ಜೇವರ್ಗಿಗೆ ರಾಹುಲ್ ಭೇಟಿ, ಸ್ವಾಗತಿಸಲು ಪ್ರತ್ಯಕ್ಷವಾದ ಮರಗಳು !
ಕಲಬುರಗಿ, ಫೆಬ್ರವರಿ 11 : ಕಳೆದ ಅನೇಕ ವರ್ಷಗಳಿಂದ ಜೇವರ್ಗಿ ಪಟ್ಟಣದಲ್ಲಿ ಹಾದು ಸಾಗುವವರಿಗೆ ಮತ್ತು ಸ್ಥಳೀಯ ನಿವಾಸಿಗಳಿಗೆ ಇಂದು ಅಚ್ಚರಿ ಕಾದಿತ್ತು. ಅದಕ್ಕೆ ಕಾರಣ ಮರಗಳು ಪ್ರತ್ಯಕ್ಷವಾಗಿರುವುದು.
ಹೌದು. ರಾತ್ರಿ ಕಳೆದು ಬೆಳಗಾಗುವದರಲ್ಲಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಆಳೆತ್ತರದ ಗಿಡಗಳು ಪ್ರತ್ಯಕ್ಷವಾಗಿವೆ. ಕಲಬುರಗಿ-ವಿಜಯಪುರ ಹೆದ್ದಾರಿಯಲ್ಲಿ ಜೇವರ್ಗಿ ಪಟ್ಟಣದಲ್ಲಿ ಸುಮಾರು 2 ಕಿ.ಮೀ ರಸ್ತೆ ವಿಭಜಕದ ನಡುವಿನ ಪ್ರದೇಶದಲ್ಲಿ ಗಿಡಗಳನ್ನು ನೆಡಲಾಗಿದೆ.
ಚಿತ್ರಗಳು : ಕರ್ನಾಟಕದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ
ರಸ್ತೆ ನಿರ್ಮಾಣವಾಗಿ ಅನೇಕ ವರ್ಷಗಳು ಕಳೆದರೂ ಗಿಡಗಳನ್ನು ನೆಟ್ಟಿರಲಿಲ್ಲ. ಆದರೆ, ಈಗ ರಾಹುಲ್ ಗಾಂಧಿ ಆಗಮಿಸುವ ಹಿನ್ನಲೆಯಲ್ಲಿ ದಿಢೀರನೆ ಗಿಡ ನೆಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ.

'ರಾಹುಲ್ ಆಗಮನಕ್ಕೂ ಗಿಡಗಳನ್ನು ನೆಡುತ್ತಿರುವದಕ್ಕೂ ಯಾವುದೇ ಸಂಬಂಧವಿಲ್ಲ. ತಾನು ಯಾವುದೇ ಸರ್ಕಾರದ ಹಣದಿಂದ ಇದನ್ನು ಮಾಡಿಲ್ಲಾ. ತನ್ನ ಸ್ವಂತ ಹಣ ಖರ್ಚು ಮಾಡಿ ಗಿಡಗಳನ್ನು ನೆಡೆಸುತ್ತಿದ್ದೇನೆ' ಎಂದು ಶಾಸಕ ಡಾ.ಅಜಯ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.

ಏನಾದರೂ ಆಗಲಿ ಜೇವರ್ಗಿ ಪಟ್ಟಣದ ರಸ್ತೆಗಳಲ್ಲಿ ಗಿಡಗಳು ಕಾಣುತ್ತಿವೆ. ಅವುಗಳನ್ನು ಸರಿಯಾಗಿ ನೋಡಿಕೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.












Click it and Unblock the Notifications