Asian Games: ಚಿನ್ನ ಗೆದ್ದ ಎಂ.ಆರ್. ಪೂವಮ್ಮ ಆಕ್ಷೇಪ ಬೆನ್ನಲ್ಲೇ ಮಹತ್ವದ ನಿರ್ಧಾರಕ್ಕೆ ಮುಂದಾದ ಕರ್ನಾಟಕ ಸರ್ಕಾರ
Asian Games: ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಕರ್ನಾಟಕದ ಓಟಗಾರ್ತಿ ಎಂ.ಆರ್. ಪೂವಮ್ಮ ಅವರು, ಉಳಿದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಬಹುಮಾನ ಮೊತ್ತ / ಪ್ರೋತ್ಸಾಹ ಧನ ತುಂಬಾ ಕಡಿಮೆ ಇದೆ ಎಂದು ಆಕ್ಷೇಪ ವ್ಯಕ್ತಪಡಿಸದ ಬೆನ್ನಲ್ಲೇ ಕ್ರೀಡಾಪಟುಗಳಿಗೆ ನೀಡುವ ಬಹುಮಾನ ಮೊತ್ತ ಮರುಪರಿಶೀಲನೆಗೆ ಕರ್ನಾಟಕ ಸರ್ಕಾರ ಮುಂದಾಗಿದೆ. ಈ ಬಗ್ಗೆ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರು ಮಾತನಾಡಿದ್ದಾರೆ.
ಕರ್ನಾಟಕದ ಕ್ರೀಡಾಪಟುಗಳಿಗೆ ನೀಡಲಾಗುತ್ತಿರುವ ಬಹುಮಾನ ಮೊತ್ತವನ್ನು ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿ ಮರು ಪರಿಶೀಲಿಸಲಾಗುತ್ತಿದ್ದು, ಈ ಕುರಿತು ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ. ಕ್ರೀಡಾಪಟುಗಳಿಗೆ ಎಷ್ಟು ಬಹುಮಾನ ಮೊತ್ತ ನೀಡಬೇಕು ಎಂಬುದನ್ನು ನಾಳೆ ಘೋಷಿಸಲಾಗುವುದು ಎಂದು ಉಪ ಮುಖ್ಯಮಂತ್ರಿ, ಕಂದಾಯ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಡಾ. ಜಿ. ಪರಮೇಶ್ವರ ಅವರು ತಿಳಿಸಿದ್ದಾರೆ. ಪೂವಮ್ಮ ಅವರು ಜಪಾನ್‌ನಲ್ಲಿದ್ದಾಗಲೇ ಅವರನ್ನು ಸಂಪರ್ಕಿಸಿ ಅಭಿನಂದಿಸಲು ಪ್ರಯತ್ನಿಸಿದ್ದೆವು. ಆದರೆ ಆಗ ಸಂಪರ್ಕ ಸಾಧ್ಯವಾಗಿರಲಿಲ್ಲ. ಅವರು ಭಾರತಕ್ಕೆ ಬಂದ ಒಂದೆರಡು ಗಂಟೆಯಲ್ಲೇ ನಾನು ಅವರನ್ನು ಸಂಪರ್ಕಿಸಿ ಮಾತನಾಡಿದ್ದೇನೆ. ಪೂವಮ್ಮ ಅವರಷ್ಟೇ ಅಲ್ಲ, ಬೇರೆ ಬೇರೆ ಅಥ್ಲೀಟ್‌ಗಳೊಂದಿಗೂ ಮಾತನಾಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಕ್ಟೋಬರ್ 6ರ ಮಂಗಳವಾರ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ನಾನು ಸರ್ಕಾರದ ವತಿಯಿಂದ ಕ್ರೀಡಾಪಟುಗಳಿಗೆ ನೀಡಬೇಕಾದ ಬಹುಮಾನ ಮೊತ್ತದ ಕುರಿತು ಘೋಷಣೆ ಮಾಡುತ್ತೇವೆ. ಬೇರೆ ರಾಜ್ಯಗಳಲ್ಲಿ ಹೆಚ್ಚಿನ ಮೊತ್ತ ನೀಡಲಾಗುತ್ತಿದೆ ಎಂದು ಕ್ರೀಡಾಪಟುಗಳು ಹೇಳಿರುವ ಮಾಹಿತಿಯನ್ನೂ ತರಿಸಿಕೊಂಡಿದ್ದೇವೆ. ಅದನ್ನೆಲ್ಲ ಪರಿಶೀಲಿಸಿದ್ದೇವೆ. ನಮ್ಮಲ್ಲಿಯೂ ಬಹುಮಾನ ಮೊತ್ತವನ್ನು ಪುನರ್ ಪರಿಶೀಲಿಸಬೇಕು ಎಂಬ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೊಂದಿಗೆ ಮಾತನಾಡಿದ್ದೇನೆ. ಎಷ್ಟು ಮಾಡಬೇಕು ಎಂಬುದನ್ನು ನಾಳೆ ಘೋಷಿಸಲಾಗುವುದು ಎಂದು ಜಿ. ಪರಮೇಶ್ವರ್ ಅವರು ಹೇಳಿದ್ದಾರೆ.
ಕೇಂದ್ರದ ಬರ ಅಧ್ಯಯನ ತಂಡದಿಂದ ರಾಜ್ಯಾದ್ಯಂತ ಪರಿಶೀಲನೆ
ಕೇಂದ್ರದ ಬರ ವೀಕ್ಷಣಾ ತಂಡದ ಪರಿಶೀಲನೆ ಕುರಿತು ಮಾತನಾಡಿದ ಡಾ. ಜಿ. ಪರಮೇಶ್ವರ ಅವರು, ಕೇಂದ್ರದ ತಂಡವನ್ನು ಮೂರು ತಂಡಗಳಾಗಿ ವಿಂಗಡಿಸಿ ರಾಜ್ಯದ ವಿವಿಧ ಭಾಗಗಳಿಗೆ ಕಳುಹಿಸಲಾಗಿದೆ. ಅಕ್ಟೋಬರ್ 3ರಿಂದ 6ರವರೆಗೆ ತಂಡಗಳು ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡುತ್ತಿವೆ. ಪ್ರತಿಯೊಂದು ತಂಡವೂ ಮೂರರಿಂದ ನಾಲ್ಕು ಜಿಲ್ಲೆಗಳಿಗೆ ಭೇಟಿ ನೀಡುತ್ತಿದೆ. ನಾವು ಮೊದಲನೇ ಪಟ್ಟಿಯಲ್ಲಿ ಬರಪೀಡಿತ ಎಂದು ಘೋಷಿಸಿದ್ದ 101 ತಾಲೂಕುಗಳ ಪರಿಸ್ಥಿತಿಯನ್ನು ಅವರು ಪರಿಶೀಲಿಸುತ್ತಿದ್ದಾರೆ ಎಂದರು.
ಮುಖ್ಯಮಂತ್ರಿಗಳು ಮತ್ತು ನಾನು ಕೇಂದ್ರದ ತಂಡವನ್ನು ಬರಮಾಡಿಕೊಂಡು ರಾಜ್ಯದ ಬರ ಪರಿಸ್ಥಿತಿಯ ಕುರಿತು ಅವರಿಗೆ ಬ್ರೀಫ್ ಮಾಡಿದ್ದೇವೆ. ಎರಡನೇ ಹಂತದಲ್ಲಿ ಘೋಷಿಸಿರುವ ಉಳಿದ 77 ತಾಲೂಕುಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದೇವೆ. ಆ ಆಧಾರದ ಮೇಲೆ ಅವರು ಹೆಚ್ಚು ಕಡಿಮೆ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಹೇಳಿದರು.
ಕೆಲವು ಕಡೆ ಕೇಂದ್ರ ತಂಡದ ಸದಸ್ಯರು ರೈತರೊಂದಿಗೆ ನೇರವಾಗಿ ಮಾತನಾಡಿದ್ದಾರೆ. ಕೃಷಿ ಜಮೀನುಗಳಿಗೆ ತೆರಳಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ರಾಜ್ಯ ಸರ್ಕಾರ ನಡೆಸಿರುವ ಗ್ರೌಂಡ್ ಟ್ರೂಥಿಂಗ್‌ನಲ್ಲಿ ಕಂಡುಬಂದ ಪರಿಸ್ಥಿತಿಯನ್ನು ಅವರೂ ಸ್ಥಳದಲ್ಲಿಯೇ ನೋಡಿದ್ದಾರೆ. ಜಿಲ್ಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಯಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕೇಂದ್ರ ತಂಡಕ್ಕೆ ಪರಿಸ್ಥಿತಿಯನ್ನು ವಿವರಿಸಿದ್ದಾರೆ ಎಂದರು.
ಕೇಂದ್ರ ತಂಡದ ಪರಿಶೀಲನೆ ಇಂದು ಅಥವಾ ನಾಳೆ ಮುಗಿಯಲಿದೆ. ಬಳಿಕ ಅವರು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುತ್ತಾರೆ. ಆ ವರದಿಯನ್ನು ಆಧರಿಸಿ ನಾವು ಕೇಳಿರುವ ಪರಿಹಾರದ ಕುರಿತು ಕೇಂದ್ರ ಸರ್ಕಾರ ತೀರ್ಮಾನ ಮಾಡಲಿದೆ ಎಂದು ಹೇಳಿದರು.
ಕಂದಾಯ ಇಲಾಖೆಯ ವಿವಿಧ ಸೇವೆಗಳ ಶುಲ್ಕ ಹೆಚ್ಚಳ: ಜಿ. ಪರಮೇಶ್ವರ್ ಹೇಳಿದ್ದೇನು
ಜೀವನ ವೆಚ್ಚ ಹೆಚ್ಚುತ್ತಿರುವ ಸಂದರ್ಭದಲ್ಲಿ ಕೆಲವು ಶುಲ್ಕಗಳನ್ನು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಈಗ ಕಾಸ್ಟ್ ಆಫ್ ಲಿವಿಂಗ್ ಹೆಚ್ಚುತ್ತಿದೆ. ಪ್ರತಿಯೊಂದರ ಬೆಲೆ ಹೆಚ್ಚಾಗುತ್ತಿರುವಾಗ ಸ್ವಾಭಾವಿಕವಾಗಿ ಕೆಲವು ಸೇವೆಗಳ ಶುಲ್ಕವನ್ನೂ ಸ್ವಲ್ಪ ಹೆಚ್ಚಿಸುವ ಕೆಲಸ ಮಾಡಿದ್ದಾರೆ. ಇದು ಸಹಜವಾಗಿ ಆಗುವಂತಹದ್ದು. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಹಣದಲ್ಲಿ ಕೊರತೆಯಾಗುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ತನ್ನದೇ ಆದ ಆದಾಯ ಮೂಲಗಳನ್ನು ಹೆಚ್ಚಿಸಿಕೊಳ್ಳುವುದು ಅಗತ್ಯವಾಗುತ್ತದೆ. ಆದ್ದರಿಂದ ಕೆಲವು ಶುಲ್ಕಗಳನ್ನು ಮಾರ್ಜಿನಲ್ ಆಗಿ ಹೆಚ್ಚಿಸಲಾಗಿದೆ ಎಂದಿದ್ದಾರೆ.
ಭೂ ಸುಧಾರಣಾ ಕಾಯ್ದೆಯ 79ಎ, 79ಬಿ ಮರುಪರಿಶೀಲನೆ ಕುರಿತು ಚರ್ಚೆ
ಅನೇಕ ಕಾರಣಗಳಿಂದ ಹಿಂದೆ 79ಎ, 79ಬಿ ಕಲಂಗಳನ್ನು ಕೈಬಿಡಲಾಗಿತ್ತು. ಈಗ ಅವುಗಳನ್ನು ಪುನರ್ ಪರಿಶೀಲಿಸಬೇಕು ಎಂದು ಸಾಕಷ್ಟು ಮನವಿಗಳು ಬಂದಿವೆ. ಅದನ್ನು ಪರಿಶೀಲಿಸುತ್ತಿದ್ದೇವೆ. ಪರಿಶೀಲನೆ ನಂತರ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇವೆ. ಸಚಿವ ಸಂಪುಟಕ್ಕೆ ತೆಗೆದುಕೊಂಡು ಹೋಗುವ ಅಗತ್ಯ ಬಿದ್ದರೆ, ಅದನ್ನು ಸಚಿವ ಸಂಪುಟದ ಮುಂದೆ ತೆಗೆದುಕೊಂಡು ಹೋಗುತ್ತೇವೆ ಎಂದಿದ್ದಾರೆ.
ಬರದ ಪರಿಣಾಮ ಜಿಎಸ್‌ಟಿ ಸಂಗ್ರಹದ ಮೇಲೂ ಬೀಳುವ ಸಾಧ್ಯತೆ
ಕರ್ನಾಟಕವು ನಿರಂತರವಾಗಿ ಜಿಎಸ್ಟಿ ಸಂಗ್ರಹದಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಯಾವುದೇ ರೀತಿಯ ಕೊರತೆ ಅಥವಾ ತಪ್ಪು ಆಗದಂತೆ ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಜಿಎಸ್‌ಟಿ ಸಂಗ್ರಹ ಮಾಡಲಾಗುತ್ತಿದೆ. ಪ್ರತಿಯೊಂದು ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿಯೂ ರಾಜ್ಯದ ವಾದವನ್ನು ಮಂಡಿಸಿದ್ದೇವೆ. ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವ ಕೃಷ್ಣ ಬೈರೇಗೌಡ ಅವರನ್ನು ಜಿಎಸ್ಟಿ ಕೌನ್ಸಿಲ್ ಸಭೆಗಳಿಗೆ ಡೆಪ್ಯುಟ್ ಮಾಡುತ್ತಿದ್ದರು. ಅವರು ರಾಜ್ಯದ ಪರವಾಗಿ ಏನೆಲ್ಲ ಹೇಳಬೇಕೋ ಅದನ್ನು ಮಂಡಿಸುತ್ತಿದ್ದರು ಎಂದು ಹೇಳಿದರು.
ಫಾರಂ-7 ದುರುಪಯೋಗ, ಸಾಕ್ಷ್ಯ ಸಹಿತ ದೂರು
ಫಾರಂ-7 ದುರುಪಯೋಗದ ಕುರಿತು ಚುನಾವಣಾ ಆಯೋಗಕ್ಕೆ ನೀಡಿರುವ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಡಾ. ಜಿ. ಪರಮೇಶ್ವರ ಅವರು, ಅವರು ಅವರ ಕೆಲಸ ಮಾಡುತ್ತಾರೆ, ನಾವು ನಮ್ಮ ಕೆಲಸ ಮಾಡುತ್ತೇವೆ. ನಾವು ಸಾಕ್ಷ್ಯ ಸಹಿತ ದೂರು ನೀಡಿದ್ದೇವೆ. ಫಾರಂ ನಂಬರ್ 7 ಅನ್ನು ದುರುಪಯೋಗ ಮಾಡಿಕೊಳ್ಳುತ್ತಾ ಇದ್ದದ್ದನ್ನ ರೆಡ್ ಹ್ಯಾಂಡ್ ಆಗಿ ನಾವು ಹಿಡ್ಕೊಂಡು ಅದನ್ನ ಕೊಟ್ಟಿದ್ದೇವೆ. ಒಬ್ಬ ವ್ಯಕ್ತಿ ಎಷ್ಟು ಫಾರಂ ನಂಬರ್ 7 ಸಲ್ಲಿಸಬಹುದು? ಅದಕ್ಕೆ ಇತಿಮಿತಿ ಇಲ್ಲವೇ? ಒಬ್ಬರೇ 100, 200, 400 ಅರ್ಜಿಗಳನ್ನು ಸಲ್ಲಿಸಿದರೆ ಅದು ಯಾವ ರೀತಿ ಸಾಧ್ಯ? ಎಂದು ಪ್ರಶ್ನಿಸಿದರು.
ಒಂದೇ ಒಂದು ಸಮುದಾಯದವರನ್ನು ಗುರುತಿಸಿಕೊಂಡು, ಫಾರಂಗಳನ್ನು ಎಲ್ಲಿಯೋ ಮುದ್ರಿಸಿ ತರಲಾಗುತ್ತಿದೆ. ಅವರ ಡೇಟಾವನ್ನು ಅವರಿಗೆ ಯಾರು ಕೊಟ್ಟರು? ಆ ಡೇಟಾ ಎಲ್ಲಿಂದ ಸಿಕ್ಕಿತು? ಮುದ್ರಿತ ಫಾರಂಗಳ ಮೇಲೆ ಅವರ ಹೆಸರು ಮತ್ತು ಮತದಾರರ ಗುರುತಿನ ಚೀಟಿ ವಿವರಗಳನ್ನು ಬರೆದು ಸಲ್ಲಿಸಲಾಗುತ್ತಿದೆ. ಇದು ಕಾನೂನಿಗೆ ವಿರುದ್ಧವಾದದ್ದು ಎಂದು ಹೇಳಿದರು.
ಈ ಎಲ್ಲವನ್ನೂ ನಾವು ಸಾಕ್ಷ್ಯ ಸಹಿತ ಚುನಾವಣಾ ಆಯೋಗಕ್ಕೆ ನೀಡಿದ್ದೇವೆ. ಚುನಾವಣಾ ಆಯೋಗವು ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ಏಳು ದಿನಗಳ ಸಮಯ ಕೊಟ್ಟು, ನಂತರ ಎಫ್‌ಐಆರ್ ದಾಖಲಿಸುವುದಾಗಿ ಹೇಳಿದೆ. ಅದನ್ನು ಅವರು ಮಾಡಬೇಕು. ನಾವು ಗುರುತಿಸಿ ನೀಡಿರುವ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.


Click it and Unblock the Notifications
