Bandaje Falls Trek: ಬೆಂಗಳೂರಿನಿಂದ ಒನ್‌ಡೇ ಟ್ರೆಕ್! ಮಳೆ, ಮಂಜು, ಜಲಪಾತ, ಬೆಟ್ಟ: ಬಂಡಾಜೆ ರೋಚಕ ಅನುಭವ ಹೀಗಿತ್ತು!
ಬೆಂಗಳೂರು: 'ದೇಶ ಸುತ್ತಬೇಕು, ಕೋಶ ಓದಬೇಕು' ಎಂಬ ಮಾತಿದೆ. ದೇಶ ಸುತ್ತುವ ಮೊದಲು ನಾವು ಕರ್ನಾಟಕದಲ್ಲಿರುವ ಅನೇಕ ಪ್ರವಾಸಿ ತಾಣಗಳನ್ನೇ ನೋಡಿರುವುದಿಲ್ಲ. ಇಂಥವರು ಮೊದಲು ಪಶ್ಚಿಮ ಘಟ್ಟಗಳ ಸಾಲಿಗೆ ಭೇಟಿ ನೀಡಲೇಬೇಕಾದ ಹಲವು ತಾಣಗಳಿವೆ. ಅದರಲ್ಲಿ ಚಾರಣಿಗರ ಬಲು ಇಷ್ಟದ ಸ್ಥಳ 'ಬಂಡಾಜೆ'.. ಇದನ್ನು ಬಂಡಾಜೆ ಟ್ರೆಕ್ ಅಥವಾ ಬಂಡಾಜೆ ಫಾಲ್ಸ್ ಟ್ರೆಕ್ (Bandaje Falls Trek) ಅಂತಲೂ ಕರೆಯುತ್ತಾರೆ. ಬೆಂಗಳೂರಿನಿಂದ ನೀವು ಇಲ್ಲಿಗೆ ಒಂದೇ ದಿನದಲ್ಲಿ ಹೋಗಿ ಬರಬಹುದು ಅಂದರೆ ನಂಬುವಿರಾ?..
2026ರಲ್ಲಿ ನಿರೀಕ್ಷೆಯಂತೆ ಜೂನ್ ನಿಂದ ತೆರೆಯುವ ಬದಲು ಕೊಂಚ ತಡವಾಗಿದ್ದ ಓಪನ್ ಆದ 'ಬಂಡಾಜೆಗೆ' ವಾರದ ದಿನ, ವಾರಾಂತ್ಯಗಳಲ್ಲಿ ಚಾರಣಿಗರು (Tourist/Trekkers) ದಾಂಗುಡಿ ಇಡುತ್ತಿದ್ದಾರೆ. ಮಲೆನಾಡಿನ ಹಸಿರ ಸಿರಿ, ಮಳೆ ಹನಿಗಳಿಂದ ಕೂಡಿದ ಹಚ್ಚ ಹಸಿರ ಹೊದಿಕೆ, ಆ ಮಳೆ, ಧುಮ್ಮಿಕ್ಕುವ ಜಲಪಾತ, ಪೀಕ್ ನೋಡಲು ತೆರಳುವವರ ಸಂಖ್ಯೆ ಕಡಿಮೇನು ಇಲ್ಲ. ಬೆಂಗಳೂರಿನ ಐಟಿ, ಕಾರ್ಪೋರೇಟ್, ಖಾಸಗಿ ಕಂಪನಿಗಳು ಉದ್ಯೋಗಿಗಳು ಕೆಲಸದ ಒತ್ತಡ ನಡುವೆ ಬಿಡುವು ಮಾಡಿಕೊಂಡು ತೆರಳುವುದುಂಟು.

ಹೇಗಿರುತ್ತೆ ಒಂದು ದಿನದ ಟ್ರೆಕ್?
ಮನಸ್ಸಿಗೆ ಅತ್ಯುಲ್ಲಾಸ, ನೆಮ್ಮದಿ ನೀಡುವ, ಪ್ರಕೃತಿಯಿಂದ ನೈಸರ್ಗಿಕ ಚಿಕಿತ್ಸೆ ಪಡೆಯಲು ಹವಣಿಸುವರು ಇಂದಿನ ದಿನಗಳಲ್ಲಿ ಹೆಚ್ಚು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಬಂಡಾಜೆ ಹಳ್ಳಿಯಿಂದ ಶುರುವಾಗುವ ಬಂಡಾಜೆ ಟ್ರೆಕ್ ಉಜಿರೆಯಿಂದ ಕೇವಲ 9 ಕಿ.ಮೀ ದೂರದಲ್ಲಿದೆ. ಬಂಡಾಜೆ ಬೆಟ್ಟಗಳ ಸಾಲು, ರಾಣಿಝರಿ ವಿವ್ ಪಾಯಿಂಟ್, ಕೊಡಿಗೆ ಪಾಲ್ಸ್, ನೋಡಲು ನಾವು ಸೆಪ್ಟಂಬರ್ ಮೊದಲ ವಾರ ಬೆಂಗಳೂರಿನಿಂದ ತೆರಳಿದ್ದೆವು.
ಬೆಂಗಳೂರಿನಿಂದ ಒಂದೇ ದಿನದಲ್ಲಿ 'ಬಂಡಾಜೆ ಫಾಲ್ಸ್ ಟ್ರಕಿಂಗ್' ಹೋಗಿ ಬರಬಹುದೆಂದು ತಿಳಿದಿದ್ದೇ ಇತ್ತೀಚೆಗೆ. ಇನ್‌ಸ್ಟಾಗ್ರಾಮ್‌ನಲ್ಲಿ ಕಾಣುವ ಟ್ರೆಕಿಂಗ್ ಗೆ ಕರೆದೊಯ್ಯುವ ಕಂಪನಿಗಳ ಪತ್ತೆ ಹೆಚ್ಚಿ ಸ್ಲಾಟ್ ಬುಕಿಂಗ್ ಮಾಡಿದ ನನಗೆ ಸೋಲೋ ಟ್ರೆಕಿಂಗ್ ಅನುಭವಿಸುವ ಆಸೆ. ನನ್ನಂತೆ ಅನೇಕರು ಬೆಂಗಳೂರಿನಿಂದ ಒಂದೇ ಬಸ್‌ನಲ್ಲಿ ತೆರಳಿದ್ದೆವು. ಹೋಗಿ ಬರುವಷ್ಟರಲ್ಲಿ ನಾನು ನಾವಾದೆವು. ಫಾಲ್ಸ್, ಪೀಕ್ ನಲ್ಲಿ ಅದ್ಭುತ ಅನುಭವ ಪಡೆಯುವ ಮೊದಲು ಮರಗಿಡಗಳ ಬೇರುಗಳು, ಕಡಿದಾದ ಮತ್ತು ಚಿಕ್ಕ ಚಿಕ್ಕ ಮಾರ್ಗದಲ್ಲಿ, ಮಳೆ ನೀರು ಬಿದ್ದು ಜಾರುವ ಪ್ರದೇಶದಲ್ಲಿ ಎಚ್ಚರಿಯಿಂದ ಕಾಲಿಟ್ಟು, ಒಬ್ಬರಿಗೊಬ್ಬರು ಕೈ ಹಿಡಿದು ಆಸರೆಯಾಗುತ್ತಾ, ಪರಿಚಯ ಮಾಡಿಕೊಳ್ಳುತ್ತಾ ಪ್ರಕೃತಿ ಮಡಿಲಲ್ಲಿ ಸಾಗಿದ ಪ್ರಯಾಣ ನಿಜಕ್ಕೂ ಖುಷಿ ಕೊಟ್ಟಿತು.
ಅರಣ್ಯ ಇಲಾಖೆ ಅನುಮತಿ, ಮುಂಗಡ ಬುಕಿಂಗ್ ಕಡ್ಡಾಯ!
ಪಶ್ಚಿಮ ಘಟ್ಟಗಳ ಸಾಲಿನ ಯಾವುದೇ ಟ್ರೆಕಿಂಗ್ ಸ್ಥಳಗಳಿಗೆ (ಬಂಡಾಜೆ, ನೇತ್ರಾವತಿ, ಕುದುರೆಮುಖ etc) ಹೋಗಲು ಮೊದಲು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕು, ಮುಂಗಡ ಟಿಕೆಟ್ ಬುಕಿಂಗ್ ಕಡ್ಡಾಯ. ಇತ್ತೀಚೆಗೆ ಕೆಲವೆಡೆ ಚಾರಣಿಗರ ನಾಪತ್ತೆ, ಅಹಿತಕರ ಘಟನೆಗಳು ಸಂಭವಿಸುತ್ತಿರುವ ಕಾರಣ ಚಾರಣದ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ. ನಾವೆಲ್ಲ ಖಾಸಗಿ ಕಂಪನಿಯೊಂದರ ಮೂಲಕ ಪ್ಯಾಕೇಜ್‌ನಲ್ಲಿ ತೆರಳಿದ್ದರಿಂದ ನಮಗೆ ಇದೆಲ್ಲ ಪ್ರಕ್ರಿಯೆಯನ್ನು ನಮ್ಮ ಗೈಡ್ (ಯತೀಂದ್ರ, ವಿನಯ್) ನೋಡಿಕೊಂಡಿದ್ದರು.

ಬೆಂಗಳೂರು-ಬಂಡಾಜೆ ಬಸ್ ಪ್ರಯಾಣ, ಮೋಜು-ಮಸ್ತಿಗಿಲ್ಲ ಕೊರತೆ!
ಬೆಂಗಳೂರು ಮೆಜೆಸ್ಟಿಕ್‌ನಲ್ಲಿ ಸಜ್ಜಾಗಿದ್ದ ಪ್ರೈವೇಟ್ ಬಸ್ ಗೆ ಒಬ್ಬೊಬ್ಬರೆ ಆಗಮಿಸುತ್ತಿದ್ದಂತೆ ರಾತ್ರಿ 8.30 ಆಗಿತ್ತು. ಬಸ್ ನೆಲಮಂಗಲ ಮಾರ್ಗವಾಗಿ ಸಾಗುತ್ತಿದ್ದಂತೆ ಮ್ಯೂಸಿಕ್, ಸಾಂಗ್‌ಗಳಿಗೆ ಬಸ್‌ನಲ್ಲೇ ಹೆಜ್ಜೆ ಹಾಕಿ, ಕುಣಿದು ಕುಪ್ಪಳಿಸಿ ಖುಷಿಪಟ್ಟೆವು. ಅಷ್ಟೊತ್ತಿಗಾಗಲೇ ನಮ್ಮೆಲ್ಲರ ವೈಯಕ್ತಿಕ ಪ್ರಾಥಮಿಕ ಪರಿಚಯವಾಗಿತ್ತು. ನಡುವೆ ಒಂದು ಸ್ಟಾಪ್ ಕೊಟ್ಟ ಬಸ್ ಮುಂದೆ ಹಾಸನ ಮಾರ್ಗವಾಗಿ ಬೆಳಗ್ಗೆ 5 ಗಂಟೆ ಹೊತ್ತಿಗೆ ಸುಂಕಸಾಲೆಗೆ ತಲುಪಿತ್ತು. ಅಲ್ಲಿದ್ದ ಮಿಸ್ಟಿ ಹೋಂ ಸ್ಟೇನಲ್ಲಿ ಎರಡು ಗಂಟೆ ವಿಶ್ರಮಿಸಿ, ಫ್ರೆಶ್ ಅಪ್ ಆಗಿ ತಿಂಡಿ ತಿಂದು ಜೀಪ್ ಹತ್ತಿದಾಗ ಬೆಳಗ್ಗೆ 8 ಗಂಟೆ..
ಕೆಸರು ರಸ್ತೆಯಲ್ಲಿ ಸವಾರಿ, ಆಫ್ ರೋಡ್ ಝಲಕ್
ಇಲ್ಲಿಂದ ಸುಮಾರು 07 ಕಿಲೋ ಮೀಟರ್ ದೂರವಿರುವ ಬಂಡಾಜೆ ಟ್ರೆಕ್ ಆರಂಭದ ಪಾಯಿಂಟ್ ಗೆ ತಲುಪಲು ಗೂಡ್ಸ್ ಬೊಲೆರೋ ವಾಹನ ಸವಾರಿ ಮಾಡಬೇಕು. ಟ್ರೆಕಿಂಗ್ ಮುನ್ನ ಕೆಸರುಮಯ ರಸ್ತೆಯ ಆಫ್ ರೋಡ್ ಝಲಕ್ ಸಿಕ್ಕಿತು. ವಾಹನ ಇಳಿದು ಟ್ರೆಕಿಂಗ್ ಪ್ರವೇಶದ ನೋಂದಣಿ ವೇಳೆ ನೀಡಿದ್ದ ಗುರುತಿನ ಚೀಟಿ ತೋರಿಸಿದರೆ ಹತ್ತು ಮಂದಿಗೆ ಒಬ್ಬ ಕಡ್ಡಾಯ ಗೈಡ್ (ಅರಣ್ಯ ಇಲಾಖೆ ಸಿಬ್ಬಂದಿ) ಸಿಕ್ಕುತ್ತಾರೆ. ಗೈಡ್ ಇಲ್ಲದೇ ಚಾರಣಿಗರಿಗೆ ಪ್ರವೇಶ ಅನುಮತಿಸುವುದಿಲ್ಲ.1 ಗೈಡ್‌ಗೆ ಒಂದು ಸಾವಿರ ರೂಪಾಯಿ ಪಾವತಿಸುತ್ತಿದ್ದಂತೆ ಅಲ್ಲಿಂದ ಚಾರಣ ಆರಂಭವಾಯಿತು.
ಒಂದು ಬದಿಯ 8 ಕಿಲೋ ಮೀಟರ್ ಹಾದಿಯಲ್ಲಿ ಶೇ.30ರಷ್ಟು ಅರಣ್ಯ ಮಾರ್ಗದಲ್ಲಿ ನಡೆಯಬೇಕು. ಬೃಹದಾಕಾರದ ಮರಗಳು, ಅಪರೂಪದ ಹೂವು, ಗಿಡ, ಬಳ್ಳಿಗಳನ್ನು ಕಾಣುತ್ತಾ, ಅಲ್ಲಲ್ಲಿ ಸಿಗುವ ಸಣ್ಣ ನೀರಿನ ಜರಿ, ಜಲಪಾತ ಸಪ್ಪಳ ಆಲಿಸುತ್ತಾ ಸಾಗಿದೆವು. ಕಾಡು ದಾಟಿ ಹುಲ್ಲುಗಾವಲು ಪ್ರದೇಶ ಎಂಟ್ರಿ ಆಗುತ್ತಿದ್ದಂತೆ ನೀಲಿ ಆಕಾಶಕ್ಕೂ ಹಸಿರು ಹೊದಿಕೆಯನ್ನು ಒಂದುಗೂಡಿಸಲು ಪೈಪೋಟಿ ಕೊಟ್ಟಂತೆ ಆಗಾಗ ಎದುರಾಗುವ ಮಂಜು ನಮ್ಮನ್ನು ಸೋಕುತ್ತಿದ್ದಂತೆ ಧಣಿವು ಮಾಯವಾಗುತ್ತಿತ್ತು. ಒಂದೊಂದೇ ವಿವ್ ಪಾಯಿಂಟ್‌ನಲ್ಲಿ ಫೋಟೋ, ಸೆಲ್ಫಿ, ಗ್ರೂಪ್ ಫೋಟೋ ಕ್ಲಿಕ್ಕಿಸಿಕೊಂಡು ಮುಂದಾದ ನಮಗೆ ಶೇ. 80ರಷ್ಟು ಚಾರಣ ಮುಗಿದಿದ್ದೆ ತಿಳಿಯಲಿಲ್ಲ. ಆದರೆ ಇಲ್ಲಿಂದ ಮುಂದೆ ನಮಗಾಗಿದ್ದೇ ಅಸಲಿ ಟ್ರೆಕಿಂಗ್ ಅನುಭವ...!
ಅಸಲಿ ಟ್ರೆಕಿಂಗ್ ಶುರುವಾಗಿದ್ದೇ ಇಲ್ಲಿಂದ
ಹೌದು, ಬಂಡಾಜೆಯ ಮತ್ತೊಂದು ವಿಶೇಷತೆ ಎಂದರೆ ಕೆಲವು ಬೆಟ್ಟಗಳ ಸಾಲು ದಾಟಿ ಬಂದರೆ ಕೊನೆಯ ಸುಮಾರು 1-2 ಕಿಮೀ ದಾರಿಯನ್ನು ಇಳಿಮುಖವಾಗಿ ಸಾಗಬೇಕಾಗುತ್ತದೆ. ಅಂಕು ಡೊಂಕು ಜಾರುವ ಮಾರ್ಗದಲ್ಲಿ ಕಡಿದಾದ ಕಲ್ಲುಗಳು, ಸಮತಟ್ಟಲ್ಲದ ದಾರಿಯಲ್ಲಿ ಇಳಿಯುವುದೇ ಮರಳಿ ಹತ್ತುವುದೇ ಸಾಹಸವಾಗಿತ್ತು. ಅಸಲಿ ಟ್ರೆಕಿಂಗ್ ಅನುಭವ ನಮಗಾಯಿತು. ಪೀಕ್‌ನ ತುತ್ತು ತುದಿಯಲ್ಲಿ ತನ್ನದೇ ಸದ್ದಿನೊಂದಿಗೆ ಹರಿಯುವ ಬಂಡಾಜೆ ಜಲಪಾತ ಕಣ್ತುಂಬಿಕೊಂಡಾಕ್ಷಣ ಕೈ, ಕಾಲುಗಳ ನೋವೆಲ್ಲ ಮಾಯವಾಗಿ ಒಂದು ಕ್ಷಣ ಮೈ ಮರೆತೆವು. ಏನೋ ಸಾಧಿಸಿದ ಅನುಭವ, ಕೆಲವು ಗಂಟೆಗಳ ಕಷ್ಟಕ್ಕೆ ಪ್ರತಿಫಲ ಸಿಕ್ಕಿತೆಂಬ ಭಾವ...
ಅಪರಿಚಿತರು ಪರಿಚಿತರಾದರು: ಸುಂದರ ನೆನಪುಗಳು ಸೃಷ್ಟಿಯಾದವು
ಮರಳಿ ಅಲ್ಲಿಂದ ಬರುವಾಗಲೂ ಮತ್ತದೇ ತ್ರಾಸದಾಯಕವಾಗಿ ದಾರಿಯಲ್ಲಿ ಸಾಹಸಮಯವಾಗಿ ಸಂಚರಿಸಿ ಟ್ರಾವೆಲ್ ಗೈಡ್ ಸೂಚಿಸಿದ್ದ ಸ್ಥಳದಲ್ಲಿ ಊಟ ಮುಗಿಸುವಷ್ಟರಲ್ಲಿ ಮಧ್ಯಾಹ್ನ 1.30-2 ಗಂಟೆ. ಈ ಚಾರಣಕ್ಕೆ ಬಹುತೇಕ ಮಂದಿ ಸೋಲೋ ಟ್ರೆಕಿಂಗ್ ಬಂದವರಿದ್ದರು. ಸ್ನೇಹಿತರು, ಸಹದ್ಯೋಗಿಗಳ ಜೊತೆ ಆಗಮಿಸಿದವರೂ ಇದ್ದರು. ಫಾಲ್ಸ್ ನೋಡಿ, ಊಟ ಮುಗಿಸುಷ್ಟರಲ್ಲಿ ಅಪರಿಚಿತರಾಗಿದ್ದ ನಾವುಗಳು ಪರಿಸ್ಪರ ಪರಿಚಿತರಾಗಿದ್ದೆವು. ಒಬ್ಬರಿಗೊಬ್ಬರು ಕಾಲೆಳೆಯುತ್ತಾ ಜಿಟಿ ಜಿಟಿ ಮಳೆ, ಮಂಜಿನ ಜೊತೆ ಸಾಗಿದ ನಮ್ಮೆಲ್ಲರ ಪ್ರಯಾಣ ಟ್ರಾಫಿಕ್ ಕಿರಿ ಕಿರಿ, ಸದ್ದು ಗದ್ದಲ ಇಲ್ಲದ, ಕಾಂಕ್ರಿಟ್ ಸಾಮ್ರಾಜ್ಯದ ಅರಿವೇ ಬಾರದೇ, ನಾಳೆಯ ಚಿಂತೆ ಇಲ್ಲದೇ ಸುಂದರ ನೆನಪುಗಳೊಂದಿಗೆ ಮರಳಿತ್ತು..
ಹಾಲಿನಂತೆ ಸುರಿಯುವ 'ಕೊಡಿಗೆ ಜಲಪಾತ
ಟ್ರೆಕಿಂಗ್ ಮುಗಿಸಿದ ನಂತರ ಎಂಟ್ರಿ ಪಾಯಿಂಟ್‌ನಿಂದ ಸುಮಾರು 50 ಮೀಟರ್ ದೂರದಲ್ಲಿದ್ದ ರಾಣಿ ಝರಿ ವಿವ್ ಪಾಯಿಂಟ್ ವೀಕ್ಷಿಸಿ ಜೀಪ್ ಹತ್ತಿದಾಗ ಸಂಜೆ 5 ಗಂಟೆ. ಅಲ್ಲಿಂದ ನೇರವಾಗಿ ದಟ್ಟ ಕಾನನ ಮಧ್ಯ ಹಾಲಿನಂತೆ ಸುರಿಯುವ 'ಕೊಡಿಗೆ' (Kodige Falls) ಜಲಪಾತಕ್ಕೆ ತೆರಳಿದೆವು. ಚಳಿ ಮಧ್ಯ ಹಲವರು ನೀರಿಗೆ ಇಳಿದು ಈಜಾಡಿ ಮೋಜು ಮಸ್ತಿ ಮಾಡಿ ರೆಸಾರ್ಟ್ ತಲುಪಿದಾಗ 7 ಗಂಟೆ. ರೂಮ್‌ಗಳಲ್ಲಿ ಫ್ರೇಶ್ ಅಪ್ ಆಗಿ ರಾತ್ರಿ ವೆಜ್ ಆಂಡ್ ನಾನ್ ವೆಜ್ ಡಿನ್ನರ್ ಮುಗಿಸಿದ ನಾವು ಸುಮಾರು ರಾತ್ರಿ 11ಗಂಟೆಗೆ ಬಸ್ ಏರಿದೆವು. ಬೆಳಗ್ಗೆ 5-5.30ರ ಹೊತ್ತಿಗೆ ಬಸ್ ಬೆಂಗಳೂರಿಗೆ ತಲುಪಿತ್ತು. ಪರಸ್ಪರ ಎಲ್ಲರೂ ಬೈ ಬೈ ಹೇಳಿ ಸಣ್ಣನೆಯ ನಗು ಬೀರುತ್ತಾ ಬೆಂಗಳೂರಿನ ವಾಸ್ತವ ಜಗತ್ತಿನಲ್ಲಿ ಮರೆಯಾದೆವು.
ವೀಕ್‌ಡೇಸ್ ಪ್ರಯಾಣಿಸಿದರೆ ಉತ್ತಮ, ಸೋಲೋ ಟ್ರಾವೆಲ್‌ಗೆ ಬೆಸ್ಟ್ ಆಯ್ಕೆ
ವೀಕೆಂಡ್ ದಿನ ಶನಿವಾರ, ಭಾನುವಾರ ಬಂಡಾಜೆ ಮಾತ್ರವಲ್ಲದೇ ನೇತ್ರಾವತಿ, ಕುದುರೆಮುಖ, ಗಂಗಡಿಕಲ್ಲು, ಕೊಡಚಾದ್ರಿ ಸೇರಿ ವಿವಿಧ ಚಾರಣ ಸ್ಥಳಗಳಲ್ಲಿ ಹೆಚ್ಚಿನ ಜನರಿರುತ್ತಾರೆ. ಹೀಗಾಗಿ ವೀಕ್ ಡೇಸ್ ತೆರಳಲು ಪ್ಲ್ಯಾನ್ ಮಾಡಿಕೊಂಡರೆ ಉತ್ತಮ. ಖಾಸಗಿ ಟೂರ್ ಕಂಪನಿ (ಗೋ ಪ್ರಯಾಣ) ಮಾರ್ಗದರ್ಶನದಲ್ಲಿ ಒಬ್ಬರಿಗೆ 3,500 ರೂ. ಪ್ಯಾಕೇಜ್ (ಚಾರಣ, ಫಾಲ್ಸ್ ಪ್ರವೇಶ ಶುಲ್ಕ, ಗೈಡ್, ರೂಮ್ ಸ್ಟೇ, ಜೀಪ್ ಶುಲ್ಕ ಎಲ್ಲ ಒಳಗೊಂಡು) ಅಡಿಯಲ್ಲಿ ತೆರಳಿದ್ದೆವು. ಟ್ರೆಕ್ ಉದ್ದಕ್ಕೂ ಗೈಡ್ ಯತೀಂದ್ರ ಮತ್ತು ವಿನಯ್ ಇಬ್ಬರು ಅತ್ಯುತ್ತಮ ಮಾರ್ಗದರ್ಶಕರಾಗಿ, ಸ್ನೇಹಿತರಾಗಿ, ಸುರಕ್ಷಿತವಾಗಿ ಕರೆದೊಯ್ದರು. ಮೊದಲ ಬಾರಿ ಟ್ರೆಕಿಂಗ್ ಮಾಡುವವರು, ಯುವತಿಯರು ಒಂದು ದಿನದಲ್ಲಿ ಈ ರೀತಿಯಾಗಿ ಹೋಗಿ ಬರಬಹುದು. ನೀವು ಸಾರಿಗೆ ಬಸ್‌ಗಳ ಮೂಲಕ ಧರ್ಮಸ್ಥಳಕ್ಕೆ ತೆರಳಿ ಅಲ್ಲಿಂದ ಬಾಡಿಗೆ ಜೀಪ್ ಮೂಲಕ ಹೋಗಿ ಬರಬಹುದು.
(ವಿಶೇಷ ಸೂಚನೆ: ಈ ಸುದ್ದಿ ನಿಮಗೆ ಟ್ರೆಕಿಂಗ್, ಟ್ರಾವೆಲ್ ಮಾಹಿತಿಗಾಗಿಯೇ ವಿನಃ ಟ್ರಾವೆಲ್/ಟೂರ್ ಕಂಪನಿಗಳ/ಏಜೆನ್ಸಿಗಳ ಪ್ರಚಾರಕ್ಕಾಗಿ ಅಲ್ಲ..)


Click it and Unblock the Notifications
