ಟರ್ಕಿಗೆ ಶಾಕ್ ಕೊಟ್ಟ ಉಗ್ರರು, ಭೀಕರ ಬಾಂಬ್ ದಾಳಿ ಹೇಗಿತ್ತು?
ಭಾನುವಾರ ರಜೆ ಮೂಡ್‌ನಲ್ಲಿ ಇದ್ದ ಟರ್ಕಿ ದೇಶದ ಜನರಿಗೆ ಉಗ್ರರು ಶಾಕ್ ಕೊಟ್ಟಿದ್ದಾರೆ. ಇತ್ತೀಚೆಗೆ ಭೀಕರ ಭೂಕಂಪದ ಪರಿಣಾಮ ಟರ್ಕಿ ನಲುಗಿ ಹೋಗಿತ್ತು. ಆ ನೋವನ್ನು ಜನ ಮರೆಯುವ ಮೊದಲೇ, ಈಗ ಟರ್ಕಿ ರಾಜಧಾನಿಯು ಬಾಂಬ್ ಸ್ಫೋಟದ ಸದ್ದಿಗೆ ಬೆಚ್ಚಿದೆ. ಹಾಗಾದರೆ ಟರ್ಕಿ ರಾಜಧಾನಿಯಲ್ಲಿ ಆಗಿದ್ದು ಏನು? ಬನ್ನಿ ತಿಳಿಯೋಣ.
ಅಷ್ಟಕ್ಕೂ ಟರ್ಕಿ ರಾಜಧಾನಿ ಅಂಕಾರ ಮುಖ್ಯ ಭಾಗದಲ್ಲೇ ಇಂದು ಡೆಡ್ಲಿ ಬಾಂಬ್ ಬ್ಲಾಸ್ಟ್ ಆಗಿದೆ. ಅಂಕಾರ ಹೃದಯಭಾಗದಲ್ಲಿ ಭಾರೀ ಸ್ಫೋಟ ಸದ್ದು ಕೇಳಿಸಿದೆ ಎಂದು ಟರ್ಕಿ ದೇಶದ ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ ಕೆಲವು ಮಾಹಿತಿಗಳ ಪ್ರಕಾರ ಬಾಂಬ್ ಸ್ಫೋಟದ ನಂತರ ಗುಂಡಿನ ದಾಳಿ ಕೂಡ ನಡೆದಿದೆ. ಮೇಲ್ನೋಟಕ್ಕೆ ಇದನ್ನ ಉಗ್ರರ ಅಟ್ಯಾಕ್ ಅಂತಾ ನಿರ್ಧರಿಸಲಾಗಿದ್ದು, ತಕ್ಷಣವೇ ಟರ್ಕಿ ಪಡೆಗಳು ರಾಜಧಾನಿಯಲ್ಲಿ ಹೈಅಲರ್ಟ್ ಘೋಷಣೆ ಮಾಡಿವೆ. ಹಾಗಾದರೆ ಸ್ಫೋಟದಲ್ಲಿ ಉಂಟಾದ ನಷ್ಟ ಏನು?

ಸಂಸತ್ ಪ್ರದೇಶ ಸುತ್ತುವರಿದ ಸೇನೆ
ಇನ್ನು ಈ ಬಾಂಬ್ ಬ್ಲಾಸ್ಟ್ ನಡೆದ ಜಾಗ ಟರ್ಕಿ ಸಂಸತ್ತು ಹಾಗೂ ಆಂತರಿಕ ವ್ಯವಹಾರಗಳ ಸಚಿವಾಲಯದ ಸಮೀಪವೇ ಇದೆ. ಮತ್ತೊಂದು ಕಡೆ ಬಾಂಬ್ ಸ್ಫೋಟದಲ್ಲಿ ಸಾವಿನ ಬಗ್ಗೆ ಕೂಡ ಯಾವುದೇ ವರದಿಯಾಗಿಲ್ಲ. ಇನ್ನು ಬೇಸಿಗೆ ರಜೆಯ ನಂತರ ಟರ್ಕಿ ಸಂಸತ್ತನ್ನ ಮತ್ತೆ ತೆರೆಯಲು ನಿರ್ಧರಿಸಲಾಗಿತ್ತು. ಆದರೆ ಭಾನುವಾರವೇ ಇಂತಹ ಘಟನೆ ನಡೆದಿದೆ. ಹೀಗಾಗಿ ಸುದ್ದಿ ತಿಳಿಯುತ್ತಿದ್ದಂತೆ ಟರ್ಕಿ ಭದ್ರತಾ ಪಡೆಗಳು ಪಾರ್ಲಿಮೆಂಟ್ ಏರಿಯಾ ಸುತ್ತುವರಿದು, ಈ ಪ್ರದೇಶದಲ್ಲಿ ತಡೆಗೋಡೆ ಸ್ಥಾಪಿಸಿವೆ. ಅಲ್ಲದೆ ಅಹಿತಕರ ಘಟನೆಗಳು ನಡೆಯದಂತೆ ಈಗ ಮುಂಜಾಗ್ರತೆ ವಹಿಸಲಾಗಿದೆ.
ವಿಡಿಯೋಗಳು ಕೂಡ ಫುಲ್ ವೈರಲ್
ಸೋಷಿಯಲ್ ಮೀಡಿಯಾದಲ್ಲಿ ಬಾಂಬ್ ಬ್ಲಾಸ್ಟ್‌ಗೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗುತ್ತಿವೆ. ಕೆಲವು ದೃಶ್ಯಗಳಲ್ಲಿ ಬಾಂಬ್ ಸ್ಕ್ವಾಡ್‌ಗಳು ಸ್ಫೋಟ ಸಂಭವಿಸಿರುವ ಪ್ರದೇಶದಲ್ಲಿ ನಿಲ್ಲಿಸಿದ ವಾಹನದ ಬಳಿ ತಪಾಸಣೆ ನಡೆಸುತ್ತಿವೆ. ಇಂದು ಬೆಳಗ್ಗೆ 9.30ರ ಸುಮಾರಿಗೆ ಘಟನೆ ನಡೆದಿದೆ. ಇಬ್ಬರು ಪೊಲೀಸರು ಗಾಯಗೊಂಡಿದ್ದು, ಅಧ್ಯಕ್ಷ ಎರ್ಡೊಗನ್ ಕೂಡ ಟರ್ಕಿಯ ಭದ್ರತಾ ಪಡೆಗಳಿಗೆ ಅಲರ್ಟ್ ಆಗುವಂತೆ ಹೇಳಿದ್ದಾರೆ. ಹಾಗೇ ಇನ್ನೊಂದು ಕಡೆ ಇದನ್ನು ಆತ್ಮಹತ್ಯಾ ದಾಳಿ ಎನ್ನಲಾಗುತ್ತಿದೆ. ದಾಳಿಕೋರ ಸ್ಫೋಟಕ ಸಾಧನದ ಮೂಲಕ ತನ್ನನ್ನೇ ತಾನು ಸ್ಫೋಟಿಸಿಕೊಂಡಿದ್ದು, ಮತ್ತೊಬ್ಬ ದಾಳಿಕೋರನನ್ನ ಎನ್ಕೌಂಟರ್ನಲ್ಲಿ ಪೊಲೀಸರು ಮುಗಿಸಿದ್ದಾರೆ ಎನ್ನಲಾಗುತ್ತಿದೆ.
Explosions and Gunfire have been heard this morning near the Parliamentary Building in the Turkish Capital of Ankara; a Significant Police and Military Presence has been observed in the Area but it is Unknown what exactly the ongoing Situation is. pic.twitter.com/dzSFxdHDg9
— OSINTdefender (@sentdefender) October 1, 2023
ಒಟ್ನಲ್ಲಿ ಟರ್ಕಿ ಬಾಂಬ್ ಸ್ಫೋಟ ಈಗ ಸಂಚಲನ ಸೃಷ್ಟಿಸಿದೆ. ಹೀಗಾಗಿ ಟರ್ಕಿ ಸೇನೆ ಕೂಡ ಅಲರ್ಟ್ ಆಗಿದೆ. ಅಲ್ಲದೆ ಈ ದಾಳಿ ಹಿಂದೆ ಯಾರೆಲ್ಲ ಇದ್ದಾರೆ? ಎಂಬ ಬಗ್ಗೆ ಈಗ ತನಿಖೆ ಶುರುವಾಗಿದೆ. ಇತ್ತೀಚೆಗೆ ಟರ್ಕಿಯಲ್ಲಿ ಭೀಕರ ಭೂಕಂಪ ಸಂಭವಿಸಿತ್ತು. ಹೀಗಾಗಿ ಟರ್ಕಿಯ ಜನರು ಭಯದಲ್ಲೇ ಇದ್ದರು. ಆದರೆ ಇದೀಗ ದಿಢೀರ್ ಉಗ್ರರು ಕೂಡ ಟರ್ಕಿಯಲ್ಲಿ ಬಾಲ ಬಿಚ್ಚಿದ್ದಾರೆ.












Click it and Unblock the Notifications