ಇಸ್ಲಾಮಿಕ್ ರೆವಲ್ಯೂಶನರಿ ಗಾರ್ಡ್ಸ್ ಮುಖ್ಯಸ್ಥ ಹುಸೇನ್ ಸಲಾಮಿಯನ್ನು ಹತ್ಯೆಗೈದ ಇಸ್ರೇಲ್, ಮರುದಾಳಿಗೆ ಇರಾನ್ ಸಜ್ಜು
ಶುಕ್ರವಾರ ಬೆಳಿಗ್ಗೆ ಇರಾನ್ ಮೇಲೆ ಇಸ್ರೇಲ್ ಭೀಕರ ದಾಳಿ ನಡೆಸಿದೆ. ಇರಾನ್ ದೇಶದ ಅಣು ಸ್ಥಾವರಗಳು ಹಾಗೂ ಸೇನಾ ನೆಲೆಗಳನ್ನು ಗುರಿಯಾಗಿಸಿ ನಡೆಸಿರುವ ದಾಳಿಯಲ್ಲಿ ಹಲವರು ಮೃತಪಟ್ಟಿದ್ದಾರೆ. ಪ್ರಮುಖವಾಗಿ ಇಸ್ಲಾಮಿಕ್ ಇಸ್ಲಾಮಿಕ್ ರೆವಲ್ಯೂಶನರಿ ಗಾರ್ಡ್ಸ್ ಮುಖ್ಯಸ್ಥ ಹುಸೇನ್ ಸಲಾಮಿಯನ್ನು ಹತ್ಯೆಗೈಯಲಾಗಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
'ಐಆರ್‌ಜಿಸಿ ಪ್ರಧಾನ ಕಚೇರಿಯ ಮೇಲೆ ಶುಕ್ರವಾರ ಬೆಳಿಗ್ಗೆ ಇಸ್ರೇಲ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ಇಸ್ಲಾಮಿಕ್ ರೆವಲ್ಯೂಶನರಿ ಗಾರ್ಡ್ಸ್ ಮುಖ್ಯಸ್ಥ ಮೇಜರ್ ಜನರಲ್ ಹೊಸೈನ್ ಸಲಾಮಿ ಹುತಾತ್ಮರಾಗಿದ್ದಾರೆ' ಎಂದು ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇಸ್ರೇಲ್ ದಾಳಿಗೆ 'ತೀವ್ರ ಪ್ರತಿಕ್ರಿಯೆ' ನೀಡಲು ಇರಾನ್ ಮುಂದಾಗಿದೆ ಎಂದು ಇರಾನಿನ ಭದ್ರತಾ ಮೂಲವೊಂದು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದೆ.
ಇಸ್ರೇಲಿ ದಾಳಿಗೆ ನಮ್ಮ ಪ್ರತಿಕ್ರಿಯೆಯು ತೀವ್ರ ಮತ್ತು ನಿರ್ಣಾಯಕವಾಗಿರುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಪ್ರತಿ ದಾಳಿಯು ನಡೆಸುವುದು ಖಚಿತವಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅಧಿಕಾರಿ, ' ಇದನ್ನು ಉನ್ನತ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ' ಎಂದು ಹೇಳಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, 'ಇರಾನ್‌ನ ಪರಮಾಣು
ಸಂಬಂಧಿತ ನೆಲೆಗಳ ಮೇಲೆ ಇಸ್ರೇಲ್ ಉದ್ದೇಶಿತ ದಾಳಿಗಳನ್ನು ನಡೆಸಿದೆ' ಎಂದು ಖಚಿತಪಡಿಸಿದ್ದಾರೆ. ಇದನ್ನು ಅವರು 'ಆಪರೇಷನ್ ರೈಸಿಂಗ್ ಲಯನ್' ಎಂದು ಕರೆದಿದ್ದು, ಇರಾನ್‌ನ ಪರಮಾಣು ಶಸ್ತ್ರಾಸ್ತ್ರ ಸಾಮರ್ಥ್ಯವನ್ನು ನಾಶಪಡಿಸುವ ಗುರಿಯನ್ನು ಹೊಂದಿರುವ ಸುಸ್ಥಿರ ಮಿಲಿಟರಿ ಕಾರ್ಯಾಚರಣೆ ಇದಾಗಿದೆ ಎಂದು ಹೇಳಿದ್ದಾರೆ.
ಕೆಲ ಕ್ಷಣಗಳ ಹಿಂದೆ ಇಸ್ರೇಲ್‌ನ ಅಸ್ತಿತ್ವಕ್ಕೆ ಇರಾನ್ ಬೆದರಿಕೆಯೊಡ್ಡಿತ್ತು. ಇದನ್ನು ಹಿಮ್ಮೆಟ್ಟಿಸಲು ಇಸ್ರೇಲ್ 'ಆಪರೇಷನ್ ರೈಸಿಂಗ್ ಲಯನ್' ಎಂಬ ಉದ್ದೇಶಿತ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ನೆತನ್ಯಾಹು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ. ಈ ಬೆದರಿಕೆಯನ್ನು ತಡೆಯಲು ಎಷ್ಟು ದಿನಗಳು ಬೇಕೋ ಅಷ್ಟು ದಿನಗಳ ಕಾಲ ಈ ಕಾರ್ಯಾಚರಣೆ ಮುಂದುವರಿಯುತ್ತದೆ' ಎಂದು ಅವರು ತಿಳಿಸಿದ್ದಾರೆ.
'ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲು ಇರಾನ್ ರಹಸ್ಯ ಯೋಜನೆಯನ್ನು ಹಮ್ಮಿಕೊಂಡಿದೆ. ಇದನ್ನು ತಡೆಯದಿದ್ದರೆ ಇಸ್ರೇಲ್ ಬಹುದೊಡ್ಡ ಪರಿಣಾಮವನ್ನು ಎದುರಿಸಲಿದೆ. ಟೆಹ್ರಾನ್ ಶೀಘ್ರದಲ್ಲೇ ಪರಮಾಣು ಬಾಂಬ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆಯಬಹುದು. ಇದು ಇಸ್ರೇಲ್‌ನ ಅಸ್ತಿತ್ವಕ್ಕೆ ಅಪಾಯಕಾರಿಯಾಗಿದೆ' ಎಂದು ಅವರು ಆರೋಪಿಸಿದ್ದಾರೆ.












Click it and Unblock the Notifications