ಕೊನೆಗೂ ದೇಶ ಬಿಟ್ಟು ಹೊರಗೆ ಬಂದ ರಷ್ಯಾ ಅಧ್ಯಕ್ಷ ಪುಟಿನ್!
ಬಂಧನ ಭೀತಿ ನಡುವೆ, ಉಕ್ರೇನ್ ವಿರುದ್ಧ ಯುದ್ಧ ಘೋಷಣೆಯಾದ ನಂತರ ವ್ಲಾದಿಮಿರ್ ಪುಟಿನ್ ರಷ್ಯಾ ಬಿಟ್ಟು ಹೊರಗೆ ಜಾಸ್ತಿ ಓಡಾಡುತ್ತಿರಲಿಲ್ಲ. ಅದರಲ್ಲೂ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಪುಟಿನ್ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಿದ ನಂತರ, ರಷ್ಯಾದ ಅಧ್ಯಕ್ಷರು ತಮಗೆ ತಾವೇ ದಿಗ್ಬಂಧನ ಹಾಕಿಕೊಂಡಿದ್ದರು. ಹೀಗೆ ಹಲವು ತಿಂಗಳುಗಳ ಕಾಲ ದೇಶ ಬಿಟ್ಟು ಹೊರಗೆ ಬಾರದ ಪುಟಿನ್ ಈಗ ದಿಢೀರ್ ಕಿರ್ಗಿಸ್ತಾನದಲ್ಲಿ ಪ್ರತ್ಯಕ್ಷರಾಗಿದ್ದಾರೆ.
ಹೌದು, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಧ್ಯ ಏಷ್ಯಾ ರಾಷ್ಟ್ರವಾದ ಕಿರ್ಗಿಸ್ತಾನಕ್ಕೆ ಭೇಟಿ ನೀಡಿದ್ದಾರೆ. ಈ ಮೂಲಕ ಹಲವು ತಿಂಗಳ ಬಳಿಕ ದೇಶ ಬಿಟ್ಟು ಹೊರಗೆ ಬಂದಂತಾಗಿದೆ. ಕಿರ್ಗಿಸ್ತಾನ ಅಧ್ಯಕ್ಷ ಸದಿರ್ ಜಪರೋವ್ ಜೊತೆ, ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ವಿಸ್ತೃತ ಚರ್ಚೆ ನಡೆಸಿದ್ದಾರಂತೆ ಪುಟಿನ್. ಇನ್ನು ಜಪರೋವ್ ಜೊತೆಗಿನ ಸಭೆಯಲ್ಲಿ ರಷ್ಯಾ ಅಧ್ಯಕ್ಷ ಪುಟಿನ್, ವ್ಯಾಪಾರ ಪಾಲುದಾರಿಕೆ ಸೇರಿ ಕಿರ್ಗಿಜ್ ಆರ್ಥಿಕತೆಯಲ್ಲಿ ರಷ್ಯಾ ಪಾತ್ರವನ್ನ ಕೂಡ ಪ್ರಸ್ತಾಪ ಮಾಡಿದ್ದಾರೆ. ಈ ಮೂಲಕ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ಧಿಗೂ ಒತ್ತು ನೀಡಿದ್ದಾರೆ.

ಅಮೆರಿಕ ವಿರುದ್ಧ ಶತ್ರುಗಳ ಒಗಟ್ಟು?
ಇದೀಗ ಉಕ್ರೇನ್ ವಿರುದ್ಧ ಯುದ್ಧ ಮಾಡುತ್ತಿರುವ ರಷ್ಯಾಗೆ ಇರುವ ಏಕೈಕ ದೊಡ್ಡ ಶತ್ರು ಅಮೆರಿಕ. ಹಾಗೆ ಮತ್ತೊಂದು ಕಡೆ ಅಮೆರಿಕಗೆ ಕೂಡ ಇದೇ ರಷ್ಯಾ ದೊಡ್ಡ ಶತ್ರುವಾಗಿದೆ. ಈ ಎಲ್ಲಾ ಕಾರಣಗಳಿಗೆ ಅಮೆರಿಕದ ಶತ್ರುಗಳನ್ನು ರಷ್ಯಾ ಒಗ್ಗೂಡಿಸುತ್ತಿದೆ. ಪ್ರಮುಖವಾಗಿ ಏಷ್ಯಾದ ರಾಷ್ಟ್ರಗಳನ್ನು ಒಗ್ಗೂಡಿಸುವ ಮೂಲಕ, ರಷ್ಯಾ ಠಕ್ಕರ್ ಕೊಡಲು ಸಜ್ಜಾಗುತ್ತಿದೆ. ಈ ಮೂಲಕ ಹೊಸ ರಣತಂತ್ರ ರೂಪಿಸುತ್ತಿದ್ದಾರೆ ರಷ್ಯಾ ಅಧ್ಯಕ್ಷ ಪುಟಿನ್. ಆದ್ರೆ ಉಕ್ರೇನ್ ವಿರುದ್ಧದ ಯುದ್ಧವನ್ನೇ ನೆಪವಾಗಿ ಇಟ್ಟುಕೊಂಡು ಪುಟಿನ್ ಹಣಿಯಲು ಅಮೆರಿಕ ತೀವ್ರ ಪ್ರಯತ್ನ ಮಾಡುತ್ತಿದೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ.
ಪುಟಿನ್ ಬಂಧನಕ್ಕೆ ನಾನಾ ತಂತ್ರ!
ಅಷ್ಟಕ್ಕೂ ಪುಟಿನ್ ಬಂಧನಕ್ಕೆ ಉಕ್ರೇನ್ ಯುದ್ಧವನ್ನೇ ನೆಪವಾಗಿ ಇಟ್ಟುಕೊಂಡು ಅಮೆರಿಕ ನಾನಾ ಪ್ರಯತ್ನ ಮಾಡುತ್ತಿದೆ ಎಂಬ ಆರೋಪ ಇದೆ. ಅದರಲ್ಲೂ ಉಕ್ರೇನ್ ವಿರುದ್ಧ ಈ ಭೀಕರ ಯುದ್ಧದಲ್ಲಿ, ಯುದ್ಧಾಪರಾಧ ಎಸಗಿದ ಆರೋಪದಲ್ಲಿ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ) ಮಾರ್ಚ್ ತಿಂಗಳಲ್ಲಿ ಪುಟಿನ್ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿ ಸಂಚಲನ ಸೃಷ್ಟಿಸಿತ್ತು. ಹಾಗೇ ರಷ್ಯಾ ರೊಚ್ಚಿಗೆದ್ದು ಉಕ್ರೇನ್ ವಿರುದ್ಧ ಮತ್ತಷ್ಟು ಭೀಕರ ದಾಳಿ ನಡೆಸಿರುವ ಆರೋಪವನ್ನು ಅಮೆರಿಕ ಮಾಡಿತ್ತು.

ಇನ್ನು ಹೀಗೆ ಪುಟಿನ್ ವಿರುದ್ಧ ಬಂಧನ ವಾರೆಂಟ್ ಜಾರಿಯಾಗಿದ್ದೇ ತಡ ಅಲರ್ಟ್ ಆಗಿದ್ದ ಪುಟಿನ್, ರಷ್ಯಾ ಬಿಟ್ಟು ಹೊರ ಬಂದಿರಲಿಲ್ಲ. ಹಾಗೇ ರಷ್ಯಾ ಕೂಡ ಐಸಿಸಿ ವಿರುದ್ಧ ತನ್ನ ಆಕ್ರೋಶ ಹೊರಹಾಕಿತ್ತು. ಇದೀಗ ಪುಟಿನ್ ಅವರ ಪ್ರಥಮ ವಿದೇಶಿ ಪ್ರವಾಸ ಇದಾಗಿದೆ. ಈಗ ಕಿರ್ಗಿಸ್ತಾನ ಪ್ರವಾಸದ ನಂತರ ಚೀನಾಗೆ ಪುಟಿನ್ ತೆರಳಲಿದ್ದಾರೆ. ಮುಂದಿನ ವಾರ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಚೀನಾಗೆ ಭೇಟಿ ನೀಡುತ್ತಿದ್ದಾರೆ. ಹೀಗೆ ಚೀನಾ ರಾಜಧಾನಿಯಲ್ಲಿ ನಡೆಯುವ 3ನೇ 'ಬೆಲ್ಟ್ & ರೋಡ್' ಸಭೆಯಲ್ಲಿ ಪುಟಿನ್ ಪಾಲ್ಗೊಳ್ಳಲಿದ್ದಾರೆ.












Click it and Unblock the Notifications