ರಷ್ಯಾದಿಂದ ರಕ್ಷಣಾ ಸಾಧನ ಖರೀದಿ: ಭಾರತದ ಮೇಲೆ ಅಮೆರಿಕ ನಿರ್ಬಂಧ?
ವಾಷಿಂಗ್ಟನ್, ಸೆಪ್ಟೆಂಬರ್ 21: ರಷ್ಯಾದಿಂದ ಬಹುಕೋಟಿ ಡಾಲರ್ ವೆಚ್ಚದ ಎಸ್-400 ಕ್ಷಿಪಣಿ ವ್ಯವಸ್ಥೆಯಂತಹ ಪ್ರಮುಖ ಸೇನಾ ಸಾಧನಗಳನ್ನು ಖರೀದಿಸುವ ಭಾರತದ ನಿರ್ಧಾರವನ್ನು ಅಮೆರಿಕ 'ಮಹತ್ವದ ವ್ಯವಹಾರ' ಎಂದು ಪರಿಗಣಿಸುವ ಮೂಲಕ ಕಠಿಣ ನಿರ್ಬಂಧಗಳನ್ನು ವಿಧಿಸಲು ಕ್ರಮ ತೆಗೆದುಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.
ಅಮೆರಿಕದ ಎದುರಾಳಿಗಳ ಮೇಲೆ ನಿರ್ಬಂಧ ವಿಧಿಸುವ ಕಾಯ್ದೆಯನ್ನು (ಕಾಟ್ಸಾ) ಉಲ್ಲಂಘಿಸುವ ದೇಶಗಳು, ವಿದೇಶಿ ಸಂಸ್ಥೆಗಳು ಮತ್ತು ವ್ಯಕ್ತಿಗಳ ಮೇಲೆ ಕಠಿಣ ನಿರ್ಬಂಧಗಳನ್ನು ಜಾರಿಮಾಡಲು ಅವಕಾಶ ನೀಡುವ ಆದೇಶಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದರು.
ರಷ್ಯಾದೊಂದಿಗೆ ಪ್ರಮುಖ ರಕ್ಷಣಾ ವ್ಯವಹಾರಗಳನ್ನು ನಡೆಸುವ ದೇಶಗಳ ಮೇಲೆ ನಿರ್ಬಂಧ ಹೇರುವ ಸಲುವಾಗಿ ಅಮೆರಿಕ ಕಾಟ್ಸಾ ಕಾಯ್ದೆಯನ್ನು ಜಾರಿಗೆ ತಂದಿದೆ. ಚೀನಾದ ವಿರುದ್ಧ ಈಗಾಗಲೇ ಈ ಕಾಯ್ದೆಯನ್ನು ಪ್ರಯೋಗಿಸಿರುವ ಅಮೆರಿಕ, ರಷ್ಯಾದೊಂದಿಗೆ ದೊಡ್ಡ ರಕ್ಷಣಾ ವ್ಯವಹಾರ ನಡೆಸುತ್ತಿರುವ ಭಾರತದ ಮೇಲೆಯೂ ಈ ಕಾಯ್ದೆಯನ್ನು ಪ್ರಯೋಗಿಸುವ ಭೀತಿ ಎದುರಾಗಿದೆ.

ಚೀನಾದ ಇಲಾಖೆ ಮೇಲೆ ನಿರ್ಬಂಧ
ಆದೇಶಕ್ಕೆ ಸಹಿ ಹಾಕಿದ ಬೆನ್ನಲ್ಲೇ ರಷ್ಯಾದ ಸುಖೋಯ್ ಸು-35 ಯುದ್ಧ ವಿಮಾನ ಮತ್ತು ಎಸ್-400 ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಯನ್ನು ಖರೀದಿಸಿದ ಚೀನಾದ ಉಪಕರಣ ತಯಾರಿಕಾ ಇಲಾಖೆ ಮತ್ತು ಅದರ ನಿರ್ದೇಶಕ ಲಿ ಶಾಂಗ್ಫು ವಿರುದ್ಧ ಅಮೆರಿಕ ನಿರ್ಬಂಧ ವಿಧಿಸಿದೆ.

ಭಾರತಕ್ಕೂ ಅನ್ವಯ?
ಕಾಟ್ಸಾವು ಇರಾನ್, ಉತ್ತರ ಕೊರಿಯಾ ಮತ್ತು ರಷ್ಯಾ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ಈಗ ಅದರ ಬದ್ಧ ವೈರಿ ರಷ್ಯಾದಿಂದ ಐದು ಎಸ್-400 ಟ್ರುಯೆಂಫ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಖರೀದಿಸುತ್ತಿರುವುದು ಭಾರತದ ರಕ್ಷಣಾ ಇಲಾಖೆ ಮೇಲೆಯೂ ನಿರ್ಬಂಧ ಹೇರಲು ಪೂರಕವಾದ ಸಾಕಷ್ಟು ಅಂಶಗಳು ಇವೆ.

ರಷ್ಯಾವೇ ಅಂತಿಮ ಗುರಿ
'ನಿರ್ದಿಷ್ಟ ವ್ಯಕ್ತಿಗಳ ಪಟ್ಟಿಯಲ್ಲಿ ಕಾಣಿಸುವ ಸಂಸ್ಥೆಗಳ ಮಹತ್ವದ ವ್ಯವಹಾರಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಈ ನಿರ್ಬಂಧಗಳ ಅಂತಿಮ ಗುರಿ ರಷ್ಯಾವೇ ಆಗಿರುತ್ತದೆ' ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯಾವುದೇ ನಿರ್ದಿಷ್ಟ ದೇಶದ ರಕ್ಷಣಾ ಸಾಮರ್ಥ್ಯವನ್ನು ಕುಗ್ಗಿಸುವುದು ಕಾಟ್ಸಾ ನಿರ್ಬಂಧದ ಉದ್ದೇಶವಲ್ಲ. ರಷ್ಯಾದ ಅಹಿತಕರ ಚಟುವಟಿಕೆಗಳಿಗೆ ಪ್ರತಿಕ್ರಿಯೆಯಾಗಿ ಅದರ ಮೇಲೆ ಹೊರೆ ಹೊರಿಸುವುದೇ ಅದರ ಗುರಿ ಎಂದಿದ್ದಾರೆ.

ಮೊದಲ ಬಾರಿಗೆ ಜಾರಿ
ರಷ್ಯಾ ಈ ಕುತಂತ್ರದ ಚಟುವಟಿಕೆಗಳನ್ನು ಅಮೆರಿಕ, ಅದರ ಮಿತ್ರದೇಶಗಳು ಮತ್ತು ಸಹಭಾಗಿ ದೇಶಗಳ ವಿರುದ್ಧ ಸ್ಪರ್ಧಿಸಲು ನಡೆಸುತ್ತಿದೆ. ಚೀನಾದ ಇಲಾಖೆ ವಿರುದ್ಧ ಕಾಟ್ಸಾದ 231ನೇ ಸೆಕ್ಷನ್ ಅಡಿಯಲ್ಲಿ ನಿರ್ಬಂಧ ವಿಧಿಸಿರುವುದು ಇದೇ ಮೊದಲ ಸಲ ಎಂದು ವಿವರಿಸಿದ್ದಾರೆ.
ಎಸ್-400 ಕ್ಷಿಪಣಿ ವ್ಯವಸ್ಥೆಯಂತಹ ಖರೀದಿ ವ್ಯವಹಾರಗಳನ್ನು ನಡೆಸುವುದನ್ನು ಕಾಟ್ಸಾ ನಿರ್ಬಂಧ ಹೇರಿಕೆಗೆ ಪೂರಕವಾದದ್ದು ಎಂದು ಟ್ರಂಪ್ ಆಡಳಿತ ಸ್ಪಷ್ಟವಾಗಿ ತಿಳಿಸಿದೆ.

ಎಚ್ಚರಿಕೆಯ ಸಂದೇಶ
ಉಳಿದ ದೇಶಗಳ ವಿಚಾರದಲ್ಲಿ ನಿರ್ಬಂಧ ವಿಧಿಸುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಕೆಲವು ವ್ಯವಹಾರಗಳು ಇನ್ನೂ ನಡೆಯಬೇಕಿದೆ. ಚೀನಾ ಮೇಲೆ ವಿಧಿಸಿರುವ ನಿರ್ಬಂಧವು ರಷ್ಯಾದೊಂದಿಗೆ ರಕ್ಷಣೆ ಮತ್ತು ಬೇಹುಗಾರಿಕೆ ವಲಯಗಳಲ್ಲಿ ವ್ಯವಹಾರ ನಡೆಸುವ ದೇಶಗಳಿಗೆ ನಮ್ಮ ಗಂಭೀರ ನಡೆಯ ಕಠಿಣ ಸಂದೇಶವನ್ನು ರವಾನಿಸಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಭರವಸೆ ನೀಡಿದ್ದ ಮ್ಯಾಟಿಸ್
ಈ ನಿರ್ಬಂಧಗಳು ಭಾರತದಂತಹ ದೇಶಗಳ ಮೇಲೆ ಕೆಟ್ಟ ಪರಿಣಾಮ ಬೀರುವ ಉದ್ದೇಶವನ್ನು ಹೊಂದಿಲ್ಲ. ರಷ್ಯಾದಂತಹ ನಿರ್ಬಂಧಿತ ದೇಶದ ಮೇಲೆ ಪರಿಣಾಮ ಬೀರುವ ಉದ್ದೇಶವನ್ನು ಹೊಂದಿದೆ. ಭಾರತದಂತಹ ನಮ್ಮ ಸಹಭಾಗಿ ಮಿತ್ರ ದೇಶಕ್ಕೆ ಇದರಿಂದ ವಿನಾಯಿತಿ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ನವದೆಹಲಿಯಲ್ಲಿ ಈ ಹಿಂದೆ ನಡೆದ ಉಭಯ ದೇಶಗಳ ಮಾತುಕತೆ ಸಂದರ್ಭದಲ್ಲಿ ಅಮೆರಿಕ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಹೇಳಿದ್ದರು.












Click it and Unblock the Notifications