Ireland Scholarship 2026: ಐರ್ಲೆಂಡ್ ಸರ್ಕಾರದಿಂದ ಉಚಿತ ಶಿಕ್ಷಣದ ಜೊತೆ 9 ಲಕ್ಷ ರೂ. ಸ್ಕಾಲರ್‌ಶಿಪ್
ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಬೇಕೆಂಬ ಕನಸು ಕಾಣುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ಇಲ್ಲೊಂದು ಸುವರ್ಣಾವಕಾಶ ಒದಗಿಬಂದಿದೆ. ಐರ್ಲೆಂಡ್ ಸರ್ಕಾರವು 2026ನೇ ಸಾಲಿನ ಪ್ರತಿಷ್ಠಿತ 'ಅಂತರರಾಷ್ಟ್ರೀಯ ಶಿಕ್ಷಣ ಸ್ಕಾಲರ್‌ಶಿಪ್' (GOI-IES) ಕಾರ್ಯಕ್ರಮವನ್ನು ಘೋಷಿಸಿದ್ದು, ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಐರ್ಲೆಂಡ್‌ನ ಉನ್ನತ ಶಿಕ್ಷಣ ಪ್ರಾಧಿಕಾರ (HEA) ನಿರ್ವಹಿಸುವ ಈ ಯೋಜನೆಯು ವಿಶ್ವದಾದ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಐರ್ಲೆಂಡ್‌ನಲ್ಲಿ ಸ್ನಾತಕೋತ್ತರ ಪದವಿ ಅಥವಾ ಸಂಶೋಧನಾ ಪದವಿ (PhD) ಪಡೆಯಲು ಸಂಪೂರ್ಣ ಆರ್ಥಿಕ ನೆರವು ನೀಡುತ್ತದೆ. ಜನವರಿ 29, 2026 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಸ್ಕಾಲರ್‌ಶಿಪ್‌ನ ಲಾಭಗಳೇನು?
ಈ ಯೋಜನೆಯಡಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಆರ್ಥಿಕ ಸೌಲಭ್ಯಗಳು ದೊರೆಯಲಿವೆ. ಪ್ರತಿ ವರ್ಷ ಒಟ್ಟು 60 ವಿದ್ಯಾರ್ಥಿಗಳನ್ನು ಮಾತ್ರ ಈ ಸ್ಕಾಲರ್‌ಶಿಪ್‌ಗೆ ಆಯ್ಕೆ ಮಾಡಲಾಗುತ್ತದೆ.
1.) ಸಂಪೂರ್ಣ ಶುಲ್ಕ ಮನ್ನಾ: ಆಯ್ಕೆಯಾದ ವಿದ್ಯಾರ್ಥಿಯು ಐರ್ಲೆಂಡ್‌ನ ಯಾವುದೇ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆದರೂ, ಆ ಒಂದು ವರ್ಷದ ಸಂಪೂರ್ಣ ಬೋಧನಾ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ.
2.) ಭಾರೀ ಮೊತ್ತದ ಸ್ಟೈಫಂಡ್: ವಿದ್ಯಾರ್ಥಿಯ ಜೀವನ ವೆಚ್ಚ ಮತ್ತು ಇತರೆ ಖರ್ಚುಗಳಿಗಾಗಿ ಸರ್ಕಾರವು ಒಂದು ವರ್ಷಕ್ಕೆ ಬರೋಬ್ಬರಿ 10,000 ಯುರೋ (ಅಂದಾಜು 9 ಲಕ್ಷ ರೂಪಾಯಿ) ಸಹಾಯಧನವನ್ನು ನೀಡುತ್ತದೆ.
ಈ ಸ್ಕಾಲರ್‌ಶಿಪ್ NFQ ಲೆವೆಲ್ 9 (ಮಾಸ್ಟರ್ಸ್) ಅಥವಾ ಲೆವೆಲ್ 10 (ಪಿಎಚ್‌ಡಿ) ಹಂತದ ಅಧ್ಯಯನಕ್ಕೆ ಮಾತ್ರ ಅನ್ವಯಿಸುತ್ತದೆ.
ಅರ್ಹತೆಗಳೇನು?
ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಲವು ನಿರ್ದಿಷ್ಟ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ:
1.) ಅಭ್ಯರ್ಥಿಯು ಯುರೋಪಿಯನ್ ಯೂನಿಯನ್ (EU), ಸ್ವಿಟ್ಜರ್ಲೆಂಡ್ ಮತ್ತು ಯುನೈಟೆಡ್ ಕಿಂಗ್‌ಡಮ್ (UK) ಹೊರತಾದ ದೇಶದ ಪ್ರಜೆಯಾಗಿರಬೇಕು. ಅಂದರೆ, ಭಾರತೀಯ ವಿದ್ಯಾರ್ಥಿಗಳು ಇದಕ್ಕೆ ಸಂಪೂರ್ಣ ಅರ್ಹರು.
2.) ಪ್ರವೇಶ ಪತ್ರ ಕಡ್ಡಾಯ: ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸುವ ಮುನ್ನವೇ ವಿದ್ಯಾರ್ಥಿಯು ಐರ್ಲೆಂಡ್‌ನ ಯಾವುದಾದರೂ ಮಾನ್ಯತೆ ಪಡೆದ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿರಬೇಕು. ಆ ಸಂಸ್ಥೆಯಿಂದ 'ಆಫರ್ ಲೆಟರ್' ಅದು ಷರತ್ತುಬದ್ಧ ಅಥವಾ ಅಂತಿಮ ಆಗಿರಬಹುದು - ಹೊಂದಿರಲೇಬೇಕು.
3.) ಈ ಹಿಂದೆ ಇದೇ ಸ್ಕಾಲರ್‌ಶಿಪ್ ಪಡೆದವರು ಮತ್ತೆ ಅರ್ಜಿ ಸಲ್ಲಿಸಲು ಅರ್ಹರಲ್ಲ.
ರಷ್ಯಾ ಮತ್ತು ಬೆಲಾರಸ್ ದೇಶದ ಪ್ರಜೆಗಳಿಗೆ 2026ರ ಸಾಲಿನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
ಅರ್ಜಿ ಸಲ್ಲಿಸಲು ಜನವರಿ 29, 2026 ರಿಂದ ಪ್ರಾರಂಭವಾಗಿ ಮಾರ್ಚ್ 12, 2026 ಕೊನೆಯ ದಿನಾಂಕವಾಗಿರುತ್ತದೆ. ಇದರ ಫಲಿತಾಂಶ ಜೂನ್ 2026ರ ಆರಂಭದಲ್ಲಿ ಪ್ರಕಟವಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್‌ಲೈನ್ ಆಗಿರುತ್ತದೆ. ಜನವರಿ 29 ರಂದು ಅಧಿಕೃತ 'GOI-IES ಪೋರ್ಟಲ್' ಲೈವ್ ಆಗಲಿದ್ದು, ಅದರ ಮೂಲಕವೇ ಅರ್ಜಿ ಸಲ್ಲಿಸಬೇಕು.
1.) ಒಬ್ಬ ಅಭ್ಯರ್ಥಿ ಕೇವಲ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಲು ಅವಕಾಶವಿದೆ.
2.) ಅರ್ಜಿಯ ಜೊತೆಗೆ ಇಬ್ಬರು ರೆಫರಿಗಳ (References) ಶಿಫಾರಸು ಪತ್ರಗಳನ್ನು ಅಪ್‌ಲೋಡ್ ಮಾಡುವುದು ಕಡ್ಡಾಯ.
3.) ಅರ್ಜಿ ಸಲ್ಲಿಸಿದ ನಂತರವೂ ಅದರಲ್ಲಿ ಬದಲಾವಣೆಗಳನ್ನು ಮಾಡಲು ಅವಕಾಶವಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಕೇವಲ ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ಮಾತ್ರ ಆಯ್ಕೆ ನಡೆಯುವುದಿಲ್ಲ. ಅಭ್ಯರ್ಥಿಯ ಸಂವಹನ ಕೌಶಲ್ಯ , ಪಠ್ಯೇತರ ಚಟುವಟಿಕೆಗಳಲ್ಲಿನ ಭಾಗವಹಿಸುವಿಕೆ ಮತ್ತು ಐರ್ಲೆಂಡ್‌ನಲ್ಲಿಯೇ ಏಕೆ ಕಲಿಯಬೇಕು ಎಂಬ ಬಗ್ಗೆ ಅಭ್ಯರ್ಥಿಯ ಸ್ಪಷ್ಟ ನಿಲುವುಗಳನ್ನೆಲ್ಲ ಪರಿಗಣಿಸಿ ಸ್ವತಂತ್ರ ಸಮಿತಿಯು ಅಂತಿಮ ಪಟ್ಟಿಯನ್ನು ಸಿದ್ಧಪಡಿಸುತ್ತದೆ.
ವಿದೇಶದಲ್ಲಿ ಓದಬೇಕೆಂಬ ಕನಸು ಹೊತ್ತಿರುವ ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಆಸಕ್ತರು ಈಗಲೇ ಐರ್ಲೆಂಡ್‌ನ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಕ್ಕೆ ಪ್ರಯತ್ನ ನಡೆಸಿ, ಆಫರ್ ಲೆಟರ್ ಪಡೆದುಕೊಳ್ಳುವುದು ಸೂಕ್ತ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ಗಮನಿಸಬಹುದು.












Click it and Unblock the Notifications