ಪಿಜ್ಜಾ ತಿನ್ನುವಾಗಲೇ ಬಿತ್ತು ಬಾಂಬ್: ಎದ್ದು ಬಿದ್ದು ಓಡಿದ ಗ್ರಾಹಕರು!
ಕ್ರಮಾಟೋರ್ಸ್ಕ್: ಪಿಜ್ಜಾ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? 1 ಸಾವಿರ ವರ್ಷಗಳ ಹಿಂದೆ ಇಟಲಿಯಲ್ಲಿ ಶುರುವಾದ ಪಿಜ್ಜಾ ಹವಾ ಇಂದಿಗೂ ಕಡಿಮೆ ಆಗಿಲ್ಲ. ಆದರೆ ಹೀಗೆ ಪಿಜ್ಜಾ ತಿನ್ನಲು ಕೂತಿದ್ದವರ ಅಂಗಡಿ ಮೇಲೆಯೇ ದಿಢೀರ್ ಬಾಂಬ್ ಬಿದ್ದರೆ ಏನಾಗಬೇಡ? ಅಂದಹಾಗೆ ಇಂತಹ ಭೀಕರ ಘಟನೆಗೆ ಸಾಕ್ಷಿಯಾಗಿದ್ದು ಉಕ್ರೇನ್‌ನ ಕ್ರಮಾಟೋರ್ಸ್ಕ್ ನಗರ.
ಹೌದು ಉಕ್ರೇನ್ ದೇಶದ ಗಡಿ ಭಾಗದ ನಗರ ಕ್ರಮಾಟೋರ್ಸ್ಕ್ ತನ್ನ ನೈಸರ್ಗಿ ಸೌಂದರ್ಯ ಹಾಗೂ ವಾಸ್ತುಶಿಲ್ಪದ ಮೂಲಕ ಹೆಸರು ಪಡೆದಿತ್ತು. ಆದರೆ ರಷ್ಯಾ & ಉಕ್ರೇನ್‌ನ ನಡುವೆ ಯುದ್ಧ ಶುರುವಾದ ಬಳಿಕ ಬಡಿದಾಟ ಜೋರಾಗಿದೆ. ಹೀಗಾಗಿಯೇ ಕ್ರಮಾಟೋರ್ಸ್ಕ್ ನಗರ ಸ್ಮಶಾನದ ರೂಪ ಪಡೆದಿದೆ. ಇಂಥ ನಗರದಲ್ಲಿ ಅಳಿದುಳಿದ ಜನ ಜೀವನ ನಡೆಸುತ್ತಿದ್ದಾರೆ. ಹೀಗೆ ಇಲ್ಲಿನ ಫೇಮಸ್ ಪಿಜ್ಜಾ ಅಂಗಡಿಯಲ್ಲಿ ನೂರಾರು ಜನ ಪಿಜ್ಜಾ ತಿನ್ನುತ್ತಿದ್ದರು. ಆದ್ರೆ ಈ ವೇಳೆ ದಿಢೀರ್ ರಷ್ಯಾ ಕಡೆಯಿಂದ ಹಾರಿ ಬಂದ ಕ್ಷಿಪಣಿ ನೇರವಾಗಿ ಪಿಜ್ಜಾ ಅಂಗಡಿಗೇ ಬಡಿದಿದೆ. ನೋಡ ನೋಡುತ್ತಲೇ ಪಿಜ್ಜಾ ಅಂಗಡಿ ಸರ್ವನಾಶವಾಗಿ ಹೋಗಿದೆ.

ಸ್ಫೋಟದಲ್ಲಿ ಮಗು ಸೇರಿದಂತೆ 25 ಜನ..
ಕ್ರಮಾಟೋರ್ಸ್ಕ್ ನಗರದ ಪಿಜ್ಜಾ ರೆಸ್ಟೋರೆಂಟ್ ಮೇಲೆ ರಷ್ಯಾದ 2 ಕ್ಷಿಪಣಿ ಬಂದು ಬಡಿದಿದ್ದೇ ತಡ, ಜನ ಚೆಲ್ಲಾಪಿಲ್ಲಿಯಾಗಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಜವರಾಯ ತನ್ನ ಅಟ್ಟಹಾಸ ಮೆರೆದಿದ್ದ. ಘಟನೆಯಲ್ಲಿ 3 ಜನರ ಜೀವವು ಆ ಸ್ಥಳದಲ್ಲೇ ಅಂತ್ಯವಾಗಿತ್ತು. ಹಾಗೇ ಮಗು ಸೇರಿ 25 ಜನಕ್ಕೆ ಗಂಭೀರ ಗಾಯವಾಗಿದೆ. ಅವರಿಗೆ ಕ್ರಮಾಟೋರ್ಸ್ಕ್ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಬಗ್ಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸರ್ಕಾರದ ಅಧಿಕಾರಿ ಆಯಂಡ್ರೀ ಎರ್ಮಾಕ್ ಮಾಹಿತಿ ನೀಡಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿರುವ ಕಾರಣ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ.
ಇದು 21ನೇ ಶತಮಾನದ ವಿನಾಶ!
ಉಕ್ರೇನ್ ಯುದ್ಧದಿಂದ ಜನ ಅದೆಷ್ಟು ಭಯಗೊಂಡಿದ್ದಾರೆ ಎಂದರೆ, ಮಕ್ಕಳು ಸೇರಿದಂತೆ ವೃದ್ಧರು ಜೀವಭಯದಲ್ಲೇ ಉಸಿರಾಡುವ ಸ್ಥಿತಿ ಇದೆ. ಈಗಿನ ಘಟನೆ ಬಗ್ಗೆ ಮಾತನಾಡಿರುವ ಸ್ಥಳೀಯ ನಿವಾಸಿ ಮತ್ತು ವ್ಯಾಪಾರಿ 'ನಾನು ಇದೀಗ ನೋಡುತ್ತಿರುವುದು 21ನೇ ಶತಮಾನದ ವಿನಾಶ. ಈ ಘಟನೆ ಅತ್ಯಂತ ಭಯಾನಕವಾಗಿದೆ' ಎಂದು ರಷ್ಯಾ ಮಿಸೈಲ್ ದಾಳಿಯ ಬಗ್ಗೆ ಆತಂಕ ಹಂಚಿಕೊಂಡಿದ್ದಾರೆ. ಉಕ್ರೇನ್‌ನಲ್ಲಿ ಈಗಿನ ಪರಿಸ್ಥಿತಿ ಹೇಗಿದೆ ಎಂದರೆ, ಹೊರಗಡೆ ಬಂದರೆ ಸಾಕು ಎಲ್ಲಿಂದ ಮಿಸೈಲ್ ಬರುತ್ತೋ ಗೊತ್ತೇ ಆಗುವುದಿಲ್ಲ. ಹೀಗಾಗಿ ಉಕ್ರೇನ್‌ನ ಜನರು ಕೂಡ ಭಯದಲ್ಲೇ ಓಡಾಡುವ ಸ್ಥಿತಿ ಇದೆ.

2022ರಲ್ಲೂ ರಕ್ತಪಾತ ನಡೆದಿತ್ತು
ಈ ಮಧ್ಯೆ ಉಕ್ರೇನ್ ಡೊನೆಟ್ಸ್ಕ್ ಪ್ರಾಂತ್ಯದ ಪ್ರಮುಖ ನಗರ ಕ್ರಮಾಟೋರ್ಸ್ಕ್‌ನ ಮೇಲೆ ರಷ್ಯಾ ಕ್ಷಿಪಣಿ ದಾಳಿ ಮಾಡಿದ್ದು, ಪಶ್ಚಿಮದ ಪಾಂತ್ಯಗಳನ್ನು ವಶಕ್ಕೆ ಪಡೆಯುವ ಪ್ರಯತ್ನವಾಗಿದೆ ಎಂದು ಉಕ್ರೇನ್ ಸೇನೆಯ ಅಧಿಕಾರಿಗಳು ಆರೋಪಿಸಿದ್ದಾರೆ. ಇನ್ನು ಕಳೆದ ವರ್ಷ ಅಂದರೆ 2022ರ ಏಪ್ರಿಲ್‌ನಲ್ಲಿ ಕ್ರಮಾಟೋರ್ಸ್ಕ್‌ನ ರೈಲ್ವೇ ನಿಲ್ದಾಣದಲ್ಲಿ ರಷ್ಯಾ ದಾಳಿಯಿಂದ ರಕ್ತಪಾತ ನಡೆದಿತ್ತು. ಇದೀಗ ಮತ್ತೆ ಅಂತಹದ್ದೇ ಭೀಕರ ಘಟನೆಯನ್ನ ಉಕ್ರೇನ್‌ನ ಕ್ರಮಾಟೋರ್ಸ್ಕ್ ನಗರದ ಜನ ಎದುರಿಸಿದ್ದಾರೆ. ಹೀಗೆ ಎಲ್ಲೆಲ್ಲೂ ಭಯದ ವಾತಾವರಣ ನಿರ್ಮಾಣವಾಗಿದೆ.
ಒಳಜಗಳ.. ಕಿತ್ತಾಟ.. ಉಕ್ರೇನ್ ಮೇಲೆ ಅಟ್ಯಾಕ್!
ಪುಟಿನ್ ವ್ಯಾಗ್ನರ್ ಪಡೆ ಅಂದ್ರೆ ರಷ್ಯಾ ಖಾಸಗಿ ಸೇನೆ ಮುಖ್ಯಸ್ಥ ಯೆವ್ಗೆನಿ ಪ್ರಿಗೊಝಿನ್ ವಿರುದ್ಧ ಪರೋಕ್ಷವಾಗಿ ನಿನ್ನೆ ಆಕ್ರೋಶ ಹೊರಹಾಕಿದ್ದರು. ಖಾಸಗಿ ಸೇನೆ ರಷ್ಯಾದಲ್ಲಿ ರಕ್ತ ಹರಿಸಲು ಬಂದಿತ್ತು ಎಂಬುದನ್ನೂ ಹೇಳಿದ್ದರು. ರಷ್ಯಾ ಜನ ಒಗ್ಗಟ್ಟಿನಿಂದ ಇರಬೇಕೆಂದು ಪುಟಿನ್ ಇದೇ ವೇಳೆ ಮನವಿ ಮಾಡಿದ್ದರು ವ್ಲಾದಿಮಿರ್ ಪುಟಿನ್. ಹೀಗೆ ರಷ್ಯಾ ಪರಿಸ್ಥಿತಿಯೇ ಗೊಂದಲದ ಗೂಡಾಗಿ ಬದಲಾಗಿರುವಾಗಲೇ ಉಕ್ರೇನ್ ಮೇಲೆ ಮಾರಣಾಂತಿಕ ದಾಳಿ ನಡೆಯುತ್ತಿರುವುದು ವಿಪರ್ಯಾಸವೇ ಸರಿ. ಇದೀಗ ಪೆಟ್ಟು ತಿಂದಿರುವ ಉಕ್ರೇನ್ ತನ್ನ ಶತ್ರು ರಷ್ಯಾ ಮೇಲೆಯೇ ಮುಗಿಬೀಳುವ ಸಾಧ್ಯತೆ ದಟ್ಟವಾಗಿದೆ.












Click it and Unblock the Notifications