HSRP ನಂಬರ್ ಪ್ಲೇಟ್ ಬುಕ್ ಮಾಡುವ ಮುನ್ನ ಎಚ್ಚರ..! ವಾಹನ ಸವಾರರೇ ಗಮನಿಸಿ!
ಬೆಂಗಳೂರು, ಫೆಬ್ರವರಿ 13: ಸಾರಿಗೆ ಇಲಾಖೆ ಆದೇಶದಂತೆ ವಾಹನಗಳಿಗೆ ಹಳೆ ಫಲಕ ಬದಲಿಸಿ ಎಚ್‌ಎಸ್‌ಆರ್‌ಪಿ ಅಳವಡಿಸಲು 2024ರ ಫೆಬ್ರವರಿ 17ರವರೆಗೆ ಗಡುವು ನೀಡಲಾಗಿತ್ತು. ಆದರೆ ಇನ್ನೂ ಒಂದು ಕೋಟಿಗೂ ಅಧಿಕ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸಬೇಕಿರುವ ಕಾರಣ ಈ ಗಡುವು ವಿಸ್ತರಣೆಯಾಗುವ ಸಾಧ್ಯತೆ ಹೆಚ್ಚಿದೆ ಎನ್ನುವ ಚರ್ಚೆಗಳು ನಡೆಯುತ್ತಿದೆ. ಈ ಬಗ್ಗೆ ಸಾರಿಗೆ ಇಲಾಖೆ ಅಧೀಕೃತವಾಗಿ ಮಾಹಿತಿ ನೀಡಬೇಕಾಗಿದೆ.
ವಾಹನಗಳಿಗೆ ಹೆಚ್ಚಿನ ಭದ್ರತೆಯನ್ನು ನೀಡುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 2019ರ ಏಪ್ರಿಲ್ 1ಕ್ಕೂ ಮುನ್ನ ನೋಂದಣಿಯಾದ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಕಡ್ಡಾಯ ಮಾಡಿದ್ದು, ನಂಬರ್ ಪ್ಲೇಟ್ ಬದಲಿಸಲು ವಾಹನ ಸವಾರರಿಗೆ ಗಡುವು ಕೂಡ ನೀಡಿದೆ. ಹೀಗಾಗಿ ವಾಹನ ಸವಾರರು ನಾ ಮುಂದು ತಾ ಮುಂದು ಎಂದು ನಂಬರ್ ಪ್ಲೇಟ್ ಬದಲಿಸುತ್ತಿದ್ದು, ಈ ಸಮಯವನ್ನೇ ಬಳಿಸಿಕೊಂಡಿರುವ ಕೆಲವು ಕಿಡಿಗೇಡಿಗಳು ಇದರಲ್ಲೂ ಮೋಸ ಮಾಡುತ್ತಿದ್ದಾರೆ.

ಕೆಲವು ಕಿಡಿಗೇಡಿಗಳು ಎಚ್‌ಎಸ್‌ಆರ್‌ಪಿ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ಗಳನ್ನು ಕ್ರಿಯೇಟ್ ಮಾಡಿ ಜನರಿಗೆ ವಂಚನೆ ಮಾಡುತ್ತಿದ್ದಾರೆ. ಇದೇ ರೀತಿಯ ಮೋಸದ ವಂಚನೆಗಳು ಈಗಾಗಲೇ ರಾಜ್ಯ ಸೇರಿದಂತೆ ದೇಶದ ನಾನಾ ಕಡೆ ನಡೆದಿದ್ದು, ಜನರು ಸಾಕಷ್ಟು ಹಣ ಕಳೆದುಕೊಂಡಿದ್ದಾರೆ. ಈ ಸೈಟ್‌ಗಳು ನಿಜವಾದ ಸೈಟ್‌ನಂತೆ ಕಾಣಿಸಿ ಮಾಹಿತಿಯನ್ನು ಪಡೆಯುತ್ತವೆ ಬಳಿಕ ಹಣ ಪಡೆದು ವಂಚಿಸುತ್ತಿವೆ ಎಂದು ವರದಿಯಾಗಿದೆ. ಹೀಗಾಗಿ ಸಾರ್ವಜನಿಕರು ಸರ್ಕಾರದ ಅಧಿಕೃತ ಸೈಟ್‌ಗೆ ಭೇಟಿ ನೀಡಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗೆ ಪಡೆಯಬೇಕಾಗಿದೆ.
ವಾಹನ ಮಾಲೀಕರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ವಿವರಗಳನ್ನು ದಾಖಲಿಸಿ ನಂಬರ್ ಪ್ಲೇಟ್ ಪಡೆಯಬಹುದಾಗಿದೆ. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳನ್ನು ಅಳವಡಿಸಲು ದ್ವಿಚಕ್ರ ವಾಹನಗಳಿಗೆ ನಂಬರ್ ಪ್ಲೇಟ್ ದರ 400 ರೂನಿಂದ 600 ರೂ ವರೆಗೆ ಇದೆ. ಅದೇ ರೀತಿ ನಾಲ್ಕು ಚಕ್ರದ ವಾಹನಗಳಿಗೆ ಜೋಡಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಶುಲ್ಕವು 650 ರೂಪಾಯಿನಿಂದ 800 ರೂಪಾಯಿ ವರೆಗೂ ಆಗಿರುತ್ತದೆ ಹೀಗಾಗಿ ವಾಹನ ಸವಾರರು ಕಿಡಿಗೇಡಿಗಳಿಂದ ಮೋಸ ಹೋಗದೆ ಎಚ್ಚರ ವಹಿಸಬೇಕಾಗಿದೆ.
HSRP ನಂಬರ್ ಪ್ಲೇಟ್ ಅಳವಡಿಕೆಯ ಅನುಕೂಲತೆಗಳೇನು?
*ವಾಹನದ ಮಾಲೀಕರು ಸರಿಯಾದ ವಿವರಗಳನ್ನು ಪ್ರಾಧಿಕಾರಕ್ಕೆ ಒದಗಿಸಿದರೆ ಮಾತ್ರ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಒದಗಿಸಲಾಗುತ್ತದೆ. ಇದರಿಂದ ವಾಹನ ಮಾಲೀಕರ ನಿಕರವಾದ ಮಾಹಿತಿ ದಾಖಲಾಗುತ್ತದೆ.
*ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇದ್ದ ವಾಹನವನ್ನು ಕದ್ದ ಸಂದರ್ಭದಲ್ಲಿ ಬೇಗ ವಾಹನ ಪತ್ತೆಹಚ್ಚಲು ಉಪಯುಕ್ತವಾಗಲಿದೆ.
*ವಾಹನ ನೋಂದಣಿ ಡೇಟಾದ ಲಭ್ಯತೆಯು ಜಾರಿ ಏಜೆನ್ಸಿಗಳಿಗೆ ಸುಲಭವಾಗುತ್ತದೆ.
* ಈ ನಂಬರ್ ಪ್ಲೇಟ್‌ಗಳು ಟ್ಯಾಂಪರ್ ಪ್ರೂಫ್ ಆಗಿರುತ್ತವೆ.
*ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಟ್ರಾಫಿಕ್ ನಿರ್ವಹಣೆಗೆ ನೆರವಾಗುತ್ತದೆ.












Click it and Unblock the Notifications