಇಂತಹ ಸಂಸ್ಕೃತಿ ನಮ್ಮದಲ್ಲ. ಪೆಗಾಸಸ್ ಸಾಫ್ಟವೇರ್ ಬಳಸಿ ಮಾಹಿತಿ ಸಂಗ್ರಹಿಸಿರುವ ಆರೋಪದ ಕುರಿತು ಬಹಿರಂಗ ಚರ್ಚೆಗೆ ಬಿಜೆಪಿ ಸಿದ್ಧವಿದೆ. ನಮ್ಮ ಪಕ್ಷ ಈ ರೀತಿಯ ಕೆಲಸ ಮಾಡುವುದಿಲ್ಲ. ಕಾಂಗ್ರೆಸ್ ಆ ಕೆಲಸ ಮಾಡುತ್ತದೆ" ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ ಸ್ಪಷ್ಟಪಡಿಸಿದ್ದಾರೆ.
ಪೆಗಾಸಸ್ ಸಾಫ್ಟವೇರ್‌ನ್ನು ಕೇಂದ್ರ ಸರ್ಕಾರ ಖರೀದಿಸಿದೆಯೋ ಇಲ್ಲವೋ ಎಂಬುದನ್ನು ತನಿಖೆ ಮಾಡಲು ಜಂಟಿ ಸಂಸದೀಯ ಸಮಿತಿಯನ್ನು ರಚಿಸ ಬೇಕು ಎಂದು ಕಾಂಗ್ರೆಸ್ ಪಕ್ಷ ಒತ್ತಾಯಿಸಿದೆ. ಪೆಗಾಸಿಸ್ ಬೇಹುಗಾರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಉಭಯ ಸದನಗಳಲ್ಲಿ ಕೋಲಾಹಲ ಉಂಟಾಗಿದೆ. ಇದೇ ಸಂದರ್ಭದಲ್ಲಿ ರಾಜ್ಯ ಮಾಹಿತಿ ತಂತ್ರಜ್ಞಾನ ಸಚಿವರೂ ಆಗಿರುವ ಡಾ. ಅಶ್ವಥ್ ನಾರಾಯಣ ಅವರು ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಅಪಪ್ರಚಾರ ಖಂಡಿಸುತ್ತೇವೆ
ಹಿಂದೆ ಯುಪಿಎ ಸರ್ಕಾರದಲ್ಲಿ ಫೋನ್ ಕದ್ದಾಲಿಕೆಗೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಿರುವುದಾಗಿ ಆ ಸರ್ಕಾರದಲ್ಲಿ ಮಂತ್ರಿಗಳಾದವರೇ ಹೇಳಿದ್ದರು. ಈಗ ಕೆಲವರ ಮೊಬೈಬ್ ಫೋನ್‌ಗಳ ಮಾಹಿತಿ ಸೋರಿಕೆ ಆಗಿದ್ದರೆ, ಅದಕ್ಕೆ ಕೇಂದ್ರ ಸರ್ಕಾರ ಹೇಗೆ ಹೊಣೆಯಾಗುತ್ತದೆ? ವಾಟ್ಸ್‌ಆ್ಯಪ್ ದೂರವಾಣಿ ಕದ್ದಾಲಿಸಲು ಸಾಧ್ಯವಿಲ್ಲ ಎಂದು ಕಪಿಲ್ ಸಿಬಲ್ ಅವರೇ ಸುಪ್ರೀಂ ಕೋರ್ಟ್‌ಗೆ ಹೇಳಿದ್ದಾರೆ. ಪೆಗಾಸಸ್ ಸಾಫ್ಟವೇರ್ ಬಳಸಿ ಹೊರದೇಶಗಳಲ್ಲಿ ಈ ರೀತಿ ಹ್ಯಾಕ್ ಮಾಡಲಾಗುತ್ತದೆ. ಹೊರ ದೇಶಗಳ ಸರ್ಕಾರಗಳು ಹಾಗೆ ಮಾಡಿರಲೂ ಬಹುದು. ಆದರೆ ನಮ್ಮ ಕೇಂದ್ರ ಸರ್ಕಾರದ ವಿರುದ್ಧ ದೇಶದ್ರೋಹಿಗಳು ಈ ಸಾಫ್ಟವೇರ್ ಬಳಸಿರುವ ಅಪಪ್ರಚಾರ ಮಾಡುವುದು ಸರಿಯಲ್ಲ. ಹಾಗೆ ಮಾಡುವುದನ್ನು ನಾವು ಖಂಡಿಸುತ್ತೇವೆ" ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ ಅವರು ಹೇಳಿದ್ದಾರೆ.

ಪೆಗಾಸಸ್ ನಿಂದ ಆಂತರಿಕ ವಿಚಾರಕ್ಕೆ ಧಕ್ಕೆ
"ಪೆಗಾಸಸ್ ಸಾಫ್ಟವೇರ್ ಮತ್ತು ಅಮ್ನೆಸ್ಟಿ ಸಂಸ್ಥೆಗಳು ನಮ್ಮ ದೇಶದ ಆಂತರಿಕ ವಿಚಾರಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿವೆ. ಕಾಂಗ್ರೆಸ್ ಹಾಗೂ ಎಡ ಪಕ್ಷಗಳು ಉಭಯ ಸದನಗಳು ನಡೆಯದಂತೆ ನಡೆದು ಕೊಂಡಿರುವುದು ಖಂಡನೀಯ" ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ ಅವರು ಆರೋಪಿಸಿದರು.
ಜೊತೆಗೆ, "ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರತಿ ತಿಂಗಳು 9000 ದೂರವಾಣಿ ಹಾಗೂ 500 ಇಮೇಲ್ ಕದ್ದಾಲಿಕೆ ನಡೆಸಿರುವ ದಾಖಲೆಯೇ ಇದೆ.
ಆದರೆ ನಮ್ಮ ಕೇಂದ್ರ ಸರ್ಕಾರ ಆ ರೀತಿ ಕದ್ದಾಲಿಕೆ ಮಾಡಿಲ್ಲ. ಹೀಗಾಗಿ ದಾಖಲೆಯೂ ಇಲ್ಲ. ಸಂಸತ್ತಿನ ಎರಡೂ ಸದನಗಳಲ್ಲಿ ಮಹತ್ವದ ವಿಧೇಯಕಗಳು ಚರ್ಚೆಗೆ ಬರುತ್ತಿರುವ ಸಂದರ್ಭದಲ್ಲಿ ಈ ರೀತಿಯ ಬೆಳವಣಿಗೆ ನಡೆದಿರುವುದು ಸರಿಯಲ್ಲ. ಕೋವಿಡ್ ಸಂದರ್ಭವನ್ನು ಕೇಂದ್ರ ಸರ್ಕಾರ ಯಶಸ್ವಿಯಾಗಿ ನಿಭಾಯಿಸಿರುವುದನ್ನು ಕಾಂಗ್ರೆಸ್ ಸಹಿಸಿಕೊಳ್ಳುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಹುಯಿಲೆಬ್ಬಿಸಿದೆ" ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ ಅವರು ಕಾಂಗ್ರೆಸ್ ಆರೋಪಕ್ಕೆ ಉತ್ತರ ಕೊಟ್ಟಿದ್ದಾರೆ.

ದೇಶದ ಪ್ರಮುಖರ ಮೊಬೈಲ್ ಹ್ಯಾಕ್!
ಪೆಗಾಸಸ್ ಸಾಫ್ಟವೇರ್ ಬಳಸಿಕೊಂಡು 40ಕ್ಕೂ ಹೆಚ್ಚು ಪತ್ರಕರ್ತರ, ರಾಜಕಾರಣಿಗಳು, ನ್ಯಾಯಾಧೀಶರ ಮೊಬೈಲ್ ಫೋನ್‌ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು 'ದಿ ವೈರ್' ವರದಿ ಮಾಡಿತ್ತು. ಅದಾದ ಬಳಿಕ ಭಾರತದಲ್ಲಿ ಈ ಬಗ್ಗೆ ಚರ್ಚೆ ತೀವ್ರವಾಗಿದೆ. ಅಪರಿಚಿತ ಕಂಪನಿಯೊಂದು ಪೆಗಾಸಸ್ ಸಾಫ್ಟವೇರ್ ಬಳಿಸಿಕೊಂಡು ಮೊಬೈಲ್ ಫೋನ್‌ಗಳನ್ನು ಹ್ಯಾಕ್ ಮಾಡಿದೆ ಎಂಬ ಆರೋಪ ಎದುರಾಗಿದೆ.
ಇಸ್ರೇಲ್ ದೇಶದ ಸೈಬರ್ ಭದ್ರತಾ ಸಂಸ್ಥೆ 'ಪೆಗಾಸಸ್ ಸಾಫ್ಟವೇರ್' ಅಭಿವೃದ್ಧಿ ಪಡಿಸಿ ಮಾರಾಟ ಮಾಡುತ್ತದೆ. ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿರುವ ಸರ್ಕಾರಗಳಿಗೆ ಮಾತ್ರ ಈ ಸಾಫ್ಟವೇರ್ ಬಳಕೆ ಮಾಡಲು ಅವಕಾಶವಿದೆ. ಈ ಸಾಫ್ಟವೇರ್ ಅಭಿವೃದ್ಧಿಪಡಿಸಿರುವ ಇಸ್ರೇಲ್ ದೇಶದ ಎನ್‌ಎಸ್‌ಒ ಗ್ರೂಪ್ ಹೇಳುವ ಪ್ರಕಾರ ಸರ್ಕಾರ ಹಾಗೂ ಸರ್ಕಾರದ ಆಂತರಿಕ ಭದ್ರತಾ ಸಂಸ್ಥೆಗಳಿಗೆ ಮಾತ್ರ ಪೆಗಾಸಸ್ ನ್ನು ಮಾರಾಟ ಮಾಡಲಾಗುತ್ತದೆ. ಹೀಗಾಗಿ ಈ ಸಾಫ್ಟವೇರ್ ಬಳಸಿರುವ ಸರ್ಕಾರ ಅಥವಾ ಸರ್ಕಾರದ ಭದ್ರತಾ ಸಂಸ್ಥೆ ಯಾವುದು ಎಂಬ ಪ್ರಶ್ನೆಯನ್ನು ವಿರೋಧ ಪಕ್ಷಗಳು ಕೇಳುತ್ತಿವೆ.

ಸರ್ಕಾರದ ಪೆಗಾಸಸ್ ಖರೀದಿಸಿದೆ!
ಇದೀಗ ಭಾರತದಲ್ಲಿ ಪೆಗಾಸಸ್ ಮೂಲಕ ಸಂಗ್ರಹಿಸಿ ಸೋರಿಕೆ ಮಾಡಲಾಗಿರುವ ಮಾಹಿತಿಯಲ್ಲಿ ಹೆಚ್ಚಿನವರು ಪ್ರಧಾನಿ ಮೋದಿ ಅವರನ್ನು ವಿರೋಧಿಸುವವರು ಎಂಬ ಮಾಹಿತಿ ಬಂದಿದೆ. ವಿರೋಧ ಪಕ್ಷಗಳ ನಾಯಕರು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವರದಿಗಳನ್ನು ಬರೆಯುತ್ತಿದ್ದ ಪತ್ರಕರ್ತರ ಸ್ಮಾರ್ಟ್ ಫೋನ್‌ಗಳನ್ನು ಹ್ಯಾಕ್ ಮಾಡಿ ಈ ಮಾಹಿತಿ ಸಂಗ್ರಹಿಸಲಾಗಿದೆ. ಹೀಗಾಗಿ ಕೇಂದ್ರ ಸರ್ಕಾರವೇ ಪೆಗಾಸಸ್ ಸಾಫ್ಟವೇರ್ ಬಳಸಿ ಮಾಹಿತಿ ಸಂಗ್ರಹಿಸಿದೆ ಎಂಬ ಆರೋಪವನ್ನು ವಿರೋಧ ಪಕ್ಷಗಳು ಮಾಡುತ್ತಿವೆ.
ಪ್ರಧಾನಿ ಮೋದಿ ಸರ್ಕಾರವೇ ಪೆಗಾಸಸ್ ಸಾಫ್ಟವೇರ್ ಖರೀದಿಸಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಜೊತೆಗೆ ಜಂಟಿ ಸಂಸದೀಯ ತನಿಖೆಗೂ ಒತ್ತಾಯಿಸಿದೆ. ಕಾಂಗ್ರೆಸ್ ಪಕ್ಷದ ಈ ಆರೋಪವನ್ನು ಆಡಳಿತ ಪಕ್ಷ ಬಿಜೆಪಿಯ ನಾಯಕರು ತಳ್ಳಿ ಹಾಕಿದ್ದಾರೆ. ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ವಿರೋಧ ಪಕ್ಷಗಳ ಆರೋಪ ನಿರಾಕರಿಸಿದ್ದಾರೆ. ಅವರ ಹೇಳಿಕೆಯನ್ನೇ ರಾಜ್ಯ ಐಟಿ-ಬಿಟಿ ಸಚಿವರೂ ಆಗಿರುವ ಡಿಸಿಎಂ ಡಾ. ಅಶ್ವಥ್ ನಾರಾಯಣ ಅವರು ಸಮರ್ಥಿಸಿಕೊಂಡಿದ್ದಾರೆ. ಪೆಗಾಸಸ್ ಖರೀದಿ ಆರೋಪದಲ್ಲಿ ಹುರುಳಿಲ್ಲ ಎಂದಿದ್ದಾರೆ.












Click it and Unblock the Notifications