ಅಮೆರಿಕದ ಅತ್ಯಾಧುನಿಕ MQ-9 ಡ್ರೋನ್ ಹೊಡೆದುರುಳಿಸಿದ ಇರಾನ್: ಮಧ್ಯಪ್ರಾಚ್ಯದಲ್ಲಿ ಮತ್ತೆ ಮಹಾಸಂಗ್ರಾಮ
ಟೆಹ್ರಾನ್: ಜಾಗತಿಕ ಮಟ್ಟದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಗಳ ಬೆನ್ನಲ್ಲೇ, ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಯುದ್ಧದ ಕಿಡಿ ಹೊತ್ತಿಕೊಂಡಿದೆ. ತನ್ನ ವಾಯುಪ್ರದೇಶವನ್ನು ಅತಿಕ್ರಮಿಸಲು ಯತ್ನಿಸಿದ ಅಮೆರಿಕದ ಅತ್ಯಾಧುನಿಕ 'MQ-9 ಹಂಟರ್-ಕಿಲ್ಲರ್ ಡ್ರೋನ್' ಅನ್ನು ಹೊಡೆದುರುಳಿಸಿರುವುದಾಗಿ ಇರಾನ್ ಅಧಿಕೃತವಾಗಿ ಘೋಷಿಸಿದೆ.
ಅಷ್ಟೇ ಅಲ್ಲದೆ, ಅಮೆರಿಕದ ಮತ್ತೊಂದು ಕಣ್ಗಾವಲು ಡ್ರೋನ್ ಆದ RQ-4 ಮತ್ತು ಅತ್ಯಾಧುನಿಕ ಎಫ್-35 (F-35) ಯುದ್ಧವಿಮಾನದ ಮೇಲೂ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ಪಡೆಗಳು ದಾಳಿ ನಡೆಸಿ, ಅವುಗಳನ್ನು ಹಿಮ್ಮೆಟ್ಟಿಸಿವೆ ಎಂದು ಅಲ್ ಜಜೀರಾ ವರದಿ ಮಾಡಿದೆ.

ಆದರೆ ಈ ಘಟನೆಗಳು ನಿಖರವಾಗಿ ಯಾವಾಗ ಸಂಭವಿಸಿವೆ ಎಂಬುದನ್ನು ಇರಾನ್ ಮಿಲಿಟರಿ ಬಹಿರಂಗಪಡಿಸಿಲ್ಲ. ಅಮೆರಿಕದ ಯಾವುದೇ ರೀತಿಯ ಕದನ ವಿರಾಮ ಉಲ್ಲಂಘನೆಗೆ ತಕ್ಕ ಪ್ರತ್ಯುತ್ತರ ನೀಡುವ ಕಾನೂನುಬದ್ಧ ಹಕ್ಕು ತನಗಿದೆ ಎಂದು ಇರಾನ್ ಸೇನೆ ಗುಡುಗಿದೆ. ಇದೇ ವೇಳೆ ಇರಾನ್ನ ಸುಪ್ರೀಂ ಲೀಡರ್ ಮೊಜ್ತಾಬಾ ಖಮೇನಿ ಅವರು ಟೆಲಿಗ್ರಾಮ್ ಮೂಲಕ ಕಟುವಾದ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. "ಮಧ್ಯಪ್ರಾಚ್ಯದ ಇಸ್ಲಾಮಿಕ್ ರಾಷ್ಟ್ರಗಳು ಇನ್ಮುಂದೆ ಅಮೆರಿಕದ ಮಿಲಿಟರಿ ನೆಲೆಗಳಿಗೆ ಕವಚದಂತೆ ನಿಲ್ಲುವುದಿಲ್ಲ. ಈ ಭಾಗದಲ್ಲಿ ಅಮೆರಿಕಕ್ಕೆ ಯಾವುದೇ ಸುರಕ್ಷಿತ ತಾಣ ಉಳಿದಿಲ್ಲ" ಎಂದು ಅವರು ಎಚ್ಚರಿಸಿದ್ದಾರೆ.
ಲೆಬನಾನ್ ಸೇರಿದಂತೆ ಇರಾನ್ ಬೆಂಬಲಿತ 'ಪ್ರತಿರೋಧದ ಒಕ್ಕೂಟ' ಅಮೆರಿಕ ಹಾಗೂ ಇಸ್ರೇಲ್ ವಿರುದ್ಧದ ಹೋರಾಟದಲ್ಲಿ ದೊಡ್ಡ ಯಶಸ್ಸು ಸಾಧಿಸಿದೆ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇರಾನ್ ಈ ಡ್ರೋನ್ ಹೊಡೆದುರುಳಿಸಿದ ಪ್ರಕಟಣೆ ಹೊರಡಿಸುವ ಕೆಲವೇ ಗಂಟೆಗಳ ಮುನ್ನ, ಅಮೆರಿಕದ ಸೆಂಟ್ರಲ್ ಕಮಾಂಡ್ ದಕ್ಷಿಣ ಇರಾನ್ನ ಹಲವು ಮಿಲಿಟರಿ ನೆಲೆಗಳ ಮೇಲೆ ರಾತ್ರೋರಾತ್ರಿ ಭಾರಿ ದಾಳಿ ನಡೆಸಿತ್ತು. ಕಡಲ ಮಾರ್ಗದಲ್ಲಿ ಇರಾನ್ ಸೇನೆಯ ದೋಣಿಗಳು ಹಾಗೂ ಕ್ಷಿಪಣಿ ಉಡಾವಣಾ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಅಮೆರಿಕದ ಮಿಲಿಟರಿ ವಕ್ತಾರ ಕ್ಯಾಪ್ಟನ್ ಟಿಮ್ ಹಾಕಿನ್ಸ್ ಸ್ಪಷ್ಟಪಡಿಸಿದ್ದಾರೆ. ತಮ್ಮ ಸೈನಿಕರ ರಕ್ಷಣೆಗಾಗಿ ಈ 'ಸ್ವಯಂ ರಕ್ಷಣಾ' ದಾಳಿ ನಡೆಸಿರುವುದಾಗಿ ಸಮರ್ಥಿಸಿಕೊಂಡಿದೆ.
ಅಮೆರಿಕ ಮತ್ತು ಇರಾನ್ ನಡುವಿನ ಸುದೀರ್ಘ ಯುದ್ಧದಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆ ತೀವ್ರವಾಗಿ ತತ್ತರಿಸಿತ್ತು. ಈ ಬಿಕ್ಕಟ್ಟನ್ನು ಕೊನೆಗಾಣಿಸಲು ಏಪ್ರಿಲ್ 8ರಂದು ಉಭಯ ದೇಶಗಳ ನಡುವೆ ಕಷ್ಟಪಟ್ಟು ಕದನ ವಿರಾಮ ಜಾರಿಗೆ ತರಲಾಗಿತ್ತು. ಆದರೆ ಈಗ ನಡೆದಿರುವ ಸರಣಿ ದಾಳಿಗಳು ಈ ಕದನ ವಿರಾಮವನ್ನು ಅತ್ಯಂತ ಸೂಕ್ಷ್ಮ ಹಂತಕ್ಕೆ ತಂದು ನಿಲ್ಲಿಸಿವೆ. ಮತ್ತೊಂದೆಡೆ ಲೆಬನಾನ್ನಲ್ಲಿರುವ ಇರಾನ್ ಬೆಂಬಲಿತ ಹೆಜ್ಬುಲ್ಲಾ ಸಂಘಟನೆಯನ್ನು ಸಂಪೂರ್ಣವಾಗಿ 'ನೆಲಸಮ' ಮಾಡುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶಪಥ ಮಾಡಿದ್ದಾರೆ. ಆದರೆ ಅಮೆರಿಕದೊಂದಿಗೆ ಯಾವುದೇ ಶಾಂತಿ ಒಪ್ಪಂದ ಏರ್ಪಡಬೇಕಾದರೂ ಅದು ಲೆಬನಾನ್ನಲ್ಲಿ ನಡೆಯುತ್ತಿರುವ ಯುದ್ಧಕ್ಕೂ ಅನ್ವಯವಾಗಬೇಕು ಎಂದು ಇರಾನ್ ಪಟ್ಟು ಹಿಡಿದಿರುವುದು ಶಾಂತಿ ಮಾತುಕತೆಗೆ ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ.












Click it and Unblock the Notifications