ಆಯುಧಗಳನ್ನು ನೀಡುವ ಮೂಲಕ ಯುವಕರ ಭವಿಷ್ಯ ಹಾಳುಗೆಡವಿದ ಬಿಜೆಪಿ: ಡಿಕೆ ಶಿವಕುಮಾರ್ ಗಂಭೀರ ಆರೋಪ
ಕನಕಪುರ, ಏಪ್ರಿಲ್ 03: ಕನಕಪುರ ತಾಲ್ಲೂಕಿನ ಸಾತನೂರು ಬಳಿ ವಾಹನದಲ್ಲಿ ಜಾನುವಾರು ಸಾಗಿಸುತ್ತಿದ್ದ ಮುಸ್ಲಿಂ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆ ನಡೆದಿದೆ. ಈ ಘಟನೆ ಹಿನ್ನೆಲೆಯಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, 'ದೇಶದ ಭವಿಷ್ಯ ಉಜ್ವಲಗೊಳಿಸಬೇಕಾದ ಯುವಕರಿಗೆ ಆಯುಧಗಳನ್ನು ನೀಡಿ ಅವರ ಭವಿಷ್ಯವನ್ನು ಬಿಜೆಪಿ ಹಾಳುಗೆಡವಿದೆ. ಶಿಕ್ಷಿತ ಸಮಾಜದಲ್ಲಿ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಇಂಥ ನೈತಿಕ ಪೊಲೀಸ್ ಗಿರಿಯನ್ನು ಪ್ರೋತ್ಸಾಹಿಸುವುದು ಮತಿಗೇಡಿತನ. ಈ ಘಟನೆಯ ಹೊಣೆ ಹೊತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ರಾಜೀನಾಮೆ ನೀಡಬೇಕು' ಎಂದು ಒತ್ತಾಯಿಸಿದ್ದಾರೆ.

ಸಿದ್ದರಾಮಯ್ಯ ಸರಣಿ ಟ್ವೀಟ್
'ಧರ್ಮ ರಕ್ಷಣೆಯ ಹೆಸರಲ್ಲಿ ಬಿಜೆಪಿ ರಾಜ್ಯದಲ್ಲಿ ಬೆಳೆಸಿದ ಗೂಂಡಾ ಸಂಸ್ಕೃತಿಗೆ ಸಾತನೂರು ಬಳಿ ನಡೆದ ಯುವಕನ ಹತ್ಯೆ ಸಾಕ್ಷಿ. ಈ ಹತ್ಯೆಯ ಹೊಣೆಯನ್ನು ಆರಗ ಜ್ಞಾನೇಂದ್ರ ಅವರಂತಹ ಅಸಮರ್ಥ ಗೃಹ ಸಚಿವರೇ ಹೊರಬೇಕು' ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
'ಕರ್ನಾಟಕ ಇಂತಹ ಅಸಮರ್ಥ, ಅದಕ್ಷ ಮತ್ತು ಬೇಜವಾಬ್ದಾರಿ ಗೃಹಸಚಿವರನ್ನು ಎಂದೂ ನೋಡಿರಲಿಲ್ಲ. ತನ್ನ ಇಲಾಖೆಯ ಮೇಲೆ ನಿಯಂತ್ರಣ ಇಲ್ಲದ ಈ ಸಚಿವರಿಗೆ ರಾಜ್ಯದ ಶಾಂತಿ ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸಲು ಸಾಧ್ಯವೇ? ಮೊದಲು ಆರಗ ಜ್ಞಾನೇಂದ್ರ ಅವರನ್ನು ಸಂಪುಟದಿಂದ ಕಿತ್ತು ಹಾಕಿ' ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ.

'ಗೋರಕ್ಷಣೆಯ ಹೆಸರಲ್ಲಿ ನಡೆದ ಹತ್ಯೆ ಕೇವಲ ಹುಚ್ಚಾಟ ಆಗಿರಲಾರದು. ಇದು ಚುನಾವಣಾ ದಿನಗಳಲ್ಲಿ ಕೋಮುದ್ವೇಷವನ್ನು ಬಡಿದೆಬ್ಬಿಸುವ ಯೋಜಿತ ಸಂಚಿನ ಭಾಗವಾಗಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣದ ಕೂಲಂಕುಷ ತನಿಖೆ ನಡೆಸಬೇಕು' ಎಂದೂ ಅವರು ತಿಳಿಸಿದ್ದಾರೆ.
'ಚುನಾವಣಾ ಪ್ರಕ್ರಿಯೆ ಚಾಲನೆಯಲ್ಲಿರುವಾಗಲೇ ನಗರದಲ್ಲಿ ನಿತ್ಯ ಅತ್ಯಾಚಾರ, ಕೊಲೆಗಳು ನಿರ್ಭೀತಿಯಿಂದ ನಡೆಯುತ್ತಿರುವುದು ಕಳವಳಕಾರಿ ಸಂಗತಿ. ಈ ಸರ್ಕಾರ ಅಸ್ತಿತ್ವದಲ್ಲಿರುವಾಗ ಚುನಾವಣೆ ನ್ಯಾಯಯುತವಾಗಿ ನಡೆಯುವುದು ಅನುಮಾನ. ಚುನಾವಣಾ ಆಯೋಗ ಈ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಬೇಕು' ಎಂದೂ ಹೇಳಿದ್ದಾರೆ.
ಕಾಂಗ್ರೆಸ್ ಟ್ವೀಟ್
'ಜಾನುವಾರು ಸಾಗಣೆ ವಾಹನದ ಚಾಲಕನನ್ನು ಕೊಲೆಗೈದ ಪುಡಾರಿ ಬಿಜೆಪಿ ನಾಯಕರೊಂದಿಗೆ ಖಾಸಾ ಸಂಬಂಧ ಹೊಂದಿದ್ದಾನೆ. ಚುನಾವಣೆಯ ಹಿನ್ನೆಲೆಯಲ್ಲಿ ಗಲಭೆ ಎಬ್ಬಿಸಲು ಈ ಕೊಲೆಗೆ ಬಿಜೆಪಿ ನಾಯಕರೇ ಸುಪಾರಿ ನೀಡಿದ್ದರೇ ಇದು ಬಿಜೆಪಿ ಪ್ರಾಯೋಜಿತ ಕೊಲೆಯೇ? ಪೋಲಿಸರು ಆತನೊಂದಿಗೆ ನಿಕಟ ಸಂಬಂಧವಿರುವ ಬಿಜೆಪಿ ನಾಯಕರನ್ನೂ ವಿಚಾರಣೆಗೆ ಒಳಪಡಿಸಬೇಕು' ಎಂದು ಕಾಂಗ್ರೆಸ್ ಒತ್ತಾಯಿಸಿದೆ.

'40 ಪರ್ಸೆಂಟ್ ಕಮಿಷನ್ ಪಡೆದು ಆರಾಮಾಗಿರುವ ಆರಗ ಜ್ಞಾನೇಂದ್ರ ಅವರೇ, ಕಾನೂನು ಪಾಲನೆಯ ಹೊಣೆಯನ್ನು ಪೊಲೀಸರಿಗೆ ಕೊಟ್ಟಿದ್ದೀರೋ, ಕೊಲೆಗಡುಕರಿಗೆ ಕೊಟ್ಟಿದ್ದೀರೋ? ಗೋರಕ್ಷಣೆಯ ಹೆಸರಲ್ಲಿ ನಡೆದ ಹತ್ಯೆಗೆ ನಿಮ್ಮ ವಿಫಲ ಸರ್ಕಾರ ಹೊಣೆಯಲ್ಲವೇ? ಬೀದಿ ಪುಂಡರನ್ನು ಆದರ್ಶ ವ್ಯಕ್ತಿಗಳು ಎಂಬಂತೆ ಮೆರೆಸುವ ಬಿಜೆಪಿ ಈ ಕೊಲೆಯ ಹೊಣೆ ಹೊರಲಿ' ಎಂದು ಕೆಪಿಸಿಸಿ ಟ್ವೀಟ್ ಮಾಡಿದೆ.
'ಬಿಜೆಪಿ ಸರ್ಕಾರ ಪುಂಡರನ್ನು, ರೌಡಿಗಳನ್ನು ಪೋಷಿಸಿದ್ದರ ಪರಿಣಾಮ ಈಗ ಕೊಲೆ ಮಾಡುವ ಹಂತಕ್ಕೆ ತಲುಪಿದ್ದಾರೆ. ಕನಕಪುರದಲ್ಲಿ ಗೋಸಾಗಣೆಯ ವಾಹನದ ಮೇಲೆ ದಾಳಿ ನಡೆಸಿ ಓರ್ವನ ಹತ್ಯೆ ಮಾಡಿದ ಕೊಲೆಗಡುಕರಿಗೆ ಬಿಜೆಪಿಯ ಕೃಪಾಪೋಷಣೆ ಇದೆ. ಬಿಜೆಪಿ ಹೇಳುತ್ತಿದ್ದ ಯುಪಿ ಮಾಡೆಲ್ ಅಕ್ಷರಶಃ ಕರ್ನಾಟಕದಲ್ಲಿ ಜರುಗುತ್ತಿದೆ' ಎಂದೂ ಕೆಪಿಸಿಸಿ ಹೇಳಿದೆ.












Click it and Unblock the Notifications