Bengaluru Mysuru Expressway Toll : ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಫೆ. 27ರಿಂದ ಟೋಲ್ ಸಂಗ್ರಹ
ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಫೆಬ್ರವರಿ 27ರಿಂದ ಟೋಲ್ ಸಂಗ್ರಹ ಆರಂಭವಾಗಲಿದೆ ಎಂದು ಟ್ವೀಟ್ ಮಾಡಲಾಗಿದೆ.
ಬೆಂಗಳೂರು, ಫೆಬ್ರವರಿ 26; ಬಹುನಿರೀಕ್ಷಿತ ಬೆಂಗಳೂರು-ಮೈಸೂರು ದಶಪಥ ರಸ್ತೆ ಮಾರ್ಚ್ 11ರಂದು ಉದ್ಘಾಟನೆಯಾಗಲಿದೆ. ಅದಕ್ಕೂ ಮೊದಲೇ ಟೋಲ್ ಸಂಗ್ರಹ ಆರಂಭವಾಗಲಿದೆ. ಟ್ವೀಟ್‌ನಲ್ಲಿರುವ ಮಾಹಿತಿ ಪ್ರಕಾರ ಫೆಬ್ರವರಿ 27ರ ಸೋಮವಾರದಿಂದಲೇ ಟೋಲ್ ಪಾವತಿ ಮಾಡಬೇಕಿದೆ.
ಬೆಂಗಳೂರು ಮತ್ತು ಮೈಸೂರು ನಗರವನ್ನು ಸಂಪರ್ಕಿಸುವ ದಶಪಥ ರಸ್ತೆ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಬೆಂಗಳೂರು-ನಿಡಘಟ್ಟ ಮತ್ತು ನಿಡಘಟ್ಟ ಮೈಸೂರು ಎಂದು ಎರಡು ವಿಭಾಗ ಮಾಡಿಕೊಂಡು ರಸ್ತೆ ಕಾಮಗಾರಿ ಕೈಗೊಳ್ಳಲಾಗಿತ್ತು.

ಬೆಂಗಳೂರು-ನಿಡಘಟ್ಟ ಮಾರ್ಗದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಈ ಮಾರ್ಗದಲ್ಲಿರುವ ಶೇಷಗಿರಿಹಳ್ಳಿಯ ಟೋಲ್ ಕೇಂದ್ರದಲ್ಲಿ ಸೋಮವಾರದಿಂದ ಟೋಲ್ ಸಂಗ್ರಹ ಆರಂಭವಾಗಲಿದೆ ಎಂಬ ಮಾಹಿತಿ ಸಿಕ್ಕಿದೆ. ರವಿಕೀರ್ತಿ ಗೌಡ ಎಂಬುವವರು ಈ ಕುರಿತು ಟ್ವೀಟ್ ಮಾಡಿದ್ದಾರೆ.
ಭಾನುವಾರ ಟ್ವೀಟ್ ಮಾಡಿರುವ ಅವರು, 'ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಬೆಂಗಳೂರು-ನಿಡಘಟ್ಟ ನಡುವಿನ ಶೇಷಗಿರಿಹಳ್ಳಿಯ ಟೋಲ್ ಸಂಗ್ರಹ ನಾಳೆಯಿಂದ ಆರಂಭವಾಗಲಿದೆ. ಕಾರು ಏಕಮುಖ ಸಂಚಾರಕ್ಕೆ 135 ರೂ. & ಅದೇ ದಿನ ಮರು ಸಂಚಾರಕ್ಕೆ 205 ರೂ.' ಎಂದು ಟ್ವೀಟ್‌ನಲ್ಲಿ ಮಾಹಿತಿ ನೀಡಿದ್ದಾರೆ. ಆದರೆ ಯಾವುದೇ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿಲ್ಲ.

ಮೋದಿಯಿಂದ ಮಾರ್ಗ ಉದ್ಘಾಟನೆ; ಬೆಂಗಳೂರು-ಮೈಸೂರು ನಗರವನ್ನು ಸಂಪರ್ಕಿಸುವ 10 ಪಥದ ರಸ್ತೆಯನ್ನು ಮಾರ್ಚ್ 11ರಂದು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಮಂಡ್ಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮೋದಿ ರಸ್ತೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ ಮತ್ತು ಮೈಸೂರು-ಕುಶಾಲನಗರದ ಚತುಷ್ಪಥ ಎಕ್ಸ್‌ಪ್ರೆಸ್ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ.
ಸಂಸದ ಪ್ರತಾಪ್ ಸಿಂಹ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ, 'ಮಾರ್ಚ್ 11 ನೇ ತಾರೀಖು ಮೈಸೂರು- ಬೆಂಗಳೂರು ದಶಪಥ ಹೆದ್ದಾರಿಯನ್ನ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜೀ ರವರಿಂದ ಉದ್ಘಾಟನೆ ಮಾಡಿಸುವ ಸಲುವಾಗಿ NHAIನ CGM, PD ಮತ್ತು RO ವಿವೇಕ್ ಜೈಸ್ವಾಲ್ ರವರ ಜೊತೆ ಸಂಸದ ಪ್ರತಾಪ್ ಸಿಂಹ ಮಾತುಕತೆ ನಡೆಸಿದರು. ಅದೇ ದಿನ ಮೈಸೂರು ಮತ್ತು ಕುಶಾಲನಗರ ಚತುಷ್ಪಥ ಹೆದ್ದಾರಿಗೂ ಕೂಡ ಭೂಮಿ ಪೂಜೆಯನ್ನ ಮಾಡಲಾಗುವುದು' ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications