Vande Bharat Express to Kalaburagi: ಕಲಬುರಗಿಗೆ ವಂದೇ ಭಾರತ್ ರೈಲು ಸೇವೆ ಆರಂಭ ಯಾವಾಗ?-ಮಾಹಿತಿ
ಕಲಬುರಗಿ, ಮಾರ್ಚ್, 06: ದೇಶಾದ್ಯಂತ ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ಅಲ್ಲದೆ ಇನ್ನು ಕೆಲವು ಹೊಸ ಮಾರ್ಗಗಳಲ್ಲಿ ಈ ರೈಲು ಸೇವೆ ಒದಗಿಸಲು ಭಾರೀ ಬೇಡಿಕೆಗಳು ಬರುತ್ತಲೇ ಇವೆ. ಹಾಗೆಯೇ ಇದೀಗ ರೈಲು ನಿರ್ವಹಣಾ ವ್ಯವಸ್ಥೆಗೆ ಎರಡನೇ ಪಿಟ್‌ಲೈನ್ ನಿರ್ಮಾಣ ಆಗುತ್ತಿರುವುದರಿಂದ ಶೀಘ್ರದಲ್ಲೇ ಕಲಬುರಗಿಗೆ ವಂದೇ ಭಾರತ್ ರೈಲು ಆರಂಭ ಆಗಲಿದೆ ಎಂದು ಸಂಸದ ಡಾ.ಉಮೇಶ್ ಜಾಧವ್ ಭರವಸೆ ನೀಡಿದರು.
ಕಲಬುರಗಿಯ ರೈಲು ನಿಲ್ದಾಣದಲ್ಲಿ ಎರಡನೇ ಪಿಟ್‌ಲೈನ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಮಾತನಾಡಿದ ಅವರು, ರೈಲುಗಳ ನಿರ್ವಹಣೆಗೆ ಪಿಟ್‌ಲೈನ್ ಕೊರತೆ ಇತ್ತು. ಇದೀಗ 33 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡನೇ ಪಿಟ್‌ಲೈನ್ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿರುವುದರಿಂದ ಮುಂದಿನ ಎರಡು ತಿಂಗಳ ಒಳಗೆ ಕಾಮಗಾರಿ ಆರಂಭವಾಗಿ ಮುಕ್ತಾಯವಾಗಲಿದೆ ಎಂದು ತಿಳಿಸಿದ್ದಾರೆ.

ರೈಲ್ವೆ ಇಲಾಖೆಯಲ್ಲಿ ದೊಡ್ಡ ದೊಡ್ಡ ಬದಲಾವಣೆಗಳು ಆಗುತ್ತಲೇ ಇವೆ. ಇನ್ನು ಇತಿಹಾಸದಲ್ಲಿಇದೇ ಮೊದಲ ಬಾರಿಗೆ ಕಲಬುರಗಿಗೆ ಉನ್ನತ ಸೌಲಭ್ಯಗಳು ಲಭ್ಯ ಆಗುತ್ತಿದೆ. ಶಹಾಬಾದ್‌ನಲ್ಲಿ ಮೂರು ರೈಲುಗಳ ನಿಲುಗಡೆ ಆರಂಭಗೊಂಡಿದೆ. ಶೀಘ್ರ ಮಳಖೇಡ ನಿಲ್ದಾಣದಲ್ಲೂ ರೈಲುಗಳ ನಿಲುಗಡೆ ಪ್ರಕ್ರಿಯೆ ಆರಂಭ ಆಗಲಿದೆ. ಕಲಬುರಗಿಗೆ ಕಿಸಾನ್ ರೈಲು ಸಂಚಾರ ಪ್ರಸ್ತಾಪವಿದ್ದು, ಇದರಿಂದ ರೈತರಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲ ಆಗಲಿದೆ ಎಂದು ಹೇಳಿದರು.
ಮತ್ತೊಂದೆಡೆ ರೈಲುಗಳ ಸುರಕ್ಷತಾ ಪರೀಕ್ಷೆ, ನೀರಿನ ಶೇಖರಣೆ, ಬೆಳಕಿನ ವ್ಯವಸ್ಥೆ, ದುರಸ್ತಿ ಕಾರ್ಯ, ಶೌಚಾಲಯ ಶುಚೀಕರಣ ಕೆಲಸಗಳಿಗೆ ಪಿಟ್‌ಲೈನ್ ಅತ್ಯಂತ ಅಗತ್ಯ ಆಗಿದೆ. ಈ ಸಮಸ್ಯೆ ಶೀಘ್ವೇರ ನಿವಾರಣೆಗೊಳ್ಳಲಿದೆ. ಇನ್ನು ಶೀಘ್ರದಲ್ಲೇ ವಂದೇ ಭಾರತ್ ರೈಲು ಇಲ್ಲಿಂದ ಪ್ರಾರಂಭಿಸಲು ಅನುಕೂಲಕರ ಆಗಲಿದೆ ಎಂದು ತಿಳಿಸಿದ್ದಾರೆ.
ವಂದೇ ಭಾರತ್ ರೈಲಿಗೆ ಬೇಡಿಕೆಯಿಟ್ಟಾಗ ಕಲಬುರಗಿ ನಿಲ್ದಾಣದಲ್ಲಿ ನಿರ್ವಹಣಾ ವ್ಯವಸ್ಥೆಯ ಕೊರತೆ ಮತ್ತು ಪಿಟ್‌ಲೈನ್ ಸೌಲಭ್ಯಗಳ ತೀವ್ರ ಕೊರತೆ ಎದುರಿಸಿ ರೈಲು ಪಡೆಯಲು ಸಾಧ್ಯ ಆಗಲಿಲ್ಲ. ಸದ್ಯ ದೊಡ್ಡ ಸಮಸ್ಯೆಯೊಂದು ನಿವಾರಣೆಗೊಂಡು ಶೀಘ್ರದಲ್ಲೇ ಈ ಬೇಡಿಕೆಯೂ ಈಡೇರಲಿದೆ ಎಂದು ಕಲಬುರಗಿ ಸಂಸದ ಡಾ ಉಮೇಶ್ ಜಾಧವ್ ತಿಳಿಸಿದರು.












Click it and Unblock the Notifications