Donald Trump: ಡೊನಾಲ್ಡ್ ಟ್ರಂಪ್‌ಗೆ ವಿಶೇಷ ಪತ್ರ ಕಳಿಸಿಕೊಟ್ಟ ಪ್ರಧಾನಿ ಮೋದಿ
ಅಮೇರಿಕಾದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಪದಗ್ರಹಣ ಮಾಡುತ್ತಿದ್ದಾರೆ. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ಬಂದಿದೆ. ಆದರೆ, ಮೋದಿ ಅವರು ಟ್ರಂಪ್ ಪ್ರಮಾಣವಚನ ಕಾರ್ಯಕ್ರಮಕ್ಕೆ ಹೋಗುತ್ತಿಲ್ಲ. ಮೋದಿ ಅವರು ಭಾರತದ ಪರವಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರನ್ನು ಕಳಿಸಿಕೊಟ್ಟಿದ್ದಾರೆ. ಜೊತೆಗೆ ಟ್ರಂಪ್ ಅವರಿಗಾಗಿ ಮೋದಿ ಅವರು ವಿಶೇಷ ಪತ್ರವೊಂದನ್ನೂ ಕಳಿಸಿಕೊಟ್ಟಿದ್ದಾರೆ ಎಂದು ವರದಿಯಾಗಿದೆ.
ಸಚಿವ ಎಸ್.ಜೈಶಂಕರ್ ಅವರು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಧಾನಿ ಮೋದಿ ಅವರು ನೀಡಿರುವ ವೈಯಕ್ತಿಕ ಪತ್ರವನ್ನು ಒಯ್ದಿದ್ದಾರೆ. ಅಲ್ಲದೆ ಟ್ರಂಪ್ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಅಲ್ಲದೆ ಜೈಶಂಕರ್ ಅವರು ಪ್ರಧಾನಿ ಮೋದಿ ಅವರ ಪರವಾಗಿಯೂ ಪ್ರತಿನಿಧಿಸುತ್ತಿದ್ದಾರೆ.

ನಾಲ್ಕು ವರ್ಷಗಳ ನಂತರ ಡೊನಾಲ್ಡ್ ಟ್ರಂಪ್ ಅವರು ಅಮೇರಿಕಾ ಅಧ್ಯಕ್ಷರಾಗಿ ಅಧಿಕಾರಕ್ಕೇರುತ್ತಿದ್ದಾರೆ. ಸದ್ಯ ಟ್ರಂಪ್ ಪ್ರಮಾಣವಚನ ಕಾರ್ಯಕ್ರಮಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ, ಅರ್ಜೆಂಟೀನಾದ ಅಧ್ಯಕ್ಷ ಜೇವಿಯರ್ ಮಿಲೀ, ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ, ಪೋಲಿಷ್‌ನ ಮಾಜಿ ಪ್ರಧಾನಿ ಮಾಟಿಯುಸ್ಜ್ ಮೊರಾವಿಕ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ, ಹಂಗೇರಿಯ ಪ್ರಧಾನ ಮಂತ್ರಿ ವಿಕ್ಟರ್ ಓರ್ಬನ್ ಸೇರಿದಂತೆ ಹಲವು ಜಾಗತಿಕ ನಾಯಕರನ್ನು ಆಹ್ವಾನಿಸಲಾಗಿದೆ. ಆದರೆ, ಈ ಪೈಕಿ ಕೆಲವರು ಮಾತ್ರ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.
ಇನ್ನು ಯುಕೆ ಪ್ರಧಾನ ಮಂತ್ರಿ ಕೀರ್ ಸ್ಟಾರ್ಮರ್, ಜರ್ಮನಿಯ ಅಧ್ಯಕ್ಷ ಓಲಾಫ್ ಸ್ಕೋಲ್ಜ್, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಯುರೋಪಿಯನ್ ಕಮಿಷನ್ ಮುಖ್ಯಸ್ಥ ಉರ್ಸುಲಾ ವಾನ್ ಡೆರ್ ಲೇಯೆನ್ ಸೇರಿದಂತೆ ಹಲವು ನಾಯಕರಿಗೆ ಟ್ರಂಪ್ ಆಹ್ವಾನ ನೀಡಿಲ್ಲ. ಸಂಗೀತ ಕಾರ್ಯಕ್ರಮಗಳು ಹಾಗೂ ಭವ್ಯ ಮೆರವಣಿಗೆಯೊಂದಿಗೆ ನಡೆಯುತ್ತಿರುವ ಪ್ರಮಾಣವಚನ ಕಾರ್ಯಕ್ರಮಕ್ಕೆ ಜಾಗತಿಕ ನಾಯಕರು ಈಗಾಗಲೇ ಬೀಡುಬಿಟ್ಟಿದ್ದಾರೆ.
ಟ್ರಂಪ್ ಅವರು ಅಮೇರಿಕಾ ಸಂಪ್ರದಾಯವನ್ನು ಮುರಿಯುತ್ತಿದ್ದು, ಸಾಮಾನ್ಯವಾಗಿ ಅಮೇರಿಕಾದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಅಧಿಕಾರಿಗಳು, ಹಿಂದಿನ ಮುಖ್ಯಸ್ಥರು ಮತ್ತು ಅಮೇರಿಕಾ ಕ್ಯಾಪಿಟಲ್ ಕಟ್ಟಡದ ಮೆಟ್ಟಿಲುಗಳ ಮೇಲೆ ಇರುವ ಇತರ ಅಮೇರಿಕನ್ ವಿಐಪಿಗಳೊಂದಿಗೆ ಪ್ರಮಾಣ ವಚನ ಸ್ವೀಕರಿಸುತ್ತಾರೆ.

ಆದರೆ ಈ ಬಾರಿ ಮೈದಾನದಿಂದ ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಸಾಮಾನ್ಯವಾಗಿ ಅಮೇರಿಕಾ ಅಧ್ಯಕ್ಷರ ಪ್ರಮಾಣವಚನಕ್ಕೆ ವಿದೇಶಿ ನಾಯಕರು ಹಾಜರಾಗುತ್ತಿರಲಿಲ್ಲ. ಆದರೆ ಈ ಬಾರಿ ಹಲವು ರಾಷ್ಟ್ರಗಳ ನಾಯಕರನ್ನು ಪ್ರಮಾಣವಚನ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಇವರಲ್ಲಿ ಹೆಚ್ಚಿನವರು ಸಂಪ್ರದಾಯವಾದಿ ಮತ್ತು ಬಲಪಂಥೀಯರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಎರಡನೇ ಬಾರಿ ಅಧ್ಯಕ್ಷರಾಗುತ್ತಿರುವ ಟ್ರಂಪ್ ಈ ಹಿಂದೆಯೂ ಭಾರತದೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು. ಪ್ರಧಾನಿ ಮೋದಿ ಹಾಗೂ ಟ್ರಂಪ್ ಹಲವು ವೇದಿಕೆಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ವಿಶ್ವದ ಗಮನ ಸೆಳೆದಿದ್ದರು. ಈ ಹಿನ್ನೆಲೆ ಟ್ರಂಪ್ ಅವರು ಅಧ್ಯಕ್ಷರಾದ ನಂತರ ಮೊದಲಿಗೆ ಭಾರತ ಹಾಗೂ ಚೀನಾ ದೇಶಗಳಿಗೆ ಭೇಟಿ ನೀಡಲು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications