ರಷ್ಯಾದಲ್ಲಿ ಕೊರೊನಾ ಅಟ್ಟಹಾಸ: ಅಸಲಿ ಸಾವಿನ ಸಂಖ್ಯೆಯಲ್ಲಿ ಪುತಿನ್ ಭಂಡತನ
ಕೊರೊನಾ ಎನ್ನುವ ಮಾರಣಾಂತಿಕ ವೈರಸ್ ಅನ್ನು ವಿಶ್ವಕ್ಕೆ ಪರಿಚಯಿಸಿದ ಚೀನಾ, ಇದರಿಂದ ಮೃತ ಪಟ್ಟವರ ಅಸಲಿ ಸಂಖ್ಯೆಯನ್ನು ಜಗತ್ತಿನ ಮುಂದೆ ಇಡದೇ, ಸುಳ್ಳು ಸಂಖ್ಯೆಯನ್ನು ನೀಡಿತು ಎನ್ನುವ ಆಪಾದನೆ ಚೀನಾದ ಮೇಲಿತ್ತು.
ಈಗ ರಷ್ಯಾ ಕೂಡಾ ಅದೇ ದಾರಿಯಲ್ಲಿ ಸಾಗುತ್ತಿದೆ ಎನ್ನುವ ಹಲವು ವರದಿಗಳು ಪ್ರಕಟವಾಗುತ್ತಿವೆ. ಇದಕ್ಕೆ ಕಾರಣ, ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ , ಕೊರೊನಾ ಆರಂಭ ಹಂತದಲ್ಲಿ ಇದನ್ನು ಸರಿಯಾಗಿ ನಿಭಾಯಿಸಲಿಲ್ಲ ಎನ್ನುವ ಕೆಟ್ಟ ಹೆಸರು ಅವರ ಮೇಲಿರುವುದು.
ರಷ್ಯಾದಲ್ಲಿ ಕೊರೊನಾ ಮೊದಲು ಒಕ್ಕರಿಸಿದ್ದು ಜನವರಿ 31ರಂದು. ಚೀನಾ ಮೂಲದ ವ್ಯಕ್ತಿಯಿಂದ ಈ ಸೋಂಕು ಬಂದಿರುವ ಖಚಿತವಾಗುತ್ತಿದ್ದಂತೆಯೇ, ಚೀನಾದೊಂದಿಗೆ ಗಡಿಯನ್ನು ಬಂದ್ ಮಾಡಲು ಪುತಿನ್ ಆದೇಶಿಸಿದ್ದರು.
ಚೀನಾ ಗಡಿಯನ್ನು ಬಂದ್ ಮಾಡಿ, ಕೊರೊನಾ ಬಗ್ಗೆ ಹೆಚ್ಚು ಗಮನಕೊಡದ ಪುತಿನ್ ಗೆ, ಇಟೆಲಿ ಕಡೆಯಿಂದ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಕಂಡಕೊಳ್ಳುವಷ್ಟರಲ್ಲಿ ವೈರಾಣು ವ್ಯಾಪಕವಾಗಿ ಹರಡಿಯಾಗಿತ್ತು.

ಒಟ್ಟು ಸೋಂಕಿತರ ಸಂಖ್ಯೆ 2,81,752
ಒಂದು, ಎರಡು ಇದ್ದ ಸೋಂಕಿತರ ಸಂಖ್ಯೆ, ದಿನದಿಂದ ದಿನಕ್ಕೆ ಏರುತ್ತಲೇ ಸಾಗಿತು. ಮೇ 18ಕ್ಕೆ ಒಟ್ಟು ಸೋಂಕಿತರ ಸಂಖ್ಯೆ 2,81,752 ತಲುಪಿತು. ಇದು ಚೀನಾ, ಬ್ರೆಜಿಲ್, ಇಟೆಲಿಯನ್ನು ಮೀರಿಸಿತು. ಆದರೆ, ಪುತಿನ್ ಸರಕಾರ ಅಧಿಕೃತವಾಗಿ ತೋರಿಸುತ್ತಿರುವ ಪ್ರಕಾರ, ಮೃತ ಪಟ್ಟವರ ಸಂಖ್ಯೆ 2,631. ಈ ಲೆಕ್ಕ ಸರಿಯಿಲ್ಲ ಎನ್ನುವ, ಅಂಕಿಅಂಶಗಳ ಸಮೇತದ ಹಲವು ವರದಿಗಳು ಪ್ರಕಟವಾಗಿರುವುದು ಪುತಿನ್ ಗೆ ತಲೆನೋವಾಗಿ ಪರಿಣಮಿಸಿದೆ.

ಮಂಚೂಣಿಯಲ್ಲಿ ನಿಲ್ಲಬೇಕಾಗಿರುವ ಪುಟಿನ್
ಇಂತಹ ತುರ್ತು ಸಂದರ್ಭದಲ್ಲಿ ಮಂಚೂಣಿಯಲ್ಲಿ ನಿಲ್ಲಬೇಕಾಗಿರುವ ಪುತಿನ್, ತನ್ನ ಅಧಿಕೃತ ನಿವಾಸ ಬಿಟ್ಟು, ರಾಜಧಾನಿ ಮಾಸ್ಕೋದಿಂದ ದೂರವಿರುವ ಮನೆಯಲ್ಲಿ ಉಳಿದುಕೊಂಡಿರುವುದು ಒಂದೆಡೆ. ಇನ್ನೊಂದೆಡೆ, ಕೊರೊನಾ ನಿಭಾಯಿಸುವ ಜವಾಬ್ದಾರಿಯನ್ನು ಪ್ರಾಂತ್ಯಾವಾರು ಗವರ್ನರ್ ಗಳಿಗೆ ನೀಡಿರುವುದು ಎಲ್ಲರ ಸಿಟ್ಟಿಗೆ ಕಾರಣವಾಗಿದೆ. (ಚಿತ್ರ, ರಷ್ಯಾ ಅಧ್ಯಕ್ಷರ ನಿವಾಸ, ಚಿತೃ, ವಿಕಿಪಿಡಿಯಾ)

ಅಮೆರಿಕಾದಲ್ಲಿ ಇದು ಶೇ.6 ಮತ್ತು ಬ್ರಿಟನ್ ನಲ್ಲಿ ಶೇ.14.5
ರಷ್ಯಾದಲ್ಲಿ ಮೃತ ಪಟ್ಟವರ ಶೇಕಡಾವಾರು ಪ್ರಮಾಣ ಶೇ. 0.9. ಅಮೆರಿಕಾದಲ್ಲಿ ಇದು ಶೇ.6 ಮತ್ತು ಬ್ರಿಟನ್ ನಲ್ಲಿ ಶೇ.14.5ರಷ್ಟು ಇರುವಾಗ, ರಷ್ಯಾದಲ್ಲಿ ನಂಬಲಾಗದಷ್ಟು ಕಮ್ಮಿ ಇರಲು ಕಾರಣವೇನು ಎನ್ನುವ ಪ್ರಶ್ನೆ ಬಂದಾಗ, ಅದಕ್ಕೆ ಉತ್ತರ ಸುಳ್ಳು ಲೆಕ್ಕ ಎಂದು ಹೇಳಲಾಗುತ್ತಿದೆ.

ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ರಷ್ಯಾ ವಾದ
ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ರಷ್ಯಾ ವಾದಿಸುತ್ತಿದ್ದರೂ, ಕೊರೊನಾದಿಂದ ಸಾವನ್ನಪ್ಪುತ್ತಿದ್ದರೂ, ಅದನ್ನು ಹೃದಯಾಘಾತ ಅಥವಾ ಇತರ ಕಾಯಿಲೆಯಿಂದ ಮೃತರಾದರು ಎಂದು ಸರಕಾರೀ ವೈದ್ಯರಿಗೆ ತೋರಿಸಲು ಒತ್ತಡ ಹೇರಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ರಷ್ಯಾ ಸರಕಾರ ಇದನ್ನು ಅಲ್ಲಗಳೆಯುತ್ತಿದೆ. ಒಟ್ಟಿನಲ್ಲಿ, ಪುಟಿನ್ , ಕೊರೊನಾ ನಿಭಾಯಿಸಿದ್ದು ರಷ್ಯನ್ನರ ಸಿಟ್ಟಿಗೆ ಕಾರಣವಾಗಿದೆ.












Click it and Unblock the Notifications