ಪಾಕಿಸ್ತಾನ ಸೇರಿ ಒಂದಾದ ಮೂರು ಮುಸ್ಲಿಂ ರಾಷ್ಟ್ರಗಳು: ಟರ್ಕಿ, ಸೌದಿ, ಪಾಕ್ ರಕ್ಷಣಾ ಒಪ್ಪಂದಿಂದ ಭಾರತಕ್ಕೆ ಇರುವ ಸವಾಲೇನು ?
ವಿಶ್ವದ ಪ್ರಮುಖ ಮುಸ್ಲಿಂ ರಾಷ್ಟ್ರಗಳು ಒಂದಾಗುತ್ತಿದ್ದು, ಈ ವಿಷಯದಲ್ಲಿ ಭಾರತವು ಎಚ್ಚರಿಕೆಯ ಹೆಜ್ಜೆ ಇರಿಸುವುದಕ್ಕೆ ನಿರ್ಧರಿಸಿದೆ. ಭಾರತದ ಆಪರೇಷನ್ ಸಿಂಧೂರ್‌ನಲ್ಲಿ ಭಾರೀ ಸಂಕಷ್ಟ ಅನುಭವಿಸಿರುವ ಪಾಕಿಸ್ತಾನವು ಮೊದಲು ಸೌದಿ ಅರೇಬಿಯಾದೊಂದಿಗೆ ರಕ್ಷಣಾ ಒಪ್ಪಂದ ಮಾಡಿಕೊಂಡಿತ್ತು. ಇದೀಗ ಸೌದಿ ಅರೇಬಿಯಾ, ಪಾಕಿಸ್ತಾನ ಹಾಗೂ ಟರ್ಕಿ ದೇಶಗಳು ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ. ಭಾರತದ ಶತ್ರು ರಾಷ್ಟ್ರವೆಂದೇ ಪರಿಗಣಿಸಲಾಗಿರುವ ಪಾಕಿಸ್ತಾನವು ಇತ್ತೀಚಿನ ದಿನಗಳಲ್ಲಿ ತನ್ನ ಸೇನೆ ಭದ್ರ ಪಡಿಸಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರತದೊಂದಿಗೆ ಟರ್ಕಿಯ ಸಂಬಂಧ ಉತ್ತಮವಾಗಿಲ್ಲ. ಈಚೆಗೆ ನಡೆದ ಆಪರೇಷನ್ ಸಿಂಧೂರ್ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಟರ್ಕಿ ದೇಶವು ಡ್ರೋನ್‌ಗಳನ್ನು ನೀಡಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಮೂರು ಮುಸ್ಲಿಂ ರಾಷ್ಟ್ರಗಳು ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ್ದು, ಭಾರತವು ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದೆ.
ಸೌದಿ ಅರೇಬಿಯಾ ಮತ್ತು ಪಾಕಿಸ್ತಾನದ ನಡುವೆ ಈಚೆಗೆ ಒಪ್ಪಂದವಾಗಿತ್ತು. ಇರಾನ್ Vs ಅಮೆರಿಕ, ಇಸ್ರೇನ್‌ನ ನಡುವೆ ನಡೆದ ಯುದ್ಧದಲ್ಲಿ ಸೌದಿ ಅರೇಬಿಯಾಗೆ ಅಪಾರ ಹಾನಿಯಾಗಿದೆ. ಸೌದಿ ಅರೇಬಿಯಾದಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ನಿರಂತರವಾಗಿ ದಾಳಿ ಮಾಡಿತ್ತು. ಇದರಿಂದ ಇದೇ ವರ್ಷ ಮಾರ್ಚ್‌ನಿಂದಲೂ ಸೌದಿ ಅರೇಬಿಯಾ ಸವಾಲು ಎದುರಿಸುತ್ತಿದೆ. ಹೀಗಾಗಿ, ಸೌದಿ ಅರೇಬಿಯಾ ಸಹ ಮಹತ್ವದ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ. ಇದೀಗ ಮೂರು ಮುಸ್ಲಿಂ ರಾಷ್ಟ್ರಗಳು ಮೆಕ್ಕಾ ಜಂಟಿ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ. ಮೆಕ್ಕಾ ಜಂಟಿ ರಕ್ಷಣಾ ಒಪ್ಪಂದದ ಮುಖ್ಯ ಉದ್ದೇಶವೇ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳುವುದೇ ಆಗಿದೆ.

ಸೌದಿ ಅರೇಬಿಯಾದ ಯುವರಾಜ (ಕ್ರೌನ್ ಪ್ರಿನ್ಸ್) ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ ಅವರ ಸಮ್ಮುಖದಲ್ಲಿ ಆಗಸ್ಟ್ 7ರಂದು ಸೌದಿ ಅರೇಬಿಯಾ, ಟರ್ಕಿ ಮತ್ತು ಪಾಕಿಸ್ತಾನಗಳು ಮೆಕ್ಕಾ ಜಂಟಿ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದದ ಅನ್ವಯ ಮೂರು ರಾಷ್ಟ್ರಗಳ ಮೇಲೆ ಯಾವುದೇ ರಾಷ್ಟ್ರ ಶಶಸ್ತ್ರ ದಾಳಿ ಮಾಡಿದರೂ ಸಹ ಎಲ್ಲರ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ ಎಂದು ಘೋಷಿಸುವ ತ್ರಿಪಕ್ಷೀಯ ಸಾಮೂಹಿಕ-ರಕ್ಷಣಾ ಒಪ್ಪಂದವಾಗಿದೆ.
ಮುಸ್ಲಿಂ ರಾಷ್ಟ್ರಗಳ ನಡುವೆ ಒಪ್ಪಂದಕ್ಕೆ ಕಾರಣವೇನು
ಇದು 2025ರಲ್ಲಿ ಸೌದಿ ಅರೇಬಿಯಾ ಮತ್ತು ಪಾಕಿಸ್ತಾನ ಮಾಡಿಕೊಂಡ ಪರಸ್ಪರ ರಕ್ಷಣಾ ಒಪ್ಪಂದದ ಮುಂದುವರಿದ ಭಾಗವಾಗಿದೆ. ಈಗ ಇದಕ್ಕೆ ಟರ್ಕಿಯ ಸೇರಿದೆ. ಅಲ್ಲದೆ ಈಜಿಪ್ಟ್ ಸೇರಿದಂತೆ ವಿವಿಧ ಮುಸ್ಲಿಂ ರಾಷ್ಟ್ರಗಳು ಸಹ ಸೇರುವ ಸಾಧ್ಯತೆ ಇದೆ. ಟರ್ಕಿ ದೇಶವು ನ್ಯಾಟೋಗೆ ಹೊಂದಿಕೊಂಡಿರುವ ಸೇನಾ ಸಾಮರ್ಥ್ಯ ಮತ್ತು ಬಲಿಷ್ಠ ರಕ್ಷಣಾ ಉದ್ಯಮವನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯವಾಗಿ ಬೇಕರ್‌ನ ಡ್ರೋನ್ ತಂತ್ರಜ್ಞಾನ ಮತ್ತು KAAN ಯುದ್ಧವಿಮಾನ ಯೋಜನೆ ಸೇರಿವೆ. ಮುಂದುವರಿದು ಈ ಒಪ್ಪಂದದಡಿ ಸಾಮೂಹಿಕ ಭದ್ರತೆ, ಜಂಟಿ ಸೇನಾ ಅಭ್ಯಾಸ, ಗುಪ್ತಚರ ಮಾಹಿತಿ ಹಂಚಿಕೆ, ರಕ್ಷಣಾ ಉದ್ಯಮದ ಸಹಕಾರ ಮತ್ತು ಸೇನಾ ಪಡೆಗಳ ನಡುವಿನ ಸಮನ್ವಯಕ್ಕೆ ಒತ್ತು ನೀಡಲಾಗುತ್ತದೆ ಎಂದು ಹೇಳಲಾಗಿದೆ.
ಮೂರು ರಾಷ್ಟ್ರಗಳ ನಡುವಿನ ಒಪ್ಪಂದವನ್ನು ಭಾರತವು ಸೂಕ್ಷ್ಮವಾಗಿ ಗಮನಿಸುತ್ತಿದೆ. ಇತ್ತೀಚಿನ ವರ್ಷಗಳ ವರೆಗೂ ಪಾಕಿಸ್ತಾನಕ್ಕೆ ಚೀನಾ ದೇಶ ಬೆಂಬಲ ಕೊಡುತ್ತಿತ್ತು. ಟರ್ಕಿ ಸಹ ತಟಸ್ಥವಾಗಿತ್ತು. ಆದರೆ ಇದೀಗ ಭಾರತದ ಕೆಲವೊಂದು ವಿಚಾರದಲ್ಲಿ ಟರ್ಕಿ ಮೂಗು ತೂರಿಸಲು ಪ್ರಾರಂಭಿಸಿದೆ. ಸೌದಿ ಅರೇಬಿಯಾ ಸಹ ತನ್ನ ರಕ್ಷಣೆಗೆ ಬೇಕಾಗಿರುವ ಕೆಲಸಗಳನ್ನು ಮೊದಲು ಮಾಡಿಕೊಳ್ಳುತ್ತಿದೆ. ಈ ಬೆಳವಣಿಗೆಗಳಿಗೆ ಭಾರತವು ಹೇಗೆ ಪ್ರತಿತಂತ್ರ ಹೆಣಯಲಿದೆ ಎನ್ನುವುದು ಈಗ ಇರುವ ಕುತೂಹಲವಾಗಿದೆ.


Click it and Unblock the Notifications
