ಪಾಕಿಸ್ತಾನದಲ್ಲಿ ಯಶ್ ಅಭಿನಯದ ರಾಮಾಯಣ ರಿಲೀಸ್‌ಗೆ ಆಗ್ರಹ: ಭಜನೆ ಮಾಡಿ ಜೈ ಶ್ರೀರಾಮ್ ಎಂದ ಹಿಂದೂಗಳು
ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ರಾಮಾಯಣ ಸಿನಿಮಾ ಅನೌನ್ಸ್ ಆದಾಗಿನಿಂದ ಒಂದಿಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಲೇ ಇದೆ. ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್ ಮತ್ತು ಬಾಲಿವುಡ್ ನಟ ರಣಬೀರ್ ಕಪೂರ್ ನಟಿಸುತ್ತಿರುವ ಈ ಪೌರಾಣಿಕ ಚಿತ್ರದ ಬಗ್ಗೆ ಭಾರತದಲ್ಲಿ ಮಾತ್ರವಲ್ಲ, ನೆರೆಯ ಪಾಕಿಸ್ತಾನದಲ್ಲೂ ಭಾರೀ ಕ್ರೇಜ್ ಸೃಷ್ಟಿಯಾಗಿದೆ.
ವಿಶೇಷ ಎಂದರೆ, ಚಿತ್ರವನ್ನ ಪಾಕಿಸ್ತಾನದಲ್ಲೂ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಅಲ್ಲಿನ ಹಿಂದೂ ಸಮುದಾಯದವರು ಬೀದಿಗಿಳಿದು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ. ಕರಾಚಿಯ ಬೀದಿಗಳಲ್ಲಿ ಪೋಸ್ಟರ್ ಹಿಡಿದು ಮೆರವಣಿಗೆ ನಡೆಸಿರುವ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ.

ಇದೊಂದು ಅಪರೂಪದ ವಿದ್ಯಮಾನವಾಗಿದ್ದು, ಭಾರತೀಯ ಸಿನಿಮಾಗಳ ಮೇಲಿನ ಪ್ರೀತಿ ಹಾಗೂ ರಾಮನ ಮೇಲಿನ ಭಕ್ತಿ ಗಡಿಗಳನ್ನ ಮೀರಿದೆ ಎಂಬುದಕ್ಕೆ ಇದು ಉದಾಹರಣೆ ಎನ್ನಬಹುದು.
ಕರಾಚಿಯಲ್ಲಿ ರಾಮಾಯಣ ಸಿನಿಮಾ ಬಿಡುಗಡೆಗೆ ಹಿಂದೂಗಳ ಒತ್ತಾಯ
ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಟ್ಟಿರುವ ಕಾರಣ, ಕಳೆದ ಕೆಲವು ವರ್ಷಗಳಿಂದ ಪಾಕಿಸ್ತಾನದಲ್ಲಿ ಯಾವುದೇ ಭಾರತೀಯ ಸಿನಿಮಾಗಳನ್ನ ಅಧಿಕೃತವಾಗಿ ಬಿಡುಗಡೆ ಮಾಡುತ್ತಿಲ್ಲ. ಆದರೆ, ಕರಾಚಿ, ಲಾಹೋರ್ ಸೇರಿದಂತೆ ಪಾಕಿಸ್ತಾನದ ಹಲವು ನಗರಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಹಿಂದೂ ಸಮುದಾಯದವರು ನೆಲೆಸಿದ್ದಾರೆ. ಇದೀಗ 'ರಾಮಾಯಣ' ಸಿನಿಮಾದ ಮೇಲಿನ ಭಕ್ತಿ ಹಾಗೂ ಅಭಿಮಾನದಿಂದಾಗಿ, ಪಾಕ್ ಹಿಂದೂಗಳು ಚಿತ್ರದ ಬಿಡುಗಡೆಗಾಗಿ ಪಟ್ಟು ಹಿಡಿದಿದ್ದಾರೆ.
ಕರಾಚಿಯ ಪ್ರಮುಖ ರಸ್ತೆಗಳಲ್ಲಿ ನೂರಾರು ಹಿಂದೂ ಭಕ್ತರು, ಕೈಯಲ್ಲಿ ರಣಬೀರ್ ಕಪೂರ್ ಹಾಗೂ ಯಶ್ ಅವರನ್ನೊಳಗೊಂಡ ಸಿನಿಮಾದ ಪೋಸ್ಟರ್‌ಗಳನ್ನ ಹಿಡಿದು ಮೆರವಣಿಗೆ ನಡೆಸಿದ್ದಾರೆ. 'ಜೈ ಶ್ರೀರಾಮ್' ಎಂಬ ಘೋಷಣೆಗಳೊಂದಿಗೆ, ರಾಮ ಭಜನೆಗಳನ್ನು ಹಾಡುತ್ತಾ ಸಾಗುವ ಮೂಲಕ ತಮ್ಮ ಹಕ್ಕೊತ್ತಾಯ ಮಂಡಿಸಿದ್ದಾರೆ.
ವೈರಲ್ ಆದ ಯೂಟ್ಯೂಬರ್ ಸುಮಿತ್ ಚಾಂಗ್ರಾ ಹಂಚಿಕೊಂಡ ವಿಡಿಯೋ
ಪಾಕಿಸ್ತಾನದ ಕರಾಚಿಯಲ್ಲಿ ನಡೆಯುತ್ತಿರುವ ಈ ಮೆರವಣಿಗೆಯ ವಿಡಿಯೋವೊಂದನ್ನ ಆಗಸ್ಟ್ 26ರಂದು ಯೂಟ್ಯೂಬರ್ ಸುಮಿತ್ ಚಾಂಗ್ರಾ ಎಂಬುವವರು ತಮ್ಮ ಯುಟ್ಯೂಬ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ, ಹಿಂದೂ ಸಮುದಾಯದ ಸದಸ್ಯರು ಕರಾಚಿಯಲ್ಲಿರುವ ಪುರಾತನ ಹಿಂದೂ ದೇವಾಲಯವೊಂದರ ಗೋಡೆಗಳಿಗೆ ರಾಮಾಯಣ ಸಿನಿಮಾದ ಪೋಸ್ಟರ್‌ಗಳನ್ನು ಅಂಟಿಸುತ್ತಿರುವುದು ಕಾಣುತ್ತಿದೆ.
ಸಿನಿಮಾದ ಯಶಸ್ಸಿಗೆ ಶುಭ ಕೋರಿರುವ ಅಲ್ಲಿನ ಹಿಂದೂಗಳು, "ರಾಮಾಯಣ ಕೇವಲ ಒಂದು ಸಿನಿಮಾವಲ್ಲ, ಇದು ನಮ್ಮ ನಂಬಿಕೆ. ಹಾಗಾಗಿ ಈ ಸಿನಿಮಾವನ್ನ ಪಾಕಿಸ್ತಾನದ ಚಿತ್ರಮಂದಿರಗಳಲ್ಲೂ ಬಿಡುಗಡೆ ಮಾಡಲು ಅವಕಾಶ ಮಾಡಿಕೊಡಬೇಕು" ಎಂದು ಮನವಿ ಮಾಡಿದ್ದಾರೆ. ಈ ದೃಶ್ಯಗಳು ಭಾರತೀಯ ನೆಟ್ಟಿಗರ ಗಮನವನ್ನೂ ಸೆಳೆದಿದ್ದು, ಪಾಕ್ ಹಿಂದೂಗಳ ರಾಮ ಭಕ್ತಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಚಿತ್ರ ಬಿಡುಗಡೆಗೆ ಇರುವ ಅಡ್ಡಿಗಳೇನು?
ವಿಶ್ವಾದ್ಯಂತ ನವೆಂಬರ್ 5ರಂದು ಯಶ್ ಹಾಗೂ ರಣಬೀರ್ ಕಪೂರ್ ಅಭಿನಯದ ರಾಮಾಯಣ ರಿಲೀಸ್ ಆಗಲು ಸಜ್ಜಾಗುತ್ತಿದೆ. ಆದರೆ, ಉಭಯ ದೇಶಗಳ ನಡುವಿನ ಗಡಿ ಸಮಸ್ಯೆ, ಭಯೋತ್ಪಾದನೆ ಹಾಗೂ ರಾಜಕೀಯ ಬಿಕ್ಕಟ್ಟಿನ ಪರಿಣಾಮವಾಗಿ ಸಾಂಸ್ಕೃತಿಕ ವಿನಿಮಯ ಸಂಪೂರ್ಣವಾಗಿ ನಿಂತುಹೋಗಿದೆ.
ಹೀಗಾಗಿ ಎಷ್ಟೇ ಆಗ್ರಹ ವ್ಯಕ್ತವಾದರೂ ಪಾಕಿಸ್ತಾನ ಸರ್ಕಾರ ಭಾರತೀಯ ಸಿನಿಮಾಗಳ ಮೇಲಿನ ನಿಷೇಧವನ್ನ ಸಡಿಲಿಸುವ ಸಾಧ್ಯತೆಗಳು ತೀರಾ ಕಡಿಮೆ ಎಂದು ವಿಶ್ಲೇಷಿಸಲಾಗುತ್ತಿದೆ. ಪಾಕಿಸ್ತಾನದ ಚಿತ್ರಮಂದಿರಗಳಲ್ಲಿ ಬಾಲಿವುಡ್ ಸಿನಿಮಾಗಳಿಗೆ ದೊಡ್ಡ ಮಾರುಕಟ್ಟೆ ಇತ್ತಾದರೂ, ಪ್ರಸ್ತುತ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ. ಆದರೂ, ಪಾಕಿಸ್ತಾನದ ಹಿಂದೂಗಳು ತಮ್ಮ ಸಂಸ್ಕೃತಿ, ಧಾರ್ಮಿಕ ಭಾವನೆಗಳ ಪರವಾಗಿ ಹಾಗೂ ತಮ್ಮ ನೆಚ್ಚಿನ ನಟರ ಸಿನಿಮಾವನ್ನ ಕಣ್ತುಂಬಿಕೊಳ್ಳುವ ಆಸೆಯಿಂದ ದನಿ ಎತ್ತಿರುವುದು ಎಲ್ಲರ ಗಮನ ಸೆಳೆಯುವಂತೆ ಮಾಡಿದೆ.
ವಿಶ್ವಾದ್ಯಂತ ನವೆಂಬರ್ 5ರಂದು ಯಶ್-ರಣಬೀರ್ ದರ್ಶನ
ರಾಮಾಯಣ ಮಹಾಕಾವ್ಯವನ್ನ ಆಧರಿಸಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ಕಾಣಿಸಿಕೊಂಡರೆ, ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿದ್ದಾರೆ. ಇನ್ನು ರಾವಣನಂತಹ ಬಲಿಷ್ಠ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಬ್ಬರಿಸಲಿದ್ದಾರೆ.
ಭಾರತೀಯ ಚಿತ್ರರಂಗದ ಈ ಇಬ್ಬರು ಸೂಪರ್ ಸ್ಟಾರ್‌ಗಳು ಒಟ್ಟಿಗೆ ತೆರೆಹಂಚಿಕೊಳ್ಳುತ್ತಿರುವುದು ಸಿನಿಪ್ರಿಯರಲ್ಲಿ ನಿರೀಕ್ಷೆ ದುಪ್ಪಟ್ಟು ಮಾಡಿದೆ. ನವೆಂಬರ್ 5ರಂದು ವಿಶ್ವಾದ್ಯಂತ ಬಹುಭಾಷೆಗಳಲ್ಲಿ ಈ ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗಲಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಬರೆಯುವ ಮುನ್ಸೂಚನೆ ನೀಡಿದೆ.


Click it and Unblock the Notifications
