ಕಣ್ಣಿನ ರಕ್ಷಣೆಗೆ ಐ-ಡ್ರಾಪ್ಸ್ ಹಾಕಿದವರ ಕಣ್ಣೇ ಹೋಯ್ತಾ?
ನ್ಯೂಯಾರ್ಕ್: ಆಗಾಗ ಮೆಡಿಸಿನ್ ರಿಯಾಕ್ಷನ್ ಬಗ್ಗೆ ಕೇಳಿರ್ತೀವಿ, ನೋಡಿರ್ತೀವಿ. ಆದರೆ ಕೆಲವೊಮ್ಮೆ ಔಷಧ ತಯಾರಿಕಾ ಕಂಪನಿಗಳು ಮಾಡುವ ಎಡವಟ್ಟೇ ರೋಗಿಗಳ ಜೀವ ತೆಗೆಯುತ್ತದೆ, ಇಲ್ಲ ದೊಡ್ಡ ಅನಾಹುತ ಸೃಷ್ಟಿಸಿಬಿಡುತ್ತದೆ. ಇಂತಹದ್ದೇ ಘಟನೆ ಅಮೆರಿಕದಲ್ಲಿ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಕಣ್ಣಿನ ರಕ್ಷಣೆಗೆ ಐ-ಡ್ರಾಪ್ಸ್ ಹಾಕಿದವರು ಈಗ ಪರದಾಡುತ್ತಿದ್ದಾರಂತೆ.
ಅಂದಹಾಗೆ ಭಾರತ ಮೂಲದ 'ಗ್ಲೋಬಲ್ ಫಾರ್ಮಾ ಹೆಲ್ತ್ ಕೇರ್' ಕಂಪನಿ ತಯಾರಿಸಿರುವ ಐ-ಡ್ರಾಪ್ಸ್ ಬಳಸಿ ಮೂವರು ಮೃತಪಟ್ಟು, 8 ಮಂದಿ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಅಮೆರಿಕದ CDC ಉಲ್ಲೇಖಿಸಿ 'ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ. ಇದಲ್ಲದೆ ಹಲವರಿಗೆ ಈ ಐ-ಡ್ರಾಪ್ಸ್ ಬಳಸಿದ ನಂತರ ನಾನಾ ರೀತಿಯ ಸಮಸ್ಯೆ ಕಂಡುಬಂದಿದೆ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ.

ಬ್ಯಾಕ್ಟೀರಿಯಾ ಹಾವಳಿ?: ಗ್ಲೋಬಲ್ ಫಾರ್ಮಾ ಹೆಲ್ತ್ ಕೇರ್ ಕಂಪನಿ EzriCare Artificial Tears ಎಂಬ ಬ್ರಾಂಡ್ ಹೆಸರಿನಡಿ ತಯಾರಿಸಿದ್ದ ಐ-ಡ್ರಾಪ್ಸ್ ಅನ್ನ ಅಮೆರಿಕಗೆ ರಫ್ತು ಮಾಡಲಾಗಿತ್ತು. ಆದರೆ ಈ ಐ-ಡ್ರಾಪ್ಸ್ ಬಳಸಿದವರಲ್ಲಿ ನಾನಾ ಸಮಸ್ಯೆ ಕಂಡುಬಂದಿರುವುದಾಗಿ CDC ಅಥವಾ ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಪತ್ತೆ ಮಾಡಿದೆ ಎಂದು 'ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ. ಐ-ಡ್ರಾಪ್ಸ್‌ನಲ್ಲಿ ಔಷಧ ನಿರೋಧಕ ಬ್ಯಾಕ್ಟೀರಿಯಾ ಹಾವಳಿ ಇರಬಹುದು ಎಂದು ಕಳವಳ ವ್ಯಕ್ತಪಡಿಸಿದೆಯಂತೆ CDC.
ಚಿಕಿತ್ಸೆಯೇ ಕಷ್ಟ: ಸಮಸ್ಯೆ ತಿಳಿಯುತ್ತಿದ್ದಂತೆ ಗ್ಲೋಬಲ್ ಫಾರ್ಮಾ ಹೆಲ್ತ್ ಕೇರ್ ಕಂಪನಿ ಐ-ಡ್ರಾಪ್ಸ್ ಮರಳಿಸುವಂತೆ ಮಾರಾಟಗಾರರಲ್ಲಿ ಮನವಿ ಮಾಡಿದೆ. ಅಲ್ಲದೆ ಕಳೆದ ಫೆಬ್ರವರಿಯಲ್ಲೇ EzriCare Artificial Tears ಐ-ಡ್ರಾಪ್ಸ್ ಉತ್ಪಾದನೆ ನಿಲ್ಲಿಸಿದೆ ಎನ್ನಲಾಗಿದೆ. ಸ್ಯೂಡೋಮೊನಸ್ ಎರುಗಿನೋಸಾ ಎಂಬ ಬ್ಯಾಕ್ಟೀರಿಯಾದಿಂದ ಇಂತಹ ಸಮಸ್ಯೆ ಉಲ್ಬಣಿಸಿರುವ ಸಾಧ್ಯತೆ ಇದ್ದು, ಆಂಟಿಬಯೋಟಿಕ್ ಬಳಸಿ ಚಿಕಿತ್ಸೆ ನೀಡಿದರೂ ಗುಣಪಡಿಸುವುದು ಕಷ್ಟ ಎಂಬ ಮಾತನ್ನು ತಜ್ಞರು ಹೇಳುತ್ತಿದ್ದಾರೆ.

ಕಟ್ಟುನಿಟ್ಟಿನ ಕ್ರಮ: ಸ್ಯೂಡೋಮೊನಸ್ ಎರುಗಿನೋಸಾ ಬ್ಯಾಕ್ಟೀರಿಯಾ ರಕ್ತ, ಶ್ವಾಸಕೋಶ ಸೇರಿದಂತೆ ಗಾಯಗಳಲ್ಲಿ ಸೋಂಕು ಉಂಟುಮಾಡುತ್ತದೆ. ಹೀಗಾಗಿ ಸಮಸ್ಯೆ ಕಂಡುಬಂದಿರುವ ಐ-ಡ್ರಾಪ್ಸ್ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲಾಗುತ್ತಿದೆ. ಸಮಸ್ಯೆ ಮತ್ತಷ್ಟು ಉಲ್ಬಣಿಸದಂತೆ ಅಮೆರಿಕದ ಆಹಾರ ಮತ್ತು ಔಷಧ ಗುಣಮಟ್ಟ ನಿರ್ದೇಶನಾಲಯ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಕಳೆದ ವರ್ಷ ಗ್ಯಾಂಬಿಯಾ ಮತ್ತು ಉಜ್ಬೇಕಿಸ್ತಾನ್‌ನಲ್ಲಿ ಭಾರತ ಮೂಲದ ಕಂಪನಿಗಳು ತಯಾರಿಸಿದ ಕೆಮ್ಮಿನ ಔಷಧದಿಂದ ಮಕ್ಕಳು ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ತನಿಖೆಯನ್ನೂ ಕೈಗೊಳ್ಳಲಾಗಿತ್ತು. ಈ ಘಟನೆ ನಡೆದ ಬಳಿಕ ಗ್ಲೋಬಲ್ ಫಾರ್ಮಾ ಹೆಲ್ತ್ ಕೇರ್ ಕಂಪನಿಯ ಐ-ಡ್ರಾಪ್ಸ್ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.
ಫಂಗಸ್ ಹಾವಳಿ: ಕೆಲ ವಾರಗಳ ಹಿಂದಷ್ಟೇ ಅಮೆರಿಕದಲ್ಲಿ ಹೊಸ ಮತ್ತು ಅಪಾಯಕಾರಿ ಶಿಲೀಂಧ್ರ ವೇಗವಾಗಿ ಹರಡುತ್ತಿವುದು ಗಮನಕ್ಕೆ ಬಂದಿತ್ತು. ಹೆಚ್ಚಿನ ಸಂಶೋಧನೆ ನಡೆಸಿದಾಗ ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಅಧಿಕಾರಿಗಳು ಬೆಚ್ಚಿಬೀಳಿಸುವ ಸಂಗತಿ ಮನಗಂಡಿದ್ದರು. ಕ್ಯಾಂಡಿಡಾ ಔರಿಸ್ ಅಥವಾ ಸಿ. ಔರಿಸ್ ಎನ್ನಲಾಗುವ ಶಿಲೀಂಧ್ರ ಅಥವಾ ಫಂಗಸ್ ಔಷಧ-ನಿರೋಧಕವಾಗಿ ಜನರನ್ನ ಕಾಡುತ್ತಿರುವುದು ಬೆಳಕಿಗೆ ಬಂದಿತ್ತು. ಕ್ಯಾಂಡಿಡಾ ಔರಿಸ್ ಫಂಗಸ್ ಬಗ್ಗೆ ಜನ ಆತಂಕಗೊಂಡಿರುವಾಗಲೇ ಸ್ಯೂಡೋಮೊನಸ್ ಎರುಗಿನೋಸಾ ಬ್ಯಾಕ್ಟೀರಿಯಾ ಬಗ್ಗೆಯೂ ಭಯ ಮೂಡಿದೆ.
ಒಟ್ಟಾರೆ ಹೇಳುವುದಾದರೆ ಕೊರೊನಾ ಬಳಿಕ ಒಂದಲ್ಲ ಒಂದು ಆರೋಗ್ಯ ಸಂಬಂಧಿ ಸಮಸ್ಯೆ ಎದುರಿಸುತ್ತಿರುವ ದೊಡ್ಡಣ್ಣ ಅಮೆರಿಕದಲ್ಲಿ ಐ-ಡ್ರಾಪ್ಸ್ ವಿಚಾರ ಸಂಚಲನ ಸೃಷ್ಟಿಸಿದೆ. ಈ ಕುರಿತು ಸೂಕ್ತ ಪರಿಶೀಲನೆ ಹಾಗು ತನಿಖೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಘಟನೆಗೆ ಕಾರಣ ಏನು ಎಂಬುದು ಗೊತ್ತಾಗಲಿದೆ.












Click it and Unblock the Notifications