ದೇಶ ಕಾಯಲು ಹೊರಟ ಮಲೆನಾಡಿನ ಹೆಣ್ಣುಮಗಳು: UPSC NDA ಪರೀಕ್ಷೆಯಲ್ಲಿ ದೇಶಕ್ಕೇ ಫಸ್ಟ್ ರ‍್ಯಾಂಕ್ ಪಡೆದ ಭದ್ರಾವತಿಯ ಶ್ರೇಯಾ ಗೌಡ

ಶಿವಮೊಗ್ಗ: ಛಲವೊಂದಿದ್ದರೆ ಸಾಕು, ಸಾಧನೆಗೆ ಯಾವುದೂ ಅಡ್ಡಿಯಾಗದು ಎಂಬುದನ್ನ ಮಲೆನಾಡಿನ ಹೆಣ್ಣುಮಗಳೊಬ್ಬಳು ಸಾಬೀತು ಮಾಡಿದ್ದಾಳೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ತಿಮ್ಮಾಪುರ ಗ್ರಾಮದ ನಿವಾಸಿಯಾಗಿರುವ ಶ್ರೇಯಾ ಎನ್. ಗೌಡ ಅವರು ಯುಪಿಎಸ್‌ಸಿ ನಡೆಸುವ ಪ್ರತಿಷ್ಠಿತ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (NDA) ಪರೀಕ್ಷೆಯಲ್ಲಿ ಅಸಾಧಾರಣ ಸಾಧನೆ ಮಾಡಿದ್ದಾರೆ.

ಹೌದು, ಮಹಿಳಾ ವಿಭಾಗದಲ್ಲಿ ದೇಶಕ್ಕೇ ಪ್ರಥಮ ರ‍್ಯಾಂಕ್ ಗಳಿಸುವ ಮೂಲಕ ಕರ್ನಾಟಕದ ಕೀರ್ತಿ ಪತಾಕೆಯನ್ನ ಹಾರಿಸಿದ್ದಾರೆ. ಕಠಿಣ ಪರಿಶ್ರಮ ಮತ್ತು ದೇಶ ಸೇವೆ ಮಾಡುವ ಆಸಕ್ತಿಯಿಂದಾಗಿ ತಮ್ಮ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಎನ್‌ಡಿಎ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿರುವುದು ಇಡೀ ರಾಜ್ಯಕ್ಕೆ ಹೆಮ್ಮೆಯ ವಿಚಾರವಾಗಿದೆ.

Bhadravathi s Shreya N Gowda Secures First Rank in UPSC NDA Exam CM DK Shivakumar Congratulates

ಬಾಲ್ಯದ ಕನಸು ಮತ್ತು ಸೇನೆ ಸೇರುವ ಗುರಿ

ಇತ್ತೀಚೆಗೆ ಹೆಚ್ಚಿನ ಮಕ್ಕಳು ಡಾಕ್ಟರ್ ಅಥವಾ ಇಂಜಿನಿಯರ್ ಆಗುವ ಕನಸು ಕಾಣುತ್ತಿದ್ದರೆ, ಶ್ರೇಯಾ ಅವರಿಗೆ ಬಾಲ್ಯದಿಂದಲೂ ಸಶಸ್ತ್ರ ಪಡೆಗಳನ್ನ ಸೇರಿ ದೇಶ ಸೇವೆ ಮಾಡಬೇಕೆಂಬ ಬಹುದೊಡ್ಡ ಕನಸಿತ್ತು. ಅವರು 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ ಮಹಿಳೆಯರಿಗೂ ಪ್ರವೇಶಾವಕಾಶ ಕಲ್ಪಿಸುವ ನಿರ್ಧಾರ ಕೈಗೊಂಡಿತು. ಈ ನಿರ್ಧಾರವು ಶ್ರೇಯಾ ಅವರ ಸೇನೆ ಸೇರುವ ಕನಸಿಗೆ ಬಲ ತುಂಬಿತು.

ಅಂದಿನಿಂದಲೇ ಸೇನೆಗೆ ಸೇರುವ ಗುರಿ ಇಟ್ಟುಕೊಂಡು ಎನ್‌ಡಿಎ ಪರೀಕ್ಷೆಗೆ ತಯಾರಿ ಆರಂಭಿಸಿದ್ದರು. ಹೆಚ್ಚಿನ ಸೌಲಭ್ಯಗಳಿಲ್ಲದಿದ್ದರೂ, ತಮ್ಮ ಸ್ವಂತ ಪ್ರಯತ್ನ ಮತ್ತು ಓದಿನ ಕಡೆಗಿನ ಏಕಾಗ್ರತೆಯಿಂದಾಗಿ ಇಂದು ರಾಷ್ಟ್ರ ಮಟ್ಟದಲ್ಲಿ ಮೊದಲ ರ‍್ಯಾಂಕ್ ಪಡೆದು ಎಲ್ಲರ ಗಮನ ಸೆಳೆದಿದ್ದಾರೆ.

ಭದ್ರಾವತಿಯಿಂದ ಸುರತ್ಕಲ್‌ವರೆಗಿನ ಶೈಕ್ಷಣಿಕ ಪಯಣ

ಶ್ರೇಯಾ ಅವರ ಶೈಕ್ಷಣಿಕ ಪಯಣ ಭದ್ರಾವತಿಯಿಂದ ಶುರುವಾಯಿತು. ಒಂದನೇ ತರಗತಿಯಿಂದ 10ನೇ ತರಗತಿಯವರೆಗಿನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನ ಭದ್ರಾವತಿಯ ಬಿಜಿಎಸ್ ಕರೇಹಳ್ಳಿಯಲ್ಲಿ ಪೂರೈಸಿದರು. ಬಳಿಕ ಉನ್ನತ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ತೆರಳಿ, ರಾಜಾಜಿನಗರದ ಬೇಸ್ ಪಿಯು ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿದರು.

ಸದ್ಯ ಅವರು ಮಂಗಳೂರಿನ ಸುರತ್ಕಲ್‌ನಲ್ಲಿರುವ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ಶ್ರೇಯಾ ಅವರ ಸಾಧನೆಯ ಹಿಂದೆ ಪೋಷಕರ ಅಪಾರ ಬೆಂಬಲವಿದೆ. ತಂದೆ ನಾಗೇಂದ್ರ ಜೆ. ಅವರು ವಿಐಎಸ್‌ಎಲ್ (VISL) ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದರೆ, ತಾಯಿ ಡಾ. ಆಶಾ ಬಿ.ಎಂ. ಅವರು ಅತಿಥಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಗಳ ಕನಸುಗಳಿಗೆ ಸದಾ ಬೆಂಬಲವಾಗಿ ನಿಂತ ಈ ದಂಪತಿಯ ಆಶೀರ್ವಾದವೇ ಇಂದು ಶ್ರೇಯಾ ಅವರನ್ನ ಉನ್ನತ ಶಿಖರಕ್ಕೇರಿಸಿದೆ.

ಶ್ರೇಯಾ ಸಾಧನೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೆಚ್ಚುಗೆ

ತಮ್ಮ ಮೊದಲ ಪ್ರಯತ್ನದಲ್ಲೇ ಇಡೀ ದೇಶದ ಗಮನ ಸೆಳೆದ ಶ್ರೇಯಾ ಎನ್. ಗೌಡ ಅವರ ಸಾಧನೆಗೆ ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಶುಭಾಶಯ ಕೋರಿರುವ ಅವರು, "ಯುಪಿಎಸ್‌ಸಿ ಎನ್‌ಡಿಎ ಪರೀಕ್ಷೆಯ ಮಹಿಳಾ ವಿಭಾಗದಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ ಭದ್ರಾವತಿಯ ಶ್ರೇಯಾ ಎನ್. ಗೌಡ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ಬಾಲ್ಯದಿಂದಲೂ ಸಶಸ್ತ್ರ ಪಡೆ ಸೇರಿ ದೇಶ ಸೇವೆ ಮಾಡುವ ಕನಸು ಕಂಡಿದ್ದ ಅವರ ಕಠಿಣ ಪರಿಶ್ರಮ ಮತ್ತು ದೃಢನಿರ್ಧಾರ ಇಂದು ಈ ದೊಡ್ಡ ಯಶಸ್ಸನ್ನ ತಂದುಕೊಟ್ಟಿರುವುದು ಅತ್ಯಂತ ಸಂತಸದ ವಿಚಾರ. ಅವರು ತಮ್ಮ ಕುಟುಂಬ ಹಾಗೂ ಇಡೀ ಕರ್ನಾಟಕವೇ ಹೆಮ್ಮೆಪಡುವಂತಹ ಸಾಧನೆ ಮಾಡಿದ್ದಾರೆ. ದೇಶ ಕಾಯುವ ಅವರ ಕನಸು ನನಸಾಗುವತ್ತ ಸಾಗುತ್ತಿರುವ ಈ ಹೊತ್ತಿನಲ್ಲಿ, ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತೇನೆ" ಎಂದು ಶುಭಕೋರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+