ಜರ್ಮನಿಯಲ್ಲೂ ಮೋದಿ ಮೇಕ್ ಇನ್ ಇಂಡಿಯಾ ಮ್ಯಾಜಿಕ್
ಹ್ಯಾನೋವರ್, ಏ. 13: ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಜರ್ಮನಿಯ ನಾಗರೀಕರಿಗೆ ಮೇಕ್ ಇನ್ ಇಂಡಿಯಾ ಕುರಿತಾದ ಸಮಗ್ರ ಮಾಹಿತಿ ನೀಡಿದ್ದಾರೆ. ಅಲ್ಲದೇ ದೇಶದೊಳಗೆ ಉದ್ದಿಮೆಗಳನ್ನು ಸ್ಥಾಪಿಸಲು ಆಗಮಿಸುವಂತೆ ಬಹುರಂಗ ಆಹ್ವಾನ ನೀಡಿದ್ದಾರೆ.
ಸೋಮವಾರ ಜರ್ಮನಿಯ ಹ್ಯಾನೋವರ್ ನಲ್ಲಿ ವ್ಯಾಪಾರಿ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಮೋದಿ, ಮೇಕ್ ಇನ್ ಇಂಡಿಯಾ ಒಂದು ರಾಷ್ಟ್ರೀಯ ಅಭಿಯಾನವಾಗಿ ಬೆಳೆಯುತ್ತಿದೆ. ಭಾರತದಲ್ಲಿ ಉದ್ದಿಮೆ ಸ್ಥಾಪನೆಗೆ ವಿಪುಲ ಅವಕಾಶವಿದ್ದು ಎಲ್ಲ ಸಹಾಯ-ಸಹಕಾರ ನೀಡಲು ನಾವು ಬದ್ಧರಿದ್ದೇವೆ ಎಂದು ಹೇಳಿದರು.
ವ್ಯಾಪಾರಿ ಮೇಳದಲ್ಲಿ 3 ಸಾವಿರಕ್ಕೂ ಹೆಚ್ಚು ಜರ್ಮನ್ ಉದ್ದಿಮೆಗಳು, ಸುಮಾರು 120ಕ್ಕೂ ಹೆಚ್ಚು ಭಾರತೀಯ ಮೂಲದ ಉದ್ದಿಮೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು. ಜರ್ಮನಿ ಚಾನ್ಸೆಲರ್ ಆಂಜೆಲಾ ಮರ್ಕೆಲಾ ಮತ್ತು ಹಿರಿಯ ಅಧಿಕಾರಿಗಳು ಹಾಜರಿದ್ದರು.(ಪಿಟಿಐ ಚಿತ್ರಗಳು)

ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ
ಫ್ರಾನ್ಸ್ ನಿಂದ ಜರ್ಮನಿಯ ಹ್ಯಾನೋವರ್‌ಗೆ ಬಂದಿಳಿದ ಮೋದಿ ಅಲ್ಲಿನ ಪುರಭವನದ ಎದುರು ಗಾಂಧಿ ಪುತ್ಥಳಿ ಅನಾವರಣಗೊಳಿಸಿದರು. ಹವಾಮಾನ ವೈಪರೀತ್ಯ ಸಮಸ್ಯೆ ಉಂಟಾಗುವ ಮೊದಲೇ ಗಾಂಧೀಜಿ ಪರಿಸರ ಪ್ರೀತಿಸುವ ಪಾಠ ಬೋಧಿಸಿದ್ದರು. ಅಂದು ಅವರು ಕಲಿಸಿಕೊಟ್ಟ ಅಹಿಂಸೆಯ ಪಾಠ ಭಯೋತ್ಪಾದನೆ ವಿರುದ್ಧದ ಪ್ರಬಲ ಅಸ್ತ್ರ. ಇದರ ಮೂಲಕವೇ ಶಾಂತಿ ಸ್ಥಾಪನೆ ಮಾಡಬೇಕು ಎಂದು ಹೇಳಿದರು.

ಜರ್ಮನಿಯೊಂದಿಗಿನ ಭಾಂಧವ್ಯ ವೃದ್ಧಿ
ಜರ್ಮನಿ ಪ್ರವಾಸದಲ್ಲಿ ಮೋದಿ ಆರ್ಥಿಕ, ವಾಣಿಜ್ಯ ಮತ್ತು ಕೈಗಾರಿಕಾ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. ಹ್ಯಾನೋವರ್ ಮೆಸ್ಸಿಯಲ್ಲಿ ಭಾರತ-ಜರ್ಮನಿ ಜಂಟಿಯಾಗಿ ಆಯೋಜಿಸಿರುವ ವ್ಯಾಪಾರಿ ಮೇಳದಲ್ಲಿ ಭಾಷಣ ಮಾಡಿದ್ದು ಮೇಕ್ ಇನ್ ಇಂಡಿಯಾದ ಬಗ್ಗೆ ವಿವರಿಸಿದ್ದಾರೆ. ಇಲ್ಲಿಂದ ಬರ್ಲಿನ್‌ಗೆ ತೆರಳಿ ರೈಲು ನಿಲ್ದಾಣ, ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಗೆ ಭೇಟಿ ನೀಡಿ ಸಂಶೋಧನೆ ಸಂಬಂಧ ಮಾತುಕತೆ ನಡೆಸಲಿದ್ದಾರೆ.

ಕೆನಡಾಕ್ಕೆ ಪ್ರಯಾಣ
ಸೋಮವಾರ ಸಂಜೆ ಜರ್ಮನಿ ಪ್ರವಾಸ ಅಂತ್ಯವಾಗಲಿದ್ದು ಮಂಗಳವಾರ ಕೆನಡಾಕ್ಕೆ ತೆರಳಲಿದ್ದಾರೆ. ಅಲ್ಲಿಯೂ ಸಹ ಮೇಕ್ ಇನ್ ಇಂಡಿಯಾ ಅಭಿಯಾನದ ಕುರಿತು ಮಾತನಾಡಲಿದ್ದು ಉದ್ಯಮಿಗಳನ್ನು ಸೆಳೆಯುವ ಯತ್ನ ಮಾಡಲಿದ್ದಾರೆ.

ಫ್ರಾನ್ಸ್ ಪ್ರವಾಸ ಯಶಸ್ವಿ
ಫ್ರಾನ್ಸ್ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿದ ಮೋದಿ ಅಲ್ಲಿಂದ ಜರ್ಮನಿಗೆ ತೆರಳಿದರು. ಜರ್ಮನಿಗೆ ಆಗಮಿಸಿದ ಪ್ರಧಾನಿಗೆ ಭಾರತೀಯ ಮೂಲದವರು ಮತ್ತು ಜರ್ಮನ್ ಸರ್ಕಾರದಿಂದ ಅಭೂತಪೂರ್ವ ಸ್ವಾಗತ ದೊರೆಯಿತು.

ಶಾಂತಿ ಮಂತ್ರ ಪಠಿಸಿದ ಮೋದಿ
ಮಹಾತ್ಮ ಗಾಂಧೀಜಿಯವರ ಶಾಂತಿ ಮಂತ್ರವನ್ನು ಮೋದಿ ಮತ್ತೊಮ್ಮೆ ಪುನರುಚ್ಚಾರ ಮಾಡಿದ್ದಾರೆ. ವಿಶ್ವಶಾಂತಿಗೆ ಎಲ್ಲ ರಾಷ್ಟ್ರಗಳು ಕೈ ಜೋಡಿಸಬೇಕು ಎಂದು ಮೊದಲಿನಿಂದಲೂ ಹೇಳಿಕೊಂಡು ಬಂದಿರುವ ಮೋದಿ ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಸದಸ್ಯತ್ವಕ್ಕೆ ಬೆಂಬಲಿಸುವಂತೆ ಕೇಳಿಕೊಂಡಿದ್ದಾರೆ.












Click it and Unblock the Notifications