ಕಂದಾಯ ಇಲಾಖೆಯ 63 ಅಧಿಕಾರಿಗಳಿಗೆ ಗುಡ್ನ್ಯೂಸ್: ತಹಶೀಲ್ದಾರ್ ಗ್ರೇಡ್-1ರಿಂದ KAS ಕಿರಿಯ ಶ್ರೇಣಿಗೆ ಬಡ್ತಿ
ಬೆಂಗಳೂರು: ರಾಜ್ಯ ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದತಹಶೀಲ್ದಾರ್ ಗ್ರೇಡ್-1 ವೃಂದದ 63 ಅಧಿಕಾರಿಗಳಿಗೆ ಗುಡ್ನ್ಯೂಸ್ ನೀಡಲಾಗಿದೆ. ಇಲಾಖೆ ವ್ಯಾಪ್ತಿಯಲ್ಲಿ ಬಹುಕಾಲದಿಂದ ಬಾಕಿ ಉಳಿದಿದ್ದ ಬಡ್ತಿ ಪ್ರಕ್ರಿಯೆಗೆ ವೇಗ ನೀಡಲಾಗಿದೆ.ಸದರಿ 63 ಅಧಿಕಾರಿಗಳಿಗೆ ಕರ್ನಾಟಕ ಆಡಳಿತ ಸೇವೆಯ (KAS) ಕಿರಿಯ ಶ್ರೇಣಿ ವೃಂದಕ್ಕೆ ಪದೋನ್ನತಿ ನೀದಿದ್ದೇವೆ ಎಂದು ಕಂದಾಯ ಸಚಿವ ಮತ್ತು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ತಿಳಿಸಿದ್ದಾರೆ.
ಬಾಕಿ ಉಳಿದ ಹುದ್ದೆಗಳ ಪದೋನ್ನತಿ ಸಂಬಂಧ ಅಧಿಕಾರಿಗಳ ಬಹುಕಾಲದ ಬೇಡಿಕೆಗೆ ಸ್ಪಂದಿಸಲಾಗಿದೆ., ಅವರ ಸೇವೆ ಮತ್ತು ಅನುಭವಕ್ಕೆ ಸೂಕ್ತ ಮನ್ನಣೆ ನೀಡಿದ್ದೇವೆ.ಭೂ ದಾಖಲೆಗಳು, ಕಂದಾಯ ಸೇವೆಗಳು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಂತಹ ಜವಾಬ್ದಾರಿಗಳ ನಿರ್ವಹಣೆಯಲ್ಲಿ ಅಧಿಕಾರಿಗಳ ಅನುಭವ ಮತ್ತು ದಕ್ಷತೆ ಮಹತ್ವದ್ದು. ಬಡ್ತಿಯೊಂದಿಗೆ ದೊರೆಯುವ ಹೆಚ್ಚಿನ ಜವಾಬ್ದಾರಿಯನ್ನು ಅಧಿಕಾರಿಗಳು ಜನಪರ ಆಡಳಿತಕ್ಕೆ ಪೂರಕವಾಗಿ ಬಳಸಿಕೊಂಡು, ಸಾರ್ವಜನಿಕರಿಗೆ ಮತ್ತಷ್ಟು ಪಾರದರ್ಶಕ, ಪರಿಣಾಮಕಾರಿ ಮತ್ತು ಸಕಾಲಿಕ ಸೇವೆ ಒದಗಿಸಲಿದ್ದಾರೆ ಎಂದು ಹೇಳಿದರು.

ಪ್ರಾಮಾಣಿಕತೆ, ಬದ್ಧತೆ ಮತ್ತು ದಕ್ಷತೆಯಿಂದ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಸೂಕ್ತ ಮನ್ನಣೆ ದೊರೆತಾಗ, ಅದು ಇತರ ಅಧಿಕಾರಿಗಳಿಗೂ ಪ್ರೇರಣೆಯಾಗುತ್ತದೆ. ಇದೇ ಸ್ಫೂರ್ತಿಯೊಂದಿಗೆ ಇನ್ನಷ್ಟು ಅಧಿಕಾರಿಗಳು ಜನರ ವಿಶ್ವಾಸಕ್ಕೆ ಪಾತ್ರರಾಗುವಂತೆ ಹಾಗೂ ಜನಸೇವೆಯನ್ನು ತಮ್ಮ ಕರ್ತವ್ಯದ ಪ್ರಮುಖ ಧ್ಯೇಯವನ್ನಾಗಿಸಿಕೊಳ್ಳುವಂತೆ ಈ ನಿರ್ಧಾರ ಪ್ರೇರೇಪಿಸಲಿ.
ಇಲಾಖೆ ವ್ಯಾಪ್ತಿಯಲ್ಲಿ ಉತ್ತಮ ಆಡಳಿತ ಗುರಿ
ಜನಪರ ಆಡಳಿತಕ್ಕೆ ಬದ್ಧವಾಗಿರುವ ನಮ್ಮ ಸರ್ಕಾರವು ಅಧಿಕಾರಿಗಳ ಸೇವೆ ಮತ್ತು ಕೊಡುಗೆಗೆ ಸೂಕ್ತ ಗೌರವ ನೀಡುವುದರೊಂದಿಗೆ, ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಧಿಕಾರಿಗಳ ವೃತ್ತಿಪರ ಬೆಳವಣಿಗೆ ಹಾಗೂ ಜನರಿಗೆ ಉತ್ತಮ ಸೇವೆ ಒದಗಿಸುವ ಗುರಿ, ಇವೆರಡೂ ಜೊತೆಯಾಗಿ ಸಾಗಿದಾಗ ಮಾತ್ರ ಸಮರ್ಥ, ಸ್ಪಂದನಾಶೀಲ ಮತ್ತು ಜನಸ್ನೇಹಿ ಆಡಳಿತವನ್ನು ಕಟ್ಟಲು ಸಾಧ್ಯ ಎಂದರು.
ಈ ನಂಬಿಕೆಯೊಂದಿಗೆ ನಾವು ನಮ್ಮ ಇಲಾಖೆಯ ಎಲ್ಲ ಹಂತದ ಅಧಿಕಾರಿ, ನೌಕರರಿಗೆ ಪದೋನ್ನತಿಯನ್ನು ನೀಡಿ ಬೆನ್ನು ತಟ್ಟಿದ್ದೇವೆ. ಬಾಕಿ ಉಳಿದಿದ್ದ ಅಧಿಕಾರಿಗಳಿಗೂ ಈಗ ಪದೋನ್ನತಿ ನೀಡಿದ್ದೇವೆ.
ಪದೋನ್ನತಿ ಪಡೆದ ಅಧಿಕಾರಿಗಳು ಜನರ ಸಮಸ್ಯೆಗಳನ್ನು ಇನ್ನಷ್ಟು ಶ್ರದ್ಧೆ, ಬದ್ಧತೆಗಳಿಂದ ಪರಿಹರಿಸಲಿ, ಸರ್ಕಾರದ ಕಾರ್ಯಕ್ರಮಗಳನ್ನು ದಕ್ಷತೆಯಿಂದ ಜನರಿಗೆ ಮುಟ್ಟಿಸಲಿ. ಸಂವಿಧಾನದ ಆಶಯಗಳನ್ನು ಈಡೇರಿಸಲಿ ಎಂದು ಆಶಿಸುತ್ತೇನೆ.


Click it and Unblock the Notifications
