US Election: ಮಹಿಳೆಯರಿಗೆ ಗೌರವ ಕೊಡಲ್ಲ; ಟ್ರಂಪ್ ವಿರುದ್ಧ ಕಮಲಾ ಹ್ಯಾರಿಸ್ ವಾಗ್ದಾಳಿ
ಯುಎಸ್ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ನವೆಂಬರ್ 5ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಇಬ್ಬರಲ್ಲಿ ಶ್ವೇತ ಭವನ ಪ್ರವೇಶಿಸುವುದು ಯಾರು ಎನ್ನುವ ಕುತೂಹಲ ಇದ್ದೇ ಇದೆ. ಮತದಾನಕ್ಕೆ ದಿನ ಹತ್ತಿರವಾಗುತ್ತಿದ್ದಂತೆ ಇಬ್ಬರ ನಡುವೆ ವಾಕ್ಸಮರ ಜೋರಾಗಿದೆ. ಇದೀಗ ಕಮಲಾ ಹ್ಯಾರಿಸ್ ಡೊನಾಲ್ಡ್ ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಹಿಳೆಯರ ಬಗ್ಗೆ ಡೊನಾಲ್ಡ್ ಟ್ರಂಪ್ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಾರೆ ಎಂದು ವಾಗ್ದಾಳಿ ನಡೆಸಿರುವ ಕಮಲಾ ಹ್ಯಾರಿಸ್, 21ನೇ ಶತಮಾನದ ಅಮೆರಿಕದಲ್ಲಿ ಅವರ ಸ್ತ್ರೀದ್ವೇಷಕ್ಕೆ ಯಾವುದೇ ಸ್ಥಾನ ಸಿಗುವುದಿಲ್ಲ ಎಂದು ಹೇಳಿದ್ದಾರೆ.

ಡೆಮಾಕ್ರಟಿಕ್ ಪಕ್ಷದ ನಾಯಕಿ, ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ತಮ್ಮ ಚುನಾವಣಾ ಪ್ರಚಾರದಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧ ಟೀಕೆ ಮಾಡುತ್ತಲೇ ಬಂದಿದ್ದಾರೆ. ಮಹಿಳೆಯರು ಇಷ್ಟಪಡಲಿ ಅಥವಾ ಇಷ್ಟ ಪಡದೇ ಇರಲಿ ಅಮೆರಿಕದ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ತಾವು ಹೋರಾಡುವುದಾಗಿ ತಿಳಿಸಿದರು.
ಮಹಿಳೆಯರು ಸ್ವಾತಂತ್ರ್ಯ ವಾಗಿರುವುದು ಮತ್ತು ಮಹಿಳೆಯರಯ ಸ್ವಂತ ಜೀವನದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಬುದ್ದಿವಂತಿಕೆಯನ್ನು ಟ್ರಂಪ್ ಗೌರವಿಸುವುದಿಲ್ಲ ಎಂದು ಕಮಲಾ ಹ್ಯಾರಿಸ್ ಹೇಳಿದರು. ಟ್ರಂಪ್ ಮತ್ತೆ ಅಧಿಕಾರಕ್ಕೆ ಬಂದರೆ, ಅಮೆರಿಕದಾದ್ಯಂತ ಗರ್ಭಪಾತವನ್ನು ನಿಷೇಧಿಸುತ್ತಾರೆ, ಜನನ ನಿಯಂತ್ರಣ ಮಾಡಲು ನಿರ್ಬಂಧ ವಿಧಿಸುತ್ತಾರೆ, ಐವಿಎಫ್ ಚಿಕಿತ್ಸೆಗಳನ್ನು ಪಡೆಯಲು ನಿರ್ಬಂಧ ಹೇರುತ್ತಾರೆ ಎಂದು ಕಮಲಾ ಹ್ಯಾರಿಸ್ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗರ್ಭಪಾತ ವಿಚಾರ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಸದ್ಯದ ಟ್ರೆಂಡಿಂಗ್ ಪ್ರಕಾರ, ಮಹಿಳಾ ಮತದಾರರು ಹೆಚ್ಚಾಗಿ ಕಮಲಾ ಹ್ಯಾರಿಸ್ ಪರವಾಗಿ ಬೆಂಬಲ ಕೊಟ್ಟಿದ್ದರೆ, ಪುರುಷ ಮತದಾರರು ಹೆಚ್ಚಾಗಿ ಟ್ರಂಪ್ ಬೆಂಬಲಿಸುತ್ತಿದ್ದಾರೆ.
ಬಿರುಸಿನ ಪ್ರಚಾರ
ಚುನಾವಣೆಗೆ ದಿನ ಹತ್ತಿರವಾಗುತ್ತಿದ್ದಂತೆ ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಮತದಾರರನ್ನು ಸೆಳೆಯಲು ಸಾಕಷ್ಟು ಕಸರತ್ತು ಮಾಡುತ್ತಿವೆ. ಅಮೆರಿಕ ಚುನಾವಣಾ ಇತಿಹಾಸದಲ್ಲೇ ಇದು ರೋಚಕ ಚುನಾವಣೆ ಎಂದು ಕರೆಯಲಾಗಿದೆ. ಯಾರು ಗೆಲ್ಲುತ್ತಾರೆ ಎಂದು ಹೇಳುವುದು ರಾಜಕೀಯ ವಿಶ್ಲೇಷಕರಿಗೂ ಕಷ್ಟವಾಗಿದೆ. ಯಾರೇ ಗೆದ್ದರೂ ಕಡಿಮೆ ಅಂತರದಲ್ಲಿ ಗೆಲ್ಲುತ್ತಾರೆ ಎನ್ನಲಾಗಿದೆ.
ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ಯುಎಸ್ ಅಧ್ಯಕ್ಷರಾಗಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಉದ್ಯಮಿ ಎಲಾನ್ ಮಸ್ಕ್ ಟ್ರಂಪ್‌ಗೆ ಬೆಂಬಲ ಕೊಟ್ಟಿರುವುದು ಮತ್ತಷ್ಟು ಬಲವನ್ನು ಹೆಚ್ಚಿಸಿದೆ. ಮತ್ತೊಂದು ಕಡೆ ಕಮಲಾ ಹ್ಯಾರಿಸ್‌ಗೆ ಭಾರತೀಯ ಮತ್ತು ಆಫ್ರಿಕಾ ಅಮೆರಿಕನ್ನರ ಬೆಂಬಲ ಸಿಕ್ಕಿದ್ದು, ಗೆಲುವಿನ ವಿಶ್ವಾಸದಲ್ಲಿದ್ದಾರೆ.
ಇಡೀ ವಿಶ್ವವೇ ಅಮೆರಿಕ ಅಧ್ಯಕ್ಷೀಯ ಚುನಾವಣೆ ಮೇಲೆ ಕಣ್ಣಿಟ್ಟಿದೆ. ಯಾರು ಗೆದ್ದರೆ ನಮಗೆ ಲಾಭವಾಗುತ್ತದೆ ಎಂದು ಎಲ್ಲಾ ದೇಶಗಳು ಈಗಾಗಲೇ ಲೆಕ್ಕಾಚಾರ ಮಾಡಿಕೊಂಡಿವೆ. ನವೆಂಬರ್ 5ರಂದು ಚುನಾವಣೆ ನಡೆಯಲಿದ್ದು, ಅಂದೇ ವಿಜೇತ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.












Click it and Unblock the Notifications