UAEಯಲ್ಲಿ ಶಾಲಾ ವಾಚ್‌ಮ್ಯಾನ್ ಕೆಲಸ ಮಾಡುತ್ತಿದ್ದ ಕೇರಳದ ವ್ಯಕ್ತಿಗೆ ಒಲಿದ 26 ಲಕ್ಷ ರೂ. ಬಿಗ್ ಲಾಟರಿ ಟಿಕೆಟ್
ಅಬುದಾಬಿ : ಗಲ್ಫ್ ರಾಷ್ಟ್ರಗಳಿಗೆ ಉದ್ಯೋಗ ಅರಸಿ ಹೋಗುವ ಲಕ್ಷಾಂತರ ಭಾರತೀಯರಿಗೆ ಅಲ್ಲಿನ ಪ್ರತಿಷ್ಠಿತ ಲಾಟರಿಗಳು ಕೆಲವೊಮ್ಮೆ ಜೀವನ ಬದಲಾಯಿಸುವ ಆಶಾಕಿರಣಗಳಾಗಿ ಬದಲಾಗಿವೆ. ಹಗಲಿರುಳು ದುಡಿಯುವ ಕಾರ್ಮಿಕರು ತಮ್ಮ ಕಷ್ಟದ ದಿನಗಳ ಅಂತ್ಯಕ್ಕಾಗಿ ಇಂತಹ ಲಾಟರಿಗಳ ಮೊರೆ ಹೋಗುವುದು ಸಾಮಾನ್ಯ.
ಇದೀಗ ಯುಎಇಯಲ್ಲಿ ಶಾಲಾ ವಾಚ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಭಾರತೀಯರೊಬ್ಬರಿಗೆ ಇಂಥದ್ದೇ ಅದೃಷ್ಟ ಒಲಿದುಬಂದಿದೆ. ಸತತ 4 ವರ್ಷಗಳ ಕಾಲ ಬಿಡದೆ ಟಿಕೆಟ್ ಖರೀದಿಸುತ್ತಿದ್ದ ಇವರಿಗೆ ಈಗ ಪ್ರತಿಷ್ಠಿತ ಬಿಗ್ ಟಿಕೆಟ್ ಲಾಟರಿ ಡ್ರಾದಲ್ಲಿ ಬರೋಬ್ಬರಿ 1 ಲಕ್ಷ ದಿರ್ಹಾಮ್ ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಅಂದಾಜು ಮಾಡುವುದಾದರೆ 26 ಲಕ್ಷ ರೂಪಾಯಿ ಬಂಪರ್ ಬಹುಮಾನ ಒಲಿದುಬಂದಿದೆ.

"ಯಾವತ್ತೂ ಭರವಸೆ ಕಳೆದುಕೊಳ್ಳಬೇಡಿ, ನಿಮ್ಮ ಅದೃಷ್ಟದ ದಿನ ಖಂಡಿತ ಬಂದೇ ಬರುತ್ತದೆ" ಎಂದು ಲಾಟರಿ ಗೆದ್ದ ಬಳಿಕ ಅವರು ಇತರರಿಗೂ ಸ್ಫೂರ್ತಿಯ ಮಾತುಗಳನ್ನಾಡಿದ್ದಾರೆ.
ಶಾಲಾ ವಾಚ್‌ಮ್ಯಾನ್‌ಗೆ ಒಲಿದ ಬಿಗ್ ಟಿಕೆಟ್ ಲಾಟರಿ
ಬಿಗ್ ಟಿಕೆಟ್ ಸಿರೀಸ್ 289ರ ಡ್ರಾದಲ್ಲಿ ಗೆದ್ದ ಅದೃಷ್ಟಶಾಲಿ ವ್ಯಕ್ತಿ ಕೇರಳ ಮೂಲದ 44 ವರ್ಷದ ಸೈದಲವಿ ಕರಿಯೋಡನ್ ವರಿಚಾಲಿಲ್. ಇವರು ಕಳೆದ 17 ವರ್ಷಗಳಿಂದ ಯುಎಇಯಲ್ಲಿ ವಾಸವಿದ್ದು, ಶಾಲೆಯೊಂದರಲ್ಲಿ ವಾಚ್‌ಮ್ಯಾನ್ ಆಗಿ ಕೆಲ ಮಾಡುತ್ತಿದ್ದಾರೆ. ತಮ್ಮ ಸ್ನೇಹಿತರ ಮೂಲಕ ಈ ಪ್ರಖ್ಯಾತ ಲಾಟರಿ ಬಗ್ಗೆ ತಿಳಿದುಕೊಂಡಿದ್ದ ಸೈದಲವಿ, ಕಳೆದ ನಾಲ್ಕು ವರ್ಷಗಳಿಂದ ಸ್ನೇಹಿತರ ಗುಂಪಿನೊಂದಿಗೆ ಸೇರಿ ಪ್ರತಿ ತಿಂಗಳೂ ಲಾಟರಿ ಟಿಕೆಟ್ ಖರೀದಿಸುತ್ತಿದ್ದರು. ಈ ಬಾರಿ ಅವರ ಸ್ನೇಹಿತ ಅನುಬ್ ಎಂಬುವವರು ಆರಿಸಿದ್ದ ಟಿಕೆಟ್‌ಗೆ ಬಂಪರ್ ಬಹುಮಾನ ಒಲಿದಿದೆ. ಅನಿರೀಕ್ಷಿತವಾಗಿ ಲಾಟರಿ ಗೆದ್ದಿರುವುದು ಇಬ್ಬರಿಗೂ ಆನಂದದಾಯಕ ಅಚ್ಚರಿ ಮೂಡಿಸಿದೆ.
ಅನಿವಾಸಿ ಭಾರತೀಯನ ಕನಸು ನನಸು
ಬಹುಮಾನದ ಮೊತ್ತವನ್ನ ಏನು ಮಾಡುತ್ತೀರಿ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸೈದಲವಿ, "ಈ ಹಣದಲ್ಲಿ ನನ್ನ ಪಾಲಿಗೆ ಬರುವ ಮೊತ್ತವನ್ನ ಭಾರತದಲ್ಲಿರುವ ನನ್ನ ಕುಟುಂಬಕ್ಕೆ ಕಳುಹಿಸುತ್ತೇನೆ. ಅವರ ಆರ್ಥಿಕ ಅಗತ್ಯಗಳನ್ನ ಪೂರೈಸಲು ಹಾಗೂ ಭವಿಷ್ಯದ ಭದ್ರತೆಗೆ ಇದು ನೆರವಾಗಲಿದೆ," ಎಂದು ಸಂತಸ ವ್ಯಕ್ತಪಡಿಸಿದ್ದಾರೆ. 26 ಲಕ್ಷ ರೂ.ಗಳ ದೊಡ್ಡ ಮೊತ್ತ ಗೆದ್ದರೂ ಅವರ ಲಾಟರಿ ಮೇಲಿನ ಒಲವು ಕಡಿಮೆಯಾಗಿಲ್ಲ. ಮುಂದಿನ ಡ್ರಾಕ್ಕಾಗಿ ಅವರು ಈಗಾಗಲೇ ಮತ್ತೊಂದು ಟಿಕೆಟ್ ಖರೀದಿಸಿರುವುದು ಅವರ ಉತ್ಸಾಹಕ್ಕೆ ಸಾಕ್ಷಿಯಾಗಿದೆ. ಬಿಗ್ ಟಿಕೆಟ್‌ನಲ್ಲಿ ಭಾಗವಹಿಸುವ ಇತರರಿಗೂ ಸಂದೇಶ ನೀಡಿರುವ ಅವರು, "ಯಾವತ್ತೂ ಆಸೆ ಬಿಡಬೇಡಿ, ನಿರಂತರವಾಗಿ ಪ್ರಯತ್ನಿಸುತ್ತಿರಿ, ನಿಮಗೂ ಒಂದು ದಿನ ಅದೃಷ್ಟ ಖಂಡಿತ ಒಲಿಯುತ್ತದೆ" ಎಂದಿದ್ದಾರೆ.
ಕೇರಳದ ಇತರ ಇಬ್ಬರು ಯುವಕರಿಗೂ ಒಲಿದ ಲಾಟರಿ ಟಿಕೆಟ್
ಸಿರೀಸ್ 289ರ ಈ ಡ್ರಾದಲ್ಲಿ ಒಟ್ಟು ಐದು ಮಂದಿ ತಲಾ 1 ಲಕ್ಷ ದಿರ್ಹಾಮ್ ಬಹುಮಾನ ಗೆದ್ದಿದ್ದಾರೆ. ವಿಶೇಷವೆಂದರೆ, ಸೈದಲವಿ ಅವರಲ್ಲದೆ ಕೇರಳದ ಮತ್ತಿಬ್ಬರು ಯುವಕರು ಕೂಡ ಈ ಪಟ್ಟಿಯಲ್ಲಿದ್ದಾರೆ. 28 ವರ್ಷದ ಅಖಿಲ್ ಚಂದ್ರನ್ ಆರ್.ಪಿ ಮತ್ತು 33 ವರ್ಷದ ಶರತ್ ಶಶಿಧರನ್ ಕೂಡ ತಲಾ 26 ಲಕ್ಷ ರೂ. ಗೆದ್ದುಕೊಂಡಿದ್ದಾರೆ. ಸೇಲ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಅಖಿಲ್ ಕಳೆದ 5 ವರ್ಷಗಳಿಂದ ಯುಎಇಯಲ್ಲಿದ್ದು, 7 ವರ್ಷಗಳಿಂದ ಗೆಳೆಯರೊಂದಿಗೆ ಲಾಟರಿ ಖರೀದಿಸುತ್ತಿದ್ದರು.
ಇನ್ನು 2007ರಿಂದಲೇ ಯುಎಇಯಲ್ಲಿರುವ ಟೆಕ್ನಿಷಿಯನ್ ಶರತ್ ಅವರು ತಮ್ಮ ತಾಯಿ ಮತ್ತು ಹೆಣ್ಣುಮಕ್ಕಳು ಆರಿಸಿದ್ದ ಟಿಕೆಟ್‌ನಿಂದ ಈ ಅದೃಷ್ಟ ಪಡೆದಿದ್ದಾರೆ. ಉಳಿದಂತೆ ಬಾಂಗ್ಲಾದೇಶದ ಇಬ್ಬರು ನಾಗರಿಕರಾದ ಆರಿಫುಝಮಾನ್ ಶುಭೋ ಮತ್ತು ಸಬುಜ್ ಮೊಹಮ್ಮದ್ ದೆಲೋವರ್ ಮುನ್ಶಿ ಕೂಡ ಈ ಡ್ರಾದಲ್ಲಿ ಬಹುಮಾನ ಹಂಚಿಕೊಂಡಿದ್ದಾರೆ.


Click it and Unblock the Notifications
