ಬೆಂಗಳೂರಲ್ಲಿ 'ಹೊಸ ಪಾದಚಾರಿ ನೀತಿ': ನೋಂದಣಿ ಆಗದವರ ವ್ಯಾಪಾರಕ್ಕಿಲ್ಲ ಅವಕಾಶ: ಡಿಕೆ ಶಿವಕುಮಾರ್
ಬೆಂಗಳೂರು: ಬೆಂಗಳೂರಲ್ಲಿ ಪಾದಾಚಾರಿ ಮಾರ್ಗದಲ್ಲಿ ಅಂಗಡಿ ಮುಂಗಟ್ಟು ಇಡುವಂತಿಲ್ಲ ಎಂಬ ನಿಯಮವಿದೆ. ನಿಯಮ ಉಲ್ಲಂಘಿಸಿದ ರಸ್ತೆಗಳಲ್ಲಿ ಪರಿಶೀಲನೆ ನಡೆಸುವ ಪಾಲಿಕೆ ಅಧಿಕಾರಿಗಳು ಒತ್ತುವರಿ ತೆರವು ಮಾಡುತ್ತಾರೆ. ಇದರ ಮುಂದುವರಿದ ಭಾಗವಾಗಿ ಸರ್ಕಾರ ಹೊಸ ಪಾದಾಚಾರ ನೀತಿ ರೂಪಿಸಲಿದೆ. ಜೊತೆಗೆ ಮುಖ್ಯರಸ್ತೆ, ಉಪ ಮುಖ್ಯರಸ್ತೆಗಳಲ್ಲಿ ಬೀದಿ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಖುದ್ದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಚ್ಚರಿಸಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಪಾಲಿಕೆಗಳ ಬಜೆಟ್ ಸಿದ್ಧತೆ ಹಾಗೂ ಜಿಬಿಎ ಕಾರ್ಯಕಾರಿ ಸಭೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬೆಂಗಳೂರು ನಗರದಲ್ಲಿ ಪಾದಚಾರಿ ಮಾರ್ಗಕ್ಕೆ ಹೊಸ ನೀತಿ ರೂಪಿಸಲು ತೀರ್ಮಾನಿಸಲಾಗಿದೆ. ಮುಖ್ಯರಸ್ತೆ, ಉಪ ಮುಖ್ಯರಸ್ತೆಗಳಲ್ಲಿ ಬೀದಿ ವ್ಯಾಪಾರಕ್ಕೆ ಅವಕಾಶ ದೊರೆಯವುದಿಲ್ಲ ಎಂದು ವ್ಯಾಪಾರಿಗಳಿಗೆ ಆಘಾತ ನೀಡಿದ್ದಾರೆ.

ಹಗಲು ವೇಳೆ ವ್ಯಾಪಾರ ಮಾಡಿ ರಾತ್ರಿ ವೇಳೆ ಗಾಡಿಯನ್ನು ಬೀದಿ ಬದಿಯಲ್ಲಿ ಕಟ್ಟಿ ಹೋಗಿದ್ದರೆ, ಅಧಿಕಾರಿಗಳು ಎಲ್ಲವನ್ನು ಪ್ಯಾಕ್ ಮಾಡಿಕೊಂಡು ಹೋಗಲಿದ್ದಾರೆ. ಈಗಲೇ ಈ ವಿಚಾರದಲ್ಲಿ ಜನರು ಜಾಗೃತರಾಗಬೇಕು ಎಂದು ಹೇಳಿದರು.
ನಗರದಲ್ಲಿ 60 ಸಾವಿರ ಬೀದಿ ವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದಾರೆ. 30 ಸಾವಿರ ಮಂದಿ ನಮಗೆ ವಾಹನ ಬೇಕು ಎಂದು ಕೇಳಿದ್ದು, ಟೆಂಡರ್ ಕರೆಯಲಾಗಿದೆ. ಬೀದಿ ಬದಿ ವ್ಯಾಪಾರಿಗಳ ಗುರುತಿನ ಚೀಟಿ ಇದ್ದವರಿಗೆ ಮಾತ್ರ ವ್ಯಾಪಾರ ಮಾಡಲು ಅವಕಾಶ ನೀಡಲಾಗುವುದು. ಯಾರು ಗುರುತಿನ ಚೀಟಿ ಹೊಂದಿಲ್ಲ, ಅಂತಹವರಿಗೆ ಬೀದಿ ಬದಿಯಲ್ಲಿ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ತಿಳಿಸಿದರು.
ಜಿಬಿಎ ಬಜೆಟ್ ಮೇಲೆ ಮಹತ್ವದ ಸಭೆ
ಜಿಬಿಎ ವ್ಯಾಪ್ತಿಯ ಎಲ್ಲಾ ಶಾಸಕರನ್ನು ಕರೆದು ಪಾಲಿಕೆಗಳ ಬಜೆಟ್ ಕುರಿತು ಸಭೆ ನಡೆಸಲಾಗಿದೆ. ಇದರ ಜತೆಗೆ ಕೆಲವು ಪ್ರಮುಖ ನಿರ್ಣಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರು ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಪೊಲೀಸ್, ಬೆಸ್ಕಾಂ, ಬಿಎಂಆರ್ ಸಿಎಲ್, ಬಿಡಬ್ಲ್ಯೂಎಸ್ಎಸ್ ಬಿ, ಬಿಡಿಎ ಅಧಿಕಾರಿಗಳು, ಸಚಿವರು, ಶಾಸಕರು, ಸಚಿವರು ಭಾಗವಹಿಸಿದ್ದು, ಪ್ರಮುಖ ಚರ್ಚೆಗಳು ನಡೆದವು.
ಜಿಬಿಎ ಐದೂ ಪಾಲಿಕೆಗಳು ತಮ್ಮದೇ ಆದ ಪ್ರತ್ಯೇಕ ಬಜೆಟ್ ತಯಾರಿಸಿಕೊಂಡಿದ್ದಾರೆ. ಶಾಸಕರುಗಳು ಕೂಡ ತಮ್ಮ ಮನವಿ ಸಲ್ಲಿಸಿದ್ದಾರೆ. ವಾರ್ಡ್ ವಾರು ಅನುದಾನ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಪಾದಚಾರಿ ಮಾರ್ಗಕ್ಕೆ ಹೊಸ ನೀತಿ ತರಲು ತೀರ್ಮಾನಿಸಿದ್ದೇವೆ. ನಾಗರೀಕರು ಪಾದಚಾರಿ ಮಾರ್ಗದಲ್ಲಿ ಸಾಗಲು ಪರದಾಡುತ್ತಿದ್ದು, ಬೀದಿ ಬದಿ ವ್ಯಾಪಾರಿಗಳು ಪಾದಚಾರಿ ಮಾರ್ಗ ಒತ್ತುವರಿ ಮಾಡಿದ್ದಾರೆ. ಅವರಿಗೆ ಪ್ರತ್ಯೇಕ ಜಾಗ ಕಲ್ಪಿಸಿ, ಜನರಿಗೆ ಪಾದಚಾರಿ ಮಾರ್ಗದಲ್ಲಿ ಓಡಾಡಲು ಅವಕಾಶ ಮಾಡಿಕೊಡಬೇಕು ಎಂದು ತೀರ್ಮಾನಿಸಲಾಗಿದೆ. ಬೀದಿ ವ್ಯಾಪಾರಿಗಳ ವ್ಯಾಪಾರಕ್ಕೆ ನಿರ್ದಿಷ್ಟ ರಸ್ತೆಗಳನ್ನು ನಿಗದಿ ಮಾಡಬೇಕು. ಇದಕ್ಕೆ ಎಲ್ಲಾ ಶಾಸಕರು ಒಮ್ಮತದ ಅಭಿಪ್ರಾಯ ತಿಳಿಸಿದ್ದಾರೆ ಎಂದರು.
ಅನಧಿಕೃತ ಫ್ಲೆಕ್ಸ್: 50,000ದಿಂದ1 ಲಕ್ಷ ರೂ. ದಂಡ
ಇನ್ನು ನಾವು ಎಷ್ಟೇ ಹೇಳಿದರೂ ಫ್ಲೆಕ್ಸ್ ಹಾಕುವುದು ಹೆಚ್ಚುತ್ತಿದೆ. ನಮ್ಮ ಪಕ್ಷವೂ ಸೇರಿದಂತೆ ಎಲ್ಲಾ ಪಕ್ಷದವರು ಫ್ಲೆಕ್ಸ್ ಹಾಕುತ್ತಿದ್ದಾರೆ. ಇನ್ನು ಮುಂದೆ ಯಾರು ಅನಧಿಕೃತ ಫ್ಲೆಕ್ಸ್ ಹಾಕುತ್ತಾರೋ ಅವರಿಗೆ ಪ್ರತಿ ಫ್ಲೆಕ್ಸ್ ಗೆ ಅದನ್ನು ಹಾಕಿದವರಿಗೆ 50 ಸಾವಿರದಿಂದ ಒಂದು ಲಕ್ಷ ರೂ. ವರೆಗೆ ದಂಡ ವಿಧಿಸಲು ಸೂಚಿಸಿದ್ದೇವೆ. ಹುಟ್ಟುಹಬ್ಬ, ಶುಭಾಶಯ ಸೇರಿದಂತೆ ಫ್ಲೆಕ್ಸ್ ಹಾವಳಿ ಹೆಚ್ಚಾಗಿದೆ. ಸರ್ಕಾರದಿಂದ ಜಾಹೀರಾತು ಪ್ರಕಟಿಸಲು ಕೆಲವು ಜಾಗ ನಿಗದಿ ಮಾಡಿದ್ದು, ಅಲ್ಲಿ ಅನುಮತಿ ಪಡೆದು ಹಾಕಿಕೊಳ್ಳಲಿ. ಇದರ ಹೊರತಾಗಿ ಫ್ಲೆಕ್ಸ್ ಹಾಕಿದರೆ ನಂತರದ ಪರಿಣಾಮವನ್ನು ನೀವು ಅನುಭವಿಸಬೇಕಾಗುತ್ತದೆ. ಈ ವಿಚಾರವಾಗಿ ಪೊಲೀಸ್ ಹಾಗೂ ಪಾಲಿಕೆಗಳ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ವಿವರಿಸಿದರು.
ನಗರ ಪಾಲಿಕೆ ವ್ಯಾಪ್ತಿಯ ಪಾರ್ಕ್ ಗಳನ್ನು ಸ್ಥಳೀಯ ಶಾಸಕರ ಜೊತೆ ಚರ್ಚೆ ಮಾಡಿ ಯಾವ ಸಮಯದಲ್ಲಿ ತೆಗೆಯಬೇಕು, ಯಾವ ಸಮಯದಲ್ಲಿ ತೆಗೆಯಬಾರದು ಎಂದು ತೀರ್ಮಾನಿಸಬೇಕು. ಹಳೆ ವಾಹನಗಳನ್ನು ವಾರಾನುಗಟ್ಟಲೆ ರಸ್ತೆಗಳಲ್ಲಿ ನಿಲ್ಲಿಸಿ ಹೋಗಿದ್ದಾರೆ, ಅವುಗಳನ್ನು ಎತ್ತಿಕೊಂಡು ಹೋಗಿ ನಿಗದಿತ ಜಾಗದಲ್ಲಿ ಹಾಕಲಾಗುವುದು. ಇದರ ಜವಾಬ್ದಾರಿಯನ್ನು ಪೊಲೀಸರಿಗೆ ನೀಡಲಾಗಿದೆ. ಬೆಲ್ಲಳ್ಳಿ, ಬಿಡಗಾನಹಳ್ಳಿ, ಬಿದ್ದನಳ್ಳಿ, ಸೊಂಡೆಕೊಪ್ಪ ಜಾಗ ನಿಗದಿ ಮಾಡಲಾಗಿದ್ದು, ಇನ್ನು ಕೆಲವು ಜಾಗ ನೀಡಲಾಗುವುದು ಎಂದು ಮಾಹಿತಿ ಕೊಟ್ಟರು.
ಟೋಯಿಂಗ್ ಬಗ್ಗೆ ಡಿಸಿಎಂ ಹೇಳಿದ್ದೇನು?
ವಾಹನಗಳ ಟೋಯಿಂಗ್ ಮಾಡುವ ವಿಚಾರ ಪ್ರಸ್ತಾಪ ಆಗಿದೆಯೇ ಎಂದು ಕೇಳಿದಾಗ, "ಎಲ್ಲಾ ಪಾಲಿಕೆಗಳಿಗೆ 2 ವಾಹನ ನೀಡಿದ್ದೇವೆ. ಎಲ್ಲಿ ವಾಹನ ನಿಲುಗಡೆಗೆ ಅವಕಾಶ ಇರುವುದಿಲ್ಲವೋ, ಅಲ್ಲಿ ವಾಹನ ನಿಲ್ಲಿಸಿದರೆ ಟೋಯಿಂಗ್ ಮಾಡಲಾಗುವುದು. ಪ್ರತಿ ವಾರ್ಡಿಗೆ 5-10 ಕೋಟಿ ಅನುದಾನ ಕೇಳುತ್ತಿದ್ದು, ಎಷ್ಟು ನೀಡಲಾಗುವುದು ಎಂದಾಗ, "ನೋಡೋಣ, ಅವರು ಆಕಾಶವನ್ನು ಕೇಳುತ್ತಿದ್ದಾರೆ, ಭೂಮಿಯನ್ನು ಕೇಳುತ್ತಿದ್ದಾರೆ ಎಂದರು. ದಾವಣಗೆರೆ ಉಪಚುನಾವಣೆಗೆ ಸಮರ್ಥ್ ನಾಮಪತ್ರ ಸಲ್ಲಿಕೆಗೆ ಬಗ್ಗೆ ಅವರು ಉತ್ತರಿಸದೇ ಆ ಬಗ್ಗೆ ಮಾಹಿತಿ ಪಡೆಯುವುದಾಗಿ ತಿಳಿಸಿದರು.












Click it and Unblock the Notifications