ನಿಮ್ಮ ಬುದ್ಧಿವಂತಿಕೆಯನ್ನು ಎಐ ತರಬೇತಿಗೆ ಬಳಸುತ್ತಿದ್ದೇವೆ: 8,000 ಉದ್ಯೋಗ ಕಡಿತದ ಬೆನ್ನಲ್ಲೇ ಮಾರ್ಕ್ ಜುಕರ್‌ಬರ್ಗ್ ಆಡಿಯೋ ಲೀಕ್
ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನ ಮಾತೃ ಸಂಸ್ಥೆ ಹಾಗೂ ಜಾಗತಿಕ ತಂತ್ರಜ್ಞಾನ ದೈತ್ಯ 'ಮೆಟಾ' ಕಂಪನಿಯಿಂದ ಸುಮಾರು 8,000 ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ. ಆದರೆ, ಈ ಲೇ-ಆಫ್‌ಗಿಂತ ಕೆಲವೇ ದಿನಗಳ ಮುನ್ನ ಸಂಸ್ಥೆಯ ಸಿಇಒ ಮಾರ್ಕ್ ಜುಕರ್‌ಬರ್ಗ್ (Mark Zuckerberg) ತಮ್ಮ ಉದ್ಯೋಗಿಗಳೊಂದಿಗೆ ನಡೆಸಿದ್ದ ಆಂತರಿಕ ಸಭೆಯ ಆಡಿಯೋ ಈಗ ಲೀಕ್ ಆಗಿದ್ದು, ಇಡೀ ವಿಶ್ವದಾದ್ಯಂತ ಭಾರಿ ಸಂಚಲನ ಮೂಡಿಸಿದೆ.
ಕಂಪನಿಯು ಇದುವರೆಗೆ ಸಾರ್ವಜನಿಕವಾಗಿ ಮುಚ್ಚಿಟ್ಟಿದ್ದ ಕರಾಳ ಸತ್ಯವೊಂದನ್ನು ಜುಕರ್‌ಬರ್ಗ್ ಈ ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ. ಅದೇನೆಂದರೆ, ಮೆಟಾ ಕಂಪನಿಯ ಉದ್ಯೋಗಿಗಳ ಕಂಪ್ಯೂಟರ್‌ಗಳನ್ನು ಅವರ ಗಮನಕ್ಕೆ ಬಾರದಂತೆ 'ಎಐ ಮಾದರಿಗಳಿಗೆ' ತರಬೇತಿ ನೀಡಲು ಬಳಸಿಕೊಳ್ಳಲಾಗುತ್ತಿದೆ. 'ಮೋರ್ ಪರ್ಫೆಕ್ಟ್ ಯೂನಿಯನ್' ಮಾಧ್ಯಮಕ್ಕೆ ಲಭ್ಯವಾಗಿರುವ ಏಪ್ರಿಲ್ 30ರ ಆಂತರಿಕ ಸಭೆಯ ಆಡಿಯೋದಲ್ಲಿ ಜುಕರ್‌ಬರ್ಗ್ ಈ ಆಘಾತಕಾರಿ ಸತ್ಯವನ್ನು ಒಪ್ಪಿಕೊಂಡಿದ್ದಾರೆ.

ಏನಿದು ಮೆಟಾ ಕಂಪನಿಯ 'ರಹಸ್ಯ ಕಣ್ಗಾವಲು'
ಮೆಟಾ ಕಂಪನಿಯು ತನ್ನ ಉದ್ಯೋಗಿ ಲ್ಯಾಪ್‌ಟಾಪ್/ಕಂಪ್ಯೂಟರ್‌ಗಳಲ್ಲಿ ಎಂಸಿಐ (Model Capability Initiative) ಎಂಬ ಕಡ್ಡಾಯ ಸಾಫ್ಟ್‌ವೇರ್ ಒಂದನ್ನು ಇನ್‌ಸ್ಟಾಲ್ ಮಾಡಿದೆ. ಈ ಸಾಫ್ಟ್‌ವೇರ್ ಉದ್ಯೋಗಿಗಳು ಕೀಬೋರ್ಡ್‌ನಲ್ಲಿ ಟೈಪ್ ಮಾಡುವ ಪ್ರತಿಯೊಂದು ಅಕ್ಷರ, ಮೌಸ್‌ನ ಮೂವ್‌ಮೆಂಟ್ ಹಾಗೂ ಸ್ಕ್ರೀನ್‌ನಲ್ಲಿ ನಡೆಯುವ ಚಟುವಟಿಕೆಗಳ ಸ್ಕ್ರೀನ್‌ಶಾಟ್‌ಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿಕೊಳ್ಳುತ್ತದೆ. ಉದ್ಯೋಗಿಗಳು ಬಳಸುವ ಜಿಮೇಲ್, ಗೂಗಲ್ ಚಾಟ್, ವಿಎಸ್ ಕೋಡ್ ಮತ್ತು ಮೆಟಾದ ಆಂತರಿಕ ಎಐ ಸಹಾಯಕ 'ಮೆಟಾಮೇಟ್' ಆಪ್‌ಗಳ ಮೇಲೆ ಇದು ನಿರಂತರ ನಿಗಾ ಇಡುತ್ತದೆ.
ಹೊರಗಿನವರಿಗಿಂತ ಉದ್ಯೋಗಿಗಳೇ ಟಾರ್ಗೆಟ್ ಆಗಿದ್ದೇಕೆ?
ಸಾಮಾನ್ಯವಾಗಿ ಎಐ ಕಂಪನಿಗಳು ತಮ್ಮ ಎಐ ತಂತ್ರಜ್ಞಾನಕ್ಕೆ ತರಬೇತಿ ನೀಡಲು ಹೊರಗಿನ ಕಾಂಟ್ರಾಕ್ಟ್ ಸಿಬ್ಬಂದಿಯನ್ನು ಬಳಸಿಕೊಳ್ಳುತ್ತವೆ. ಆದರೆ ಮೆಟಾ ಕಂಪನಿ ವಿಭಿನ್ನವಾಗಿ ಯೋಚಿಸಿದೆ. ಲೀಕ್ ಆದ ಆಡಿಯೋದಲ್ಲಿ ಜುಕರ್‌ಬರ್ಗ್, "ಹೊರಗಿನ ಕಾಂಟ್ರಾಕ್ಟ್ ಉದ್ಯೋಗಿಗಳಿಗೆ ಹೋಲಿಸಿದರೆ ನಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಸರಾಸರಿ ಬುದ್ಧಿವಂತಿಕೆ ಗಣನೀಯವಾಗಿ ಹೆಚ್ಚಾಗಿದೆ. ನಮ್ಮ ಎಐ ಮಾದರಿಯು ಒಬ್ಬ ಸೀನಿಯರ್ ಇಂಜಿನಿಯರ್ ತರಹ ಕೋಡಿಂಗ್ ಕಲಿಯಬೇಕೆಂದರೆ, ಅದು ನಮ್ಮ ಸೀನಿಯರ್ ಇಂಜಿನಿಯರ್‌ಗಳು ಕೆಲಸ ಮಾಡುವುದನ್ನು ಲೈವ್ ಆಗಿ ನೋಡಬೇಕು. ಇದು ಮಾರುಕಟ್ಟೆಯ ಇತರ ಕಂಪನಿಗಳಿಗಿಂತ ವೇಗವಾಗಿ ನಮ್ಮ ಎಐ ಸಾಮರ್ಥ್ಯವನ್ನು ಹೆಚ್ಚಿಸಲಿದೆ" ಎಂದು ಉದ್ಯೋಗಿಗಳ ಬುದ್ಧಿವಂತಿಕೆಯನ್ನೇ ಬಂಡವಾಳ ಮಾಡಿಕೊಂಡಿರುವುದನ್ನು ಒಪ್ಪಿಕೊಂಡಿದ್ದಾರೆ.
ಇದನ್ನು ಮೊದಲೇ ಉದ್ಯೋಗಿಗಳಿಗೆ ಏಕೆ ತಿಳಿಸಲಿಲ್ಲ ಎಂಬ ಪ್ರಶ್ನೆಗೆ, "ಇದು ನಮ್ಮ ಕಂಪನಿಯ ರಹಸ್ಯ ತಂತ್ರ. ಇದನ್ನು ಬಹಿರಂಗಪಡಿಸಿದರೆ ಮಾರುಕಟ್ಟೆಯ ಸ್ಪರ್ಧಿಗಳಿಗೆ ವಿಷಯ ತಿಳಿಯುತ್ತದೆ, ಹಾಗಾಗಿ ರಹಸ್ಯವಾಗಿಡಲಾಗಿತ್ತು" ಎಂದು ಸಮರ್ಥಿಸಿಕೊಂಡಿದ್ದಾರೆ. ಈ ರಹಸ್ಯ ಕಣ್ಗಾವಲು ನೀತಿ ತಿಳಿಯುತ್ತಿದ್ದಂತೆ ಮೆಟಾ ಉದ್ಯೋಗಿಗಳು ತೀವ್ರ ಆತಂಕ ಹಾಗೂ ಆಕ್ರೋಶ ಹೊರಹಾಕಿದ್ದಾರೆ. "ಕಂಪನಿ ನೀಡಿರುವ ಲ್ಯಾಪ್‌ಟಾಪ್‌ಗಳಲ್ಲಿ ಇದರಿಂದ ಹೊರಬರಲು ಯಾವುದೇ ಆಯ್ಕೆ ಇಲ್ಲ" ಎಂದು ತಿಳಿದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉದ್ಯೋಗಿಗಳಲ್ಲಿ ಹೆಚ್ಚಿದ ಆತಂಕ
ಈ ಆಘಾತಕಾರಿ ಸಾಫ್ಟ್‌ವೇರ್ ಜಾರಿಗೆ ಬಂದ ಬೆನ್ನಲ್ಲೇ ಮೆಟಾ ಕಂಪನಿಯು ತನ್ನ ಜಾಗತಿಕ ಉದ್ಯೋಗಿಗಳಲ್ಲಿ ಶೇಕಡಾ 10ರಷ್ಟು ಅಂದರೆ ಸುಮಾರು 8,000 ಜನರನ್ನು ಕೆಲಸದಿಂದ ತೆಗೆದುಹಾಕಲು ಆರಂಭಿಸಿದೆ. ಈಗಾಗಲೇ ಉದ್ಯೋಗಿಗಳ ಸರಾಸರಿ ವಾರ್ಷಿಕ ವೇತನ ಕುಸಿದಿದೆ. ಇದರ ನಡುವೆ ಜಾರಿಯಾದ ಈ ಕಣ್ಗಾವಲು ನೀತಿ ಉದ್ಯೋಗಿಗಳ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ. ಅಮೆರಿಕದ ಮೆಟಾ ಕಚೇರಿಗಳ ಕ್ಯಾಫೆಟೇರಿಯಾ, ಶೌಚಾಲಯ ಹಾಗೂ ವೆಂಡಿಂಗ್ ಮಷಿನ್‌ಗಳ ಮೇಲೆ ಈ ಸಾಫ್ಟ್‌ವೇರ್ ವಿರೋಧಿಸಿ ಪ್ರತಿಭಟನಾ ಪೋಸ್ಟರ್‌ಗಳನ್ನು ಹಾಕಲಾಗಿದೆ. ಬ್ರಿಟನ್‌ನಲ್ಲಿ (UK) ಉದ್ಯೋಗಿಗಳು 'ಯುನೈಟೆಡ್ ಟೆಕ್ ಅಂಡ್ ಅಲೈಡ್ ವರ್ಕರ್ಸ್' ಸಂಘಟನೆಯೊಂದಿಗೆ ಸೇರಿ ಹೋರಾಟಕ್ಕೆ ಇಳಿದಿದ್ದಾರೆ.
"ಇದೇ ಕೊನೆಯಲ್ಲ, ಮುಂದೆಯೂ ಇಂತಹ ಪ್ರಯೋಗಗಳು ನಡೆಯಲಿವೆ"
ಜುಕರ್‌ಬರ್ಗ್ ಈ ಯೋಜನೆಯನ್ನು ಜಾರಿಗೆ ತಂದ ರೀತಿ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರಾದರೂ, ಗೌಪ್ಯತೆಯನ್ನು ಮಾತ್ರ ಸಮರ್ಥಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಸಭೆಯ ಕೊನೆಯಲ್ಲಿ, "ಇದೇ ಕೊನೆಯಲ್ಲ, ಮುಂದೆಯೂ ಇಂತಹ ಹಲವು ಪ್ರಯೋಗಗಳು ಕಂಪನಿಯಲ್ಲಿ ನಡೆಯಲಿವೆ" ಎಂಬ ಎಚ್ಚರಿಕೆಯ ಸಂದೇಶವನ್ನೂ ನೀಡಿದ್ದಾರೆ. ಮೆಟಾ ಕಂಪನಿಯು ಈ ವರ್ಷ ಕೇವಲ ಎಐ ಮೂಲಸೌಕರ್ಯಗಳಿಗಾಗಿ ಬರೋಬ್ಬರಿ 125ರಿಂದ 145 ಬಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿದೆ. ಈ ಬೃಹತ್ ಹೂಡಿಕೆಯ ನಷ್ಟವನ್ನು ಸರಿದೂಗಿಸಲು ಈಗ 8,000 ಜನರನ್ನು ಕೆಲಸದಿಂದ ತೆಗೆದುಹಾಕಲಾಗುತ್ತಿದೆ. ಇನ್ನು ಮುಂದೆ ಕಂಪನಿಯಲ್ಲಿ ಉಳಿಯುವ ಉದ್ಯೋಗಿಗಳ ಸಂಖ್ಯೆ ಕಡಿಮೆಯಾಗಲಿದ್ದು, ಅವರ ಮೇಲಿನ ನಿಗಾ ಮತ್ತು ಒತ್ತಡ ದುಪ್ಪಟ್ಟಾಗಲಿದೆ.












Click it and Unblock the Notifications